ಧ್ಯಾನಾನುಭವಗಳನ್ನು, ಮತ್ತು ವೈಯಕ್ತಿಕ ಆಧ್ಯಾತ್ಮಿಕ ಪರಿವರ್ತನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು


ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ (ಪಿ.ಎಸ್.ಎಸ್.ಎಂ) ಕಿರಿಯ ಪಿರಮಿಡ್ ಮಾಸ್ಟರ್‌ಗಳ ಸ್ವಾಧ್ಯಾಯಕ್ಕೆ ಪೂರಕವಾಗಿ ಹಿರಿಯ ಪಿರಮಿಡ್ ಮಾಸ್ಟರ್‌ಗಳ ಅನುಭವಗಳು ಅತ್ಯಗತ್ಯ ಎಂದು ಪತ್ರೀಜಿ ಪ್ರತಿಪಾದಿಸುತ್ತಾರೆ. ಅಲ್ಲದೆ, ಅವುಗಳನ್ನು ಬರೆದು ಪುಸ್ತಕರೂಪದಲ್ಲಿ ಪ್ರಕಟಿಸಬೇಕು ಎಂದೂ ಅವರು ಆದೇಶಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಜೀವನ ಎಂಬ ಯುದ್ಧಭೂಮಿಯಲ್ಲಿರುವ ಯೋಧರೇ ಸರಿ. ಎಲ್ಲರೂ ಅವರವರ ಮಟ್ಟದಲ್ಲಿ ಸಾಧನೆಗಳನ್ನು ಮಾಡಿರುತ್ತಾರೆ. ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿರುತ್ತಾರೆ. ಒಬ್ಬರ ಸಾಧನೆ ಮತ್ತು ಹೋರಾಟಗಳು ಇತರರಿಗೆ ಮಾರ್ಗದರ್ಶಿಯಾಗಬೇಕು. ಸಮಸ್ಯೆಗಳು ಪ್ರತಿಯೊಬ್ಬರಿಗೂ ಇರುತ್ತವೆ ಎಂಬುದು ಎಲ್ಲರಿಗೂ ತಿಳಿಯಬೇಕು. ಇತರರ ಅನುಭವದಿಂದ ಕಲಿಯುವುದು ಸಾಕಷ್ಟಿರುತ್ತದೆ. ಹೀಗಾಗಿಯೇ, ಜೀವನಚರಿತ್ರೆ ಅಥವಾ ಆತ್ಮಚರಿತ್ರೆಗಳು ಮಹತ್ವವನ್ನು ಹೊಂದಿವೆ. ಇವುಗಳು ಜ್ಞಾನಪ್ರಸಾರಕ್ಕೆ ಅನುವು ಮಾಡಿಕೊಡುತ್ತವೆ. ನೀವು ಬೇರೆಯವರಿಗೆ ಕೊಡುವ ನಿಮ್ಮ ವಿಸಿಟಿಂಗ್ ಕಾರ್ಡ್, ನಿಮ್ಮ ಸರಿಯಾದ ಪರಿಚಯವನ್ನು ಮಾಡಿಕೊಡುವುದಿಲ್ಲ. ನಿಮ್ಮ ಪರಿಚಯವು ಇತರರಿಗೆ ಆಗಬೇಕೆಂದರೆ ಅದು ನಿಮ್ಮ ಜೀವನಚರಿತ್ರೆಯಿಂದ ಮಾತ್ರವೇ ಸಾಧ್ಯ.
ಡಾ.ಎ.ಸತ್ಯನಾರಾಯಣರವರು ಪ್ರಸ್ತುತ, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್‌ನ ಟ್ರಸ್ಟಿ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಟ್ರಸ್ಟ್ ಪ್ರಕಟಿಸುತ್ತಿರುವ “ಧ್ಯಾನ ಕಸ್ತೂರಿ” ಎನ್ನುವ ಹೊಸಯುಗದ ಆಧ್ಯಾತ್ಮಿಕ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ ಮತ್ತು ಉಚಿತ ಧ್ಯಾನ ತರಗತಿಗಳನ್ನು ನಡೆಸುತ್ತಾ, ಧ್ಯಾನ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೂ ಹಲವಾರು ವರ್ಷಗಳಿಂದ ಪಿ.ಎಸ್.ಎಸ್.ಎಂ. ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಹಲವು ಪ್ರವೃತ್ತಿಗಳಲ್ಲಿ ತೊಡಗಿಕೊಂಡಿರುವ ಇವರು ವೃತ್ತಿಯಿಂದ ಬೆಂಗಳೂರಿನ ‘ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ’ಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪತ್ರೀಜಿಯವರ ಆದೇಶದಂತೆ ತಮ್ಮ ಸಾಧನೆ ಮತ್ತು ಧ್ಯಾನದ ಅನುಭವಗಳನ್ನು “ಧ್ಯಾನರಹಿತ ಜೀವನದಿಂದ ಧ್ಯಾನ ಜೀವನದೆಡೆಗೆ” ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ.
