" ನನ್ನ ಬಾಳಿನ ಅದ್ಭುತ ರೂಪಾಂತರಣೆ "

 

ನನ್ನ ಆತ್ಮ ಬಂಧುಗಳಿಗೆ ನನ್ನ ಆತ್ಮೀಯ ನಮನ. ನನ್ನ ಹೆಸರು ಶ್ರೀನಿವಾಸ. ನನ್ನನ್ನು ಧ್ಯಾನಕ್ಕೆ ಪರಿಚಯಿಸಿದ ಮೊದಲ ವ್ಯಕ್ತಿ ನನ್ನ ಮಡದಿ ನಿರ್ಮಲ. 2004 ರಲ್ಲಿ ರಾಮಚಂದ್ರ ಮಿಷನ್ ಬಗ್ಗೆ ತಿಳಿಸಿದರು. ಆಕೆ ಮದುವೆಗೆ ಮುಂಚೆ ರಾಮಚಂದ್ರ ಮಿಷನ್‌ನಲ್ಲಿ ಅಭ್ಯಾಸಿಯಾಗಿದ್ದರು. ನನ್ನ ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಒತ್ತಡಗಳನ್ನು ಅನುಭವಿಸುತ್ತಿದ್ದಾಗ, ದೇವರ ವರವೊ ಎಂಬಂತೆ, ಧ್ಯಾನ ಪದ್ಧತಿಯ ಪರಿಚಯವಾಯಿತು. ಸಹಜವಾಗಿ ಶಾಂತಿ ಪ್ರಿಯನಾದ ನನಗೆ ಧ್ಯಾನದ ಅನುಭವ ಬಹಳ ಸಂತಸವನ್ನು ತಂದಿತು. ಆದರೆ, ಸಾಮಾನ್ಯರಿಗೆ ಉಂಟಾಗುವಂತಹ ಅನೇಕ ಅನೇಕ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ನನ್ನ ಜ್ಞಾನ ದಾಹವನ್ನು ಪೂರೈಸಿಕೊಳ್ಳಲು ಹಲವಾರು ಭಕ್ತಿಪ್ರಧಾನವಾದ ಹಾಗೂ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಿದ್ದೆ. ಜ್ಞಾನದ ಪರವಾಗಿ ಕೆಲವು ಉಲ್ಲೇಖಗಳನ್ನು ಮಾಡಲು ಸ್ವಲ್ಪ ಮಟ್ಟಿಗೆ ತಿಳಿದಿದ್ದೇನೆಯೇ ಹೊರತು, ಶಾಂತಿಯ ಅನುಭವ ಸಾಲದೆ ಬರುತ್ತಿತ್ತು. ಓಶೋರವರ ಪುಸ್ತಕಗಳು, ಭಗವತ್ ಗೀತೆ, ವಿವೇಕ ಚೂಡಾಮಣಿ, ಒಂದು ಯೋಗಿಯ ಆತ್ಮಕತೆ, ಇತ್ಯಾದಿಯಾಗಿ ಎಷ್ಟೋ ಪುಸ್ತಕಗಳನ್ನು ಓದಿದ ಸಾರ್ಥಕತೆ ಮಾತ್ರ ನನ್ನದಾಗಿದೆ. ಆದರೆ, ಮನಸ್ಸು ಹಾಗೂ ಅದರ ವೃತ್ತಿಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವಿಲ್ಲದೆ ಗೊಂದಲದಲ್ಲೇ ಇರುತ್ತಿದ್ದೆನು. ಹೀಗಿರುವಾಗ, ಆಗಸ್ಟ್ 2007ರಲ್ಲಿ ಶ್ರೀ ಅಯ್ಯಪ್ಪರವರ ಪರಿಚಯವಾಯಿತು. ಅವರು ನನ್ನ ಬಳಿ ಹೆಚ್ಚಾಗಿ ಏನು ಮಾತನಾಡಲಿಲ್ಲ Spiritual Reality CD ಯನ್ನು ನನ್ನ ಕೈಗೆ ಕೊಟ್ಟರು. ಆ CDಯ ಪ್ರಭಾವ ರಾಮಬಾಣದಂತೆ ನನ್ನ ಅಷ್ಟು ವರ್ಷಗಳ ಊಹಾ ಪೋಹಗಳನ್ನು ಬೇರು ಸಹಿತ ಅಳಿಸಿ ಹಾಕುವಲ್ಲಿ ಸಹಾಯಮಾಡಿತು. ಬಹುಶಃ, ಮನುಷ್ಯ ತಾನೇ ನಿರ್ಮಿಸಿಕೊಂಡಿರುವ ಕಟ್ಟಳೆಗಳನ್ನು, ಸೀಮಿತಗೊಂಡಿರುವ ಚೈತನ್ಯವನ್ನು ತಾನೇ ಸರಿಪಡಿಸಿಕೊಳ್ಳಬೇಕೆಂದು ಅಯ್ಯಪ್ಪರವರು ಮೌನವಾಗಿ ಈ CDಯ ಮೂಲಕ ನನ್ನನ್ನು ಧ್ಯಾನಿಯಾಗಲು ಪ್ರೋತ್ಸಾಹಿಸಿದ್ದಾರೆ. ಅದಾದ ನಂತರ, ನನ್ನಲ್ಲಿ ಸ್ವಲ್ಪ ಸುಧಾರಣೆಯನ್ನು ಕಂಡ ಮೇಲೆ ಲೊಬ್‌ಸಾಂಗ್ ರಾಂಪಾರವರ ಪುಸ್ತಕ " Third Eye " ಯನ್ನು ಕೊಟ್ಟರು. ಇಂತಹ ವಿಷಯವನ್ನು ಬಾಳಿನಲ್ಲಿ ಎಂದೂ ಕೀಳರಿಯದ ವಿಷಯವಾದ್ದರಿಂದ, ನನ್ನ ಕುತೂಹಲ ಹಾಗೂ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಆ ಪುಸ್ತಕವನ್ನು ಮುಗಿಸುವಷ್ಟರಲ್ಲಿ ನಾನು ಒಬ್ಬ ಹೊಸ ವ್ಯಕ್ತಿಯಾಗಿ ಬಿಟ್ಟಿದ್ದೆ. ನನ್ನ ಹಳೆಯ ನಂಬಿಕೆಗಳು, ಮೌಲ್ಯಗಳಲ್ಲಿ ಏನೋ ಹೊಸತನ ಮೂಡಿಬಂದಿತು. ತೃಪ್ತಿಯೆ ಇಲ್ಲದೆ ಜೀವಿಸುತ್ತಿದ್ದ ನನಗೆ ಏನೋ ಮಹತ್ಕಾರ್ಯವನ್ನು ಸಾಧಿಸುತ್ತಿರುವಂತೆ, ನನ್ನ ಅಂತರಾಳದಲ್ಲಿ ಹೇಳಲಾಗದ ಖುಷಿ.

 

‘ಧ್ಯಾನಕಸ್ತೂರಿ’ ಪತ್ರಿಕೆಗಳಲ್ಲಿ ಧ್ಯಾನಿಗಳ ಅನುಭವವನ್ನು ಓದುತ್ತಿದ್ದರೆ ಆಶ್ಚರ್ಯ, ರೋಮಾಂಚನ ಹಾಗೂ ಉತ್ತೇಜನ ಒಮ್ಮೆಲೇ ಆಗುತ್ತಿತ್ತು. ಅಯ್ಯಪ್ಪರವರು ಪತ್ರಿಜೀ ಸರ್ ಬಗ್ಗೆ ಹೇಳುತ್ತಿದ್ದರೆ, ನಮಗೇಕೆ ಅವರನ್ನು ನೋಡುವ ಅದೃಷ್ಟ ಒದಗಿ ಬರುತ್ತಿಲ್ಲವೆಂದು ಬೇಸರವಾಗುತ್ತಿತ್ತು. ಆಶ್ಚರ್ಯಕರವಾಗಿ ಒಂದು ದಿನ ಬೆಳಿಗ್ಗೆ 5-30 ಯಾರೋ ನಮ್ಮ ಮನೆ ಬಾಗಿಲು ತಟ್ಟಿದರು ಯಾರೆಂದು ನೋಡಲು ಮಂಪರಿನಲ್ಲಿ ಕಣ್ಣುಜ್ಜುತ್ತಾ ಕಿಟಕಿಯಲ್ಲಿ ನೋಡಿದರೆ ಅಯ್ಯಪ್ಪರವರು "ತ್ವರಗ ರಂಡಿ ಪತ್ರಿ ಸರ್ ಬಯಲ್ದೇರುತುನ್ನಾರು"ಎಂದು ಹೇಳಿದರು. ನಮ್ಮ ಕಿವಿಗಳನ್ನು ನಂಬದಾದೆವು. ಒಂದು ಕ್ಷಣ ಕೈಕಾಲು ಆಡಲಿಲ್ಲ. ತಟ್ಟನೆ ಮುಖಕ್ಕೆ ನೀರೆರಚಿ, ನಾನು ಮತ್ತು ನನ್ನ ಮಡದಿ ಮಹಡಿಯ ಮೇಲೆ ಓಡಿದೆವು. ನಾವು ಅಲ್ಲಿ ಸೇರುವಷ್ಟರಲ್ಲಿ ಆಗಲೇ ಇನ್ನೂ ಕೆಲವು ಮಂದಿ ಕಾಯುತ್ತಿದ್ದರು. ಅವರ ನಿರೀಕ್ಷೆಯಲ್ಲಿ ಮೈಮರೆತ ನನ್ನ ಎದೆಬಡಿತ ನಿಂತೇಹೋಗಿತ್ತು. ಕಣ್ಣು ಚುಚ್ಚುತ್ತಾ ಇದೆ ಎನ್ನುವಷ್ಟರಲ್ಲಿ ಒಳಗಿನಿಂದ ದೀರ್ಘವಾಗಿ ಉಸಿರನ್ನು ಬಿಡುತ್ತಾ ಒಂದು ಬೃಹತ್ ಆಕಾರ ಬಿಳಿಯ ಗಡ್ಡದೊಂದಿಗೆ ಹೊರಬಂದಿತು. ಬಿಟ್ಟ ಕಣ್ಣು ಬಿಟ್ಟಂತೆಯೆ ನೋಡುತ್ತಿದ್ದೇವೆ, ಅಗೋ ನಮ್ಮೆದುರು ನಿಂತಿದ್ದರು "ಪತ್ರೀ ಸರ್‌". ಸ್ತಬ್ಧವಾಗಿ ಅವರನ್ನು ನೋಡುತ್ತಿದ್ದಂತೆ ಹತ್ತಿರ ಬಂದೇ ಬಿಟ್ಟರು. ಶೇಕ್‌ಹ್ಯಾಂಡ್ ಕೊಟ್ಟು. " Are you doing Meditation? " ಎಂದು ಕೇಳಿದರು. ಅವರ ಬೆಚ್ಚನೆಯ ಸಧೃಡವಾದ ಕೈ ಹಿಡಿದು ಹೌದು ಎಂದು ತಲೆ ಆಡಿಸಿದೆ. "ಯಾ ಅಲ್ಲಾ" ಎಂದು ಉದ್ಗಾರ ತೆಗೆಯುತ್ತ ಮುನ್ನಡೆದರು. ಎಲ್ಲರೂ ಅವರನ್ನು ಹಿಂಬಾಲಿಸುತ್ತ ಆ ಮುಸುಕಿನಲ್ಲಿ ಅವರ ವಾಹನದ ಬಳಿಗೆ ಹೋದೆವು. ವಾಹದೊಳಕ್ಕೆ ಹತ್ತಿ ಮತ್ತೆ ನನ್ನನ್ನು ದಿಟ್ಟಿಸಿನೋಡಿ " Have you been to the pyramid? " ಎಂದು ಕೇಳಿದರು." yes sir ", ಎಂದೆ. ಗಾಡಿ ಹೊರಟಿತು. ಆ ಮುಸುಕಿನಲ್ಲಿ ಅವರ ವಾಹನ ಕಣ್ಮರೆಯಾಯ್ತು. ಆದರೆ, ಆ ಅನುಭವ ನನ್ನ ಹೃದಯದಲ್ಲಿ ಅಚ್ಚಳಿಯದೆ ಹಾಗೇ ಮುದ್ರಿತವಾಗಿಬಿಟ್ಟಿದೆ. ಅಂದಿನಿಂದ ಆನಾಪಾನಸತಿಯನ್ನು ಕ್ರಮವಾಗಿ ಅಭ್ಯಾಸ ಮಾಡುತ್ತ ಬಂದಿದ್ದೇನೆ. ಏನೋ ತಿಳಿಯದ ಸ್ಥಿರತೆಯನ್ನು ಶಾಂತಿಯನ್ನು ಅನುಭವಿಸುತ್ತಿದ್ದೇನೆ. ಪಾಮರನಂತಿದ್ದ ನಾನು ಸ್ವಾಧ್ಯಾಯ ಹಾಗೂ ಸಜ್ಜನ ಸಾಂಗತ್ಯದಿಂದಾಗಿ ಪಾಂಡಿತ್ಯದೆಡೆಗೆ ಚಲಿಸುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

