ಬದುಕು ಬದಲಿಸಿದ “ಬಾಲಿ” ಪ್ರವಾಸ


ಜ್ಞಾನದ ಮೇರು ಪರ್ವತ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರ ಸಾಂಗತ್ಯ, ಸತ್ಸಂಗ ಹಾಗೂ ಮೈನವಿರೇಳಿಸುವಂತಹ ಅವರ ಅನುಭವಗಳ ಹಂಚಿಕೆ ನಾವು ಜೀವನವನ್ನು ನೋಡುವ ರೀತಿಯನ್ನೇ ಬದಲಿಸಿತು ಎಂದು ತಿಳಿಸಲು ಹೆಮ್ಮೆಯೆನಿಸುತ್ತದೆ.

2017ರ ಏಪ್ರಿಲ್-2 ರಂದು ಪ್ರಾರಂಭವಾದ ಬಾಲಿ ಪ್ರಯಾಣ ಅಗಾಧ ಅಚ್ಚರಿಯಿಂದ ಶುರುವಾಯಿತು. ಡೇವಿಡ್ ಅವರು ‘ಹೃದಯದಿಂದ ಮಾತನಾಡಿ’ ಎನ್ನುವ ಸಲಹೆಯೊಂದಿಗೆ ಅಬುದ್‌ನಲ್ಲಿ ತಾವು ನಿರ್ಮಿಸಿರುವ ಸೂರ್ಯ ಮತ್ತು ಚಂದ್ರನ ಪಿರಮಿಡ್‌ನಲ್ಲಿ ( Sun and Moon Pyramid) ಸ್ವರ್ಗದ ಸಿರಿಯನ್ನು ಧರೆಗೆ ಇಳಿಸಿದ್ದಾರೆ. ವಿಶಾಲವಾದ ಹೂದೋಟ, ಕೃತಕವಾದ ನೀರಿನ ಕಾರಂಜಿಗಳ ಮಧ್ಯೆ ಕಂಗೊಳಿಸುತ್ತಿರುವ ಜೋಡಿ ಪಿರಮಿಡ್‌ಗಳಲ್ಲಿ ಧ್ಯಾನ ಮಾಡಿ ಅಪಾರವಾದ ಕಾಸ್ಮಿಕ್ ಎನರ್ಜಿಯನ್ನು [ವಿಶ್ವಪ್ರಾಣಶಕ್ತಿ] ಹೊಂದಿದೆವು. “ಪಿರಮಿಡ್‌ನಲ್ಲಿ ಕುಳಿತು ಧ್ಯಾನ ಮಾಡುವುದರಿಂದ ನಮ್ಮನ್ನು ಬೇರೆಯೇ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ” ಎಂದು ಡೇವಿಡ್ ಅವರಿಗೆ ಬಂದ ‘ಅಂತರ್ವಾಣಿ’ಯಿಂದ (Intution) ಅವರು ಪ್ರೇರಿತರಾಗಿದ್ದರಿಂದ ಬಾಲಿಯಲ್ಲಿ ಎರಡು ಸುಂದರವಾದ ಪಿರಮಿಡ್‌ಗಳು ನಿರ್ಮಾಣವಾಗಲು ಕಾರಣರಾಗಿದ್ದಾರೆ. ಹ್ಯಾಟ್ಸ್ ಆಫ್ ಮಿ. ಡೇವಿಡ್.

ಆಗರ್ಭ ಶ್ರೀಮಂತಿಕೆಯಿದ್ದರೂ ಸಹ ಎಷ್ಟು ಸರಳವಾಗಿ ಇರಬಹುದು ಎಂದು ನಾವೆಲ್ಲರೂ ಅಚ್ಚರಿ ಪಡುವ ರೀತಿಯಲ್ಲಿದ್ದ ಸಲ್ಲೀ ರೆಸಾರ್ಟ್ (Sully Resort) ಮಾಲಿಕರಾದ ಬಾಲಿಯ ಶ್ರೀಮತಿ ರೀಸೀ ದೊಡ್ಡ ಸೋಜಿಗವೇ ಸರಿ. ಅವರ ಎಲ್ಲ ಸಿಬ್ಬಂದಿಯ ಸ್ನೇಹಮಯ ನಡವಳಿಕೆ ಹಾಗೂ ಬಾಲಿಯ ಏಕೈಕ ಸಸ್ಯಾಹಾರಿ ರೆಸಾರ್ಟ್ ಮತ್ತೊಂದು ವಿಸ್ಮಯವಾಗಿತ್ತು.

