"ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮೆಡಿಟೇಶನ್ (ಧ್ಯಾನ) ಫೌಂಡೇಶನ್"

 

ಕೃತಜ್ಞತೆ
- ಸಾಯಿ ಕೃಪಾ ಸಾಗರ್, ಲಂಡನ್, ಯೂಕೆ.


ಬ್ರಹ್ಮರ್ಷಿ ಪತ್ರೀಜಿಯವರು 2017ರ ಸೆಪ್ಟೆಂಬರ್ 14 ರಿಂದ 21ರ ವರೆಗೆ ಲಂಡನ್‌ಗೆ ಭೇಟಿ ನೀಡಿದಾಗ, ಲಂಡನ್ನಿನ ವಿವಿಧ ಭಾಗಗಳಲ್ಲಿ ಧ್ಯಾನದ ತರಗತಿಗಳನ್ನು ಹಾಗೂ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪಿರಮಿಡ್ ಸ್ಪಿರಿಚ್ಯುವಲ್ ಮೂವ್‌ಮೆಂಟ್ ನ (ಪಿಎಸ್‌ಎಸ್‌ಎಮ್) "ಪಿರಮಿಡ್ ಮೆಡಿಟೇಷನ್ ಫೌಂಡೇಶನ್" ಎಂಬ ಹೊಸ ಸಮೂಹವೊಂದನ್ನು ಪ್ರಾರಂಭಿಸಲಾಯಿತು.
ಈ ಭವ್ಯ ಘಟನೆಯಿಂದ ಆ ನಗರದ ನಿವಾಸಿಗಳಿಗೆ ನಮ್ಮ ಗುರುಗಳಾದ ಪತ್ರೀಜಿಯವರಿಂದಲೇ ನೇರವಾಗಿ ಧ್ಯಾನದ ಸರಳ ವಿಧಾನವನ್ನು ಕೇಳಲು ಹಾಗೂ ಅನುಭವಿಸಲು ಒಂದು ಸುವರ್ಣಾವಕಾಶ ಒದಗಿ ಬಂತು.
"ಫೌಂಡೇಷನ್‌ನ ಉದ್ದೇಶಗಳು"
ಪ್ರತಿನಿತ್ಯ ಧ್ಯಾನಭ್ಯಾಸದ ಮೂಲಕ ಸಮುದಾಯಗಳ, ಕಾರ್ಪೋರೇಟ್‌ಗಳ ಹಾಗೂ ವಿದ್ಯಾಸಂಸ್ಥೆಗಳಲ್ಲಿನ ವ್ಯಕ್ತಿಗಳ ಆಧ್ಯಾತ್ಮಿಕ ಪರಿವರ್ತನೆಯನ್ನು ಸಾಧ್ಯಗೊಳಿಸಿ ಸ್ವಸ್ಥ, ಶಾಂತಿಯುತ ಹಾಗೂ ಸಂತೋಷಕರ ಸಮಾಜದೆಡೆಗೆ ಕರೆದೊಯ್ಯಬಹುದು ಎಂಬ ಮುಖ್ಯ ಉದ್ದೇಶದೊಂದಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಪಿರಮಿಡ್ ಮೆಡಿಟೇಶನ್ ಫೌಂಡೇಶನ್, ವೇಲ್ಸ್ ಹಾಗೂ ಇಂಗ್ಲೆಂಡ್‌ನಲ್ಲಿ ಫಲಾಪೇಕ್ಷೆಯಿಲ್ಲದ ಸಂಸ್ಥೆಯೆಂದು ನೋಂದಾಯಿಸಲ್ಪಟ್ಟಿದೆ.
ಪಿರಮಿಡ್ ಧ್ಯಾನ (ಮೆಡಿಟೇಷನ್) ಫೌಂಡೇಷನ್‌ನ (PMF) ಉದ್ದೇಶಗಳು ಈ ಕೆಳಗಿನಂತಿವೆ:-
1. ಸಮುದಾಯಗಳಲ್ಲಿ, ನಗರ ಮತ್ತು ಪಟ್ಟಣಗಳಲ್ಲಿ, ಕಾರ್ಪೊರೇಟ್‌ಗಳಲ್ಲಿ ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಧ್ಯಾನದ ವಲಯಗಳು ಮತ್ತು ಪಿರಮಿಡ್ ಧ್ಯಾನದ ಸ್ಥಳವನ್ನು ಸ್ಥಾಪಿಸುವುದರ ಮೂಲಕ ಪಿರಮಿಡ್ ಧ್ಯಾನವನ್ನು ವ್ಯಾಪಕವಾಗಿ ಹರಡಲು ಸಾಧ್ಯವಾಗಿಸುವುದು.
