" ಗೀಜಾ ಪಿರಮಿಡ್‌ಗೆ ಮಾಡಿದ ಧ್ಯಾನ ಯಾನದ ಅನುಭವ "

 

ಎಲ್ಲ ಆತ್ಮೀಯ ಧ್ಯಾನ ಬಂಧುಗಳಿಗೆ ನನ್ನ ನಮಸ್ಕಾರಗಳು, ನನ್ನ ಹೆಸರು ಅಜಯ್ ಕೀರ್ತಿ, ಊರು ಶಿಡ್ಲಘಟ್ಟ, ಚಿಕ್ಕಾಬಳ್ಳಾಪುರ ಜಿಲ್ಲೆ. ನಾನು ಮತ್ತು ನನ್ನ ಪತ್ನಿ ರಜಿತಾ ಕೀರ್ತಿ ಇಬ್ಬರು ಇದೇ ಸೆಪ್ಟೆಂಬರ್ 15 ರಿಂದ 26 ರವರೆಗಿನ “ಈಜಿಪ್ಟ್ ಧ್ಯಾನ ಮಹಾ ಯಾತ್ರೆ"ಯಲ್ಲಿ ಭಾಗವಹಿಸಿದ್ದೆವು. ಯಾವ ಪೂರ್ವ ಜನ್ಮಗಳ ಪುಣ್ಯವೋ, ಪತ್ರೀಜಿಯವರ ನಾಲ್ಕು ದಿನಗಳ ಸಾಂಗತ್ಯದ ಈ ಪ್ರವಾಸವು ಅದ್ಭುತವಾಗಿದ್ದಿತು. 80 ಜನಗಳನ್ನೊಳಗೊಂಡ ಈ ಪ್ರವಾಸವು ಅತ್ಯಂತ ಸುಖಕರವಾಗಿದ್ದು, ಎಲ್ಲಾ ಸೀನಿಯರ್ ಮಾಸ್ಟರ್‌ಗಳೊಂದಿಗೆ ಸತ್ಸಂಗ ಮತ್ತು ಅನುಭವಗಳ ಹಂಚಿಕೆ, ಅಲ್ಲಲ್ಲಿ ಧ್ಯಾನ ಪ್ರಚಾರ ಮತ್ತು ನಿತ್ಯ ಧ್ಯಾನಗಳೊಂದಿಗೆ ನಮ್ಮ ಪ್ರವಾಸದ 12 ದಿನಗಳು ಲವಲವಿಕೆಯಿಂದ ಕೂಡಿತ್ತು ಮತ್ತು ಹನ್ನೆರಡು ದಿನಗಳು ಎರಡು ದಿನಗಳಂತೆ ಭಾಸವಾದುವು.

 

ಗೀಜಾಪಿರಮಿಡ್‌ನೊಳಗೆ ಪ್ರಾತಃಕಾಲ 3.30 ಗಂಟೆಗೆ ಪತ್ರೀಜಿಯವರ ಕೊಳಲುನಾದ ಮತ್ತು ಹಾಡುಗಳೊಂದಿಗಿನ ನಾನು ಮಾಡಿದ ಒಂದೂವರೆ ಗಂಟೆಯ ಧ್ಯಾನವು ನನ್ನ ಜೀವನದಲ್ಲಿನ ಅದ್ಭುತ ಅನುಭವಗಳಲ್ಲೊಂದು. ಇಡೀ ನನ್ನ ದೇಹವು ಗಾಳಿಯಲ್ಲಿ ತೇಲಿದಂತಹ ಅನುಭವ, ದೇಹವು ನೆಲವನ್ನು ಮುಟ್ಟಿಯೇ ಇಲ್ಲ ಎಂಬಂತಹ ಹಗುರವಾದ ಅನುಭೂತಿ, ಒಂದು ಗಂಟೆಯ ಈ ಧ್ಯಾನ ಸಮಯ ಕೇವಲ ಐದುನಿಮಿಷದಂತಿತ್ತು. ಗೀಜಾಪಿರಮಿಡ್‌ನ ಕಿಂಗ್ಸ್ ಚೇಂಬರ್ ಒಂದು ಶಕ್ತಿಸಾಗರ, ಇಲ್ಲಿನ ಕಂಪನಗಳು ಅಮೂಲ್ಯ ಹಾಗೂ ಅಪೂರ್ವವಾದದ್ದು ಎಂಬುದು ಅರಿವಿಗೆ ಬಂದಿತು. 5200 ವರ್ಷಗಳ ಹಳೆಯ ಈ ಕಟ್ಟಡವು ನಂಬಲಸಾಧ್ಯವಾದ ರೀತಿಯಲ್ಲಿ ನಿರ್ಮಾಣಗೊಂಡಿದೆ. ಕ್ವೀನ್ಸ್ ಚೇಂಬರ್‌ನಲ್ಲಿನ ಧ್ಯಾನವೂ ಸಹ ಬಹಳ ಆನಂದದಾಯಕವಾಗಿದ್ದಿತು. ಇಂತಹ ಮಹಾನ್ ಕಟ್ಟಡದಲ್ಲಿ ಧ್ಯಾನಿಸಲು ಅವಕಾಶವನ್ನು ನೀಡಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿ, ಈಜಿಪ್ಟ್ ಸರ್ಕಾರಕ್ಕೆ ಮತ್ತು ನಮ್ಮ ಪ್ರವಾಸವನ್ನು ಸುಖಮಯವಾಗಿರಿಸಲು ಶ್ರಮಿಸಿದ ವೇಣುಗೋಪಾಲ್ ಮತ್ತು ಸಾಯಿಕುಮಾರ್‌ರೆಡ್ಡಿಯವರಿಗೆ ನಮ್ಮ ಕೃತಜ್ಞತೆಗಳು.