ಸಂಜೆಯ ಸತ್ಸಂಗದಲ್ಲಿ ಪತ್ರೀಜಿಯವರ ಅದ್ಭುತ ಜ್ಞಾನಪ್ರವಾಹದಲ್ಲಿ ಮುಳುಗೆದ್ದ ಅಲ್ಲಿ ಸೇರಿದ್ದ ಹಲವಾರು ದೇಶಗಳ ಧ್ಯಾನಿಗಳೆಲ್ಲರೂ ಧನ್ಯತೆಯನ್ನು ಹೊಂದಿದರು. ಯಾರೂ ನಿಮ್ಮ ಶಿಕ್ಷಕರಲ್ಲ, ನಿಮ್ಮಷ್ಟಕ್ಕೆ ನೀವೇ ಕಲಿಯಿರಿ (Nobody is your teacher, you learn by yourself), ಗತಂ ಗತಃ ಎಂದು ತಿಳಿಸಿ, ನೀವು ನಿಮ್ಮ ಜೀವನಕ್ಕೆ ಕೊಡುವ ಅತ್ತ್ಯುತ್ತಮ ಉಡುಗೊರೆಯೆಂದರೆ ಅದು ‘ಧ್ಯಾನ’ ಎಂದು ತಿಳಿಸಿ ‘ಮಾಂಸಾಹಾರ ಸೇವನೆಯಿಂದ ನಿಮ್ಮ ಜೀವನದಲ್ಲಿ ತೊಂದರೆಗಳನ್ನು ಏಕೆ ಸೃಷ್ಟಿಸಿಕೊಳ್ಳುತ್ತೀರಿ?’ ಎಂದು ಕೇಳಿದರು. ಸೋಮಾರಿ ಮತ್ತು ಯಾಂತ್ರಿಕ ಜೀವಿಗಳಾಗದಿರಿ. ಶ್ರಮವಹಿಸಿ ಹೆಚ್ಚು ಹೆಚ್ಚು ಧ್ಯಾನ ಮಾಡಿ ‘ಬುದ್ಧ’ರಾಗಿ ಎಂದು ಹೇಳಿದರು. ದೇಹಕ್ಕೆ ನಿದ್ದೆ ಅವಶ್ಯಕ. ಆದರೆ, ಧ್ಯಾನ ‘ಆತ್ಮಕ್ಕೆ’ ತುಂಬಾ ತುಂಬಾ ಮುಖ್ಯವಾಗಿ ಬೇಕು. ನ್ಯಾಯಯುತವಾದ ಮಾರ್ಗದಲ್ಲಿ ಸರಿಯಾಗಿ ನಡೆದರೆ ‘ಬುದ್ಧ’ರಾಗುವಿರಿ ಎಂದು ತಿಳಿಸಿದರು. ‘ಮಧ್ಯ ಮಾರ್ಗದ’ ಬಗ್ಗೆ ಎಲ್ಲರಿಗೂ ಮನ ಮುಟ್ಟುವ ರೀತಿಯಲ್ಲಿ ಹೇಳಿ, ‘ಹೆಚ್ಚು ಸಂಪಾದನೆ, ಹೆಚ್ಚಿಗೆ ಮಾತು, ಹೆಚ್ಚಿಗೆ ತಿನ್ನುವುದು ಮತ್ತು ಮಲಗುವುದನ್ನು ಮಾಡಬೇಡಿ’ ಎಂದು ತಿಳಿಸಿದರು. ಮಾಂಸಾಹಾರ ಎಂದರೆ ಬಾಧೆ ಪಡುವುದು ಎಂದು ಹೇಳಿ ಆಸ್ಟ್ರೇಲಿಯಾದ ಮಾಸ್ಟರ್ ನಿನಾ ಬ್ರೌನ್ ಕೊಟ್ಟಿರುವ 144 ಕೋನಗಳಿರುವ ಸ್ಫಟಿಕದ ಚೈತನ್ಯಶಕ್ತಿಯೊಂದಿಗೆ ತಮ್ಮ ಕೊಳಲು ನಾದದಿಂದ ಅಲ್ಲಿದ್ದ ಎಲ್ಲರನ್ನೂ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದ ಅನುಭವವಾಯಿತು.

ಆಸ್ಟ್ರೇಲಿಯನ್ ಮಾಸ್ಟರ್ ಪ್ರದೀಪ್ ಅವರು ತಮ್ಮ ಜೀವನದ ಹಿಂದಿನ ಪುಟಗಳನ್ನು ನಮ್ಮ ಜೊತೆ ಹಂಚಿಕೊಂಡಾಗ ‘ಹೀಗೂ ಸಾಧ್ಯವಾ?’ ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು. ಅವರ ಸರಳತೆ ಮತ್ತು ಜಾಣ್ಮೆಗೆ ನಮ್ಮದೊಂದು ನಮನ.

