" ಪತ್ರೀಜಿ ... ಒಬ್ಬ ಅನುಪಮ ಆಧ್ಯಾತ್ಮಿಕ ಇಂಜಿನಿಯರ್ "

 

 

ನನ್ನ ಹೆಸರು ಚಂದ್ರಶೇಖರ ಪುಲಮಾರ ಶೆಟ್ಟಿ. ನಾನು 2002 ಬ್ಯಾಚ್‌ಗೆ ಸೇರಿದ ಒಬ್ಬ ಪಿರಮಿಡ್ ಮಾಸ್ಟರ್. ನನ್ನ ಜೀವನ ದೃಷ್ಟಿಕೋನದ ಪರಿವರ್ತನೆಗೆ ಕಾರಣವಾಗಿರುವಂಥಹ ಆಳವಾದ ಧ್ಯಾನದ ಅನುಭವಗಳನ್ನು ನಾನು ಪಡೆದಿದ್ದೇನೆ. ಬೆಂಗಳೂರಿನಲ್ಲಿರುವ "ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್" ನ ಸಂಸ್ಥಾಪನಾ ಕಾರ್ಯವು ನನ್ನ ಅತಿ ಹೆಚ್ಚಿನ ಆದ್ಯತೆಯಾಗಿದೆ. ನನ್ನ ಈ ಸಾಧನೆಗಾಗಿ ನಾನು ವ್ಯಯಿಸಿದ 8 ವರ್ಷಗಳ ಪರಿಶ್ರಮವು ಅರ್ಥಪೂರ್ಣವಾಗಿದೆ ಎಂದು ಭಾವಿಸಿದ್ದೇನೆ. ಪ್ರಸ್ತುತ, ನಾನು ವ್ಯವಸ್ಥಾಪಕ ಟ್ರಸ್ಟಿಯಾಗಿ ಪಿರಮಿಡ್ ವ್ಯಾಲಿಯಲ್ಲಿ ಸಲ್ಲಿಸುತ್ತಿರುವ ಸೇವೆಯು ಬಹಳ ಸಂತೋಷವನ್ನು ಉಂಟುಮಾಡಿದೆ. ಕಾರ್ಪೊರೇಟ್ ಕ್ಷೇತ್ರಕ್ಕೆ ಧ್ಯಾನವನ್ನು ಕೊಂಡೊಯ್ಯುವುದು ಮತ್ತು ಪೂರ್ಣಪ್ರಮಾಣದ ಸಮರ್ಪಕವಾದ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವನ್ನಾಗಿ ಪಿರಮಿಡ್ ವ್ಯಾಲಿಯನ್ನು ಮುನ್ನಡೆಸುವುದು ನನ್ನ ತಕ್ಷಣದ ಕಾರ್ಯವಾಗಿದ್ದರೂ, ಅತ್ಯಂತ ಕಡಿಮೆ ಸಮಯದಲ್ಲಿ "ಆಧ್ಯಾತ್ಮಿಕ ವಿಶ್ವವನ್ನು ಕಾಣುವುದು" ನನ್ನ ಪ್ರಾಮಾಣಿಕ ಬಯಕೆ ಮತ್ತು ಗುರಿಯಾಗಿದೆ.

 

ಅಮೇರಿಕಾ ಮತ್ತು ಭಾರತದ ಐಟಿ ಉದ್ಯಮದಲ್ಲಿ 20 ಕ್ಕೂ ಹೆಚ್ಚಿನ ವರ್ಷಗಳ ಅನುಭವವನ್ನು ಗಳಿಸಿ; ಹಲವಾರು ಕಂಪ್ಯೂಟರ್ ಸಾಫ್ಟ್‌ವೇರ್‌ಗಳ ಪೇಟೆಂಟ್ ಹೊಂದಿರುವವನಾಗಿ, ಜಗತ್ತಿನ ಅತಿ ದೊಡ್ಡ ಸಂಸ್ಥೆಗಳಿಗಾಗಿ ಮಾಹಿತಿ ಮತ್ತು ಸಂವಹನ ವ್ಯವಸ್ಥೆಗಳನ್ನು ನಿರ್ಮಿಸಿ; ನಾನು, ಇದುವರೆವಿಗೂ ಉತ್ತಮವಾದ, ತೃಪ್ತಿದಾಯಕವಾದ ವೃತ್ತಿಜೀವನವನ್ನು ನಡೆಸಿದ್ದೇನೆ. ವೃತ್ತಿಯಿಂದ ಒಬ್ಬ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ನಾನು, ಪ್ರಸ್ತುತ, ಸನೋವಿ ಟೆಕ್ನಾಲಜಿಸ್ ಎಂಬ ಸಾಫ್ಟ್‌ವೇರ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ, ಕಂಪನಿಯನ್ನು ಮುನ್ನಡೆಸುತ್ತಿದ್ದೇನೆ.

