" ಈ ಭೂಮಿಯ ಮೇಲೆ ಮನಸಾ ಪೂರ್ವಕವಾಗಿ ಜೀವಿಸುತ್ತಿದ್ದೇನೆ "

 

ನನ್ನ ಹೆಸರು ಭೀಮಣ್ಣ ಜೇಡರ್. ನಾನು ದಾವಣಗೆರೆ ಜಿಲ್ಲೆಯಲ್ಲಿ ವಾಸವಾಗಿದ್ದೇನೆ. ನನಗೆ ಈ ಪಿರಮಿಡ್ ಧ್ಯಾನವು 2 ವರ್ಷಗಳ ಹಿಂದೆ ನನ್ನ ಮೊಮ್ಮಗ ಹರೀಶ್‌ನ ಮುಖಾಂತರ ತಿಳಿಯಿತು. ಮೊದಲು ನನ್ನ ಜೀವನದಲ್ಲಿ ಹಲವಾರು ಕಾರಣಗಳಿಂದ ಜೀವನವೆಂಬುದು ಗೊಂದಲಮಯವಾಗಿದ್ದಿತು. ಆಗ ನನ್ನ ಆರೋಗ್ಯವೂ ಸಹ ತುಂಬಾ ವ್ಯತಿರಿಕ್ತವಾಗಿದ್ದಿತು. ನನಗೆ ಎದೆ ನೋವು, ಕೆಮ್ಮು ಮತ್ತು ತಲೆ ನೋವು(ಪಿತ್ತ) ಪದೇ ಪದೇ ಬರುತ್ತಿತ್ತು. ಎಲ್ಲಾ ನುರಿತ ವೈದ್ಯರಿಗೆ ತೋರಿಸಿದರೂ ಕಡಿಮೆಯಾಗಲಿಲ್ಲ. ಆಗ ನನಗೆ ಧ್ಯಾನವು ತುಂಬಾ ಸಹಕಾರಿಯಾಯಿತು. ಒಮ್ಮೆ ನಾನು ಎದೆನೋವಿನಿಂದ ಬಳಲುತ್ತಿದ್ದಾಗ ವೈದ್ಯರ ಬದಲಾಗಿ ಧ್ಯಾನದ ಮೊರೆ ಹೋದೆ, ಆಗ ನನ್ನ ಮೊಮ್ಮಗನು ಎದೆಯ ಮೇಲೆ ಪಿರಮಿಡ್ ಕ್ಯಾಪನ್ನು ಇಟ್ಟುಕೊಂಡು ಧ್ಯಾನವನ್ನು ಮಾಡುವಂತೆ ಹೇಳಿದನು. ಅದೇ ರೀತಿ ನಾನು ನನ್ನ ಮೇಲೆ ಮತ್ತು ಪಿರಮಿಡ್‌ನ ಮೇಲೆ ನಂಬಿಕೆ ಇಟ್ಟು ಸುಮಾರು 2 ಗಂಟೆಗಳ ಕಾಲ ಧ್ಯಾನ ಮಾಡಿದೆ. ಅದರಿಂದ ನನಗೆ ಎದೆನೋವು ಸುಲಭರೀತಿಯಲ್ಲಿ ಗುಣವಾಗಿದ್ದು, ಇದುವರೆವಿಗೂ ನನ್ನ ಹತ್ತಿರ ಸುಳಿಯಲೇ ಇಲ್ಲ.

 

