ಈಜಿಪ್ಟ್ ಆಧ್ಯಾತ್ಮಿಕ ಯಾತ್ರೆಯ ಅನುಭವ

 

ಹಾಯ್ ಫ್ರೆಂಡ್ಸ್,

ನಾನು ಸುಮಂಗಳಾ. ಏಪ್ರಿಲ್ 15 ರಿಂದ 25ರವರೆಗೆ ಈಜಿಪ್ಟ್‌ನ ಪ್ರವಾಸದ ಹಾಗೂ ಪ್ರಪಂಚದ 7 ಅದ್ಭುತಗಳಲ್ಲಿ ಒಂದಾದ ಗೀಜಾ ಪಿರಮಿಡ್ ನಲ್ಲಿಯ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ವಿಮಾನವೆಂದರೆ ಹಕ್ಕಿಯ ತರಹ ಆಕಾಶದಲ್ಲಿ ಹಾರಾಡುತ್ತಿರುವುದನ್ನು ನಾನು ಚಿಕ್ಕವಳಿದ್ದಾಗ ನೋಡಿ ಸಂತೋಷಪಡುತ್ತಿದ್ದೆ. ಇಂದು ನಾನೇ ಹಕ್ಕಿಯಾಗಿ ಗಗನದಲ್ಲಿ ಹಾರಾಡುತ್ತಾ ಭೂಮಿಯ ಸೊಬಗನ್ನು ನೋಡುತ್ತಿರುವಾಗ ಎಷ್ಟೋ ಸಂತೋಷ. ಪ್ರಪಂಚದಲ್ಲಿಯೇ ಅತಿ ಉದ್ದವಾದ ನೈಲ್ ನದಿಯಲ್ಲಿನ ಪ್ರಯಾಣ, ಕ್ರೂಜ್‌ನಲ್ಲಿನ ವಾಸ ಅದ್ಭುತವೆನಿಸಿತು.