ಮಲೇಷಿಯಾದಿಂದ ಬಂದಿದ್ದ ಶ್ರೀಮತಿ ಮತ್ತು ಶ್ರೀಲಕ್ಷ್ಮಣ್, ಮಾನಿಯ ಕುಟುಂಬ ಮತ್ತು ಚಂದ್ರರಾವ್ ಅವರ ಅನುಭವಗಳನ್ನು ರಾತ್ರಿಯ ಸತ್ಸಂಗದಲ್ಲಿ ಆಲಿಸಿ ಧ್ಯಾನದ ಮಹಿಮೆಯನ್ನು ತಿಳಿದುಕೊಂಡೆವು. ಹಾಗೆಯೇ, ಚೆನ್ನೈನ ವಂಶಿ ಮತ್ತು ಮನೋಜ್ ಅವರ ಧ್ಯಾನಾನುಭವಗಳು ನಮಗೆ ಊಹೆಗೂ ನಿಲುಕಲಾರದೆ ಧ್ಯಾನದ ಬಗ್ಗೆ ಇನ್ನೂ ಆಳಕ್ಕೆ ಇಳಿಯಲು ಆಸಕ್ತಿ ಹೆಚ್ಚಿಸಿತು.

ಬಾಲಿಯ ಮತ್ತೊಂದು ಎಂದೂ ಮರೆಯದ ವಿಷಯವೆಂದರೆ ಯಾವುದೇ ಪಕ್ಷಿ ಪಂಜರದಲ್ಲಿದ್ದುದನ್ನು ಕಂಡರೆ ತಕ್ಷಣವೇ ಹೋಗಿ ಪಂಜರದ ಬಾಗಿಲು ತೆಗೆದು ಅದು ಹಾರಿ ಹೋಗಲು ಸಹಾಯ ಮಾಡುವ ಒಬ್ಬ ಪಿರಮಿಡ್ ಮಾಸ್ಟರ್ ಪರಿಚಯವಾಯಿತು.

ಬಾಲಿಯಲ್ಲಿರುವ ಪ್ರಪಂಚದ ಅತಿ ದೊಡ್ಡದಾದ ಬುದ್ಧ ವಿಹಾರವನ್ನು ನೋಡ ಬೇಕೆಂಬ ಕನಸು ಪತ್ರೀಜಿಯವರಿಗೆ ಅವರ ಶಾಲಾ ದಿನಗಳಿಂದಲೂ ಇತ್ತಂತೆ. ‘ನಾನು ಈ ಕನಸು ಕಂಡಾಗ ನೀನು ಹುಟ್ಟೇ ಇರಲಿಲ್ಲ, ಇದು ನನ್ನ 50ವರ್ಷಗಳ ಕನಸು’ ಎಂದು ತಿಳಿಸಿದರು. ಎಂತಹ ದೊಡ್ಡ ಜ್ಞಾನಿಯಾಗಿದ್ದರೂ ಸಹ ಅಲ್ಲಿಯ ಗೈಡ್‌ನ ವಿವರಣೆಗಳನ್ನು ವಿನಯದಿಂದ ಆಲಿಸುತ್ತಿದ್ದರು. ಅವರಿಗೆ ಅವರೇ ಸಾಟಿ. ಆ ಪರಮಗುರುವಿಗೊಂದು ನಮ್ಮ ನಮನ.

ಇನ್ನು ನಮ್ಮ ಮುಂದಿನ ಜೀವನದಲ್ಲಿ ತುಂಬಾ ತುಂಬಾ ಬದಲಾವಣೆಗಳನ್ನು ಸಂತೋಷವಾಗಿ ಅಷ್ಟೇ ಖಚಿತವಾಗಿ ಅಳವಡಿಸಿಕೊಳ್ಳಬೇಕೆಂದು ತೀರ್ಮಾನಿಸಿ ಅಪಾರವಾದ ಜ್ಞಾನದ ಮೂಟೆಯನ್ನು ಹೊತ್ತು, ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಬಾಲಿಯ ಸ್ವಚ್ಛವಾದ ಸುಂದರ ಪ್ರಕೃತಿಯನ್ನು ನೆನೆಯುತ್ತಾ ವಿಮಾನದಲ್ಲಿ ಭಾರತದತ್ತ ಹಾರಿದೆವು.


- ನಿರ್ಮಲ ಪ್ರಕಾಶ್, ಚಳ್ಳಕೆರೆ
+91 99807 82001

Go to top