" ಧ್ಯಾನದಿಂದ ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವಾಯಿತು " 

 

 

ನಾನು ಸುಮಾರು ದಿನಗಳಿಂದ ಮನಸ್ಸಿನ ಏಕಾಗ್ರತೆಗೆ ಯಾವುದು ಪರಿಣಾಮಕಾರಿ ಸಾಧನವೆಂದು ಚಿಂತಿಸುತ್ತಿದ್ದೆ. ಏಕೆಂದರೆ, ನಾನು ದೈಹಿಕವಾಗಿ ಶಕ್ತಿಯುತನಾಗಿದ್ದರೂ, ಮಾನಸಿಕವಾಗಿ ಚಿಂತಿಸುತ್ತಿದ್ದೆ. ಪ್ರತಿದಿನ ಬೆಳಿಗ್ಗೆ ವಾಯುವಿಹಾರ, ವ್ಯಾಯಾಮ ಮತ್ತು ಒಂದೆರೆಡು ಪ್ರಾಣಾಯಾಮಗಳನ್ನು ಮಾಡುತ್ತಿದ್ದೆ. ಆದರೂ, ಏನೋ ಒಂದು ಕೊರತೆ ಕಾಡುತ್ತಿತ್ತು.

 

"ರೋಗಿ ಬಯಸಿದ್ದು ಹಾಲು ಅನ್ನ , ಡಾಕ್ಟರ್ ಹೇಳಿದ್ದು ಹಾಲು ಅನ್ನ" ಎಂಬಂತೆ ನನಗೆ ನಮ್ಮ ವಿನಾಯಕ ಬಡಾವಣೆಯಲ್ಲಿ ವಿನಾಯಕ ದೇವಸ್ಥಾನದಲ್ಲಿ ಧ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಾನು ಮತ್ತು ನನ್ನ ಪತ್ನಿ ಶ್ರೀಮತಿ ಶಕುಂತಲ ಈ ಧ್ಯಾನ ಶಿಬಿರದಲ್ಲಿ ಭಾಗವಹಿಸಿದೆವು. ಒಂದೆರೆಡು ವಾರ ಸುಮಾರು ಒಂದು ಗಂಟೆ ಕಾಲ ಕೂರುವುದು ಬಹಳ ಕಷ್ಟವಾಯಿತು. ಮನಸ್ಸನ್ನು ಹಿಡಿತದಲ್ಲಿರಿಸಲು ಇನ್ನೂ ಕಷ್ಟವಾಯಿತು. 3ನೇ ವಾರ ಸ್ವಲ್ಪ, ಅಂದರೆ, 5 ರಿಂದ 10 ನಿಮಿಷ ಧ್ಯಾನದ ಏಕಾಗ್ರತೆಯನ್ನು ನಿರ್ವಹಿಸಲು ಸಾಧ್ಯವಾಯಿತು ಅಂತ ಹೇಳಬಹುದು. ಒಂದು ತಿಂಗಳ ನಂತರ, ಸುಮಾರು 10 ನಿಮಿಷ ಕಾಲ ನಿರ್ವಹಣೆ ಕಾರ್ಯವನ್ನು ನಡೆಯಲು ಟೇಪ್‌ರೆಕಾರ್ಡ್‌ನಲ್ಲಿ ಬಿತ್ತರಿಸುತ್ತಿದ್ದ: "ಉಸಿರೇ ಗುರು, ಸಹಜವಾದ ಉಸಿರಾಟದ ಕ್ರಿಯೆ ಮೇಲೆ ನಿಗಾವಹಿಸುವುದು, ಯೋಚನಾ ರಹಿತ ಮನಸ್ಸೇ ಧ್ಯಾನ" ಎಂಬ ಹೇಳಿಕೆ ಹಾಗೂ ಮಧ್ಯೆ-ಮಧ್ಯೆ ಇದೇ ವಿಚಾರವನ್ನು ಮಾರ್ಗದರ್ಶನ ನೀಡುತ್ತಿದ್ದ ಶ್ರೀ ಎಸ್.ಸಿ ಮಹಾರುದ್ರಪ್ಪನವರ ಹೇಳಿಕೆ ಅತ್ಯಂತ ಪ್ರೋತ್ಸಾಹಕಾರಿಯಾದವು. ನಾನು ರಸಾಯನ ಶಾಸ್ತ್ರ ಉಪನ್ಯಾಸಕ. ನನ್ನ ಉಪನ್ಯಾಸಕ ವೃತ್ತಿ ಉತ್ತಮವಾಗತೊಡಗಿತು. ನನಗಿದ್ದ ಮಂಡಿ ಮತ್ತು ಭುಜದ ನೋವು ಸ್ವಲ್ಪ ಕಡಿಮೆಯಾದವು. ಹಲವಾರು ವಿಚಾರಗಳ ಕುರಿತು ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವಾಯಿತು. ಕೆಲವು ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುವ ಸೂಚನೆಗಳು ಗೋಚರವಾಯಿತು. ಒಂದು ಸಂತಸದ ವಿಚಾರವೆಂದರೆ, ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪ್ರೊಫೆಸರ್ ಹುದ್ದೆಗೆ ಬಡ್ತಿ ಸಿಗಲು ಧ್ಯಾನವು ದಾರಿದೀಪವಾಯಿತು. ಒಟ್ಟಾರೆ, ಸಕಾರಾತ್ಮಕ ಚಿಂತನೆಯತ್ತ ಧ್ಯಾನವು ನಮ್ಮ ಮನಸ್ಸನ್ನು ಬದಲಾಯಿಸಿದೆ ಎಂಬ ಅಂಶ ಸ್ಪಷ್ಟ.

 

ನಾನು ದಿನನಿತ್ಯ ಬೆಳಿಗ್ಗೆ ಧ್ಯಾನವನ್ನು ಮನೆಯಲ್ಲೆ ಮುಂದುವರಿಸಿದ್ದೇನೆ. ಇದು, ನನಗೆ ಇನ್ನಷ್ಟು ಪರಿಣಾಮವಾಗಿದೆ. ನಮ್ಮ ಕುಟುಂಬದಲ್ಲಿ ಆನಂದದ ಚಿಲುಮೆ ಚಿಗುರಲು ಆರಂಭಿಸಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಧ್ಯಾನ ಶಿಬಿರದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟ ಎಲ್ಲರಿಗೂ ವಿಶೇಷವಾಗಿ ಶ್ರೀ ಪತ್ರೀಜಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.

 

 

Dr. B.A ಬಸವರಾಜಪ್ಪ
ವಿದ್ಯಾನಗರ
ದಾವಣಗೆರೆ

Go to top