ಬಡ ನೇಕಾರರ ಕುಟುಂಬದಲ್ಲಿ ಜನಿಸಿದ ಸತ್ಯನಾರಾಯಣರವರು ಬಡತನದಲ್ಲೇ ಬೆಳೆದರು. ನಂತರ ಕೈಮಗ್ಗ, ವಿದ್ಯುತ್ ಚಾಲಿತ ಮಗ್ಗಗಳಲ್ಲಿ ದುಡಿಯುತ್ತಲೇ ತಮ್ಮ ಪದವಿ ಮತ್ತು ದೂರಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿ ಗಳಿಸಿದರು ಮತ್ತು ಮೂರು ವಿಷಯಗಳಲ್ಲಿ ಡಿಪ್ಲೊಮಗಳನ್ನು ಪಡೆದರು. ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿಯೇ ಬಿಡುತ್ತಿದ್ದ ಹೂಗಳನ್ನು ಕಟ್ಟಿ ಮಾರಿದುದೂ ಉಂಟು. ನಂತರವೂ ಹಗಲು ದುಡಿಮೆ, ರಾತ್ರಿ ಅಧ್ಯಯನ ಮಾಡುತ್ತಾ, ಸಂಜೆ ಮನೆಪಾಠ ಹೇಳಿಕೊಡುತ್ತಿದ್ದರು. ನಂತರ, ಅವರು ಓದಿದ ರೂರಲ್ ಕಾಲೇಜಿನಲ್ಲಿಯೇ ವಾಣಿಜ್ಯ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ‘ಕನ್ನಡ ಪ್ರಭ’ ದಿನಪತ್ರಿಕೆಯ ಕನಕಪುರದ ವರದಿಗಾರರಾಗಿ ತಮ್ಮ ಪ್ರವೃತ್ತಿ ಆರಂಭಿಸಿ ಕನಕಪುರದ ‘ಕರ್ನಾಟಕ ಸಂಘ’ ಮತ್ತು ‘ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು’ ಇವುಗಳ ಕಾರ್ಯದರ್ಶಿಯಾಗಿಯೂ ಸಾಹಿತ್ಯಸೇವೆ ಸಲ್ಲಿಸಿದ್ದಾರೆ. ‘ಕಂಪ್ಯೂಟರ್ ಅಪ್ಲಿಕೇಶನ್’ ವಿಷಯದಲ್ಲಿ ಸ್ನಾತಕೊತ್ತರ ಡಿಪ್ಲೊಮ ಪಡೆದು, ‘ಕನ್ನಡ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರ’ದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ‘ಕಂಪ್ಯೂಟರ್‌ನಲ್ಲಿ ಕನ್ನಡದ ಸಮಗ್ರ ಬಳಕೆಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳು -ಒಂದು ಅಧ್ಯಯನ ‘ಎನ್ನುವ ಪ್ರೌಢಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಅದೇ ಕ್ಷೇತ್ರದಲ್ಲಿ ಅನುವಾದ, ಉಪನ್ಯಾಸ, ತರಬೇತಿಗಳನ್ನು ನಡೆಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮಕ್ಕಳು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಯಲು ಇರುವ “ಲೋಗೋ” ಎಂಬ ತಂತ್ರಾಂಶದ ಕನ್ನಡೀಕರಣ ಯೋಜನೆಯಲ್ಲಿ ತಾಂತ್ರಿಕ ಅನುವಾದ ಮತ್ತು ಇತರ ಕೆಲಸಗಳಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಈ ‘ಕನ್ನಡ ಲೋಗೋ ಸಾಫ್ಟ್‌ವೇರ್’ ಭಾರತೀಯ ಭಾಷೆಗಳಲ್ಲಿಯೇ ಪ್ರಪ್ರಥಮ ಮತ್ತು ಅದ್ವಿತೀಯ. ಅದಕ್ಕೆ ‘ಮಂಥನ್’ ಪ್ರಶಸ್ತಿ ಸಹ ದೊರೆತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಸೇವೆ ಇನ್ನೂ ಹಲವಾರು.
