"ಮಾಂಸಾಹಾರ ಬಿಟ್ಟಿದ್ದು .... ಜೀವನ ಸುಂದರವಾಗಿದೆ"

 


ನಾನು ಶೀಲ ಯು.ಆರ್. [ಗೃಹಿಣಿ] ಬೆಂಗಳೂರು ವಿಶ್ವೇಶ್ವರಯ್ಯ ನಗರದ 4ನೇ ಬಡಾವಣೆ ನಿವಾಸಿ. ಮೊದಲು ಇಲ್ಲಿನ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ನನ್ನ ಮೈಗ್ರೇನ್ ಸಮಸ್ಯೆಯ ತೀವ್ರತೆ ನಾನು ಕೆಲಸ ಬಿಡುವ ಹಾಗೆ ಮಾಡಿತು. ಹೀಗೆ ಒಂದು ದಿನ ರಸ್ತೆಯಲ್ಲಿ ನನ್ನ ಸ್ನೇಹಿತೆ ಸುನೀತ ಜೊತೆ ನನ್ನ ಮಗನ ಏಕಾಗ್ರತೆ ಕೊರತೆಯ ಬಗ್ಗೆ ಮಾತನಾಡುತ್ತಾ ಇರಬೇಕಾದರೆ, ಅವರು ಉಲ್ಲಾಳದಲ್ಲಿ ಶ್ರೀಮತಿ ಸುಧಾ ವಿಶ್ವನಾಥ್ ಅವರು ನಡೆಸುತ್ತಿರುವ ‘ಪ್ರಜ್ಞಾ ಪಿರಮಿಡ್ ಧ್ಯಾನ ಕೇಂದ್ರಕ್ಕೆ’ ಕರೆದುಕೊಂಡು ಹೋದರು. ನಾನು ಮೊದಲು ನನ್ನ ಮಗನನ್ನು ಮಾತ್ರ ಧ್ಯಾನಕ್ಕೆ ಕಳುಹಿಸುತ್ತೇನೆ ಅವನು ಮೊದಲು ಧ್ಯಾನ ಮಾಡಲಿ ಎಂದು ಹೇಳಿದಾಗ ಶ್ರೀಮತಿ ಸುಧಾರವರು, ‘ಮೊದಲು ನೀವು ಧ್ಯಾನ ಮಾಡಿ, ನಂತರ ಅವನೂ ಮಾಡುತ್ತಾನೆ’ ಎಂದು ಹೇಳಿದರು. ನಾನು ಧ್ಯಾನ ಪ್ರಾರಂಭಿಸಿದರೆ ಅವನಿಗೆ ಹೇಗೆ ಏಕಾಗ್ರತೆ ಉಂಟಾಗುತ್ತದೆ ಎಂದು ಆಲೋಚಿಸುತ್ತಾ ಜುಲೈ- 2-2017 ರಿಂದ ನಮ್ಮ ಧ್ಯಾನ ತರಗತಿ ಪ್ರಾರಂಭವಾಯಿತು. ಶನಿವಾರ ಮಧ್ಯಾಹ್ನ 3ಗಂಟೆಯಿಂದ 5 ಗಂಟೆಯವರೆಗೆ. ಅಲ್ಲಿ ಸುಧಾ ಕಣ್ಣುಮುಚ್ಚಿ, ಕೈ ಕಾಲು ಜೋಡಿಸಿ, ಉಸಿರಿನ ಮೇಲೆ ಗಮನವಿರಿಸಿ ಎಂದು ಹೇಳಿದರು. ‘ಅರೆ ಧ್ಯಾನ ಇಷ್ಟೊಂದು ಸುಲಭವ’ ಎಂದುಕೊಂಡು ಶುರುಮಾಡಿದೆ. ನಿಜ ಹೇಳುವುದಾದರೆ ಆ ದಿನ ನನಗಾದ ಅನುಭವ ಹಿಂದೆ ಎಂದೂ ಆಗಿರಲಿಲ್ಲ. ಆ ಒಂದು ದಿನದ ಧ್ಯಾನದಿಂದಲೇ ನಾನು ಇನ್ಯಾವ ಪರಸ್ಥಿತಿಗೂ ಹೆದರಬೇಕಿಲ್ಲ. ನನ್ನ ಬಳಿ ಧ್ಯಾನ ಎನ್ನುವ ಕವಚವಿದೆ. ಏನೇ ಬರಲಿ ಎದುರಿಸಬಹುದು ಎನಿಸಿ ನನ್ನಲ್ಲಿ ಒಂದು ಭರವಸೆ ಮೂಡಿತು. ಅದು ನಿಜವಾಯಿತು. 14 ತಿಂಗಳಿನಿಂದ ನಾನು, ನನ್ನ ಮಗ ನಿರಂತರವಾಗಿ ಧ್ಯಾನ ಮಾಡುತ್ತಿದ್ದೇವೆ. ನನಗೆ ಗೊತ್ತಾಗದ ಹಾಗೆ ಸಮಸ್ಯೆಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೈಗ್ರೇನ್ ಕೂಡ ಬಹುತೇಕ ಇಲ್ಲದಂತಾಗಿದೆ. ಸಮಸ್ಯೆಗಳ ನಿಭಾಯಿಸುವ ತಿಳಿವಳಿಕೆ ಬಂದಿದೆ. ಮನೆಯಲ್ಲಿ ತಿಳಿವಳಿಕೆ, ಹೊಂದಾಣಿಕೆ ಹೆಚ್ಚಾಗಿದೆ. ಬೇಸರ, ವ್ಯತ್ಯಾಸಗಳಿಗೆ ಜಾಗ ಇಲ್ಲವಾಗಿದೆ.

