ಈಜಿಪ್ಟ್ ಧ್ಯಾನ ಯಾತ್ರೆ - ಆಧ್ಯಾತ್ಮಿಕ ಪ್ರಗತಿಯಲ್ಲಿ ಒಂದು ಮೈಲುಗಲ್ಲು

 

 

ಈಜಿಪ್ಟ್ ಪ್ರವಾಸ ನನಗೆ ದುಪ್ಪಟ್ಟಾದ ಅನುಭವ ನೀಡಿದೆಯೆಂದು ನನ್ನ ಭಾವನೆ. ಈಜಿಪ್ಟ್‌ನ ವಿವಿಧ ಸ್ಥಳಗಳನ್ನು ನೋಡಿದ್ದು, ನನ್ನ ಬಾಲ್ಯದ ಕನಸಾದ ಗೀಜಾ ಪಿರಾಮಿಡ್‌ನ ಕಿಂಗ್ ಚೇಂಬರ್ ಒಳಗೆ ಧ್ಯಾನ ಮಾಡಿದ್ದು ಮತ್ತು ನೈಲ್ ನದಿಯಲ್ಲಿ ಕ್ರೂಸ್ ಪ್ರಯಾಣ ಒಂದು ಅನುಭವವಾದರೆ, ಮತ್ತೊಂದು ಅನುಭವ ಪ್ರವಾಸದ ಉದ್ದಕ್ಕೂ ಪತ್ರೀಜಿಯವರ ಜೊತೆ ಇದ್ದದ್ದು. ನಾವು ಫಿಲಯ (Philae) ದೇವಸ್ಥಾನ ನೋಡಲು ಹೋದಾಗ, ಬಸ್ಸಿನಲ್ಲಿ ಅವರು, ತಾಯಿ ತನ್ನ ಕಂದಮ್ಮನಿಗೆ ತಿನ್ನಿಸುವ ಹಾಗೆ, ಮ್ಮ ಕೈಯಿಂದ ನನಗೆ ತುತ್ತುಗಳನ್ನು ತಿನ್ನಿಸಿದರು. ಇದು ನನಗೆ ಅಸಾಮಾನ್ಯ ಅನುಭವ. ಕ್ರೂಸ್‌ನಲ್ಲಿ ಪತ್ರೀಜಿ ನನ್ನನ್ನು ಕರೆದು ಸಂಭಾಷಣೆ ನಡೆಸಿ ‘ಪ್ರತಿ ದಿನ ಒಂದು ಗಂಟೆ ಧ್ಯಾನ ಮಾಡು’ ಎಂದರು. ಲಕ್ಸಾರ್ ದೇವಾಲಯದಲ್ಲಿ ಅಮೆರಿಕದಿಂದ ಬಂದ ಮೇರಿ ಜಾನ್‌ರವರು ನನಗೆ ಒಬ್ಬ ವ್ಯಕ್ತಿಯನ್ನು ತೋರಿಸಿ ‘ಅವನೊಂದಿಗೆ ಹೋಗು, ಅವನಿಗೆ ದೇವಾಲಯದ ಪವಿತ್ರ ಸ್ಥಳಗಳು ತಿಳಿದಿವೆ’ ಎಂದು ಹೇಳಿದರು. ನನ್ನೊಂದಿಗೆ ಇನ್ನಿಬ್ಬರು ಬಂದರು. ಅವರು ನಮ್ಮನ್ನು ಒಂದು ಸ್ಧಳಕ್ಕೆ ಕರೆದುಕೊಂಡು ಹೋಗಿ ಗೋಡೆಗೆ ಒರಗಿಸಿ ನಿಲ್ಲಿಸಿದರು, ನನಗೆ ಕಣ್ಣುಗಳು ಮುಚ್ಚುವಂತಾಯಿತು, ನಂತರ ನಾನು ಹಾರುತ್ತಿರುವ ಹಾಗೆ ಭಾಸವಾಯಿತು. ಆ ನಂತರ ನನಗೆ ಅಲ್ಲಿ ಏನು ನಡೆಯುತ್ತಿದೆ ಎಂಬುವುದರ ಅರಿವೇ ಇರಲಿಲ್ಲ. ರೇಣುಕ ಆಂಟಿ ನನ್ನನ್ನು ಜೋರಾಗಿ ಅಲುಗಾಡಿಸಿ ನನ್ನ ಹೆಸರನ್ನು ಮತ್ತೆ ಮತ್ತೆ ಕರೆದಾಗ ನಾನು ಪ್ರತಿಕ್ರಿಯಿಸಿದೆ. ಇದು ನನಗೆ ಒಂದು ಅನನ್ಯ ಅನುಭವ, ನಂತರ ನನ್ನ ಧ್ವನಿ ಬದಲಾಯಿತು. ನನಗೆ ಹೆಚ್ಚು ಉಷ್ಣವಾಯಿತು. ಇದ್ದಕ್ಕಿದ್ದಂತೆ ಇದು ಸಂಭವಿಸಿದ್ದರಿಂದ ಇದು ಬಹುಶಃ ಅಲ್ಲಿನ ಶಕ್ತಿಗಳ ಪ್ರಭಾವದಿಂದಾಗಿರಬೇಕು ಎನ್ನುವುದು ನನ್ನ ಭಾವನೆ. ಕಿಂಗ್ಸ್ ವ್ಯಾಲಿಯಲ್ಲಿ (King's Valley) ನಾವು ರಾಮೆಸ್ಸೆಸ್ ಸಮಾಧಿ ಇರುವಲ್ಲಿ ಧ್ಯಾನ ಮಾಡಿದೆವು. ಅಲ್ಲಿಯೂ ಹೆಚ್ಚಿನ ಶಕ್ತಿ ಇದೆಯೆಂದೆನಿಸಿತು. ನಂತರ ಮಹಾ ಪಿರಾಮಿಡ್‌ನಲ್ಲಿ ಮಹಾ ಅನುಭವ. ಪತ್ರೀಜಿಯ ಕೊಳಲು ವಾದನದೊಂದಿಗೆ ಕಿಂಗ್ಸ್ ಚೇಂಬರ್ ಒಳಗೆ ಧ್ಯಾನ ಮಹತ್ತರವಾಗಿತ್ತು. ಗೀಜಾ ಪಿರಮಿಡ್‌ನಲ್ಲಿ, ನನ್ನನ್ನು ಯಾವುದೋ ಗೊತ್ತಿಲ್ಲದ ಶಕ್ತಿ ಕೆಳಗೆ ಎಳೆಯುತ್ತಿತ್ತು. ನಾನು ನೆಲದ ಮಟ್ಟಕ್ಕೆ ಸಂಪೂರ್ಣವಾಗಿ ಬಗ್ಗಿಬಿಡುತ್ತಿದ್ದೆ, ನನ್ನ ತಲೆ ಹೆಚ್ಚು ಕಡಿಮೆ ನೆಲವನ್ನು ಸ್ಪರ್ಶಿಸುತಿತ್ತು, ನಂತರ ಅದನ್ನು ಅರಿತ ನಾನು ಮತ್ತೆ ನೇರವಾಗಿ ಕುಳಿತುಕೊಳ್ಳುತ್ತಿದ್ದೆ. ಮತ್ತೆ ಅದೇ ರೀತಿಯ ಎಳೆತದಿಂದ ನಾನು ಮತ್ತೆ ಬಗ್ಗಿಬಿಡುತ್ತಿದ್ದೆ. ಹೀಗೆ ಹಲವಾರು ಬಾರಿ ಸಂಭವಿಸಿತು. ದಹಬ್‌ನಲ್ಲಿ ಕೆಂಪು ಸಮುದ್ರದ(ರೆಡ್ ಸೀ) ತೀರದಲ್ಲಿ ಹುಣ್ಣಿಮೆಯ ದಿನ ಸ್ಫಟಿಕದ ಸಮಕ್ಷಮದಲ್ಲಿ ಧ್ಯಾನ ಅದ್ಭುತವಾಗಿತ್ತು. ಹುಣ್ಣಿಮೆಯ ಚಂದ್ರ, ಗಾಳಿ, ನೀರು, ಆಕಾಶ, ಭೂಮಿ ಮತ್ತು ಸ್ಫಟಿಕಗಳಿಂದ ಸುತ್ತುವರಿಯಲ್ಪಟ್ಟದ್ದು ಅಸಾಧಾರಣವಾದ ಅನುಭವನ್ನು ನೀಡಿತು. ದಹಬ್ನಿಲ್ಲಿ ನಡೆದ ಎರಡು ದಿನಗಳ ಸ್ಪಿರಿಚ್ಯುಯಲ್ ರಿಟ್ರೀಟ್ ಸೆಮಿನಾರ್ ಮತ್ತೊಂದು ಲಾಭದಾಯಕ ಸಂಗತಿ. ಅನೇಕ ಮಹಾನ್ ಮಾಸ್ಟರ್ಸ್ ಅವರ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಂಡದ್ದು ಮತ್ತು ಅವರೊಂದಿಗಿನ ಧ್ಯಾನ ಒಂದು ಅನುಭವ. ಅಮೆರಿಕದಿಂದ ಬಂದ ಮೇರಿ ಜಾನ್ ಎಂಬ ಗಣ್ಯರು ಇತರರಿಗೆ ಮಾಡಿದಂತೆ ಹೃದಯ ಮತ್ತು ಕತ್ತಿನ ಮೇಲೆ ಮಾತ್ರ ಸುಗಂಧ ಹಚ್ಚದೆ ನನ್ನ ಹಣೆಯ ಮೇಲೆ, ತಲೆ ಮತ್ತು ಕೂದಲಿಗೂ ಹಚ್ಚಿ, ಸ್ವಲ್ಪ ಹೆಚ್ಚು ಸಮಯ ನನ್ನೊಂದಿಗೆ ಕಳೆದರು. ನನ್ನ ತಲೆ ಭಾರವಾಯಿತು ಮತ್ತು ಕಣ್ಣುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಇದು ಕೇವಲ ಶಕ್ತಿಯ ಹೆಚ್ಚಳ ಎಂದು ತಿಳಿಯಿತು. ಇದು ಮತ್ತೊಂದು ಅದ್ಭುತ ಅನುಭವ. ಅವರಿಗೆ ಧನ್ಯವಾದಗಳು.