ಒಮ್ಮೆ ತಮ್ಮ ವೃತ್ತಿಜೀವನದಲ್ಲಾದ ಘಟನೆಯಿಂದ ಬಹಳವಾಗಿ ನೊಂದಿದ್ದರಿಂದ ಅವರಿಗೆ ಆರೋಗ್ಯದ ಸಮಸ್ಯೆಯು ಉಂಟಾಯಿತು. ಆ ಸಂದರ್ಭದಲ್ಲಿ ಧ್ಯಾನ ಪರಿಚಯವಾಗಿ ತಮ್ಮ ಜೀವನದ ಹಾದಿಯೇ ಬದಲಾಯಿತು ಎನ್ನುತ್ತಾರೆ. ಈ ಕೃತಿರಚನೆ ಆರಂಭಿಸುವ ಸಮಯಕ್ಕೆ ಸರಿಯಾಗಿ ಚಿಕ್ಕ ರಸ್ತೆ ಅಪಘಾತವಾಗಿತ್ತು. ಮೂಳೆ ಮುರಿದುದ್ದರಿಂದ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದರು. ವಿಶ್ರಾಂತಿ ಪಡೆಯುತ್ತಲೇ ತಮ್ಮ ಲ್ಯಾಪ್‌ಟಾಪ್ ಬಳಸಿ ಈ ಪುಸ್ತಕವನ್ನು ಸಿದ್ಧಪಡಿಸಿದರು. ಧ್ಯಾನಿಗಳು ಎಲ್ಲ ಘಟನೆ, ಸಂದರ್ಭವನ್ನೂ ಸವಾಲಾಗಿಯೇ ಸ್ವಿಕರಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ಅವರ ಪುಸ್ತಕದಲ್ಲಿನ ಕೆಲವು ವಿಷಯಗಳು ಹೀಗಿವೆ:
“ಪಿರಮಿಡ್ ವ್ಯಾಲಿಯಲ್ಲಿ ಮತ್ತು ಬೇರೆ ಬೇರೆ ಧ್ಯಾನಕೇಂದ್ರಗಳಲ್ಲಿ ಉಪನ್ಯಾಸ ನೀಡಿದಾಗ, ಯಾವುದೋ ಒಂದು ಶಕ್ತಿಯು ನನ್ನಿಂದ ಮಾತನ್ನು ಹೊರಡಿಸುತ್ತಿತ್ತು, ನಾನು ಆಸ್ಟ್ರಲ್ ಮಾಸ್ಟರ್‌ಗಳ ಕೈಯಲ್ಲಿ ಮಾಧ್ಯಮವಾಗಿ ಬಳಕೆಯಾಗುತ್ತಿದ್ದೇನೆ ಎಂಬುದನ್ನು ನಾನು ಗಮನಿಸಿದೆ. ಅದೊಂದು ಅನನ್ಯ ಅನುಭವ.”
“ಮಾತು ಶುದ್ಧವಾಗಿರಬೇಕು. ನಮ್ಮ ಮಾತುಗಳೇ ನಮ್ಮ ವಾಸ್ತವಕ್ಕೆ ಕಾರಣವಾಗುತ್ತವೆ. ನಮ್ಮ ವಾಸ್ತವಕ್ಕೆ ನಾವೇ ಕಾರಣ. ಇತರರು ನಮ್ಮ ಜೀವನವನ್ನು ನಿರ್ದೇಶಿಸುವುದಿಲ್ಲ. ನಮ್ಮ ಜೀವನನೌಕೆಯ ಚಾಲಕರು ನಾವೇ, ನಮ್ಮ ಇಚ್ಛೆಯಂತೆ ಅದರ ದಿಕ್ಕನ್ನು ಬದಲಿಸುವ ಮೂಲಕ ನಮ್ಮ ಗಮ್ಯವನ್ನು ತಲುಪಬಹುದು ಎಂಬುದನ್ನು ಪತ್ರಿಜಿಯವರ ಸಾಂಗತ್ಯದಿಂದ ನಾನು ಅರಿತೆನು.”
