" ಧ್ಯಾನವೆಂದರೆ ಶ್ವಾಸದ ಮೇಲೆ ಗಮನ "

 

 

ನನ್ನ ಹೆಸರು ಶೃತಿ ಸಿದ್ದು. ನಾನು ಹುಟ್ಟಿದ್ದು ಬಳ್ಳಾರಿಯಲ್ಲಿ. ನನ್ನ ವಿಧ್ಯಾಭ್ಯಾಸ ಎಲ್ಲಾ ನಡೆದದ್ದು ಬಳ್ಳಾರಿಯಲ್ಲಿ. ನನ್ನ ಪತಿಯ ಹೆಸರು ಸಿದ್ದಯ್ಯಸ್ವಾಮಿ, ಅವರು ಬೆಂಗಳೂರಿನ IFB ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಇಬ್ಬರು ಮಕ್ಕಳು. "ಅಭಿಷೇಕ್", ಮತ್ತು "ಭಾಷಿತ".

 

ಧ್ಯಾನದ ಒಂದು ಚಿಕ್ಕ ಪರಿಚಯ: ನನಗೆ ಧ್ಯಾನವೆಂದರೆ ಏನು ಎಂದು ಗೊತ್ತಿರಲಿಲ್ಲ. ನಾನು ನಮ್ಮ ಮನೆಯವರು ಒಂದು ದಿನ ಬಳ್ಳಾರಿಗೆ ಹೋಗಿದ್ದೆವು. ಆಗ ನನ್ನ ಅಕ್ಕನ ಮನೆಯಲ್ಲಿ 41 ದಿನ ಧ್ಯಾನದ ಕ್ಲಾಸ್ ಇತ್ತು. ನಾವು 41ನೆ ಕೊನೆಯ ದಿನ ಕ್ಲಾಸ್‌ಗೆ ಹೋಗಿದ್ದೆವು, ಆಗ ನನಗೆ 5 ತಿಂಗಳ ಮಗ ಇದ್ದನು. ಕೊನೆಯ ದಿನ ಸಿರುಗುಪ್ಪದಿಂದ ಬಂದಿರುವ ಧ್ಯಾನ ಶಿಕ್ಷಕಿ ಸುಮಂಗಳ ಮೇಡಂ ಅವರು ಧ್ಯಾನದ ಬಗ್ಗೆ ಹೇಳಿ, ತಮ್ಮ ಅನುಭವಗಳನ್ನು ಹಂಚಿಕೊಂಡರು, ಆ ದಿನದಿಂದಲೇ ನಾನು ಧ್ಯಾನ ಮಾಡಲಾರಂಭಿಸಿದೆನು, ಮತ್ತು ಮೊದಲನೆಯ ದಿನ ನನಗೆ ಚಕ್ರ ಕಾಣಿಸಿತು. ಈ ಅನುಭವವನ್ನು ಮಹೇಶ್ವರಿ ಮೇಡಂ ಅವರಿಗೆ ಹೇಳಿದಾಗ ಅವರು, "ನೀನು ನೋಡಿದ್ದು ಬೆಂಗಳೂರಿನ ಮೈತ್ರೇಯ ಬುದ್ಧಾ ಪಿರಮಿಡ್ ಮೇಲಿರುವ ಚಕ್ರ" ಎಂದು ಹೇಳಿದರು. ನಾನು ಬೆಂಗಳೂರಿನ ಪಿರಮಿಡ್‌ನ್ನು ನೋಡಿರಲಿಲ್ಲ. ಒಂದು ದಿನ ನನ್ನ ಕುಟುಂಬ ಸಮೇತ ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಹೋಗಿದ್ದೆನು, ಆಗ ಪಿರಮಿಡ್ ಮೇಲೆ ಇರುವ ಚಕ್ರದ ಚಿತ್ರವನ್ನು ನೋಡಿ, ನನಗೆ ಧ್ಯಾನದಲ್ಲಿ ಕಾಣಿಸಿದ್ದು ಈ ಚಕ್ರವೇ ಎಂದು ತಿಳಿಯಿತು.