 

ನಾನು 3 ವರ್ಷಗಳಿಂದ ಪ್ರತಿನಿತ್ಯ ಚಾಚೂ ತಪ್ಪದೆ ಧ್ಯಾನ ಮಾಡುತ್ತಿದ್ದೇನೆ. ನನ್ನ 3 ವರ್ಷಗಳ ಹಿಂದಿನ, ಧ್ಯಾನ ಮಾಡದ ಜೀವನವನ್ನು ಜ್ಞಾಪಿಸಿಕೊಂಡಾಗ, ನನಗೆ ಚಿಕ್ಕಂದಿನಿಂದ ಧ್ಯಾನವು ಲಭಿಸಿದ್ದರೆ ಎಷ್ಟು ಚೆನ್ನಾಗಿತ್ತೋ ಎಂದೆನಿಸುತ್ತದೆ. ನನಗೆ ಧ್ಯಾನವನ್ನು ಪರಿಚಯಿಸಿದ ನನ್ನ ಮಡದಿ ಮತ್ತು ತಾಯಿಯವರಿಗೆ ನಾನು ಚಿರಋಣಿ. ನಾನು ಧ್ಯಾನವನ್ನು ಆಕಸ್ಮಿಕವಾಗಿ ಸ್ವೀಕರಿಸಿದೆನು. ನಾನು ಪ್ರತಿನಿತ್ಯ ವ್ಯಾಯಮ ಮತ್ತು ವಾಕಿಂಗ್‌ ಅನ್ನು ನಿಯಮ ತಪ್ಪದೇ ನನ್ನ ಜೀವನದಲ್ಲಿ ಅಳವಡಿಸಿಕೊಂಡರೂ ಸಹ ಒಮ್ಮೆ ನಾನು ಕದಲವುದೂ ಕಷ್ಟಕರವಾದ ರೀತಿಯಲ್ಲಿ ಜ್ವರದಿಂದ ಬಳಲಿದೆನು. ಹೀಗಿರುವಾಗ ನನ್ನ ಮಡದಿಯು ನನಗೆ ಮಲಗಿಕೊಂಡೇ ಧ್ಯಾನ ಮಾಡಲು ಸೂಚಿಸಿದಳು ಏನು ಮಾಡಲೂ ತ್ರಾಣವಿಲ್ಲದ ನಾನು, ಸರಿ ಇದನ್ನು ಒಂದು ಸಾರಿ ಮಾಡೋಣವೆಂದೆನಿಸಿ 30 ನಿಮಿಷಗಳು ಮಲಗಿಯೇ ಕಣ್ಣು ಮುಚ್ಚಿ ನನ್ನ ಉಸಿರನ್ನು ಗಮನಿಸ ತೊಡಗಿದೆನು. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಮೈಮೇಲಿನ ಎಲ್ಲಾ ರೋಮಗಳು ಚೇತನಗೊಳ್ಳಲು ಶುರುವಾಯಿತು, ನನ್ನ ದೇಹದ ಎಲ್ಲಾ ನರನಾಡಿಗಳಲ್ಲೂ ಏನೋ ಒಂದು ರೀತಿಯ ಕಣ್ಣಿಗೆ ಕಾಣದ ಚೈತನ್ಯ ಶಕ್ತಿಯು ಪ್ರವಹಿಸಲು ಶುರುವಾಯಿತು. ಸರಿ ಸುಮಾರು 30 ನಿಮಿಷಗಳಲ್ಲಿ ನನ್ನ ಬಿಸಿಯಾದ ದೇಹವು ಸಾಮಾನ್ಯ ತಾಪಮಾನಕ್ಕೆ ಬಂದು ನಿಂತಿತು. ನನಗೆ ನಿಜವಾಗಿಯು ಇದು ನಂಬಲಸಾಧ್ಯ ಸಂಗತಿಯಂತೆ ಕಂಡಿತು. ನಾನು ಮಂಚದ ಮೇಲೆ ಎದ್ದು ಕುಳಿತುಕೊಂಡೆನು. ಏನೋ ಆನಂದ ಯಾವುದೋ ಒಂದು ದಿವ್ಯ ಶಕ್ತಿಯು ನನ್ನಲ್ಲಿ ಪ್ರವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು. ನನ್ನಲ್ಲಿ ಜ್ವರದ ಬಳಲಿಕೆಯು ಎಳ್ಳಷ್ಟೂ ಇರಲಿಲ್ಲ. ಯಥಾಪ್ರಕಾರ ಹಸಿವು ಶುರುವಾಯಿತು, ಕೂಡಲೇ ನಾನು ಊಟಮಾಡಲು ನನ್ನ ಕೋಣೆಯೊಳಗಿನಿಂದ ಅಡುಗೆ ಮನೆಗೆ ಸಾಮಾನ್ಯ ರೀತಿಯಲ್ಲಿ ಹೊರಬಂದೆ. ನನ್ನ ತಾಯಿಯವರು ನನ್ನನ್ನು ಆಶ್ಚರ‍್ಯಚಕಿತರಾಗಿ ನೋಡಲಾರಂಭಿಸಿದರು. ಈಗಷ್ಟೇ ಕದಲಲೂ ನಿತ್ರಾಣವಾಗಿದ್ದ ನನಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂದಿತೆಂದು ಆಶ್ಚರ‍್ಯಚಕಿತರಾದರು.