‘ವೈದ್ಯರೂ ಬೇಡ, ಔಷಧಿಯೂ ಬೇಡ’ ಎಂಬುದನ್ನು ತಿಳಿಸುವ ಪತ್ರೀಜಿಯವರು ‘ಅಪಘಾತಗಳಂತಹ ತುರ್ತು ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ಇತ್ಯಾದಿ ಸಂದರ್ಭದಲ್ಲಿ ವೈದ್ಯರ ಸೇವೆ ಕೇವಲ ಶೇ.೫ರಷ್ಟು ಮಾತ್ರವೇ ಉಪಯೋಗಕ್ಕೆ ಬರುತ್ತದೆ. ಉಳಿದದ್ದೆಲ್ಲವನ್ನೂ ನಾವು ಧ್ಯಾನದಿಂದಲೇ ಪರಿಹರಿಸಿಕೊಳ್ಳಬಹುದು. ದೇಹವು ಅತ್ಯದ್ಭುತವಾದ ಸ್ವಯಂ ಉಪಶಮನ ಗುಣವನ್ನು ಹೊಂದಿದ್ದು ಅದನ್ನು ನಾವು ತಿಳಿದುಕೊಂಡಿಲ್ಲ ಎನ್ನುತ್ತಾರೆ ಪತ್ರೀಜಿ.”
“ಮನಸ್ಸಿನಲ್ಲಿ ಉದ್ಭವಿಸಿದ ತೊಂದರೆಗಳು ದೇಹದ ಮೇಲೆ ಪರಿಣಾಮಬೀರಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ, ರೋಗಗಳು ಮೊದಲು ಮನಸ್ಸಿನಲ್ಲಿ ಉಂಟಾಗಿ ನಂತರ ದೇಹಕ್ಕೆ ವರ್ಗಾವಣೆಗೊಳ್ಳುತ್ತವೆ ಎನ್ನಲಾಗಿದೆ. ಇವುಗಳನ್ನು ಮನೋದೈಹಿಕ ಕಾಯಿಲೆಗಳು (ಸೈಕೋಸೊಮ್ಯಾಟಿಕ್) ಎಂದೂ ಸಹ ಕರೆಯಲಾಗುತ್ತದೆ.”
“ಶಾರೀರಿಕ ಆರೋಗ್ಯ ಮತ್ತು ಮಾನಸಿಕ ಶಾಂತಿಗಳು ಧ್ಯಾನದ ತಕ್ಷಣದ ಫಲವಾಗಿದೆ. ನಿರಂತರವಾದ ಧ್ಯಾನಾಭ್ಯಾಸವೇ ಸಾಧನೆ. ಸಾಧನೆಯ ಆರಂಭದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕಾನೇಕ ಲಾಭಗಳು ದೊರೆಯುತ್ತವೆ. ಮನಸ್ಸು ಸಮತೋಲನದಲ್ಲಿದ್ದು, ಸುಖಜೀವನಕ್ಕೆ ದಾರಿಯಾಗುತ್ತದೆ. ಸಮಚಿತ್ತವು ಲಭ್ಯವಾಗುವ ಕಾರಣ ಜೀವನದಲ್ಲಿ ಒತ್ತಡಗಳು ಇಲ್ಲವಾಗುತ್ತವೆ. ಇದರಿಂದ ವ್ಯಾಪಾರ ಮತ್ತು ಇತರ ವೃತ್ತಿಯ ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನಗಳಿಗೆ ಏರಬಹುದು. ಈಗಾಗಲೇ ಇರುವ ದೈಹಿಕ ಖಾಯಿಲೆಗಳನ್ನು ಧ್ಯಾನದಿಂದ ವಾಸಿಮಾಡಿಕೊಳ್ಳಬಹುದು. ಮುಂದೆ ಬರಬಹುದಾದ ರೋಗಗಳನ್ನು ಧ್ಯಾನದಿಂದ ತಡೆಗಟ್ಟಬಹುದು. ಧ್ಯಾನದಿಂದ ಆಧ್ಯಾತ್ಮಿಕ ಲಾಭಗಳೂ ಸಹ ಇವೆ. ಧ್ಯಾನ ಸಾಧನೆಯ ಸುದೀರ್ಘ ಪ್ರಯಾಣದಲ್ಲಿ, ಸತತ ಪ್ರಯತ್ನಗಳಿಂದ, ಧ್ಯಾನಸಾಧನೆಯ ತುಟ್ಟತುದಿಗೇರಿದಾಗ ಅಂಥ ಸಾಧಕನಿಗೆ ಮುಕ್ತಿ ದೊರೆಯುತ್ತದೆ. ಮುಕ್ತಿಯೆಡೆಗೆ ಸಾಗುವ ಪ್ರಯಾಣದ ಮೊದಲ ಹೆಜ್ಜೆಯೇ ‘ಸರಳ ಧ್ಯಾನದ ಕಲಿಕೆ’, ಧ್ಯಾನ ಸಾಧನೆಯಿಂದ ಸಕಲವೂ ಸಿದ್ಧಿಸುತ್ತದೆ ಎಂಬುದು ನೈಜಸಾಧಕರ ಅನುಭಾವಿಕ ಜ್ಞಾನವಾಗಿದೆ.’