2. ಅಗಾಧವಾದ ಆಧ್ಯಾತ್ಮಿಕ ವಿಜ್ಞಾನದಲ್ಲಿ ಆಸಕ್ತರಾದ ಅನ್ವೇಷಕರಿಗೆ ಹಾಗೂ ಅಭ್ಯಾಸಿಗಳಿಗೆ ತರಗತಿ, ಕಾರ್ಯಾಗಾರಗಳು, ಸಮಾಲೋಚನೆಗಳು, ಸಾಹಿತ್ಯ ಹಾಗೂ ಪ್ರದರ್ಶನಗಳ (Exhibitions) ಮೂಲಕ ತರಬೇತಿ ಕೊಡುವುದು.

3. ಯೋಗಕ್ಷೇಮ, ವಿದ್ಯೆ, ಕಾರ್ಪೋರೇಟ್ ನೀತಿ, ಆಡಳಿತ ಹಾಗೂ ಅಭಿವ್ಯಕ್ತಿಯ ಮೇಲೆ ಧ್ಯಾನದ ಪರಿಣಾಮದ ಬಗೆಗಿನ ಸಂಶೋಧನೆಯನ್ನು ಪ್ರೋತ್ಸಾಹಿಸುವುದು, ಉತ್ತೇಜಿಸುವುದು ಮತ್ತು ಪ್ರಕಟಿಸುವುದು.
"ಲಂಡನ್‌ಗೆ ಪತ್ರೀಜಿಯವರ ಇತ್ತೀಚಿನ ಭೇಟಿ"
2017ರ ಸೆಪ್ಟೆಂಬರ್ 14ರಂದು ಪತ್ರೀಜಿಯವರು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಂದಿನಿಂದ ಅವರೊಂದಿಗೆ ವಾರವಿಡೀ ನಾನೂ ಸೇರಿದಂತೆ ಪಿರಮಿಡ್ ಮಾಸ್ಟರುಗಳಾದ, ಹಿಮಬಿಂದು, ರವಿಕಿರಣ್, ಪ್ರಣೀತ, ರಾಜಶೇಖರ್, ಸ್ವಾತಿ, ಶ್ರೀಲಕ್ಷ್ಮಿ ಮತ್ತು ರಾಘವೇಂದ್ರ ಇವರೆಲ್ಲರಿಗೆ ಅದ್ಭುತ ಕಲಿಕೆ ಹಾಗೂ ಪತ್ರೀಜಿಯವರೊಂದಿಗೆ ಸಂವಾದಗಳನ್ನು ನಡೆಸುವ ಅವಕಾಶ ದೊರೆತವು.
ಪತ್ರೀಜಿಯವರು ಭೇಟಿ ನೀಡಿದ ಎಲ್ಲಾ ಕಡೆಯಲ್ಲೂ ಅವರು ತಮ್ಮ ವಿನಯಶೀಲ ವ್ಯಕ್ತಿತ್ವದಿಂದ, ಅಗಾಧ ಶಕ್ತಿಯಿಂದ, ನೇರ ಉತ್ತರಗಳಿಂದ, ಸ್ಪಷ್ಟ ವಿವರಣೆಗಳಿಂದ ಹಾಗೂ ಅದಲ್ಲಕ್ಕಿಂತ ಹೆಚ್ಚಾಗಿ, ಅವರ ಸುಶ್ರಾವ್ಯ ಕೊಳಲುನಾದದಿಂದ ಬ್ರಿಟೀಷ್ ಪ್ರೇಕ್ಷಕರನ್ನು ಮೋಡಿ ಮಾಡಿದರು.