 


ಆನಾಪಾನಸತಿ ಧ್ಯಾನದ ಅನುಭವಗಳು: ಒಂದು ದಿನ ಧ್ಯಾನದಲ್ಲಿ ಕುಳಿತಾಗ ಒಂದು ಮನೆಯ ಗೇಟ್ ಮುಂದೆ ನಾನು ಹೋಗುವುದನ್ನು ನೋಡಿದೆನು. ಈ ಅನುಭವದ ನಂತರ ಕಲವು ದಿನಗಳಿಗೆ ನಮ್ಮ ಅಕ್ಕನವರು ಕಟ್ಟಿಸುತ್ತಿರುವ ಮನೆ ನೋಡಲು ಬಳ್ಳಾರಿಗೆ ಹೋದೆವು. ಆಗ ಆ ಮನೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಏಕೆಂದರೆ, ನಾನು ಧ್ಯಾನದಲ್ಲಿ ನೋಡಿದ್ದು ಇದೇ ಮನೆ, ಇದೇ ಮನೆಯ ಗೇಟ್.

 

ನನ್ನ ತಾಯಿಗೆ ೨ನೇ ಸಲ ಹೃದಯ ಬಡಿತ ಜಾಸ್ತಿ ಆಗಿತ್ತು. ಡಾಕ್ಟರ್ ಹೃದಯ ಆಪರೇಷನ್ ಮಾಡಿದ್ದು ಈಗ "ಹೃದಯ ಬ್ಲಾಕ್ ಆಗಿದೆ, ಒಂದು ನಿಮಿಷಕ್ಕೆ 160 ಇರಬೇಕಿದ್ದ ಹೃದಯ ಬಡಿತ ಅಮ್ಮನಿಗೆ 201 ಕ್ಕಿಂತ ಜಾಸ್ತಿ ಇದೆ, ಕಡಿಮೆಯಾಗಲು ಇಂಜಕ್ಷನ್ ಕೊಡ್ತೀವಿ, ಕಡಿಮೆಯಾಗಿಲ್ಲವೆಂದರೆ, ನೀವು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿ ಇಂಜಕ್ಷನ್ ಕೊಟ್ಟರು. ನಾನು ಆ ಕ್ಷಣ ಪತ್ರೀಜಿಯವರನ್ನು ನೆನೆದು ಧ್ಯಾನದಲ್ಲಿ ಕುಳಿತುಕೊಂಡೆ.

 

ಧ್ಯಾನದಲ್ಲಿ ಒಬ್ಬ ಗುರೂಜಿಯವರು ಕಾಣಿಸಿ, ಅವರ ರೂಪದಲ್ಲಿ ಸಾಯಿಬಾಬಾರವರ ಅವತಾರ ಕಾಣಿಸಿತು. ಬಾಬಾರವರು ಅಮ್ಮನ ಕೈ ಹಿಡಿದುಕೊಂಡು ತಲೆಯ ಮೇಲೆ ಸವರಿದರು. ನಿನ್ನ ತಾಯಿಗೆ ಏನು ಆಗುವುದಿಲ್ಲ ಎಂದರು. ನನ್ನ ತಾಯಿಗೆ ಟ್ರೀಟ್‌ಮೆಂಟ್ ಕೊಟ್ಟು, ಗುಣಪಡಿಸಿದ್ದನ್ನು ನಾನು ಧ್ಯಾನದಲ್ಲಿ ನೋಡಿದೆನು.

 

ಇದಾದ ನಂತರ ನಾನು ಫೋನ್ ಮಾಡಿದರೆ, ಹೃದಯ ಬಡಿತ ಕಮ್ಮಿ ಆಗಿದೆ, ಈಗ ಆರಾಮಾಗಿದ್ದಾರೆ, 2-3 ದಿನಗಳಲ್ಲಿ ಬೆಂಗಳೂರಿಗೆ ಬರುತ್ತೇವೆ ಎಂದರು. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ "ಹೃದಯ ಬಡಿತ ಕಮ್ಮಿ ಆಗಲು ಕೊಟ್ಟ ಇಂಜಕ್ಷನ್ ಪವರ್ 6 ವಾರ ಇರುತ್ತದೆ, ECG ಈಗ ಮಾಡಿದ್ದೇವೆ, ರಿಪೋರ್ಟ್ ನಾರ್ಮಲ್ ಇದೆ, ಹೃದಯ ಬ್ಲಾಕ್ ಆಗಿರುವುದರಿಂದ ಮತ್ತೆ ಆಪರೇಷನ್ ಮಾಡಬೇಕು, ಆದರೆ ಇಂಜಕ್ಷನ್ ಪವರ್ ಇರುವುದರಿಂದ 6 ವಾರದವರೆಗೆ ಆಪರೇಷನ್ ಮಾಡಲು ಸಾಧ್ಯವಿಲ್ಲ. 6 ವಾರದ ನಂತರ ಬನ್ನಿ ಎಂದು ಆಪರೇಷನ್ Date ಕೊಟ್ಟರು. ಆಪರೇಷನ್ ಮಾಡುವ ಸಮಯದಲ್ಲಿ ಅಮ್ಮನ ಕಣ್ಣಿಗೆ ಬಟ್ಟೆ ಕಟ್ಟಿದರು. "ಆಗ ಆಪರೇಷನ್ ಮಾಡುವಾಗ ಲೈಟ್ ಫೋಕಸ್‌ನಲ್ಲಿ ಕೃಷ್ಣನ ಚಕ್ರ ಹಾಗೂ ಪತ್ರೀಜಿಯವರನ್ನು ನೋಡಿದೆ" ಎಂದು ಆಪರೇಷನ್ ಆದ ಮೇಲೆ ಅಮ್ಮ ಖುಷಿಯಾಗಿ ಹೇಳಿದರು. ಈಗ ನನ್ನ ತಾಯಿ ಸಂಪೂರ್ಣ ಆರೋಗ್ಯವಾಗಿದ್ದು ಯಾವಾಗಲೂ ಧ್ಯಾನ ಸ್ಥಿತಿಯಲ್ಲಿರುತ್ತಾರೆ.