 

ರಾಜ್ಯಮಟ್ಟದ ರ‍್ಯಾಂಕ್ ಗಳಿಸಿ, ಉತ್ತಮವಾದ ವಸತಿ ಸಹಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ಸದವಕಾಶ ನನಗೆ ಸಿಕ್ಕಿತು. ನಾನು ಓದಲು ಹಾಸ್ಟೆಲ್‌ಗಳಲ್ಲ್ಲಿ ಉಳಿಯಲಾರಂಭಿಸಿದಾಗ ನನಗೆ 10 ವರ್ಷ ವಯಸ್ಸಾಗಿತ್ತು. ಹಾಸ್ಟೆಲ್ ವಾಸವು ನನಗೆ ಸ್ವಾವಲಂಬನೆ, ಮತ್ತು ಸ್ವತಂತ್ರವಾಗಿ ಎಲ್ಲವನ್ನೂ ನಿಭಾಯಿಸುವ ಹಲವಾರು ಮಾರ್ಗೋಪಾಯಗಳನ್ನು ಕಲಿಸಿತು. ಹೀಗಾಗಿ, ಹತ್ತಿರದ ಸಂಬಂಧಿಕರು ಮತ್ತು ಪ್ರೀತಿಪಾತ್ರರ ಮೇಲೆ ಅತಿಯಾಗಿ ಅವಲಂಬಿಸದೆ ಬದುಕುವುದನ್ನು ಈ ಹಾಸ್ಟೆಲ್ ವಾಸ ನನಗೆ ಕಲಿಸಿತು.

 

"ಧ್ಯಾನದ ಅನುಭವಗಳು"

ನನ್ನ ಕಿರಿಯ ಸಹೋದರ ಹಾಗೂ ಒಬ್ಬ ಹಿರಿಯ ಪಿರಮಿಡ್ ಮಾಸ್ಟರ್ ಆಗಿರುವ Dr. G.K ಮೂಲಕ 1999 ರಲ್ಲಿ ನನಗೆ ಆನಾಪಾನಸತಿ ಧ್ಯಾನದ ಪರಿಚಯವಾಯಿತು. ಕಳೆದ ಕೆಲವು ವರ್ಷಗಳಲ್ಲಿ ಆಧ್ಯಾತ್ಮದೊಳಗಿನ ನನ್ನ ಪರಿಶೋಧನೆಯು ಬಹಳ ಚುರುಕಾಗಿದೆ. ನಾನು 1999 ರಲ್ಲಿ ಮೊದಲ ಬಾರಿಗೆ ಪತ್ರೀಜಿಯವರನ್ನು ಭೇಟಿಯಾದೆ. ಮತ್ತು ನಂತರ ಮೂರು ವರ್ಷಗಳ ಕಾಲ ಪಿರಮಿಡ್ ಧ್ಯಾನ ವಲಯದ ಅಂಚಿನಲ್ಲಿಯೇ ಇದ್ದೆ.

 