ಬೃಹತ್ ಲಂಡನ್ ನಗರದಲ್ಲಿ ಅನೇಕ ವಿಧವಾದ ಧ್ಯಾನ ಹಾಗೂ ಆಧ್ಯಾತ್ಮಿಕ ಗುಂಪುಗಳಿದ್ದರೂ ಕೂಡ, ಜಾಗೃತಿ ಹಾಗೂ ಆತ್ಮ ವಿಕಾಸಕ್ಕಾಗಿ ಸರಳ ಹಾಗೂ ಪರಿಣಾಮಕಾರಿಯಾದ ಧ್ಯಾನ ಪದ್ಧತಿಯ ಬಗೆಗಿನ ಹಸಿವಿತ್ತು! ದಾಹವಿತ್ತು!. ಪತ್ರೀಜಿಯವರು ತಾವು ಭೇಟಿ ನೀಡಿದ ಪ್ರತಿಯೊಂದು ಸ್ಥಳದಲ್ಲೂ ತಮ್ಮ ಕಾರ್ಯಾಗಾರಗಳ ಮೂಲಕ ಎಲ್ಲಾ ಪ್ರೇಕ್ಷಕರ ಆಧ್ಯಾತ್ಮಿಕ ದಾಹವನ್ನು ನೀಗಿಸಿದರು.
"ಆನಾಪಾನಸತಿ"
"ಆನಾಪಾನಸತಿ ಧ್ಯಾನ”ದ ಸರಳ ಪದ್ಧತಿಯನ್ನು ವಿವರಿಸುವುದರೊಂದಿಗೆ, ಧ್ಯಾನದಲ್ಲಿ ಪಿರಮಿಡ್‌ಗಳ ಬಳಕೆ ಹಾಗೂ ಅದರ ಪರಿಣಾಮವನ್ನು ಕೂಡಾ ವಿವರಿಸಿದರು.
ಪತ್ರೀಜಿಯವರು ಪ್ರತಿ ಸ್ಥಳದಲ್ಲೂ ಅನೇಕ ತರಗತಿಗಳನ್ನು ನಡೆಸಿದರು - ಸಂಗೀತರಹಿತ ಧ್ಯಾನ ಮಾಡಿಸುವುದು, ಸಂಗೀತದೊಂದಿಗೆ ಧ್ಯಾನ ಮಾಡಿಸುವುದು ಮತ್ತು ಸಂಗೀತ ಹಾಗೂ ಪಿರಮಿಡ್‌ನೊಂದಿಗೆ ಧ್ಯಾನ ಮಾಡಿಸುವುದು. ಈ ಮೂರು ವಿಧದಲ್ಲಿ ಭಾಗಿಯಾದವರು ಹೆಚ್ಚಿನ ಪರಿಣಾಮದ ಅನುಭವ ಹೊಂದಿದರು.
ಪತ್ರೀಜಿಯವರು, ತಮ್ಮ ಅತ್ಯುತ್ಕೃಷ್ಟವಾದ "ಐದು-ಬೆರಳು"ಗಳ ಸಾದೃಶ್ಯದೊಂದಿಗೆ (ಹೋಲಿಕೆ) ಶರೀರ, ಮನಸ್ಸು, ಬುದ್ಧಿ, ಆತ್ಮ, ಪರಮಾತ್ಮನ ಪರಿಕಲ್ಪನೆಯನ್ನು ವಿವರಿಸಿದರು. ಅವರು ಧ್ಯಾನದ ಮಹತ್ವವನ್ನು ಮತ್ತು ವ್ಯಕ್ತಿ ತನ್ನ ವಾಸ್ತವವನ್ನು ಸೃಷ್ಟಿಸಿಕೊಳ್ಳಲು ತಾನೇ ಹೊಣೆಗಾರ ಎಂಬುದನ್ನು ‘ಭಗವದ್ಗೀತೆ’ ಮತ್ತು ‘ಬೈಬಲ್’ನಲ್ಲಿನ ಪ್ರಸಂಗೋಚಿತ ವ್ಯಾಖ್ಯಾನಗಳ ಮೂಲಕ ವಿವರಿಸಿದರು. ಕೆಲವೊಂದು ಸ್ಥಳದಲ್ಲಿ, ಅವರು ಭಾರತದ ವಿವಿಧ ಭಾಷೆಗಳಾದ ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ತಮ್ಮ ಮಧುರವಾದ ರಾಗದಲ್ಲಿ ‘ಧ್ಯಾನ ಗೀತೆ’ಯನ್ನು ಸುಶ್ರಾವ್ಯವಾಗಿ ಹಾಡಿದರು.
