" ನಾ ಕಂಡ ಪಿರಮಿಡ್ ವ್ಯಾಲಿ "

 

ಪಿರಮಿಡ್ ವ್ಯಾಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ "ನಾ ಕಂಡ ಪಿರಮಿಡ್ ವ್ಯಾಲಿ"ಯ ಮಹತ್ವವನ್ನು ತಮ್ಮಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿದ್ದ ಹಾಗೆ ನಾನು ಕೂಡ ಪಿರಮಿಡ್ ಎಂಬುದು ಶವಗಳನ್ನು ಕೆಡದಂತಿಡಲು ನಿರ್ಮಿಸಿರುವ ಗೋಪುರಗಳೆಂದು ಕೇಳಿ, ಓದಿ ತಿಳಿದುಕೊಂಡಿದ್ದುದು ನನ್ನ ಪರಿಮಿತ ಜ್ಞಾನಕ್ಕೆ ಸಂಬಂಧಿಸಿದ ಗತ ‘ಹಿಸ್ಟರಿ’. ಆದರೆ, ಪಿರಮಿಡ್ ಒಳಗೆ ಕಣ್ಣುಮುಚ್ಚಿ ಸ್ವಲ್ಪ ಸಮಯ ಕುಳಿತು ನಮ್ಮ ಉಸಿರಾಟವನ್ನು ಗಮನಿಸುತ್ತಿದ್ದರೆ, ಅಲ್ಲಿ ನಮ್ಮಲ್ಲುಂಟಾಗುವ ಅನುಭವ ಹೇಳಲಾಗದಂತಹ ’ಮಿಸ್ಟರಿ’. ನಾನು ಕೈಲಾಸ ಪರ್ವತ ಇನ್ನರ್‌ಪರಿಕ್ರಮದಲ್ಲಿ, ಪರ್ವತಕ್ಕೆ ಬಹಳ ಹತ್ತಿರದ ತಂಗು ದಾಣಗಳಿಂದ ಡಾರ್ಬಿನ್, ಥೀರಾಪುಕ್, ಜುತಿಲ್‌ಪುಕ್ ಸ್ಥಳಗಳಿಂದ ಆ ಮೇರು ಕಳಸವನ್ನು ಕಂಡಾಗ ನನ್ನಲ್ಲಾದ ರೋಮಾಂಚನ, ದಿಗ್ಬ್ರಮೆ, ಪುಳಕಿತ, ಕಾಸ್ಮಿಕ್ ಅಲೆಗಳ ಸ್ಪರ್ಶ, ವಾವ್ಹ್! ನನ್ನ ಅನುಭವ ನಿಮಗೆ ಕೊಡಿಲಿಕ್ಕೆ ಆಗುವುದಿಲ್ಲ. ನೀವು ಕೇಳಿ ಅನುಭವ ಪಡೆಯಲಿಕ್ಕೆ ಆಗುವುದಿಲ್ಲ. ಆದರೆ, ಬಂಧುಗಳೇ, ಅಂತಹ ಅಭೂತಪೂರ್ವ ಅನುಭವವನ್ನು ಪಿರಮಿಡ್ ಒಳಗಿರುವ ಕಿಂಗ್ ಛೇಂಬರ್‌ನಲ್ಲಿ ಕುಳಿತು ಪಡೆಯಬಹುದು. ಇದನ್ನು ನಂಬಲಾಗದಿದ್ದರೆ, ಒಂದು ಸಲ ಕುಳಿತು ಅನುಭವಿಸಿರಿ.