‘ಮುಕ್ತಿ’ ಎಂದರೆ ಬಂಧನವಿಲ್ಲದ ಸ್ವತಂತ್ರ ಸ್ಥಿತಿ. ಮುಕ್ತಿ ಎಂಬುವುದು ಹತ್ತು ಲಕ್ಷ ಮೈಲಿಗಳಷ್ಟು ದೂರದಲ್ಲಿಲ್ಲ. ಮುಕ್ತಸ್ಥಿತಿ ಪಡೆಯಲು ತ್ರಿಕರಣಶುದ್ಧಿ ಮೊದಲನೆಯ ಮೆಟ್ಟಿಲು. ಧ್ಯಾನ ಎಂಬುವುದು ಎರಡನೆಯ ಮೆಟ್ಟಿಲು. ನಿಜವಾಗಲೂ ನಾವು ಮುಕ್ತಿಯನ್ನು ಬಯಸುವವರಾದರೆ ನಿಜವಾಗಲೂ ಧ್ಯಾನ ಮಾಡುತ್ತೇವೆ. ‘ಆನಾಪಾನಸತಿ’ ಧ್ಯಾನ ಮಾಡುವುದರಿಂದ ತಕ್ಷಣದ ಒತ್ತಡ ನಿವಾರಣೆ ಮಾಡಿಕೊಳ್ಳಬಹುದು. ಧ್ಯಾನಾಭ್ಯಾಸವನ್ನು ನಿತ್ಯಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಕಟ್ಟಿಟ್ಟ ಬುತ್ತಿ. ಇನ್ನು ಧ್ಯಾನವನ್ನು ಒಂದು ಸಾಧನೆ ಎಂದು ಕೈಗೊಂಡಿದ್ದೇ ಆದರೆ ಪ್ರತಿಯೊಬ್ಬರೂ ಸಹ ಆಧ್ಯಾತ್ಮಿಕ ಉನ್ನತಿ ಸಾಧಿಸಬಹುದು.’
“ಆನಾಪಾನಸತಿಯ ಮಹತ್ವ: ‘ಆಧ್ಯಾತ್ಮಿಕ ಆರೋಗ್ಯವೇ ಬೇರು, ದೈಹಿಕ ಆರೋಗ್ಯವೇ ಫಲ!... ಒಬ್ಬ ವ್ಯಕ್ತಿಗೆ ಧ್ಯಾನವೊಂದೇ ಆಧ್ಯಾತ್ಮಿಕ ಆರೋಗ್ಯವನ್ನು ಸುಲಭವಾಗಿ ತಂದುಕೊಡಬಲ್ಲದು!! ಅಲ್ಲದೆ, ‘ಧ್ಯಾನ’ ಎಂಬುದು ನಮ್ಮದೇ ಪ್ರಯತ್ನಗಳ ಮೂಲಕ ನಮಗೆ ನಾವೇ ಕೊಟ್ಟುಕೊಳ್ಳುವ ಅತ್ಯುತ್ತಮವಾದ ಕೊಡುಗೆಯಾಗಿದೆ.”
“ನನಗೆ ಸಾಮಾನ್ಯವಾದ ಧ್ಯಾನಾನುಭವಗಳಾಗಿವೆ. ಅಸಾಮಾನ್ಯವಾದ ಧ್ಯಾನಾನುಭವಗಳು ವಿರಳ. ದೇಹಾತೀತ ಅನುಭವ ಒಂದೆರಡು ಬಾರಿ ಮಾತ್ರವೇ ಆಗಿದ್ದು, ನನ್ನ ಹಿಂದಿನ ಜನ್ಮದಲ್ಲಿ ನಾನು ಒಬ್ಬ ಬೋಧಕ, ಶಿಕ್ಷಕನಾಗಿದ್ದೆ ಎಂಬುದನ್ನು ಧ್ಯಾನದಲ್ಲಿ ಕಂಡುಕೊಂಡೆ. ಧ್ಯಾನದಿಂದ ನಾನು ಪ್ರಶಾಂತ ಜೀವನದೆಡೆಗೆ ಸಾಗಿದ್ದೇನೆ. ಅನೇಕಾನೇಕ ಆಧ್ಯಾತ್ಮ ಸತ್ಯಗಳನ್ನು ತಿಳಿದುಕೊಂಡು ಅನುಷ್ಠಾನದ ಹಾದಿಯಲ್ಲಿ ಇದ್ದೇನೆ.”
