ಕಗ್ಗತ್ತಲೆಯಿಂದ ಬೆಳಕಿನೆಡೆಗೆ ಬರುವ
ದಾರಿಯೇ ಧ್ಯಾನ


ನನ್ನ ಹೆಸರು ಶ್ರೀಮತಿ ನಾಗರತ್ನಮ್ಮ ರುದ್ರಪ್ಪ. ನಾನು ಮರಿಯಮ್ಮನಹಳ್ಳಿಯ ನಿವಾಸಿಯಾಗಿದ್ದು ಈ ಧ್ಯಾನಮಾರ್ಗಕ್ಕೆ ಬಂದು ಮೂರು ವರ್ಷಗಳಾದವು. ನನಗೆ ಧ್ಯಾನದ ಪರಿಚಯವಾದದ್ದು ನಮ್ಮೂರಿನ ಗೀತಾಮೃತ ಧ್ಯಾನ ಮಂದಿರದ ಸಂಸ್ಥಾಪಕರಾದ ಶ್ರೀ R.ಬಸವರಾಜ ಇವರಿಂದ. ಮೂರು ವರ್ಷಗಳಿಗೂ ಮುಂಚೆ ನಾನು ಮಾಡುತ್ತಿದ್ದ ಪೂಜೆ, ಭಜನೆ, ಸಂಗೀತ, ಶಿವನಾಮ ಸ್ಮರಣೆ, ಜಪ, ವ್ರತಾಚರಣೆ ಇವೆಲ್ಲವೂ ಸಹ ಧ್ಯಾನ ಮಂದಿರದ ಮೆಟ್ಟಿಲುಗಳಾಗಿ ನನ್ನನ್ನು ಧ್ಯಾನ ಮಂದಿರಕ್ಕೆ ಕರೆದುತಂದಿವೆ ಎನ್ನಬಹುದು. ಇವೆಲ್ಲವನ್ನೂ ಆಚರಿಸಿ ನೋಡಿದ ನನಗೆ ಧ್ಯಾನದಲ್ಲಿ ಸಿಗುತ್ತಿರುವ ತೃಪ್ತಿ ಈ ಯಾವುದರಲ್ಲಿಯೂ ಸಿಗಲಿಲ್ಲ. ಇದು ನನಗೆ "ಆನೆ" ಬಲವನ್ನು ತಂದಿದೆ. "ಆ" ಎಂದರೆ "ಆರೋಗ್ಯ, "ನೆ" ಎಂದರೆ "ನೆಮ್ಮದಿ."
ಧ್ಯಾನ ಶುರು ಮಾಡುವುದಕ್ಕೂ ಮುಂಚೆ ನನಗೆ ಬಿ.ಪಿ., ಶುಗರ್, ಮೊಣಕಾಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳು ಇದ್ದವು. ಪ್ರತಿದಿನ 6ರಿಂದ 8 ಮಾತ್ರೆಗಳನ್ನು ನುಂಗಬೇಕಾಗಿತ್ತು. ಈಗ ಮಾತ್ರೆಗಳನ್ನು ತ್ಯಜಿಸಿ ಧ್ಯಾನ ಮಾರ್ಗದಿಂದಲೇ ನನ್ನ ಎಲ್ಲಾ ಖಾಯಿಲೆಗಳನ್ನು ವಾಸಿಮಾಡಿಕೊಂಡಿದ್ದೇನೆ ಹಾಗೂ ಜ್ಞಾನದ ಬೆಳಕನ್ನು ಕಾಣುತ್ತಿದ್ದೇನೆ.
ಧ್ಯಾನ ಮಾಡುವ ಅವಧಿಯನ್ನು ದಿನದಿಂದ ದಿನಕ್ಕೆ ಕ್ರಮೇಣ ಹೆಚ್ಚಿಸುತ್ತಾ, ಪ್ರಸ್ತುತ, ಬೆಳಿಗ್ಗೆ ಮತ್ತು ಸಂಜೆ 5:30 ರಿಂದ 6:30 ರವರೆಗೆ ಪಿರಮಿಡ್‌ನಲ್ಲಿ ಕುಳಿತು ಧ್ಯಾನ ಮಾಡುತ್ತೇನೆ. ಎರಡು ಬಾರಿ ಮಂಡಲ ಧ್ಯಾನದಲ್ಲಿ ಭಾಗವಹಿಸಿದ್ದೇನೆ.