ನಾನು 2002 ರಲ್ಲಿ ಧ್ಯಾನವನ್ನು ಹೆಚ್ಚು ಹೆಚ್ಚು ಗಂಭೀರವಾಗಿ ಪರಿಗಣಿಸಿದೆ. ನಾನು ಬುದ್ಧನ ಬೋಧನೆಗಳು ಸೇರಿದಂತೆ ಕೆಲವು ಪುಸ್ತಕಗಳನ್ನು ಓದಿದೆ. ಸ್ಕಾಟ್ ಪೆಕ್ ವಿರಚಿತ ‘ರೋಡ್ ಲೆಸ್ ಟ್ರಾವೆಲ್ಡ್’ ಮತ್ತು ನೀಲ್ ಡೊನಾಲ್ಡ್ ವಾಲ್ಷ್‌ರವರ ‘ಕಾನ್‌ವರ್ಸೇಷನ್ ವಿತ್ ಗಾಡ್’ ಪುಸ್ತಕಗಳನ್ನು ಓದಿಕೊಂಡೆ. ಅಷ್ಟರಲ್ಲಿ, ನಾನು ಸಂಪೂರ್ಣವಾಗಿ ಅದರಲ್ಲಿ ಮುಳುಗಿಹೋದೆ. ನನ್ನ ತಿಳಿವಳಿಕೆ ಮಟ್ಟವು ಈ ಸಮಯದಲ್ಲಿ ಗಮನಾರ್ಹವಾಗಿ ಏರಿಕೆಯಾಯಿತು. "ತನ್ನದೇ ಆದ ಒಂದು ಅಜ್ಞಾನದ ಕಾರಣದಿಂದ ನರಳಾಟವು ಉಂಟಾಗುತ್ತದೆ" ಎಂಬುದರ ಅರ್ಥವನ್ನು ಗ್ರಹಿಸಿದ ನಂತರ, ನನ್ನ ಬಗ್ಗೆ ನನಗೇ ಹೆಮ್ಮೆ ಉಂಟಾಯಿತು. ತಮ್ಮ ಪುಸ್ತಕದ ಮೂಲಕ ಸ್ಕಾಟ್ ಪೆಕ್, ನನ್ನ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.... "ಆಕೆಯ/ಆತನ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂಬುದು ನಿಮಗೆ ತಿಳಿದಿರುವ ಹೊರತಾಗಿ, ನೀವು ಯಾರನ್ನೂ ಸಹ ಪ್ರಶ್ನಿಸುವ ಹಕ್ಕನ್ನು ಹೊಂದಿರುವುದಿಲ್ಲ".

 

ನಾನು 2002 ಮೊದಲು, ವರ್ಷವಿಡೀ ಭಾರಿ ಶೀತದಿಂದ ಬಾಧೆಪಡುತ್ತಿದ್ದೆ. 2-3 ತಿಂಗಳ ನಿಯಮಿತ ಧ್ಯಾನಾಭ್ಯಾಸದ ನಂತರ, 2002 ರಲ್ಲಿ, ನಿರಂತರವಾಗಿ ಇದ್ದ ಆ ಶೀತಬಾಧೆಯು ಸಂಪೂರ್ಣವಾಗಿ ಕಣ್ಮರೆಯಾಯಿತು.

 

ನನ್ನ ಆ E.N.T (ಕಿವಿ, ಮೂಗು, ಗಂಟಲು - ವ್ಯವಸ್ಥೆ) ಸಮಸ್ಯೆಯು ಇದಕ್ಕಿಂತಲೂ ಹೆಚ್ಚು ಗಂಭೀರವಾಗಿತ್ತು. ಎತ್ತರದ ಪ್ರದೇಶಕ್ಕೆ ಪ್ರತಿ ಬಾರಿ ನಾನು ವಿಮಾನದಲ್ಲಿ ಅಥವಾ ವಾಹನದಲ್ಲಿ ಪ್ರಯಾಣ ಕೈಗೊಂಡಾಗ ನನ್ನ ಕಿವಿಗಳು ತಾನಾಗಿಯೇ ಮುಚ್ಚಿಕೊಂಡು (ಬ್ಲಾಕ್ ಆಗಿ) ಸೋಂಕಿನಿಂದ ಅಗಾಧವಾದ ನೋವು ಉಂಟಾಗುತ್ತಿತ್ತು. 4 ವರ್ಷಗಳ ಅವಧಿಯಲ್ಲಿ, ಅಮೆರಿಕದ ಇಡೀ ಕರಾವಳಿಯಲ್ಲಿನ, ಅನೇಕ ಇ.ಎನ್.ಟಿ. ತಜ್ಞರನ್ನು ನಾನು ಕಂಡು ಪರಿಹಾರಕ್ಕಾಗಿ ಮೊರೆಹೋದೆ. ಆದರೆ, ಎಲ್ಲರೂ ಸಹ ಇದು ಗುಣಪಡಿಸಲಾಗದು ಎಂದು ಹೇಳಿ ಕೈಚೆಲ್ಲಿಬಿಟ್ಟರು. ಅಲ್ಲದೆ, ಪ್ರತಿ ಬಾರಿ ವಿಮಾನಯಾನ ಮಾಡುವಾಗ ಔಷಧಗಳನ್ನು ತೆಗೆದುಕೊಳ್ಳುವಂತೆ ನನಗೆ ಸಲಹೆ ನೀಡಿದರು. 6 ತಿಂಗಳ ಕಾಲ ನಡೆಸಿದ ನಿಯಮಿತವಾದ ಧ್ಯಾನಾಭ್ಯಾಸದ ನಂತರ, ಆಶ್ಚರ್ಯ ಎಂಬಂತೆ, 2002 ರಲ್ಲಿ, ಈ ಪರಿಸ್ಥಿತಿ ಸಂಪೂರ್ಣವಾಗಿ ಕಣ್ಮರೆಯಾಯಿತು. ನಾನು ಇನ್ನು ಮುಂದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದೆ ಮತ್ತು ಯಾವುದೇ ನೋವು ಇಲ್ಲದೆ ವಿಮಾನಯಾನ ಮಾಡಲು ಮತ್ತೆ ನಾನು ಶಕ್ತನಾದೆನು. ನಾನು 2004 ರಿಂದ ಆಚೆಗೆ ಸಂಪೂರ್ಣವಾಗಿ ಔಷಧಿಗಳ ಸೇವನೆಯನ್ನು ನಿಲ್ಲಿಸಿದೆನು.