“ಕಾಸ್ಮಿಕ್ ಧಾರೆಯಿಂದ ಇಡೀ ಮೈಯೆಲ್ಲಾ ಕಂಪಿಸಿತು. ಸಾಲು ಸಾಲು ಪ್ರಕೃತಿಯ ವೈವಿಧ್ಯಮಯ ದೃಶ್ಯಗಳನ್ನು ಧ್ಯಾನದಲ್ಲಿ ಕಂಡೆ. ಅದೊಂದು ನನ್ನ ಅನನ್ಯ ಧ್ಯಾನಾನುಭವ. ಪಿರಮಿಡ್ ಧ್ಯಾನಮಾರ್ಗದಲ್ಲಿ ನನ್ನ ಇಷ್ಟು ವರ್ಷಗಳ ಧ್ಯಾನ, ಸತ್ಸಂಗ, ಸಜ್ಜನ ಸಾಂಗತ್ಯ ಮತ್ತು ಆಚಾರ್ಯ ಸಾಂಗತ್ಯಗಳ ಹಿನ್ನೆಲೆಯಲ್ಲಿ ತಿಳಿದುಕೊಂಡ ಜ್ಞಾನವನ್ನು ಈಗ ಅನುಭಾವಿಕ ಜ್ಞಾನವನ್ನಾಗಿಸುವ ಪ್ರಯತ್ನದಲ್ಲಿ ಇದ್ದೇನೆ. ಅದಕ್ಕಾಗಿ ಅನುಷ್ಠಾನವನ್ನು ಮಾಡುವ ಪ್ರಕ್ರಿಯೆ ಆರಂಭಿಸಿದ್ದೇನೆ. ಕೇವಲ ಓದಿದ್ದು, ಕೇಳಿದ್ದು ನಿಜವಾದ ಜ್ಞಾನವಲ್ಲ. ಸ್ವಯಂ ಅನುಭವಿಸಿ ತಿಳಿದುಕೊಂಡ ಜ್ಞಾನವೇ ಅನುಭಾವಿಕ ಜ್ಞಾನ. ನಾವು ಆಧ್ಯಾತ್ಮದಲ್ಲಿ ಓದಿದ, ಕೇಳಿದ ಎಲ್ಲ ಜ್ಞಾನವನ್ನು ಅನುಭಾವಿಕ ಜ್ಞಾನವನ್ನಾಗಿ ಮಾಡಿಕೊಳ್ಳಬೇಕು. ಅದಕ್ಕೆ ಸಾಧನೆ ಅತ್ಯಂತ ಅಗತ್ಯ. ಸಾಧನೆ ಇಲ್ಲವಾದರೆ ಅನುಭಾವಿಕ ಜ್ಞಾನ ಲಭಿಸುವುದಿಲ್ಲ.”
‘’48 ದಿನಗಳ ಕಾಲದ ಮೌನವ್ರತವನ್ನು ಕೈಗೊಳ್ಳುವ ಮೂಲಕ ನನ್ನ ನಿಜವಾದ ಆಧ್ಯಾತ್ಮಿಕ ಜೀವನವು ಈಗ ಆರಂಭಗೊಂಡಿದೆ. ಎಲ್ಲವನ್ನೂ ಗಮನಿಸಿದ ನಂತರ, ಯಾವುದಕ್ಕೆ ಎಷ್ಟು ಪ್ರತಿಕ್ರಿಯಿಸಬೇಕೋ ಅಷ್ಟೇ ಪ್ರತಿಕ್ರಿಯೆ ಇರಬೇಕು. ಯಾವುದನ್ನು ನಿರ್ಲಕ್ಷಿಸಬೇಕೋ ಅದನ್ನು ನಿರ್ಲಕ್ಷಿಸಬೇಕು. ಯಾವುದಕ್ಕೆ ಆದ್ಯತೆ ಇರಬೇಕೋ ಅದಕ್ಕೆ ಆದ್ಯತೆಯನ್ನು ನೀಡಬೇಕು ಎನ್ನುವ ಅರಿವು ನನ್ನಲ್ಲಿ ಉಂಟಾಯಿತು. ಇವೆಲ್ಲವೂ ನನ್ನ ಧ್ಯಾನ ಜೀವನದ ಫಲಗಳಾಗಿವೆ.”