 

ನಾನು ಪ್ರೆಗ್ನೆಂಟ್ ಆಗಿದ್ದಾಗ ಒಂದು ದಿನ ಬೆಂಗಳೂರಿನಲ್ಲಿ ಸುಮಂಗಳ ಮೇಡಂ ಅವರನ್ನು ಭೆಟ್ಟಿಯಾಗಿ ಮಾತನಾಡುತ್ತಾ ನನ್ನ Delivery Dateನವಂಬರ್ ತಿಂಗಳ ಕೊನೆಯವಾರ ಎಂದು ಹೇಳಿದಾಗ, ಸುಮಂಗಳ ಮೇಡಂ ಶೃತಿ... ನೀನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಪತ್ರೀಜಿಯವರ ಹುಟ್ಟಿದ ದಿನ Nov-11, ರಂದೇ Deliveryಆಗಲಿ ಎಂದು ಧ್ಯಾನ ಮಾಡು ಎಂದು ಹೇಳಿ ಹೋದರು. ನಂತರ ನಾನು ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಬ್ರಹ್ಮ ಮುಹೂರ್ತದಲ್ಲಿ ಸಂಕಲ್ಪ ಮಾಡಿಕೊಂಡು ಧ್ಯಾನ ಮಾಡಲು ಶುರುಮಾಡಿದೆ.


ಆಗ ಒಂದು ದಿನ ಧ್ಯಾನದಲ್ಲಿ ಸುಭಾಷ್ ಪತ್ರೀಜಿಯವರು ಪಿರಮಿಡ್‌ಗೆ ಬಂದಿರುವುದನ್ನು ಕೇಳಿ ಅವರನ್ನು ಭೇಟಿ ಆಗಬೇಕೆಂದು ಹೋದೆನು. ಆಗ ಪತ್ರೀಜಿಯವರು ಕುಳಿತುಕೊಂಡಿದ್ದರು. ಅಲ್ಲಿರುವ ಎಲ್ಲಾ ಮಾಸ್ಟರ್‌ಗಳು ಅವರನ್ನು ನೋಡಿ ಷೇಕ್‌ಹ್ಯಾಂಡ್ ತೆಗೆದುಕೊಂಡು ಹೋಗುತಿದ್ದರು. ಆಗ ನಾನು ಅವರನ್ನು ನೋಡುತ್ತಾ ಅವರ ಎದುರುಗಡೆ ಕುಳಿತೆ. ಆಗ ನನ್ನ ಮನಸ್ಸಿನಲ್ಲಿ ಅಂದುಕೊಂಡೆ ನಾನು ಸ್ನಾನ ಮಾಡಿಲ್ಲ, ನಾನು ಹೇಗೆ ಹೋಗಿ ಷೇಕ್‌ಹ್ಯಾಂಡ್ ತೆಗೆದುಕೊಳ್ಳುವುದು? ಅಂತ ಮನಸ್ಸಿನಲ್ಲಿ ಅಂದುಕೊಂಡೆ. ಅವರ ಎದುರುಗಡೆ ಹೋಗಿ ನಿಂತಾಗ ನಾನು ಅವರನ್ನು ನೋಡುತ್ತ ನಿಂತೆ. ಅವರು ನನ್ನನ್ನು ನೋಡಿ ನನ್ನ ಹೊಟ್ಟೆಯ ಮೇಲೆ ಅವರ ಬಲಗೈ ಇಟ್ಟರು.