ಒಮ್ಮೆ ಮನೆಯ ಮುಂದೆ ಕಸಗುಡಿಸುವಾಗ ಮರದಲ್ಲಿದ್ದ ತೆಂಗಿನಕಾಯಿ ಒಂದನ್ನು ಕೋತಿ ಬೀಳಿಸಿದಾಗ ಅದು ತಲೆಯ ಮೇಲೆ ಬಿದ್ದು ಪೆಟ್ಟಾಗಿ ವೈದ್ಯರಲ್ಲಿಗೆ ಹೋಗುವಂತಾಯಿತು. ಅವರು ಪರೀಕ್ಷೆ ಮಾಡಿ ನರಗಳು ದುರ್ಬಲಗೊಂಡಿವೆ ಎಂದರು. ಇದನ್ನು ನಾನು ಧ್ಯಾನದಿಂದಲೇ ವಾಸಿಮಾಡಿಕೊಂಡೆನು. ಮತ್ತೊಮ್ಮೆ ಟೈಲ್ಸ್ ಮೇಲೆ ನಡೆಯುತ್ತಿದ್ದಾಗ ಬಿದ್ದು ಸೊಂಟಕ್ಕೆ ತುಂಬಾ ಹೊಡೆತ ಬಿದ್ದಿತ್ತು. ಕುಳಿತುಕೊಳ್ಳಲು ಸಾಧ್ಯವಾಗದ ನಾನು ಮಲಗಿಕೊಂಡೇ ಧ್ಯಾನ ಮಾಡಿ ಸಹಜ ಸ್ಥಿತಿಗೆ ಬಂದೆನು.
ನನ್ನ ಎಡಗಣ್ಣಿನ ರೆಪ್ಪೆಯ ಮೇಲೆ ಬೆಳೆದ ನೆರೆಗುಳ್ಳೆಯೊಂದು ಅಸಹ್ಯವಾಗಿ ಕಾಣುತ್ತಿತ್ತು. ನಿತ್ಯವೂ ಧ್ಯಾನದ ನಂತರ ಜೋಡಿಸಿದ ಕೈಗಳನ್ನು ಆ ಗುಳ್ಳೆಯ ಮೇಲೆ ಇಡುತ್ತಾ ಬಂದಾಗ ಆ ಗುಳ್ಳೆ ಮಾಯವಾಯಿತು. ಒಮ್ಮೆ ಧ್ಯಾನದಲ್ಲಿ ನನ್ನ ಮಗನ ಕೆಲಸದ ವರ್ಗಾವಣೆ ಕುರಿತಾಗಿ ಸ್ಪಷ್ಟ ಸಂದೇಶವೊಂದು ಸಿಕ್ಕಿತ್ತು. ದೂರದ ಚೆನ್ನೈ, ಕಲ್ಕತ್ತಾ, ಬಿಹಾರ ಇವು ನಮಗೆ ಇಷ್ಟವಿರಲಿಲ್ಲ. ಹತ್ತಿರದ ಬೆಂಗಳೂರು ಆದರೆ ಉತ್ತಮವೆಂದು ನಮ್ಮೆಲ್ಲರ ಆಶಯವಾಗಿತ್ತು. ಅದರಂತೆ ನನ್ನ ಸಂಕಲ್ಪವೂ ಇತ್ತು. ಅಂದುಕೊಂಡಂತೆ ಕಂಪನಿಯವರು ಬೆಂಗಳೂರಿಗೇ ವರ್ಗಾವಣೆ ಮಾಡಿದರು.
ನನ್ನ ಸಂಸಾರದಲ್ಲಿ ಯಾವ ಕೊರತೆಯೂ ಇಲ್ಲ, ನನಗೆ ಯಾವ ಕೋರಿಕೆಯೂ ಇಲ್ಲ. ಎಲ್ಲವೂ ಪರಿಪೂರ್ಣವಾಗಿವೆ. ಪರಮಾತ್ಮನನ್ನು ಕಾಣಲು ಎಲ್ಲೂ ಅಲೆಯಬೇಕಾಗಿಲ್ಲ. ನಮ್ಮ ಉಸಿರಿನ ಕಡೆ ಗಮನ ಹರಿಸಿದರೆ ಸಾಕು ಅವನೇ ಕಾಣುವನು. ನಾನು ಅವನನ್ನೇ ಸ್ಮರಿಸುತ್ತಿದ್ದೆ. ಈ ಅನುಭವವನ್ನು ಹಿರಿಯ ಮಾಸ್ಟರ್ ಬಳಿ ಹೇಳಿಕೊಂಡಾಗ ಧ್ಯಾನದಲ್ಲಿ ಕಾಣುವುದು ನಿಮ್ಮ ಆತ್ಮವೇ ಹೊರತು ಬೇರೆ ಪರಮಾತ್ಮನಲ್ಲ. ಹಾಗಾಗಿ, ಸ್ಮರಣೆ ಮಾಡುವುದು ಬೇಕಾಗಿಲ್ಲ. ಬದಲಾಗಿ ಅದನ್ನೇ ಗಮನಿಸುತ್ತಾ ಧ್ಯಾನ ಮಾಡಲು ಹೇಳಿದರು.
