ಧ್ಯಾನದಿಂದ ಆರೋಗ್ಯ

ಈ ಸಂಸಾರ ಬಂಧನದಲ್ಲಿ ಸಿಲುಕಿ ಮಾನಸಿಕ ಒತ್ತಡದಿಂದ ಒದ್ದಾಡುತ್ತಿದ್ದಾಗ ನನಗೆ ಸಿಕ್ಕಿದ್ದು ಈ "ಸರಳ ಧ್ಯಾನ" ಮಾರ್ಗ. ಇದು ನನಗೆ ನಮ್ಮ ಎದುರು ಮನೆಯ ನಿರ್ಮಲಾರಿಂದ ದೊರೆತ ಸಂಜೀವಿನಿಯಾಗಿದೆ. ಧ್ಯಾನ ಮಾಡುವುದು ಇಷ್ಟು ಸುಲಭವೆಂದು ನನಗೆ ಗೊತ್ತಿರಲಿಲ್ಲ. ನಿರ್ಮಲಾ ಅವರೇ ಗುರುವಾಗಿ ಬಂದು ನನಗೆ ಇದನ್ನು ಕಲಿಸಿಕೊಟ್ಟರು. ಈ "ಆನಾಪಾನಸತಿ" ಧ್ಯಾನವನ್ನು ಯಾರು ಬೇಕಾದರೂ ಸುಲಭವಾಗಿ ಮಾಡಬಹುದು. ಆದರೂ ನಾನಿನ್ನೂ ಧ್ಯಾನವೆಂಬ ಸಿಂಧುವಿನಲ್ಲಿ ಬಿಂದು ಮಾತ್ರ. ಇನ್ನೂ ಸಾಧನೆ ಮಾಡಬೇಕಿದೆ. ಆದರೂ ಇಷ್ಟು ಮಾತ್ರ ಹೇಳಬಲ್ಲೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ನನಗೆ ಎಷ್ಟೊಂದು ಪ್ರಯೋಜನ ದೊರಕಿದೆ ಎಂದರೆ ಪ್ರತಿ ತಿಂಗಳೂ ವೈದ್ಯರಲ್ಲಿ ತಪಾಸಣೆಗಾಗಿ ಹೋಗಬೇಕಿಲ್ಲ. ರಕ್ತದೊತ್ತಡ ನಿಯಂತ್ರಣದಲ್ಲಿದೆ. ಸದಾ ದುಗುಡ, ಆತಂಕದಿಂದ ಇರುತ್ತಿದ್ದ ನಾನು ಈಗ ಒತ್ತಡ ನಿವಾರಣೆಯಾಗಿ ಸಮಾಧಾನದಿಂದ ಇರುವಂತಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವುದಕ್ಕೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಈ "ಸರಳ ಧ್ಯಾನ" ಸುಲಭಮಾರ್ಗವಾಗಿದೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ.
ನನ್ನ ವಯಸ್ಸು ಈಗ ಎಪ್ಪತ್ಮೂರು, ನನಗೆ ಕಾಲು ಮಡಚಿ ಕೆಳಗೆ ಕುಳಿತುಕೊಳ್ಳಲಾಗುತ್ತಿಲ್ಲ. ಆದರೂ ಈ ಧ್ಯಾನವನ್ನು ಕುರ್ಚಿಯಲ್ಲೇ ಕುಳಿತು ಮಾಡಬಹುದಾಗಿದೆ. ಈ ಧ್ಯಾನದಿಂದ ಸಿಕ್ಕ ಫಲ ನನಗೆ ತುಂಬಾ ಅಮೂಲ್ಯವಾಗಿದೆ. ಈ ಧ್ಯಾನವು ನಮ್ಮ ಪ್ರಯತ್ನಗಳ ಮೂಲಕ ನಮಗೆ ನಾವೇ ದೊರಕಿಸಿಕೊಳ್ಳುವ ಉತ್ತಮ ಕೊಡುಗೆಯಾಗಿದೆ ಎಂದು ನನಗನಿಸುತ್ತಿದೆ. ಸಂಪೂರ್ಣ ದೈಹಿಕ ಆರೋಗ್ಯ, ಮಾನಸಿಕ ಶಾಂತಿ, ಏಕಾಗ್ರತೆಯ ಶಿಖರವೇರಲು ಈ "ಸರಳ ಧ್ಯಾನ" ಉತ್ತಮ ಸೋಪಾನವಾಗಿದೆ.


- ವತ್ಸಲಾ ಎಸ್.ಹೆಗಡೆ,
ಕೋಣನಕುಂಟೆ, ಬೆಂಗಳೂರು

Go to top