ಕ್ವೀನ್ಸ್ ಚೇಂಬರ್‌ನಲ್ಲಿ ನನಗಾದ ಧ್ಯಾನದಲ್ಲಿನ ಅನುಭವ ಹೀಗಿದೆ : ಪತ್ರೀಜಿಯವರು ಎಲ್ಲರಿಗೂ ‘ಓಂ’ ಉಚ್ಛರಿಸಲು ಹೇಳಿದರು. ಹಾಗೇ ಓಂಕಾರ ಹೇಳುತ್ತಾ, ಹೇಳುತ್ತಾ ನನ್ನ ಒಳಗಿನ ಪ್ರಯಾಣ ಪ್ರಾರಂಭವಾಗಿ, ನಾವೆಲ್ಲರೂ ಹೇಳುತ್ತಿರುವ ಓಂ ಎಂಬ ಅಕ್ಷರಗಳು ಪ್ರತಿಯೊಬ್ಬರ ಸಹಸ್ರಾರದಿಂದ ಹೊರಟು, 4 ಇಂಚು ದಪ್ಪವಾದ ಎನರ್ಜಿಯಲ್ಲಿ ಓಂ ಎಂಬ ಅಕ್ಷರವು ಸುರುಳಿಯಾಗಿ ಸುತ್ತಿಕೊಂಡು ಪಿರಮಿಡ್‌ನ ತುತ್ತತುದಿಯ ಬಿಂದುವಿನಿಂದ ಹೊರಗೆ ಬಂದು ಅದು ನಂತರ ಕ್ಷೀರವಾಗಿ ಒಬ್ಬ ಋಷಿಯ ಮೇಲೆ ಅಭಿಷೇಕವಾಗುತ್ತಿದೆ. ನಾನು ಹಾಗೇ ಇನ್ನೂ ಒಳಹೊಕ್ಕು ನೋಡಿದಾಗ ಆನಂದ ಸ್ಥಿತಿಯಲ್ಲಿದ್ದ ಶಿವನ ದರ್ಶನವಾಯಿತು. ನಮ್ಮೆಲ್ಲರ ಓಂಕಾರ ನಾದವು ಅಕ್ಷರಗಳ ರೂಪದಲ್ಲಿದ್ದು, ಅದು ಪಿರಮಿಡ್‌ನ ಹೊರಗಡೆ ಕ್ಷೀರವಾಗಿ ಮಾರ್ಪಾಡಾಗಿ ಶಿವನಿಗೆ ಅಭಿಷೇಕವಾಗುತ್ತಿರುವುದನ್ನು ನಾನು ಸಾಕ್ಷಿಭೂತವಾಗಿ ನೋಡಿದ ಆ ಕ್ಷಣಗಳು ಅದ್ಭುತವಾದ ಅನುಭವ. ನಂತರ ಜನರಲ್ ಚೇಂಬರ್‌ನಲ್ಲಿ ಎಲ್ಲರೂ ಧ್ಯಾನಕ್ಕೆ ಕುಳಿತೆವು. ಆಗ ಧ್ಯಾನದಲ್ಲಿ ಇದ್ದಕ್ಕಿದ್ದ ಹಾಗೆ ಆ ಪಿರಮಿಡ್ ತುಂಬ ಎನರ್ಜಿ ತುಂಬಿಕೊಂಡು, ಅದರಲ್ಲಿ ನನ್ನ ಪ್ರತಿಬಿಂಬ ಮಸುಕು ಮಸುಕಾಗಿ ಕಾಣುತ್ತಿದೆ ಎಂದು ಇನ್ನು ಒಳಹೊಕ್ಕು ನೋಡಿದಾಗ ಇದ್ದಕ್ಕಿದ್ದ ಹಾಗೇ ಪಿರಮಿಡ್ ತುಂಬ ಮಸುಕಾದ ಎನರ್ಜಿ ಮರೆಯಾಗಿ ಸ್ವಚ್ಚವಾದ ನೀರು ತುಂಬಿಕೊಂಡಿತು. ಆ ಸ್ವಚ್ಚವಾದ ನೀರಿನಲ್ಲಿ ನನ್ನ ಪ್ರತಿಬಿಂಬ ಕಾಣುತ್ತಿತ್ತು. ಸ್ವಲ್ಪ ಸಮಯದ ನಂತರ ನನ್ನ ಪ್ರತಿಬಿಂಬ ಮರೆಯಾಗಿ ನಾನು ಕಾಣುತ್ತಿಲ್ಲ, ಆದರೂ ನನ್ನ ಇರುವಿಕೆ ಗೊತ್ತಾಗುತ್ತಿದೆ. ನಾನು ಕಾಣುತ್ತಿಲ್ಲ, ಆದರೂ ನಾನು ಇದ್ದೇನೆ. “ಅಹ್” ಎಂತಹ ಅದ್ಭುತವಾದ ಅನುಭವ. ಇರದೇ ಇರುವ ಆ ನಾನೇ ಆತ್ಮ ಸ್ವರೂಪಿ. 8 ನಿಮಿಷಗಳ ಅನುಭವದಿಂದ ಹೊರಗಡೆ ಬಂದಾಗ ಕಣ್ಣಲ್ಲಿ ಆನಂದ ಭಾಷ್ಪದ ಅನುಭವವಿತ್ತು. ಆಮೇಲೆ ಮ್ಯೂಸಿಯಂ ನೋಡಲು ಹೋದೆವು. ಅಲ್ಲಿ ಈಜಿಪ್ಷಿಯನ್ನರು ಬಳಸಿದ ವಸ್ತುಗಳು, ಆಭರಣಗಳು ಇದ್ದವು. ಅಲ್ಲಿಂದ ಖeಚಿಟ Real Mummy ನೋಡಲು ಹೋದಾಗ ಅಲ್ಲಿ ಕಾಲಿಟ್ಟ ತಕ್ಷಣವೇ ಮೈಜುಮ್ಮೆಂದಿತು. ಸುಮಾರು 20 ನಿಮಿಷಗಳ ಕಾಲ ನೋಡಿ ಹೊರಬಂದು 5 ನಿಮಿಷಗಳಾದರೂ ಆ ಸ್ಥಿತಿಯಿಂದ ಹೊರಬರಲು ಆಗಲಿಲ್ಲ. ನಿಧಾನವಾಗಿ ಯಥಾಸ್ಥಿತಿಗೆ ಬಂದ ತಕ್ಷಣ ನನಗೆ ಪತ್ರೀಜಿಯವರ ಬಗ್ಗೆ ಎಷ್ಟು ಹೆಮ್ಮೆ ಎನಿಸಿತೆಂದರೆ 3 ಸಾವಿರ ವರ್ಷಗಳಾದರೂ ಶ್ವಾಸವಿರದ ಆ ಶವಗಳು ಹಾಗಿರಬೇಕಾದರೆ ಆ ಪಿರಮಿಡ್ ಶಕ್ತಿ ಎಷ್ಟು ಅದ್ಭುತವಾಗಿರಬಹುದು? ಹಾಗಿದ್ದಾಗ ಈ ಶ್ವಾಸವಿರುವ ನಾವೆಲ್ಲರೂ ಪಿರಮಿಡ್‌ನ ಶಕ್ತಿಯನ್ನು ಉಪಯೋಗಿಸಿಕೊಂಡು ಅದ್ಭುತವಾದ ಸಾಧನೆ ಮಾಡಬಹುದು. ಉಸಿರಿರದ ಆ ಶವಗಳೇ ಹಾಗಿರಬೇಕಾದರೆ ಉಸಿರಿರುವ ನಾವು? ಆಲೋಚಿಸಿ ನೋಡಿದಾಗ ಆಶ್ಚರ್ಯ! ಆ ಕ್ಷಣವೇ ಪತ್ರೀಜಿಯವರು ನೆನಪಿಗೆ ಬಂದು ಕಣ್ಣಲ್ಲಿ ನೀರು ತುಂಬಿಕೊಂಡವು. ಮನಸ್ಸಿನಲ್ಲಿ ತಕ್ಷಣವೇ “ಮಹಾನುಭಾವ ಹೇಗೆ ಕಂಡುಹಿಡಿದಿರುವೆ? ಇಂತಹ ಅದ್ಭುತವಾದ ಶಕ್ತಿಯನ್ನು ಧ್ಯಾನಕ್ಕಾಗಿ ಬಳಸಬಹುದು ಎಂದು”. ಹ್ಯಾಟ್ಸ್ ಆಫ್ ಪತ್ರೀಜಿ ಎಂದು ಸಲ್ಯೂಟ್ ಹೊಡೆದೆ. ಇಂತಹ ಮಹದಾನಂದದ ಜೀವನ ಸಾಗಿಸಲು ಧ್ಯಾನ ಎಂಬ ಎರಡಕ್ಷರದ ಅದ್ಭುತವಾದ ಕೊಡುಗೆಯನ್ನು ಕೊಟ್ಟ ಈ ಮಹಾನುಭಾವನಿಗೆ ನಾನು ಪ್ರತಿಯಾಗಿ ಕೊಡಬಲ್ಲ ನನ್ನ ಗುರುಕಾಣಿಕೆಯೆಂದರೆ ನನ್ನ ಉಸಿರಿರುವವರೆಗೂ ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಈ ಆನಾಪಾನಸತಿ ಧ್ಯಾನ ಮತ್ತು ಪಿರಮಿಡ್‌ನ್ನು ಕುರಿತು ತಿಳಿಸುವುದೇ ಆಗಿದೆ..