 

ಧ್ಯಾನದ ಜೊತೆ, ಜೀವನವು ಬಹಳ ಗುಣಾತ್ಮಕ ಮತ್ತು ತೃಪ್ತಿದಾಯಕವಾಯಿತು. ಕೆಲಸ ಒತ್ತಡ ಸಂಪೂರ್ಣವಾಗಿ ಕಡಿಮೆಯಾಯಿತು ಮತ್ತು ಇತರ ಚಟುವಟಿಕೆಗಳನ್ನು ಮಾಡಲು ನನಗೆ ಬಹಳಷ್ಟು ಹೆಚ್ಚಿನ ಸಮಯ ದೊರೆಯುತ್ತಿದೆ ಎಂಬುದನ್ನು ನಾನು ಕಂಡುಕೊಂಡೆನು. ಮತ್ತು, ನನ್ನ ಉತ್ಪಾದಕತೆ ಆಶ್ಚರ್ಯಕರವಾಗಿ ಹೆಚ್ಚಾಯಿತು. ಮತ್ತು ಆತ್ಮವಿಶ್ವಾಸದೊಂದಿಗೆ ಕೆಲಸಗಳು ಅನಾಯಾಸವಾಗಿ ಪೂರ್ಣಗೊಳ್ಳುತ್ತಿದ್ದವು.

 

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇದ್ದ ನನ್ನ ಸಂಬಂಧಗಳು ನಾಟಕೀಯವಾಗಿ ಸುಧಾರಣೆಗೊಂಡವು. ನಂತರ, ದ್ವಂದ್ವಗಳು ಇಲ್ಲವಾದವು. "ಏನು ಅಂದುಕೊಂಡರೂ ಸಹ ಅದು ಆಗುತ್ತಿತ್ತು ಮತ್ತು ಬಯಸಿದ ಕೆಲಸಗಳು ಸರಾಗವಾಗಿ ಆಗಿಹೋಗುತ್ತಿತ್ತು" ಜನರೆಡೆಗಿನ ನನ್ನ ನಡೆ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸುವ ನನ್ನ ಕ್ರಮಗಳು ಬದಲಾಗಿಹೋದವು. ಯಾವುದನ್ನೇ ಆಗಲಿ, ಯಾರನ್ನೇ ಆಗಲಿ ಬೈದುಕೊಳ್ಳುವುದು ಸಂಪೂರ್ಣ ನಿಂತುಹೋಯಿತು. ಆಲೋಚನೆಗಳು ಯಾವಾಗಲೂ; ಯಾವುದು ಅತ್ಯುತ್ತಮ ಮತ್ತು ಇದನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು ಎಂಬುದಾಗಿರುತ್ತಿತ್ತು.

 

ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ, ನಾನು ಹಲವಾರು ಆಧ್ಯಾತ್ಮಿಕ ಪುಸ್ತಕಗಳನ್ನು ಓದಿದೆನು. ಬಹುತೇಕ ಪುಸ್ತಕಗಳು ಪತ್ರೀಜಿಯವರು ಶಿಫಾರಸು ಮಾಡಿರುವ ಪುಸ್ತಕಗಳ ಪಟ್ಟಿಯಿಂದ ಆಯ್ಕೆಮಾಡಿಕೊಂಡಿದ್ದೆನು. ಪ್ರತಿಯೊಂದೂ ಪುಸ್ತಕವೂ ಸಹ ಒಂದು ಅನರ್ಘ್ಯರತ್ನ ಮತ್ತು ಈ ಸೃಷ್ಟಿಯ ಮತ್ತು ಲೋಕದ ಅಸ್ತಿತ್ವದ ಕುರಿತಾಗಿ ಇದ್ದ ನನ್ನ ಒಟ್ಟಾರೆ ತಿಳಿವಳಿಕೆಯ ಮೇಲೆ ಬಹು ದೊಡ್ಡ ಪ್ರಭಾವ ಬೀರಿತು. 2005 ರ ಆರಂಭದಲ್ಲಿ ಅವಧಿಯಲ್ಲಿ, ನಾನು ಯಾವುದಕ್ಕೂ ಪಶ್ಚಾತ್ತಾಪ ಪಡಬಾರದು ಎಂದು ಅರಿತುಕೊಂಡೆನು. ಇದರಿಂದಾಗಿ, ಎಲ್ಲಾ ನಕಾರಾತ್ಮ ವಿಚಾರಗಳು ಇಲ್ಲವಾದವು. ಸಮಯವನ್ನು ಅನಾವಶ್ಯಕವಾಗಿ ಕಳೆಯುತ್ತಿರಲಿಲ್ಲ ಮತ್ತು ಪ್ರತಿ ಸನ್ನಿವೇಶವನ್ನೂ ಸಹ ಹೊಸ ಕಲಿಕೆಗೆ ಬಳಸಿಕೊಳ್ಳುವುದು ಸಾಧ್ಯವಾಯಿತು.

 

ಕನಸುಗಳು ನನಗೆ ಸಂದೇಶಗಳನ್ನು ಪಡೆಯುವ ಒಂದು ಮುಖ್ಯ ಮೂಲವಾಯಿತು. ಪರಿಸ್ಥಿತಿಯನ್ನು ಅರಿತುಕೊಳ್ಳುವ ಮೂಲಕ ನಾನು ನಿಯಮಿತವಾಗಿ ಸಂದೇಶಗಳನ್ನು ಸ್ವೀಕರಿಸಬಲ್ಲವನಾದೆ ಮತ್ತು ಮುಂದಿನ ಕಾರ್ಯಗಳನ್ನು ಆಯ್ಕೆ ಮಾಡುವಾಗ ನನಗೆ ಬಂದ ಸಂದೇಶಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದೆ.

 

"ಪಿರಮಿಡ್ ಕುಟುಂಬದ ಒಬ್ಬ ಸದಸ್ಯ ಎಂದು ಹೇಳಿಕೊಳ್ಳುವುದು ಒಂದು ಹೆಮ್ಮೆ"

 

ನಮ್ಮದು ದೊಡ್ಡ ಕುಟುಂಬ, ನಾವು ಒಡಹುಟ್ಟಿದವರು ಆರು ಜನ... ಎಲ್ಲರೂ ಪಿರಮಿಡ್ ಮಾಸ್ಟರ್‌ಗಳೇ. ತಂದೆಯವರಾದ ಅಪ್ಪಾಜಿಯವರಿಂದ ಹಿಡಿದು ಅವರ ಮೊಮ್ಮಕ್ಕಳವರೆವಿಗೂ ಎಲ್ಲರೂ ಸಹ ಗಂಭೀರವಾದ, ಹಿರಿಯ ಧ್ಯಾನಿಗಳೇ. ಪ್ರತಿಯೊಬ್ಬರೂ ಬಹಳವಾಗಿ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಯ ಆಂದೋಲನದಲ್ಲಿ ತಾವು ಸೇವೆ ಸಲ್ಲಿಸುವ ಮೂಲಕ ಹರ್ಷೋಲ್ಲಾಸಗಳಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

 

ತಾನು ಒಬ್ಬ ಹಿರಿಯ ಪಿರಮಿಡ್ ಮಾಸ್ಟರ್ ಆಗಿ, ನನ್ನ ಹೆಂಡತಿ ವಾಣಿ, ನನ್ನ ಪ್ರತಿಯೊಂದೂ ಹೆಜ್ಜೆಯಲ್ಲಿ, ನನಗೆ ಮತ್ತು ನನ್ನ ಎಲ್ಲಾ ಕೆಲಸಗಳಿಗೆ ಬೆಂಬಲವಾಗಿ ನಿಂತಿದ್ದಾಳೆ. ನನ್ನ ಮಕ್ಕಳು ಅಲೇಖ್ಯಾ ಮತ್ತು ಸನತ್ ಇಬ್ಬರೂ ಸ್ಪಷ್ಟವಾಗಿ ನಮ್ಮ ಆಧ್ಯಾತ್ಮಿಕ ಆಯ್ಕೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ನಮ್ಮೊಂದಿಗೆ ಸಮಯವನ್ನು ಅತ್ಯುತ್ತಮವಾಗಿ ಕಳೆಯುತ್ತಿದ್ದಾರೆ. ಅಲ್ಲದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವಗಳ ಜೊತೆಗೆ ಚೆನ್ನಾಗಿ ಬೆಳೆಯುತ್ತಿದ್ದಾರೆ.