 

ಈ ಗುಟ್ಟನ್ನು ಗ್ರಹಿಸಿರುವ ಜನ, ಪ್ರಪಂಚದ ಮೂಲೆಮೂಲೆಗಳಿಂದ ತಂಡೋಪತಂಡಗಳಾಗಿ ಬಂದು ಇಲ್ಲಿ ಧ್ಯಾನಮಾಡಿ ಶಕ್ತಿಪಡೆದು, ಶಾಂತಿಹೊಂದಿ ಮರಳಿ ಹೋಗುತ್ತಿದ್ದಾರೆ. ಆದರೆ, ನಮ್ಮ ಸಂಕುಚಿತ ದೃಷ್ಟಿಯಿಂದ ಆ ಮಹತ್ವವನ್ನು ತಿಳಿಯಲಾಗುತ್ತಿಲ್ಲ. ಏಕೆಂದರೆ, ನಮ್ಮ ಸೃಷ್ಟಿಯು ಯಾವಾಗಲೂ ನಮ್ಮ ದೃಷ್ಟಿಗೆ ಸೀಮಿತವಾಗಿಯೇ ಇರುತ್ತದೆ. ನಮ್ಮ ದೃಷ್ಟಿಯನ್ನು ವಿಸ್ತರಿಸಿಕೊಳ್ಳುವುದು ಒಳಿತು.

 

ಪತ್ರೀಜಿಯವರು ಈ ಸ್ಥಳವನ್ನು ಭಾರತದ ‘ಶಂಬಲ’ವೆಂದಿದ್ದಾರೆ. ಅವರು ಬರೆದಿರುವ "ಧ್ಯಾನ ಮಹಾಶಾಸ್ತ್ರ"ವೆಂಬ ಪುಸ್ತಕವು ನನಗೆ ದಾರಿದೀಪವಾಗಿ ಕೈಹಿಡಿದು, ಕರೆತಂದು ಈ ’ಶಂಬಲ’ದಲ್ಲಿ ನಿಲ್ಲಿಸಿದೆ. ಇದಕ್ಕೇ ಮಹಾತ್ಮರು ಹೇಳುವುದು "ಸದ್ಗ್ರಂಥವೇ ಸದ್ಗುರು" ಎಂದು. ಈ ನನ್ನ ಸೌಭಾಗ್ಯಕ್ಕೆ ಕಾರಣವಾದ ಆ ಮಹಾಗ್ರಂಥಕ್ಕೆ ನನ್ನ ಹೃದಯಪೂರ್ವಕ ನಮನಗಳು.

 

ಪ್ರಸ್ತುತ, ನಾನು ‘ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್’ (ಕೆಪಿಡಿಪಿ ಟ್ರಸ್ಟ್) ವತಿಯಿಂದ ಕರ್ನಾಟಕದಲ್ಲಿ ಉಚಿತ ಧ್ಯಾನ ಪ್ರಚಾರ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ನನಗೆ ಈ ಸದವಕಾಶವನ್ನು ನೀಡಿದ ಬ್ರಹ್ಮರ್ಷಿ ಪತ್ರೀಜಿಯವರಿಗೆ ಚಿರಋಣಿಯಾಗಿರುತ್ತೇನೆ. ಪಿರಮಿಡ್ ವ್ಯಾಲಿಯಿಂದ ನಮ್ಮ ಈ ಉಚಿತ ಧ್ಯಾನ ಪ್ರಚಾರಕ್ಕೆ ಬೇಕಾದ ಸಲಹೆ ಸೂಚನೆಗಳಲ್ಲದೆ ಎಲ್ಲಾ ರೀತಿಯ ಸಹಕಾರ ಕೊಡುತ್ತಿರುವುದರ ಮೂಲಕ ನಮಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪಿರಮಿಡ್ ವ್ಯಾಲಿ ಮತ್ತು ಕೆ.ಪಿ.ಡಿ.ಪಿ.ಟ್ರಸ್ಟ್‌ಗಳ ನಡುವಿನ ಮಧುರ ಬಾಂಧವ್ಯ, ಸಹಕಾರಗಳಿಗೆ ಕಾರಣವಾದ ಎಲ್ಲರಿಗೂ ನಮ್ಮ ಧನ್ಯವಾದಗಳು. ವಂದನೆಗಳು.

 

B. ನಾರಾಯಣ್
ಬೆಂಗಳೂರು

Go to top