“ ಧ್ಯಾನಜೀವನದಲ್ಲಿ ಆನಂದದಿಂದ ಇದ್ದೇನೆ ”

 

 

ನನ್ನ ಹೆಸರು ಸತ್ಯನಾರಾಯಣ (ಯೋಗಿ). ನಾನು 2012 ಕಡ್ತಾಲ್ ಧ್ಯಾನ ಯಜ್ಞದ ಮೂಲಕ ಧ್ಯಾನಕ್ಕೆ ಬಂದೆ. ನಾನು ಧ್ಯಾನಕ್ಕೆ ಬರುವ ಮುಂಚೆ ಸಾವನ್ನು ದೇವರಲ್ಲಿ ಕಣ್ಣೀರಿಟ್ಟು ಬೇಡಿಕೊಂಡೆ, ನನಗೆ ಮೊಣಕಾಲು ನೋವು ಬಿಟ್ಟರೆ ಯಾವ ಖಾಯಿಲೆಗಳು ಇರಲಿಲ್ಲ. ದೇವರಲ್ಲಿ ಸಾವನ್ನು ಕಣ್ಣೀರಿಟ್ಟು ಬೇಡಿದಕ್ಕೆ ಕಾರಣ, ಸಂಸಾರದ ಘಟನೆಗಳು, ಕ್ಷುಲ್ಲಕ ಜಗಳ. ಇವುಗಳು ನನ್ನ ಪೂರ್ವಜನ್ಮದ ಕರ್ಮ ಎಂದು ತಿಳಿದುಕೊಂಡೆ. ಇನ್ನು ಧ್ಯಾನದ ಅನುಭವ ಎಷ್ಟು ಹೇಳಿದರೂ ಸಾಲದು. ನಾನು 10ನೇ ವಯಸ್ಸಿನಿಂದಲೂ ನನ್ನ ಬಡತನದಲ್ಲೂ ಸೇವಾ ತತ್ಪರನಾಗಿ ಅಸಹಾಯಕ ಮನಸ್ಸಿನಿಂದ ದೇವರನ್ನು ನಂಬಿಕೊಂಡೆ ಮತ್ತು ಬೇಡಿಕೊಂಡೇ ಬಂದೆ. ನನ್ನ ಪೂರ್ವಜನ್ಮಕರ್ಮದಿಂದಾಗಿ, 67 ವರ್ಷಗಳ ನನ್ನ ಜೀವನದ ಹಾದಿಯಲ್ಲಿ ಎಲ್ಲೂ ಸೋಲದೆ ಸ್ವಯಂಸೇವಕನಾಗಿ, ರೋಗಿಗಳ ಸೇವಕನಾಗಿ, ವಿದ್ಯಾಸಂಸ್ಥೆ ಸೇವಕನಾಗಿ, ವ್ಯಾಯಾಮ ಶಿಕ್ಷಕನಾಗಿ, ಎಲ್ಲೆಡೆಗೂ ಉಚಿತ ಸೇವೆ ಸಲ್ಲಿಸಿದ್ದೇನೆ. ಈ ‘ಧ್ಯಾನ’ ಎಂಬುದು ನನ್ನ ಸೇವಾ ಮನೋಭಾವದ ಕೆಲಸಗಳಿಗೆ ದೊರೆತ ಫಲ ಎಂದು ಭಾವಿಸಿದ್ದೇನೆ. ನನ್ನ ಸೇವೆಯ ಫಲವನ್ನು ನಾನು ಹೊಟ್ಟೆ ತುಂಬ ತಿಂದು, ಉಳಿದ ಧ್ಯಾನದ ಫಲವನ್ನು ಧ್ಯಾನ ಬಂಧುಗಳಲ್ಲಿ ಹಂಚಿಕೊಂಡಿದ್ದೇನೆ. ಧ್ಯಾನಕ್ಕೆ ಬರದ ಹೊಸಬರಿಗೂ ಧ್ಯಾನವನ್ನು ತಿಳಿಸಿಕೊಡುತ್ತಿದ್ದೇನೆ. ಪ್ರತಿ ನಿತ್ಯ ತಪ್ಪದೇ ಧ್ಯಾನ ಕೃಷಿ ಮಾಡುತ್ತಾ ಇದ್ದೇನೆ. ಧ್ಯಾನಕ್ಕೆ ಬಂದು ಎರಡೂವರೆ ವರ್ಷದಲ್ಲಿ 3 ಧ್ಯಾನ ಯಜ್ಞ, ಬುದ್ಧ ಪೂರ್ಣಿಮೆ ಕಾರ್ಯಕ್ರಮ, ಸಜ್ಜನ ಸಾಂಗತ್ಯ ಸ್ವಾಧ್ಯಾಯದಲ್ಲಿ ಇದ್ದು ನನ್ನ ಧ್ಯಾನ ಪ್ರಚಾರವನ್ನು ನಿರಂತರವಾಗಿ ಇನ್ನೂ 83 ವರ್ಷಗಳವರೆಗೆ ಮುಂದುವರೆಸಿಕೊಂಡು ಹೋಗಲು ಧ್ಯಾನದಲ್ಲಿ ಆಸ್ಟ್ರಲ್ ಮಾಸ್ಟರ್ಗಳಿಂದ ಆದೇಶ ಪಡೆದುಕೊಂಡಿದ್ದೇನೆ. ಶೂನ್ಯಸ್ಥಿತಿ, ಆನಂದಸ್ಥಿತಿ, ಸುಖದ ಸ್ಥಿತಿಗಳನ್ನು ಅನುಭವಿಸಿದ್ದೇನೆ. ನನ್ನ ಆನಂದಕ್ಕೆ ಕೊನೆಯೇ ಇಲ್ಲ. ಧ್ಯಾನದ ಅನುಭವ ಎಷ್ಟು ಹೇಳಿದರೂ ಸಾಲದು. ನನಗೆ ಮೋಕ್ಷ-ಮುಕ್ತಿ ದೊರೆಯುವವರೆಗೂ ನನ್ನ ಕೃಷಿ ನಿಲ್ಲಬಾರದು ಎಂದು ಬ್ರಹ್ಮರ್ಷಿ ಪತ್ರೀಜಿಯವರು ಧ್ಯಾನದಲ್ಲಿ ಆದೇಶಿಸಿದ್ದಾರೆ. ಪತ್ರೀಜಿಯವರಿಂದ ಆಶೀರ್ವಾದ ಮತ್ತು ನನ್ನ ತಪ್ಪಿಗೆ ಏಟನ್ನು ಸಹ ಪಡೆದಿದ್ದೇನೆ. ನಾನು ನನ್ನ ಜೀವನದಲ್ಲಿ ಆನಂದದಿಂದ ಇದ್ದೇನೆ. ದೇವರ ಕರುಣೆಯಿಂದ ನಿರ್ವಹಿಸಿದ ಆ ಪುಣ್ಯದ ಫಲದಿಂದ ಧ್ಯಾನದ ಮಾರ್ಗ, ಸಜ್ಜನರ ಸಾಂಗತ್ಯ, ಧ್ಯಾನ ಯಜ್ಞ, ಹಬ್ಬಗಳ ಆನಂದವೋ ಆನಂದ - ನನಗೆ ಇವೆಲ್ಲವೂ ದೊರೆಯಿತು. ಧ್ಯಾನ ಮಾರ್ಗದ ರುವಾರಿ ಗೋವಿಂದರಾಜ್ ಚಳ್ಳಕೆರೆ ಮಿತ್ರರಿಗೂ, ಬ್ರಹ್ಮರ್ಷಿ ಪತ್ರೀಜಿಯವರ ನೆನಪಿನ ಶಿರಸಾಷ್ಟಾಂಗ ಧ್ಯಾನಾಭಿವಂದನೆಗಳು. ನನ್ನ ಧ್ಯಾನ ಬಂಧುಗಳಿಗೂ ಧ್ಯಾನಾಭಿವಂದನೆಗಳು.

 

ಸತ್ಯನಾರಾಯಣ (ಯೋಗಿ ಸತ್ಯ)

ಚಳ್ಳಕೆರೆ

ಪೋ: +91 99017 40661

 

Go to top