ಒಟ್ಟಾರೆ ಈ 11 ದಿನಗಳ ಪ್ರವಾಸದಲ್ಲಿ ಭೂಮಿಯಿಂದ ಸಾವಿರ ಮೀಟರ್ ಎತ್ತರದ ಪ್ರಯಾಣದ(Air balloon) ಅನುಭವವೂ ಹಾಗೆಯೇ ಭೂಮಿಯ ಕೆಳಗಿನ ಭೂಗರ್ಭದ ಪ್ರಯಾಣದ ಅನುಭವವೂ ಆಯಿತು. ಹಾಗಾಗಿ ನನ್ನ ವಿನಂತಿ ಏನೆಂದರೆ ಪ್ರತಿಯೊಬ್ಬ ಧ್ಯಾನಿಯೂ ಖಂಡಿತವಾಗಿಯೂ ಗೀಜಾ ಪಿರಮಿಡ್‌ನ ದರ್ಶನ ಮಾಡಿ ಆತ್ಮಾನಂದ ಹೊಂದಬೇಕೆಂಬುದು. ಇಂತಹ ಅದ್ಭುತವಾದ ಪ್ರವಾಸದ ವ್ಯವಸ್ಥೆ ಮಾಡಿದ ಸಾಯಿಕುಮಾರ್, ವೇಣುಗೋಪಾಲ್ ಮತ್ತು ಅವರ ತಂಡಕ್ಕೆ ನನ್ನ ಧನ್ಯವಾದಗಳು.

Go to top