 

ಆದರೆ, ಆನಾಪಾನಸತಿಯಲ್ಲಿ ಇಳಿದ ಮೇಲೆ ಮನಸ್ಸು ಶೂನ್ಯವಾಗುಷ್ಟು ಸ್ವತಃ ಅನುಭವಕ್ಕೆ ಬಂದ ಮೇಲೆಇನ್ಯಾವ ಧ್ಯಾನ ಪದ್ದತಿಯೂ ಫಲಕಾರಿಯಲ್ಲವೆಂದು ಅಂತೆ. ಈ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ, ಆದರೆ, ಮುಕ್ಕಾಲುಪಾಲು ಮಂದಿಗೆ ಇದರ ಬಗ್ಗೆ ಆಸಕ್ತಿಯೇ ಇಲ್ಲವೆಂದು ತಿಳಿದು ಬೇಸರಗೊಳ್ಳುತ್ತಿದ್ದೆ. ಆಗ ಅಯ್ಯಪ್ಪರವರು ಆತ್ಮಗಳ ವಿವಿಧ ಶ್ರೇಣಿಗಳ (levels) ಬಗ್ಗೆ, ಅವರ ಜನ್ಮದ (design) ರಚನೆಯ ಬಗ್ಗೆ ವಿವರಿಸಿದ ಮೇಲೆ ಸಾಮಾನ್ಯರ ಬಗ್ಗೆ ಅನುಕಂಪ ಉಂಟಾಯಿತು. ಎರಡು ಮೂರು ಬಾರಿ out of body ಅನುಭವವಾದಾಗ ಬಹಳ ಗಾಬರಿಗೊಂಡೆ. Astral travel ಬಗ್ಗೆ ತಿಳಿದ ನಂತರ, ಸ್ವಲ್ಪ ಸಮಾಧಾನವಾಯಿತು. ಅಯ್ಯಪ್ಪರವರು ಕೆಲವು ಆಧ್ಯಾತ್ಮಿಕ ವಿಚಾರದ ಬಗ್ಗೆ ಅದೆಷ್ಟು ಸರಳ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆಂದರೆ, ನಾನೇ ಸ್ವತಃ ತಿಳಿಯಬೇಕಾದರೆ, ಬಹಳಷ್ಟು ಸಮಯ ಹಿಡಿಸಬಹುದು. ಅಂತಹ ವಿಚಾರಗಳಲ್ಲಿ ನನ್ನ ಹೃದಯದ ಬಾಗಿಲು ತೆರೆಸಿದ ಸತ್ಯವನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಬಯಕೆ. ಈಜಿಪ್ಟ್ ಪ್ರಯಾಣದ ನಂತರ, ಅವರೊಂದಿಗೆ ಮಾತನಾಡುತ್ತಿದ್ದೆ. ಆತ್ಮಕ್ಕೂ ಕಾನ್‌ಷಿಯಸ್‌ನೆಸ್‌ಗೂ ಏನು ವ್ಯತ್ಯಾಸ ಎಂದು ಕೇಳಿದೆ. ಕ್ಷಣಾರ್ಧದಲ್ಲಿ ಅವರಿಂದ ಬಂದ ಉತ್ತರ ಹೀಗಿತ್ತು. ಕಾನ್‌ಷಿಯಸ್‌ನೆಸ್ ಎಲ್ಲೆಡೆಯೂ ಒಂದೇ, ಅದರ ವೈಯಕ್ತಿಕ ಅನುಭವವೇ ಆತ್ಮ ಎನಿಸಿಕೊಳ್ಳುತ್ತದೆ. ನಾವಿದ್ದೇವೆ, ಅದರ ಜೊತೆ ನಾವಿದ್ದೇವೆಂಬ ಅರಿವೂ ನಮಗಿದೆ. ನಮ್ಮ ಇರುವಿಕೆಯನ್ನು ಸಾಕ್ಷಿಯಾಗಿ ಗಮನಿಸುತ್ತಿದ್ದೇವೆಂದು ಕೂಡ ನಮಗೆ ತಿಳಿಯುತ್ತಿರುತ್ತದೆ. ಅದೇ ವೇಳೆ ಯಾರು ನಮಗೆ ಈ ಅರಿವನ್ನುಂಟು ಮಾಡುತ್ತಿರುವುದೆಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅದನ್ನೇ ಕಾನ್‌ಷಿಯಸ್‌ನೆಸ್ (ಪ್ರಜ್ಞೆ) ಎನ್ನುತ್ತೇವೆ ಎಂದರು. ಅಷ್ಟೆ,ಚೈತನ್ಯದ ಒಂದು ತುಣುಕಿನ ಅನುಭವವಾಯಿತು. ಅವರು ಮುಂದುವರೆಸಿ, ಇನ್ನೊಂದು ದೃಷ್ಟಿಕೋನವನ್ನು "ಕಾನ್‌ಷಿಯಸ್‌ನೆಸ್‌"ನ ಅರಿವು ಎಷ್ಟಿದ್ದರೂ, ಅದು ಅಣುವಿನಷ್ಟು ಮಾತ್ರ ಎಂದರು. ಅಲ್ಲಿಗೆ understanding'n' = yet to know ಎಂದಾಯಿತು.