"ವೈಭವಯುತ ವಾರ"
ಈಸ್ಟ್ ಹ್ಯಾಮ್ ಮತ್ತು ಇಲ್‌ಫೋರ್ಡಿನ್ ಈಸ್ಟ್ ಲಂಡನ್ನಿನಲ್ಲಿನ ಪ್ರಸಿದ್ಧ ಹಿಂದು ದೇವಾಲಯಗಳಲ್ಲದೇ, ಸೆಂಟ್ರಲ್ ಲಂಡನ್‌ನ ಪಿಕಾಡಿಲ್ಲಿಯಲ್ಲಿನ ಸೇಂಟ್ ಜೇಮ್ಸ್ ಚರ್ಚ್‌ನಲ್ಲೂ ಸಹ ಧ್ಯಾನದ ಕಾರ್ಯಕ್ರಮವನ್ನು ನಡೆಸಿದರು.
ನಾನೂರು ವರ್ಷದಷ್ಟು ಹಳೆಯ ಸಂಸ್ಥೆಯಾದ ‘ಹೇಟ್ರಾಪ್’ ಕಾಲೇಜಿನ ಆವರಣದಲ್ಲಿ "ಧ್ಯಾನವಿಜ್ಞಾನ"ದ ಒಂದು ದಿನದ ಕಾರ್ಯಾಗಾರವನ್ನು ಪತ್ರೀಜಿಯವರು ನಡೆಸಿಕೊಟ್ಟರು.
ವಿಶಿಷ್ಟವಾದ ‘ಪ್ರಾಚಾರ್ಯ’ರ ಪಾತ್ರದಲ್ಲಿ ಆಳವಾದ ಆಧ್ಯಾತ್ಮಿಕ ವಿಜ್ಞಾನದ ಪರಿಕಲ್ಪನೆಯನ್ನು ಸರಳ ಹಾಗೂ ಸಂಕ್ಷಿಪ್ತವಾಗಿ, ಬಿಳಿ ಹಲಗೆಯ ಮೇಲೆ ಕಲಾತ್ಮಕವಾಗಿ ವಿವರಿಸಿದ ಪತ್ರೀಜಿಯವರನ್ನು ನೋಡುವುದೇ ಒಂದು ವಿಸ್ಮಯವಾಗಿತ್ತು.
ಈ ಭೇಟಿಯ ಅವಧಿಯಲ್ಲಿ ಇತರ ಸ್ಥಳಗಳಾದ ಆರ್ಟಿಜಾನ್ ಸ್ಟ್ರೀಟ್, ಮಿಲ್ಟನ್ ಕೇನ್ಸ್ ಮತ್ತು ಬೇಸಿಂಗ್‌ಸ್ಟೋಕ್ ನಲ್ಲೂ ಕೂಡ ತರಗತಿಗಳು ನಡೆದವು.
ಒಂದು ವಾರವೆಲ್ಲಾ ಪತ್ರೀಜಿಯವರೊಂದಿಗೆ ಕಳೆದದ್ದು, ಅವರ ಭಾಷಣಗಳನ್ನು ಆಲಿಸಿದ್ದು, ಸಂಗೀತ ಧ್ಯಾನದಲ್ಲಿ ಭಾಗವಹಿಸಿದ್ದು ಒಂದು ಅದ್ಭುತ ಅನುಭವವಾಗಿತ್ತು.
ಅತ್ಯಂತ ಮುಖ್ಯವಾದದ್ದೇನೆಂದರೆ, ಪತ್ರೀಜಿಯವರೊಂದಿಗೆ ರಾತ್ರಿಯೆಲ್ಲಾ ಇದ್ದ ಪಿರಮಿಡ್ ಮಾಸ್ಟರ್‌ಗಳೆಲ್ಲರಿಗೂ ಅವರ ಅದ್ಭುತ ರುಚಿಕರ ಅಡುಗೆಯ ರಸದೂಟವಿತ್ತು.