“ನಿದ್ರೆಯಲ್ಲಿ ಪ್ರತಿಯೊಂದು ಜೀವಿಯೂ ತನಗೆ ಅವಶ್ಯಕವಾದ ವಿಶ್ವಪ್ರಾಣಶಕ್ತಿಯನ್ನು (ಕಾಸ್ಮಿಕ್ ಎನರ್ಜಿ) ಪಡೆಯುವುದು ಬಹುತೇಕರಿಗೆ ತಿಳಿದಿಲ್ಲದ ಸತ್ಯಸಂಗತಿ. ಇಂಥ ವಿಶ್ವಪ್ರಾಣಶಕ್ತಿಯ ಭಂಡಾರವಾಗಿರುವ ಪಿರಮಿಡ್‌ಗಳು ನಿಜಕ್ಕೂ ‘ಪವರ್ ಹೌಸ್’ಗಳು. ನಿದ್ರೆಯಿಂದ ಅಲ್ಪಪ್ರಮಾಣದ ಚೈತನ್ಯವು ದೊರೆಯುತ್ತದೆ. ಆದರೆ, ಧ್ಯಾನದಿಂದ ಅಪಾರ ಚೈತನ್ಯವನ್ನು ಗಳಿಸಿಕೊಳ್ಳಬಹುದು ಎಂಬೆಲ್ಲ ವಿಚಾರಗಳನ್ನು ಸ್ವತಃ ಅನುಭವಿಸಿ ನಾನು ತಿಳಿದುಕೊಂಡೆ. ಪಿರಮಿಡ್‌ನೊಳಗೆ ಧ್ಯಾನಸ್ಥಿತಿಯನ್ನು ಬೇಗನೆ ತಲುಪಬಹುದು. ಪಿರಮಿಡ್‌ನೊಳಗಿನ ಶಕ್ತಿಚೈತನ್ಯವು ನಾಗಾಲೋಟದಲ್ಲಿ ಓಡುವ ಆಲೋಚನೆಗಳನ್ನು ಒಂದೆಡೆ ಕಟ್ಟಿಹಾಕುತ್ತದೆ ಎಂಬುದನ್ನು ಅರಿತುಕೊಂಡೆ. ‘ದೇಹ’ ಎಂಬ ಈ ‘ಬ್ಯಾಟರಿ’ಯನ್ನು ಪಿರಮಿಡ್ ಎಂಬ ‘ಛಾರ್ಜರ್’ನೊಳಗಿಟ್ಟು ‘ರೀಚಾರ್ಜ್’ ಮಾಡುವ ಕ್ರಮದಿಂದ, ದೈಹಿಕದೃಢತೆ ಮತ್ತು ಮಾನಸಿಕ ಶಾಂತಿಯನ್ನು ಪಡೆಯಬಹುದು, ಒತ್ತಡಗಳಿಂದ ಮುಕ್ತನಾಗಬಹುದು ಎಂಬುದು ಖಚಿತವಾಯಿತು.”
“ವ್ಯಕ್ತಿಯ ಆಧ್ಯಾತ್ಮಿಕ ಪ್ರಯಾಣದಲ್ಲಿ ‘ಧ್ಯಾನ’ ಎಂಬುದು ಮೊದಲ ಹೆಜ್ಜೆಯಾದರೆ ‘ಆತ್ಮಸಾಕ್ಷಾತ್ಕಾರ’ ಎಂಬುದು ಅಂತಹ ಪ್ರಯಾಣದ ಕೊನೆ. ‘ಸತ್ಯ’ ಎಂಬುದು ಹೊಸದಾಗಿ ಎಲ್ಲಿಂದಲೂ ಸೃಷ್ಠಿಯಾಗಿ ಬರುವುದಿಲ್ಲ. ಅದು ಸನಾತನ. ಆಧ್ಯಾತ್ಮ ಪ್ರಯಾಣ ಕೈಗೊಳ್ಳುವ ಮೂಲಕ ನಾವು ಅದನ್ನು ಸ್ವಾನುಭವಕ್ಕೆ ತಂದುಕೊಳ್ಳುವುದೇ ‘ಆತ್ಮಸಾಕ್ಷಾತ್ಕಾರ.’