 

ಆನಾಪಾನಸತಿಯ ಧ್ಯಾನದಿಂದ ಬೇಕಾದಾಗ ಮನಸ್ಸನ್ನು 'Switch off -Switch on' ಮಾಡುವ ವಿದ್ಯೆಯನ್ನು ಕಲಿತಂತಾಯಿತು. ನಮ್ಮ ಆಲೋಚನೆಗಳೇ ನಮ್ಮ ಭವಿಷ್ಯವನ್ನು ನಿರ್ಮಿಸುತ್ತಿದೆ. ಈ ಕ್ಷಣದಲ್ಲಿ ಬಾಳಬೇಕೆಂಬ ಪ್ರಯತ್ನ ನಡೆಯುತ್ತಿದೆ. ಇದರಿಂದ, ಭವಿಷ್ಯವು ಉಜ್ವಲವಾಗುವುದು ಖಚಿತ. ಡಿಸೆಂಬರ್ 2012 ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಧ್ಯಾನ ಮಾಡುತ್ತಿದ್ದೇನೆ. ಈ ಧ್ಯಾನದಿಂದ ನನ್ನ ಆರೋಗ್ಯದಲ್ಲಿ ಎಷ್ಟೋ ಸುಧಾರಣೆಯನ್ನು ಕಂಡಿದ್ದೇನೆ.