ವಾಸ್ತವವಾಗಿ, ಉತ್ಕೃಷ್ಟವಾದ, ತಾಜಾ ಮತ್ತು ನವೀನತೆಯಿಂದ ಕೂಡಿದ ಈ ಆಹಾರವನ್ನು ನಾನು ಹಿಂದೆಂದಿಗಿಂತಲೂ ಹೆಚ್ಚು ಪ್ರೀತಿಯಿಂದ ಸವಿದೆ. ಈ ಶಕ್ತಿಯುತವಾದ "ಆಧ್ಯಾತ್ಮಿಕ ರಜೆ"ಯಿಂದ ಮುಂಚಿನ ನಿತ್ಯ ಜೀವನಕ್ಕೆ ಹಾಗೂ ವೃತ್ತಿಗೆ ಮರಳುವುದು ತುಂಬಾ ಕಷ್ಟಕರವಾಗಿತ್ತು.
ಪತ್ರೀಜಿಯವರ ಉತ್ಸಾಹ ಮತ್ತು ಅವಿರತ ಪರಿಶ್ರಮವು ನಮ್ಮೆಲ್ಲಾ ಆಂಗ್ಲ ಸ್ನೇಹಿತರಿಗೆ ಹೆಚ್ಚಿನ ಮಟ್ಟದಲ್ಲಿ ಧ್ಯಾನಪ್ರಚಾರ ಮಾಡುವಂತೆ ನಮಗೆ ಸ್ಪೂರ್ತಿ ತಂದಿದೆ.
"ಪಿರಮಿಡ್ ಮೆಡಿಟೇಶನ್ ಫೌಂಡೇಶನ್" ಮೂಲಕ, ನಾವು ಕಾಲಕಾಲಕ್ಕೆ ನಡೆಸುವ ತರಗತಿ ಮತ್ತು ವ್ಯವಸ್ಥಿತವಾದ ಶಿಕ್ಷಣದ ಮೂಲಕ ಜನರು ಕ್ರಮಬದ್ಧವಾಗಿ ಧ್ಯಾನ ಮಾಡಲು ಸಹಾಯಕವಾಗುವಂತೆ ವ್ಯವಸ್ಥೆ ಮಾಡಿದ್ದೇವೆ.
ಹಾಗೆಯೇ, ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲ್ಯಾಂಡ್ ಮತ್ತು ಐರ್‌ಲ್ಯಾಂಡ್‌ನ ಉಳಿದ ಭಾಗಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲು ನಾವೆಲ್ಲರೂ ಪತ್ರೀಜಿಯವರನ್ನು ಸದ್ಯದಲ್ಲೇ ‘ಯುಕೆ’ಗೆ ಬರಮಾಡಿಕೊಳ್ಳುತ್ತೇವೆ.
"ನನ್ನ ಆಧ್ಯಾತ್ಮಿಕ ಪಯಣ"
ನನ್ನ ಆಧ್ಯಾತ್ಮಿಕ ಪಯಣದಲ್ಲಿ, ನನ್ನ ವ್ಯಕ್ತಿಗತ ಪುರೋಗಮನಕ್ಕೆ ಪತ್ರೀಜಿಯವರಿಂದ ಸೃಷ್ಟಿಯಾದ ಇದೊಂದು ದೊಡ್ಡ ಅವಕಾಶವೆಂದು ನಾನು ವೈಯುಕ್ತಿಕವಾಗಿ ಪರಿಗಣಿಸುತ್ತೇನೆ.
ಅಮೇರಿಕದ ಸಿಯಟಲ್‌ನಿಂದ ನಾನು ಮತ್ತು ನನ್ನ ಪತ್ನಿ ‘ಹಿಮಬಿಂದು’ ಬೆಂಗಳೂರಿಗೆ ಹಿಂದಿರುಗಿದ ನಂತರ ಈ ಮಹಾನ್ ಗುರುವಿನೊಂದಿಗೆ ಹಾಗೂ ಪಿರಮಿಡ್ ಧ್ಯಾನದೊಂದಿಗೆ ನನ್ನ ಪಯಣ 2003ರಲ್ಲಿ ಆರಂಭವಾಯಿತು. ಹೆಚ್ಚು ಕಡಿಮೆ ಅದೇ ಸಮಯದಲ್ಲೆ ಬೆಂಗಳೂರಿನ ಹೊರ ವಲಯದ ಪಿರಮಿಡ್ ವ್ಯಾಲಿ, ಕೆಬ್ಬೆದೊಡ್ಡಿ ಗ್ರಾಮದಲ್ಲಿ ಬೃಹತ್ ಪಿರಮಿಡ್ ಸ್ಥಾಪನೆಯಾಗುತ್ತಿತ್ತು.