 

ನನಗೆ ಮಾತ್ರ ಗೊತ್ತು ಅದು pregnancy ಆಗಿರುವುದು. ಅದು ಹೇಗೆ ಗೊತ್ತಾಯಿತು ಇವರಿಗೆ? ಅಂದುಕೊಂಡೆ. ಆಗ ಅವರು ಹೊಟ್ಟೆಯ ಮೇಲೆ ಕೈ ಹಿಟ್ಟು ಅವರ ಬಲ ಬೆರಳಿನಿಂದ ನನ್ನ ನಾಲಿಗೆಯ ಮೇಲೆ ಗ್ರೀನ್ ಕಲರ್ ಪೇಸ್ಟ್ ಹಚ್ಚಿದರು. ಆಗ ನನಗೆ ಆಶ್ಚರ್ಯವಾಯಿತು. ಒಂದು ದಿನ ನನಗೆ ಅಮ್ಮ ಹೇಳಿದು. "ಎಲ್ಲರ ಮೇಲೆ ಅವರ ದೃಷ್ಟಿ ಇಟ್ಟಿರುತ್ತಾರೆ. ಅವರ ದೃಷ್ಟಿ ಇಲ್ಲವೆಂದರೆ ನಾವು ಈ ತರ ಇರೋದಕ್ಕೆ ಸಾಧ್ಯವಿಲ್ಲ. ಅವರು ದೇವರು, ಮನುಷ್ಯರೂಪದಲ್ಲಿ ಸುಭಾಷ್ ಪತ್ರೀಜಿಯವರು ಬಂದಿದ್ದಾರೆ. ಧ್ಯಾನ ಜಗತ್ತು ಮಾಡಬೇಕೆಂದು ಈ ಭೂಮಿಗೆ ಪತ್ರೀಜಿ ಮನುಷ್ಯರೂಪದಲ್ಲಿ ಬಂದಿದ್ದಾರೆ ಎಂದಿದ್ದರು. ಆಗ ನನ್ನ ತಾಯಿಯನ್ನು ನೆನೆಸಿಕೊಂಡೆ.

 

ಒಂದು ದಿನ ಧ್ಯಾನಕ್ಕೆ ಕುಳಿತಾಗ, Delivery ಆಗಿ, ಹೆಣ್ಣು ಮಗುವಿಗೆ ನಾನು ಜನ್ಮ ಕೊಟ್ಟಿದ್ದೇನೆ ಎಂದು ಬಂತು, ಅದು ನನಗೆ ಅರ್ಥವಾಗಲಿಲ್ಲ. ಮತ್ತೆ, ಮತ್ತೆ ಈ ಸೂಚನೆ ಬಂತು. ಆಗ ಈ ಅನುಭವವನ್ನು ನಮ್ಮ ಅಜ್ಜಿಯ ಜೊತೆ ಹಂಚಿಕೊಂಡಾಗ ಹೌದಾ? ಪತ್ರೀಜಿಯವರ ದೃಷ್ಟಿ ನಿನ್ನ ಮೇಲಿದೆ, ಅದಕ್ಕೆ ನೀನು ಹೆಣ್ಣು ಮಗುವಿಗೆ ಜನ್ಮ ಕೊಡುತ್ತೀಯ ಎಂದು ಪತ್ರೀಜಿಯವರು ಮುಂಚೆನೇ ಸೂಚನೆ ಕೊಟ್ಟಿದ್ದಾರೆ, ನೋಡೋಣ ಹೆಣ್ಣು ಮಗುನೇ ಆಗತ್ತೋ .. ಏನೊ ಎಂದು ಅಜ್ಜಿ ಹೇಳಿದರು. ಅದೇ ತರ ನನಗೆ 11-11-2014 ರಂದು ಹೆಣ್ಣು ಮಗು ಜನಿಸಿದಳು.

 