 

ನಾನೂ, ನನ್ನ ಸಹಧರ್ಮಿಣಿ ಹಾಗೂ ನನ್ನ ಮಗಳು ದೀಕ್ಷ ಎಲ್ಲರೂ ಕ್ರಮವಾಗಿ ಧ್ಯಾನ ಮಾಡುತ್ತೇವೆ. ಇದಕ್ಕೆ ಎಷ್ಟು ಸಮಯ ಒದಗಿಸಿದರೂ ಕಡಮೆ. ತರ್ಕವನ್ನು ವಾದವನ್ನು ಆದಷ್ಟು ಕಡಿಮೆನೆ ಮಾಡಿ "ನಿನ್ನೆ-ನಾಳೆಯೆಂಬ" ಬಂಧನದಿಂದ ಬಿಡುಗಡೆ ಹೊಂದಿ ಧ್ಯಾನ ಮಗ್ನರಾದರೆ ನಮ್ಮ ಗುರಿಯನ್ನು ಸಾಧಿಸಿದಂತೆಯೇ. ಜಿಜ್ಞಾಸುಗಳಿಗೆ ತಾವು ತಿಳಿದ ಹಾಗೂ ತಿಳಿಯಬಯಸುವ ವಿಷಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದರೆ ಸಾಕು, ಇನ್ನು ಅವರನ್ನು ಹಿಡಿಯುವವರೇ ಇರುವುದಿಲ್ಲ. ‘ಧ್ಯಾನ ಕಸ್ತೂರಿ’ ಪತ್ರಿಕೆಯು ನನಗೆ ಇಂತಹುದೇ ಸಹಾಯವನ್ನು ಮಾಡಿದೆ.

 

ಪತ್ರಿಸಾರ್, ಪಿರಮಿಡ್, ಧ್ಯಾನಕಸ್ತೂರಿ, ಆನಾಪಾನಸತಿ, ಅಯ್ಯಪ್ಪ, ಅನಿತ, ಸ್ವಾಧ್ಯಾಯ, ಸಜ್ಜನ ಸಾಂಗತ್ಯ. ಆಸ್ಟ್ರಲ್ ಟ್ರಾವೆಲ್ ಇವೇ ಕೆಲವು ಪದಗಳು ಸದಾ ನಮ್ಮ ಜೀವನದಲ್ಲಿ ಮುದ್ರಿತವಾಗಿಬಿಟ್ಟಿದೆ. ಈಗ ನಮಗಿರುವುದು ಒಂದೇ ದಾರಿ, ಒಂದೇ ಗುರಿ ಅದೇ "ಎನ್‌ಲೈಟೆನ್‌ಮೆಂಟ್‌" ಈ ಆರ್ಟಿಕಲ್ ಪತ್ರಿ ಸಾರ್‌ರವರ ಧ್ಯೇಯವಾದ "ಧ್ಯಾನಜಗತ್‌"ಗೆ ನಾವು ನೀಡುತ್ತಿರುವ ಚಿಕ್ಕ ಸೇವೆಯೆಂದು ಭಾವಿಸುತ್ತೇನೆ. ಜನ್ಮ ಜನ್ಮಾಂತರಗಳ ಪುಣ್ಯದ ಫಲವೆ ಪಿರಮಿಡ್ ಮಾಸ್ಟರ‍್ಸ್‌ನ ಸಾಂಗತ್ಯ. ಆಂಗ್ಲ ಹಾಗೂ ತೆಲುಗು ಭಾಷೆಯಲ್ಲಿರುವ ಆಧ್ಯಾತ್ಮಿಕ ಜ್ಞಾನದ ವಿಷಯಗಳನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶ, ಭಾಗ್ಯ ನನ್ನದಾಗಿದೆ. ಧ್ಯಾನಕಸ್ತೂರಿಯ ಮೂಲಕ ಎಲ್ಲ ಪಿರಮಿಡ್ ಮಾಸ್ಟರ‍್ಸ್‌ನ ಜೊತೆಯಿರುವ ಸಂತೋಷ ಅಪಾರವಾದುದು.

 

 

ಶ್ರೀ B.ಶ್ರೀನಿವಾಸ
ಬೆಂಗಳೂರು

Go to top