ನಮ್ಮ ನಿರಂತರ ಧ್ಯಾನಾಬ್ಯಾಸ, ಪಿರಮಿಡ್ ವ್ಯಾಲಿಗೆ ನಿಯಮಿತವಾದ ಭೇಟಿ, ಪತ್ರೀಜಿ ಹಾಗೂ ಇತರೆ ಪಿರಮಿಡ್ ಮಾಸ್ಟರುಗಳೊಂದಿಗಿನ ಸಂವಾದಗಳಿಂದ ಸಂಪೂರ್ಣವಾಗಿ ನಮ್ಮ ಜೀವನವೇ ಪರಿವರ್ತನೆಯಾಯಿತು.
"ನವಯುಗದ ಆಧ್ಯಾತ್ಮಿಕ ಗ್ರಂಥಗಳು"
ಪತ್ರೀಜಿಯವರಿಂದ ಸ್ಪೂರ್ತಿ ಪಡೆಯುವ ಮೂಲಕ ನಾನು ಅನೇಕಾನೇಕ ನವಯುಗದ ಆಧ್ಯಾತ್ಮಿಕ ಗ್ರಂಥಗಳನ್ನು ಓದಿದ್ದೇನೆ. ವೃತ್ತಿಯ ಕಾರಣದಿಂದ ಪ್ರಪಂಚದಾದ್ಯಂತ ಪದೇಪದೇ ಪ್ರಯಾಣಿಸುತ್ತಿದ್ದರಿಂದ ನೂರಾರು ಪುಸ್ತಕಗಳನ್ನು ಓದಿದ್ದೇನೆ.
‘ಸಂಸಾರದಲ್ಲಿ’
ನಮ್ಮ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲ, ಆದರೆ ನಮ್ಮೆಲ್ಲಾ ಆತಂಕಗಳಿಂದ ಬಿಡುಗಡೆಯಾಗಿ 2007 ಹಾಗೂ 2013ರಲ್ಲಿ ಎರಡು ಸುಂದರವಾದ ಹೆಣ್ಣು ಮಕ್ಕಳು ಜನಿಸಿರುವುದು ತುಂಬಾ ಸಂತೋಷ ನೀಡಿದೆ.
ಪ್ರತಿನಿತ್ಯ ಆನಾಪಾನಸತಿ ಧ್ಯಾನಭ್ಯಾಸದಿಂದ ನಮ್ಮ ತಗ್ಗಿದ ಒತ್ತಡ ಹಾಗೂ ಹೆಚ್ಚಿದ ಸ್ಪಷ್ಟತೆ ಮತ್ತು ಜೀವನದ ಉದ್ದೇಶದ ಬಗ್ಗೆ ತಿಳಿವು ಹಾಗೂ ಆಧ್ಯಾತ್ಮಿಕ ಗ್ರಂಥಗಳ ಪಠಣದಿಂದ ಪಡೆದ ಜ್ಞಾನ ಇದಕ್ಕೆ ಕಾರಣವಾಗಿದೆ.
‘ವೃತ್ತಿಯಲ್ಲಿ’
ವೃತ್ತಿಯಲ್ಲಿ, ಧ್ಯಾನದಿಂದ ನನ್ನ ಮನಸ್ಸಿನಲ್ಲಿನ ವಟಗುಟ್ಟುವಿಕೆ ಕಡಿಮೆಯಾಗಿದ್ದರಿಂದ ನನ್ನ ಗಮನದಲ್ಲಿ ಹಾಗೂ ಉತ್ಪಾದಕತೆಯಲ್ಲಿ ಸುಧಾರಣೆಗಳಾಗಲಿಕ್ಕೆ ನಿಜವಾಗಲೂ ಸಹಾಯವಾಯಿತು. ಇದರ ಫಲಿತಾಂಶವಾಗಿ ನನ್ನ ಕಂಪನಿಯಲ್ಲಿ ಅಭಿವೃದ್ಧಿ ಪಥದಲ್ಲಿ ಹಂತ ಹಂತವಾಗಿ ಪ್ರಗತಿ ಹೊಂದಿದೆ. ನನ್ನ 40ನೆಯ ವಯಸ್ಸಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಐಟಿ ಕಂಪನಿಯ ಉಪಾಧ್ಯಕ್ಷನಾಗುವೆನೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ!