ಆ ದಿನ ನಮ್ಮೆಲ್ಲರಿಗೂ ಬಹಳಾ ಸಂತೋಷವಾಯಿತು. ಆ ಮೇಲೆ ನಾವು ಸುಮಂಗಳ ಮೇಡಂಗೆ ಹೇಳಿದಾಗ, ಅವರು ಬಹಳಾ ಸಂತೋಷಪಟ್ಟರು. ಇದೇ ವಿಷಯವನ್ನು ಸುಮಂಗಳ ಮೇಡಂ ಅವರು ಪತ್ರೀಜಿಯವರಿಗೆ ಹೇಳಿದಾಗ ಪತ್ರೀಜಿಯವರು ಸಂತೋಷದಿಂದ "ಹೌದಾ? ಅವರು ಎಲ್ಲಿರುತ್ತಾರೆ?" ಎಂದು ಕೇಳಿದಾಗ, "ಅವರು ಬೆಂಗಳೂರಿನಲ್ಲಿ ಇರುತ್ತಾರೆ, ಆಗಾಗ ಪಿರಮಿಡ್‌ಗೆ ಹೋಗಿ ಧ್ಯಾನ ಮಾಡುತ್ತಾರೆ" ಎಂದು ಸುಮಂಗಳ ಮೇಡಂ ಹೇಳಿದರು. ಆಗ ಪತ್ರೀಜಿಯವರೇ ಪಾಪುಗೆ "ಭಾಷಿತ" ಎಂದು ಹೆಸರಿಟ್ಟರು. "ಎಲ್ಲಾ ಭಾಷೆ ಉಳ್ಳವಳು" ಎಂದು ಹೇಳಿದರು. ಇದನ್ನು ಕೇಳಿ ನಾವು ಸಂತೋಷಪಟ್ಟವು. ನನ್ನ ಮಗಳು ಹುಟ್ಟಿ ಒಂದು ವಾರದಿಂದಲೇ, ಯಾವಾಗಲೂ ಐದು ಬೆರಳುಗಳನ್ನು ಜೋಡಿಸಿ "ಆನಾಪಾನಸತಿ" ಧ್ಯಾನ ಸ್ಥಿತಿಯಲ್ಲಿರುತ್ತಾಳೆ. ಪಿರಮಿಡ್ ಮಾಸ್ಟರ್‌ಗಳ ನೇತೃತ್ವದಲ್ಲಿ- ಬಳ್ಳಾರಿಯಲ್ಲಿರುವ ಪಿರಮಿಡ್‌ನಲ್ಲಿ ಭಾಷಿತ ನಾಮಕರಣ 19-1-2015 ರಂದು ಮಾಡಿದೆವು. ಆ ದಿನ ನನಗೆ ಧ್ಯಾನದಲ್ಲಿ ಬಳ್ಳಾರಿಯಲ್ಲಿರುವ ಪಿರಮಿಡ್‌ನ ಬಾಗಿಲ ಹತ್ತಿರ ಭಾಷಿತಳನ್ನು ಪತ್ರೀಜಿಯವರು ಕೈಯಲ್ಲಿ ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿರುವ ದೃಶ್ಯ ಕಾಣಿಸಿತು.

 

ನಾಮಕರಣ ಫಂಕ್ಷನ್ ಮುಗಿಸಿಕೊಂಡು ಮರುದಿನ ಬೆಂಗಳೂರಿಗೆ ಬಂದೆವು, ನಾವು ಮಲಗಿದ್ದಾಗ "ಭಾಷಿತ ಅಳುತ್ತಿದ್ದಾಳೆ, ಎದ್ದು ತೊಟ್ಟಲು ಕಟ್ಟಿ ಎಂದು ಪತ್ರೀಜಿ ಹೇಳಿದಂತಾಯಿತು", ಎದ್ದು ನೋಡಿದರೆ ಭಾಷಿತ ಅಳುತ್ತಿದ್ದಳು, ಅದನ್ನು ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು. ನಮ್ಮ ಮನೆಯಲ್ಲಿ ಎಲ್ಲರು ಧ್ಯಾನಿಗಳೆ, ನಮ್ಮದು ಧ್ಯಾನ ಕುಟುಂಬ.

 

ಪ್ರತಿಯೊಬ್ಬರಿಗೂ ಧ್ಯಾನ ಬೇಕು, ಧ್ಯಾನ ಮಾಡಲೇಬೇಕು, ಧ್ಯಾನದಿಂದ ಏನಾದರೂ ಪಡೆಯಬಹುದು, ಧ್ಯಾನದಿಂದಲೇ ಜ್ಞಾನ ಪಡೆಯೋಣ, ಧ್ಯಾನ ಜಗತ್ ಮಾಡೋಣ.

 

" ಪ್ರತಿಯೊಬ್ಬರಿಗೂ ಧ್ಯಾನ ಬೇಕೆ ಬೇಕು,
ಧ್ಯಾನವೆಂದರೆ ಶ್ವಾಸದ ಮೇಲೆ ಗಮನ,
ಲೋಕಾ ಸಮಸ್ತಾ ಸುಖಿನೋಭವಂತು "

 

ಶೃತಿ ಸಿದ್ದು, ಬೆಂಗಳೂರು

ಫೋ: +91 99006 09201

Go to top