ಧ್ಯಾನದಿಂದ ನನ್ನ ಜೀವನವು ತುಂಬಾ ಆನಂದಮಯವೂ ಶಾಂತವೂ ಆಗಿದ್ದು, ಆ ಪರಮಾತ್ಮನು ಕರುಣಿಸಿರುವ ಸುಂದರವಾದ ಜೀವನವನವನ್ನು ಈ ಭೂಮಿಯ ಮೇಲೆ ಮನಸಾ ಪೂರ್ವಕವಾಗಿ ಜೀವಿಸುತ್ತಿದ್ದೇನೆ. ಹೀಗೆ ನನ್ನ ಅನುಭವಕ್ಕೆ ಬಂದ ಕೆಲವು ಧ್ಯಾನದ ಅನುಭವಗಳನ್ನು ನನ್ನ ಬಂಧು ಮಿತ್ರರಲ್ಲಿ ಹಂಚಿಕೊಂಡಾಗ ಅವರೂ ಇದರ ಮಹತ್ವವನ್ನು ತಿಳಿದು ಧ್ಯಾನಿಗಳಾಗಿ ಆನಂದಮಯ ಜೀವನ ನಡೆಸುತ್ತಿದ್ದಾರೆ. ನಾನು ಇತ್ತೀಚಿನ ದಿನಗಳಲ್ಲಿ ಧ್ಯಾನವನ್ನು ದಿನಂಪ್ರತಿ ತಪ್ಪದೇ ಮಾಡುತ್ತಿದ್ದೇನೆ, ಧ್ಯಾನವೆಂದರೆ ಜಪ-ತಪ ಮಾಡುವದಲ್ಲ, ಯಾವುದೇ ರೀತಿಯ ದೇವರ ಆಕಾರವನ್ನು ಆಗಲಿ, ಯಾವ ಆಶಾ ಚಿತ್ರವನ್ನಾಗಲಿ ಕಲ್ಪಿಸಿಕೊಳ್ಳದೇ, ಶಾಂತಚಿತ್ತವಾಗಿ ಸುಖಸ್ಥಿರ ಆಸನದಲ್ಲಿ ಕುಳಿತು ಕೇವಲ ಶ್ವಾಸದ ಮೇಲೆ ಗಮನವನ್ನು ಹರಿಸಿದರೆ ಸಾಕು. ಆ ವಿಶ್ವಮಯ ಪ್ರಾಣಶಕ್ತಿಯು ನಮ್ಮ ಶರೀರದಲ್ಲಿ ಸಂಚರಿಸಿ ಜೀವನಾಡಿಗಳನ್ನು ಚೈತನ್ಯಮಯವಾಗಿಸುತ್ತದೆ. ಇದು ಸರಿಯಾದ ಧ್ಯಾನ. ಈ ಅದ್ಭುತವಾದ ಜ್ಞಾನವನ್ನು ತಿಳಿಸಿಕೊಟ್ಟಿರುವ ಬುದ್ಧ ಭಗವಾನನಿಗೂ ಮತ್ತು ನವಯುಗದ ಚೇತನವಾಗಿರುವ ಶ್ರೀ ಬ್ರಹ್ಮರ್ಷಿ ಪತ್ರೀಜಿಯವರಿಗೂ ನಾನು ಅನಂತ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈ ಧ್ಯಾನವೆಂಬುದು ಪುರಾತನಕಾಲದ ಋಷಿಮುನಿಗಳಿಂದ ತಿಳಿದ ವಿಷಯವಾದರೂ, ಇತ್ತೀಚಿನ ದಿನಗಳಲ್ಲಿ ಧ್ಯಾನವು ಕೆಲವರಿಗೆ ಮಾತ್ರ ತಿಳಿದ ವಿಷಯವಾಗಿದೆ. ಆದರೂ, ಧ್ಯಾನ ಪ್ರಚಾರವು ಎಲ್ಲೆಡೆ ಹಬ್ಬುತ್ತಿರುವುದು ಸಂತೋಷಕರ ವಿಷಯವಾಗಿದೆ.


ಧ್ಯಾನವೆಂದರೆ ದುಃಖನಿವಾರಣಿ, ರೋಗನಿವಾರಣಿ ಹಾಗೂ ಜ್ಞಾನ ಪ್ರಸಾದಿನಿ. ಧ್ಯಾನದಿಂದ High B.P. , Low B.P. , ಶ್ವಾಶೋಚ್ಛ್ವಾಸ ತೊಂದರೆಗಳೆಲ್ಲವೂ ಸರಳ ರೀತಿಯಲ್ಲಿ ನಿವಾರಣೆಯಾಗಿ ಆರೋಗ್ಯವಂತರಾಗಿ ಬಹಳಷ್ಟು ದಿನಗಳ ಕಾಲ ಸುಖಕರವಾಗಿ ಬಾಳುತ್ತೇವೆ. ಇನ್ನೊಬ್ಬರ ಒತ್ತಾಯದಿಂದ ಮಾಡದೇ ನಮ್ಮ ಮನಸಾ ಧ್ಯಾನಮಾಡಿದರೆ, ಸಫಲತೆಯನ್ನು ಕಾಣಲು ಸಾಧ್ಯ. ನಾನು ಧ್ಯಾನದಿಂದ ಆರೋಗ್ಯವಾಗಿದ್ದೇನೆ. ಇದೇ ರೀತಿ ಎಲ್ಲರೂ ಧ್ಯಾನಮಾಡಿ ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ಹಾಗೂ ಆನಂದಮಯವಾಗಿಸಿಕೊಂಡು ಜೀವಿಸಲಿ ಎಂದು ಹಾರೈಸುತ್ತಿದ್ದೇನೆ.

 

 

ಭೀಮಣ್ಣ ಜೇಡರ್
ದಾವಣಗೆರೆ

Go to top