“ನಿಜಕ್ಕೂ ಆಧ್ಯಾತ್ಮಿಕ ಅಭ್ಯಾಸಗಳನ್ನು ಹೊರಗಿನಿಂದ ರೂಢಿಸಿಕೊಳ್ಳುವಂಥದ್ದಲ್ಲ. ಹೊರಗಿನಿಂದ ಅಂತಹ ಅಭ್ಯಾಸಗಳನ್ನು ಹೇರಿಕೊಳ್ಳುವುದು ಸಾಧ್ಯವಿಲ್ಲ. ನಮ್ಮೊಳಗೆ ತುಡಿತವಿದ್ದಾಗ ಮಾತ್ರವೇ ಇಂತಹ ಆಧ್ಯಾತ್ಮಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಗುಣಸ್ವಭಾವಗಳು ಆಧ್ಯಾತ್ಮಕ್ಕೆ ಪೂರಕವಾಗಿದ್ದಾಗ ಮಾತ್ರವೇ ನಾವು ಆಧ್ಯಾತ್ಮಿಕ ಪಥಕ್ಕೆ ಬರುತ್ತೇವೆ. ಇಲ್ಲವಾದರೆ ನಮ್ಮ ಕರ್ಮಗಳು ಇಂತಹ ಪಥವನ್ನು ತುಳಿಯಲು ಬಿಡುವುದಿಲ್ಲ. ‘ಧ್ಯಾನ’ ಎಂಬ ನೀರು, ಗೊಬ್ಬರವನ್ನು ಹಾಕಿ ಈಗಾಗಲೇ ನಮ್ಮೊಳಗಿರುವ ಆಧ್ಯಾತ್ಮಿಕ ಬೀಜವು ಮೊಳಕೆ ಒಡೆಯುವಂತೆ ಮಾಡಬೇಕು. ‘ಸತ್ಸಂಗ’, ‘ಸ್ವಾಧ್ಯಾಯ’ದಂತಹ ಪೋಷಣೆಯನ್ನು ನೀಡಿ ಮೊಳಕೆಯು ಚಿಗುರುವಂತೆ ಮಾಡಬೇಕು. ಇಂತಹ ಪೋಷಣೆಯು ನಿರಂತರವಾಗಿದ್ದಾಗ ‘ನಮ್ಮೊಳಗಿನ ಆಧ್ಯಾತ್ಮಿಕತೆ’ಯು ಗಿಡವಾಗಿ ಬೆಳೆದು ನಂತರ ಹೆಮ್ಮರವಾಗುವುದರಲ್ಲಿ ಸಂಶಯವೇ ಇಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ.”
“ಪ್ರಯತ್ನಿಸಿಯೂ ಫಲಿಸದಿದ್ದರೆ, ಆಗ ಮಾತ್ರವೇ ನಾವು ಅದನ್ನು ಒಪ್ಪಿಕೊಂಡು ಸಮಚಿತ್ತವನ್ನು ಕಾಯ್ದುಕೊಳ್ಳಬೇಕು. ನನಗೆ ಇದನ್ನು ಕಲಿಸಿದ್ದು ಹೊಸಯುಗದ ಆಧ್ಯಾತ್ಮಿಕತೆ.”
ಹೀಗೆ, ಇನ್ನೂ ಹತ್ತು ಹಲವಾರು ಅನುಭವ ಜ್ಞಾನವನ್ನು ತಮ್ಮ ಪುಸ್ತಕದಲ್ಲಿ ಡಾ||ಎ.ಸತ್ಯನಾರಾಯಣರವರು ಹಂಚಿಕೊಂಡಿದ್ದಾರೆ. “ಅವರವರ ಜೀವನದ ಯುದ್ಧದಲ್ಲಿ ಪ್ರತಿಯೊಬ್ಬರೂ ಯೋಧರೇ ಎಂಬುದು ಸತ್ಯಸ್ಯ ಸತ್ಯ” ಎಂಬುದು ಇವರ ಅನುಭವ ಪಠಣದಿಂದ ಮತ್ತೊಮ್ಮೆ ನಮ್ಮನ್ನು ಜಾಗೃತಗೊಳಿಸುತ್ತದೆ.

Go to top