ಧ್ಯಾನದ ಪ್ರಾರಂಭದಲ್ಲಿ ‘ಸಸ್ಯಾಹಾರಿಯಾದರೆ ಧ್ಯಾನ ಪರಿಣಾಮಕಾರಿಯಾಗಿರುತ್ತದೆ’ ಎಂದು ಹೇಳಿದರು. ಅದಕ್ಕೆ ಮೊದಲ ದಿನದಿಂದಲೇ ಸಂಪೂರ್ಣವಾಗಿ ಮಾಂಸಾಹಾರ ಬಿಟ್ಟಿದ್ದು ದೇಹ ಹಗುರ, ಜೀವನ ಸುಂದರ ಎನಿಸಿದೆ. ಮಗ ಕೂಡ ಸಸ್ಯಾಹಾರಿಯಾಗಿದ್ದಾನೆ. ತುಂಬಾ ಸಂತೋಷವಾಗಿದೆ.

ಮೊದಲೆಲ್ಲ ನನ್ನ ಮಗ ಒಂದು ಸಣ್ಣ ತಪ್ಪು ಮಾಡಿದರೂ ಸಿಡಿಮಿಡಿಗೊಳ್ಳುತ್ತಿದ್ದೆ. ಆದರೆ, ಈಗ ಅದಕ್ಕೆಲ್ಲ ಪೂರ್ಣವಿರಾಮ ಬಿದ್ದಿದೆ (ಫುಲ್ ಸ್ಟಾಪ್). ಕೆಲಸದ ನಿಮಿತ್ತ ಹೊರಗೆ ಹೋದಾಗ ತಡವಾದರೆ ಹಿಂಜರಿಕೆಯಾಗುತ್ತಿತ್ತು. ಮನೆಯವರೆಲ್ಲಿ ಬೈಯುತ್ತಾರೋ ಎಂದುಕೊಂಡೇ ಬರುತ್ತಿದ್ದೆ. ಅದು ಹಾಗೆಯೇ ಆಗುತ್ತಿತ್ತು. ಮನೆಯವರಿಂದ ಮಾತು ಕೇಳಬೇಕಿತ್ತು. ಆದರೆ, ಈಗ ಧ್ಯಾನಕ್ಕೆ ಸಂಬಂಧಿಸಿದ ಎಷ್ಟೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಹೊರಗೆ ಹೋದರೆ ಮನೆಯವರ ನೆನಪೂ ಆಗೊಲ್ಲ. ಮನಸ್ಸಲ್ಲಿ ಯಾವ ಹಿಂಜರಿಕೆಯೂ ಇರುವುದಿಲ್ಲ. ತಡವಾಗಿ ಬಂದರೂ ಮನೆಯಲ್ಲಿ ಯಾವ ಕೆಟ್ಟ ಪ್ರತಿಕ್ರಿಯೆಯೂ ಇರುವುದಿಲ್ಲ. ಆಶ್ಚರ್ಯ ಆಗುತ್ತೆ. ಧ್ಯಾನದಿಂದ ನನ್ನ ಮನಸ್ಸು ಸಕಾರಾತ್ಮಕ ಯೋಚನೆಯಲ್ಲಿಯೆ ಇರುತ್ತದೆ.