 

ಈ ಪ್ರವಾಸ ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯಕವಾಗಿದೆ. ಈಜಿಪ್ಟ್ ಪ್ರಯಾಣ ಅಥವ ಯಾವುದೇ ಪ್ರಯಾಣ ಮಾಡುವುದು ಸುಲಭ. ಆದರೆ ಮನಸ್ಸನ್ನು ಗೆದ್ದು, ಬುದ್ಧಿಯನ್ನು ದಾಟಿ ಆತ್ಮವನ್ನು ತಲುಪುವ ಒಳಪ್ರಯಾಣಕ್ಕೆ ಬಹಳಷ್ಟು ಸಾಧನೆಯ ಅಗತ್ಯವಿದೆ. ಈ ಪ್ರಯಾಣ ಎಲ್ಲರೂ ಮಾಡಬೇಕಾದದ್ದು. ಈಜಿಪ್ಟ್ ಪ್ರವಾಸಕ್ಕೆ ಬಂದ ಬಹಳಷ್ಟು ಜನರಿಗೆ ಆಧ್ಯಾತ್ಮಿಕ ಪಥದಲ್ಲಿ ಒಂದಷ್ಟು ದೂರ ಪ್ರಯಾಣಿಸಲು ನೆರವಾಯಿತು ಎಂಬುವುದು ನನ್ನ ಅನಿಸಿಕೆ.

 

ಈಜಿಪ್ಟ್, ಗೀಜಾ ಪ್ಲೈಟೋ, ಗ್ರೇಟ್ ಪಿರಾಮಿಡ್, ಕಿಂಗ್ಸ್ ಚೇಂಬರ್‌ನಲ್ಲಿ ಧ್ಯಾನ, ನನ್ನ ವಿಷನ್, ಪತ್ರೀಜಿಯವರ ಕೊಳಲು ಸಂಗೀತ ಅಥವಾ ಪತ್ರೀಜಿಯ ಆತ್ಮಿಯತೆ ಈ ಎಲ್ಲದರಲ್ಲಿ ಯಾವುದು ಹೆಚ್ಚು ಎಂದು ನನಗೆ ಹೇಳಲು ಸಾಧ್ಯವಿಲ್ಲ. ಆದರೆ ಇವೆಲ್ಲವೂ ಒಟ್ಟಾರೆಯಾಗಿ ಪದಗಳನ್ನು ಮೀರಿದ ಒಂದು ಅದ್ವಿತೀಯ ಅನುಭವ.

 

 

 

Go to top