ಪತ್ರೀಜಿಗೆ ಹಾಗೂ ಇತರ ಪಿರಮಿಡ್ ಮಾಸ್ಟರುಗಳೊಂದಿಗಿನ ನಿರಂತರ ಸಂವಾದಗಳಿಗೆ ಹಾಗೂ ಪ್ರತಿನಿತ್ಯ ತಪ್ಪದ ಧ್ಯಾನಾಭ್ಯಾಸಕ್ಕೆ ನನ್ನ ಧನ್ಯವಾದಗಳು!
"ಪಿ.ಎಸ್.ಎಸ್.ಎಮ್ ನಲ್ಲಿ ನಮ್ಮ ಪಾತ್ರಗಳು"
ನಾನು ಹಾಗು ನನ್ನ ಪತ್ನಿ ‘ಹಿಮಬಿಂದು’ ಪಿ.ಎಸ್.ಎಸ್.ಎಮ್‌ನಲ್ಲಿ ಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ. ಮೊದಲು ನಾವು ಪಿ.ಎಸ್.ಎಸ್.ಎಮ್‌ನ ಜಾಲತಾಣದ (Website) ಪುನರಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ನಂತರ .. ಒಂದುಬಾರಿ .. ಪಿರಮಿಡ್ ವ್ಯಾಲಿಯು ನಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲಾರಂಭಿಸಿದಾಗ, ಜಿ.ಸಿ.ಎಸ್.ಎಸ್ ಸಮ್ಮೇಳನ (ಕಾನ್ಫರೆನ್ಸ್) ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ವತಿಯಿಂದ 2012 ರಿಂದ 2015ರ ತನಕ ನಿರ್ವಹಿಸುವ ಅವಕಾಶ ಒದಗಿಬಂತು.
"ಮತ್ತೆ ಲಂಡನ್‌ಗೆ"
2016ರಲ್ಲಿ, ನಮ್ಮ ಕಂಪನಿಯು ಪುನಃ ನನ್ನನ್ನು ಲಂಡನ್ ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿದಾಗ, ಪತ್ರೀಜಿಯವರು ನನ್ನನ್ನು ಪ್ರೋತ್ಸಾಹಿಸಿದರು, ಇದರಿಂದ, ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ಮತ್ತೊಂದು ಅಧ್ಯಾಯವು ತೆರೆದುಕೊಂಡಿತು. ಪತ್ರೀಜಿಯವರ ಭೇಟಿಯಿಂದ, ನಮ್ಮ ಆಧ್ಯಾತ್ಮಿಕ ಕಾರ್ಯವನ್ನು ಮಾಸ್ಟರ್‌ಗಳೊಂದಿಗೆ ಇಡೀ ಯುಕೆಯಲ್ಲಿ ಹೆಚ್ಚಿಸುವ ಆಶಯ ಹೊಂದಿದ್ದೇವೆ.
"ಕೃತಜ್ಞತೆ"
ಮಹಾನ್ ಗುರು ಬ್ರಹ್ಮರ್ಷಿ ಪತ್ರೀಜಿ, ಅವರ ಬೋಧನೆಗಳು ಮತ್ತು ಸ್ಪೂರ್ತಿಗೆ ಹಾಗೂ ಆನಾಪಾನಸತಿ ಧ್ಯಾನವನ್ನು ಪ್ರಪಂಚಾದ್ಯಂತ ಪ್ರಚಾರಮಾಡಲು ಶ್ರಮಿಸುತ್ತಿರುವ ಸಾವಿರಾರು ಪಿರಮಿಡ್ ಮಾಸ್ಟರುಗಳಿಗೆ ಕೃತಜ್ಞತೆ ಅರ್ಪಿಸುವುದನ್ನು ನಾನು ಹಾಗೂ ನನ್ನ ಕುಟುಂಬವು ಒಂದು ದಿನವೂ ತಪ್ಪಿಸುವುದಿಲ್ಲ.

Go to top