ಧ್ಯಾನ ಪರಿಚಯವಾದ ಸ್ವಲ್ಪ ದಿನದಲ್ಲೇ ಸುಧಾ ಅವರು ನನ್ನ ಹಾಗೂ ನನ್ನ ಗೆಳತಿ ಜಯಲಕ್ಷ್ಮಿ ಅವರನ್ನು ಪ್ರೇಮ್ ನಾಥ್ ಸರ್‌ಗೆ ಪರಿಚಯ ಮಾಡಿಕೊಟ್ಟರು. ಅವರ ಸರಳ ಮಾತು, ಮಾರ್ಗದರ್ಶನದೊಂದಿಗೆ ಧ್ಯಾನ(ಗೈಡೆಡ್ ಮೆಡಿಟೇಷನ್) ತುಂಬಾ ಪರಿಣಾಮಕಾರಿಯಾಗಿತ್ತು. ನನ್ನ ಸ್ನೇಹಿತೆ ಜಯಲಕ್ಷ್ಮಿ ಅವರಿಗೆ ದೊಡ್ಡ ಅಪಘಾತವಾಗಿ (ಆಕ್ಸಿಡೆಂಟ್) ಶಾರೀರಿಕವಾಗಿ, ಮಾನಸಿಕವಾಗಿ ದುರ್ಬಲರಾಗಿದ್ದರು. ಧ್ಯಾನದ ಪರಿಚಯವಾದ ನಂತರ ನಿರಂತರವಾಗಿ ಧ್ಯಾನ ಮಾಡುತ್ತಿರುವುದರಿಂದ ಅವರಲ್ಲಿ ಒಳ್ಳೆಯ ಸುಧಾರಣೆಯಾಗಿದೆ. ಈಗ ಅವರನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ನಾವು ಸ್ನೇಹಿತರು, ಬಂಧುಗಳು ಎಲ್ಲರಿಗೂ ಧ್ಯಾನ ಹೇಳಿಕೊಟ್ಟಿದ್ದೇವೆ. ಮಗನ ಸ್ನೇಹಿತರು ಬಂದರೆ ಅವರಿಂದಲೂ ಧ್ಯಾನ ಮಾಡಿಸುತ್ತೇನೆ. ಧ್ಯಾನ ಕಸ್ತೂರಿ ಓದುತ್ತೇವೆ. ಇದರಿಂದ ಒಳ್ಳೆಯ ವಿಷಯಗಳು ತಿಳಿಯುತ್ತವೆ.

ಬದುಕು ಸುಂದರವಾಗಿದೆ. ಇದಕ್ಕೆ ಕಾರಣವಾದ ಧ್ಯಾನ ಪರಿಚಯಿಸಿದ ಸುನೀತ, ಸುಧಾ ಮತ್ತು ಸತ್ಸಂಗದಲ್ಲಿ, ಧ್ಯಾನ ಕಾರ್ಯಕ್ರಮಗಳಲ್ಲಿ ಧ್ಯಾನದ ಬಗ್ಗೆ ಜ್ಞಾನವನ್ನು ಹಂಚಿದ ಎಲ್ಲಾ ಮಾಸ್ಟರ್‌ಗಳಿಗೂ ಧನ್ಯವಾದಗಳು.

ಶೀಲ ಯು.ಆರ್.
ಬೆಂಗಳೂರು

Go to top