ಸುತ್ತಮುತ್ತಲಿನ ಜನರು ಗುಂಪು ಗುಂಪಾಗಿ ಸೇರಿ ಹರಟೆ ಹೊಡೆಯುತ್ತಾ ವ್ಯಂಗ್ಯವಾಗಿ ಮಾತನಾಡುತ್ತಾ ಇರುವಾಗ ಅದನ್ನು ಕೇಳಿಸಿಕೊಂಡು ಮನಸ್ಸಿಗೆ ಬಹಳ ನೋವಾಗುತಿತ್ತು. ಧ್ಯಾನದ ದಾರಿಗೆ ಬಂದಾಗಿನಿಂದ ಯಾರೇ ಏನೇ ಅಂದರೂ ಅದರಿಂದ ನಾನು ಬಾಧಿತಳಾಗುವುದಿಲ್ಲ. ಇತ್ತೀಚೆಗೆ ವೈದ್ಯರಲ್ಲಿಗೆ ತಪಾಸಣೆಗೆ ಹೋದಾಗ ಅವರು "ನಿಮ್ಮ ಎಲ್ಲಾ ಖಾಯಿಲೆಗಳು ಗುಣವಾಗುತ್ತಿರುವುದು ಹಾಗೂ ಬಿ.ಪಿ., ಶುಗರ್ ಎಲ್ಲ ಸಹಜ ಸ್ಥಿತಿಗೆ ಬರುತ್ತಿರುವುದು ನಮ್ಮ ‘ಮೆಡಿಸಿನ್’ನಿಂದ (ಔಷಧಿ) ಅಲ್ಲ, ಅದಕ್ಕೆ ನಿಮ್ಮ ‘ಮೆಡಿಟೇಷನ್’ (ಧ್ಯಾನ) ಕಾರಣವಾಗಿದೆ " ಎಂದರು. ಇದರಿಂದ ಧ್ಯಾನದ ಬಗ್ಗೆ ನಂಬಿಕೆ ಹೆಚ್ಚಾಗಿ ಹಲವಾರು ಜನರನ್ನು ಈ "ಧ್ಯಾನ ಸಾಗರಕ್ಕೆ” ಕರೆದುಕೊಂಡು ಬರುತ್ತಿದ್ದೇನೆ.
ನನಗಂತೂ ಈ ಧ್ಯಾನ ಮಾರ್ಗ ಕಲ್ಪವೃಕ್ಷ ಮತ್ತು ಕಾಮಧೇನುವಾಗಿದೆ. ಆತ್ಮವೆಂಬುದು ಪರಮಾತ್ಮನ ಒಂದು ತುಣುಕು. ಈ ಜೀವಾತ್ಮವು ಆ ಪರಮಾತ್ಮನ ಸೇರುವ ತನಕ ಉಸಿರಾಟವನ್ನು ಗಮನಿಸುವ ಈ ಧ್ಯಾನವನ್ನು ಬಿಡಲಾರೆನು. ಇಂತಹ ಸುಲಭದ ಧ್ಯಾನಮಾರ್ಗವನ್ನು ತಿಳಿಸಿಕೊಟ್ಟ ಬಸವರಾಜ ಹಾಗೂ ಗುರುಗಳಾದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೂ ಕೋಟಿ ಕೋಟಿ ವಂದನೆಗಳು.


- ಶ್ರೀಮತಿ ನಾಗರತ್ನಮ್ಮ ರುದ್ರಪ್ಪ,
ಗೀತಾಮೃತ ಧ್ಯಾನ ಮಂದಿರ,
ಮರಿಯಮ್ಮನಹಳ್ಳಿ
ಮೊ:+91 99163 30290

Go to top