 

ನನಗೋ ಇದೊಂದು ದಿವ್ಯ ಅನುಭವ. ಇದರ ಬಗ್ಗೆ ಇನ್ನೂ ತಿಳಿಯಬೇಕೆಂಬ ಕುತೂಹಲ. ಅಂದಿನಿಂದ ಇನ್ನೂ ಹೆಚ್ಚಾಗಿ ಧ್ಯಾನವನ್ನು ನನ್ನ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಂಡೆನು. ಕ್ರಮೇಣ ನನ್ನಲ್ಲಿನ ಬದಲಾವಣೆಗಳನ್ನು ಕಂಡು ಆಶ್ಚರ‍್ಯಗೊಂಡೆನು. ನನಗರಿವಿಲ್ಲದಂತೆಯೇ ನಾನು ಮಾಂಸಾಹಾರವನ್ನು ಬಿಟ್ಟು ಅಹಿಂಸೆಯ ದಿಕ್ಕಿನಲ್ಲಿ ಪ್ರಯಾಣ ಮಾಡತೊಡಗಿದೆ. ಧ್ಯಾನವು ನನ್ನ ಜೀವನವನ್ನು ಚೈತನ್ಯಗೊಳಿಸಿದೆ. ನಾವು ಯೋಚಿಸುವ ವಿಧಾನವನ್ನು ಬದಲಾಯಿಸಿ ಅದನ್ನು ಪಾಸಿಟಿವ್ ದಿಕ್ಕಿನಲ್ಲಿ ಮುನ್ನಡೆಸುವ ದಿವ್ಯಶಕ್ತಿ ಧ್ಯಾನಕ್ಕಿದೆ. ಇಂದಿನ ಸಮಾಜದಲ್ಲಿನ ಅತೀ ಒತ್ತಡ ತುಂಬಿರುವ ಎಲ್ಲ ವಯಸ್ಸಿನ ಮಾನವರಿಗೂ ಧ್ಯಾನವು ಅಮೃತದಂತೆ. ಆನಾಪಾನಸತಿ ಧ್ಯಾನವನ್ನು ಇಡೀ ವಿಶ್ವಕ್ಕೆ ಸಾರುತ್ತಿರುವ ವಿಶ್ವಮೂರ್ತಿ ಶ್ರೀ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನಮ್ಮೆಲ್ಲರ ಪ್ರಣಾಮಗಳು. ಆನಾಪಾನಸತಿ ಧ್ಯಾನಮಾಡಿ ನಿಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಿರಿ.

 

ಅಜಯ್ ಕೀರ್ತಿ
ಶಿಡ್ಲಘಟ್ಟ

ಫೋನ್ : +91 9342269967

Go to top