 

"ಪಿರಮಿಡ್ ವ್ಯಾಲಿ"

 

2003 ರಲ್ಲಿ, ಪಿರಮಿಡ್ ಆಧ್ಯಾತ್ಮಿಕ ಟ್ರಸ್ಟ್‌ನಲ್ಲಿ ಸ್ಥಾಪಕ ಸದಸ್ಯನಾಗಿ ಭಾಗವಹಿಸುವ ಒಂದು ಅವಕಾಶವು ನನಗೆ ಸಿಕ್ಕಿತು. ಹಿರಿಯ ಮಾಸ್ಟರ್‌ಗಳೊಂದಿಗೆ ಸಹವರ್ತಿಸುವ ಸದವಕಾಶವನ್ನು ಒದಗಿಸುವ ಈ ಹೊಣೆಗಾರಿಕೆಯನ್ನು ನಾನು ತಕ್ಷಣವೇ ಒಪ್ಪಿಕೊಂಡೆನು. ಅಲ್ಲದೆ, P.S.S ಆಂದೋಲನದೆಡೆಗೆ ನನಗಿದ್ದ ಬಾಂಧವ್ಯವನ್ನು ಇದು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಭಾವಿಸಿದೆ.

 

ಪಿರಮಿಡ್ ಮಾಸ್ಟರ್ ಹಾಗೂ ಹಲವಾರು ದಾನಿಗಳು ಬೆಂಬಲ ಪಡೆದು, ಪತ್ರೀಜಿಯವರು ನೇತೃತ್ವದಲ್ಲಿ ಟ್ರಸ್ಟ್ ಬೃಹತ್ ಪಿರಮಿಡ್ ವ್ಯಾಲಿಯ ಅಭಿವೃದ್ಧಿ ಕಾರ್ಯವನ್ನು ಟ್ರಸ್ಟ್ ಕೈಗೆತ್ತಿಕೊಂಡಿತು. ಬೃಹತ್ ಪಿರಮಿಡ್ ಸೇರಿದಂತೆ, ಸಭಾಭವನ, ಬಯಲು ರಂಗಮಂದಿರ, ಪುಸ್ತಕ ಮಳಿಗೆ, ಕಲಾಗ್ಯಾಲರಿ, ನೀರಿನ ಝರಿ, ವಸತಿ, ಊಟ ಮತ್ತು ಉಪಾಹಾರ ಮಂದಿರದ ಸೌಲಭ್ಯಗಳು - ಇಂತಹ ಹಲವಾರು ಸೌಕರ್ಯಗಳನ್ನು ಪಿರಮಿಡ್ ವ್ಯಾಲಿಯಲ್ಲಿ ನಿರ್ಮಿಸಲಾಯಿತು. ಈ ಪಟ್ಟಿಗೆ ಇತ್ತೀಚಿನ ಹೊಸ ಸೇರ್ಪಡೆ ಎಂದರೆ ಸುಂದರವಾದ ಪಗೋಡಾ ಕಾಟೇಜ್‌ಗಳು ಮತ್ತು ಧ್ಯಾನ ನಿರತ ಮಹಾತ್ಮಾ ಗಾಂಧಿ ಪ್ರತಿಮೆ.

 

"ಟ್ರಸ್ಟ್‌ನ ತಂಡಕ್ಕೆ ಧನ್ಯವಾದಗಳು"

 

ಹೆಚ್ಚು ಬದ್ಧತೆಯನ್ನು ಉಳ್ಳ ಸದಸ್ಯರಿರುವ "ಟ್ರಸ್ಟ್ ಮಂಡಳಿ"ಯನ್ನು ನಾವು ಹೊಂದಿದ್ದೇವೆ. ಪ್ರಗತಿ ಪರಿಶೀಲನೆಗೆ, ಯೋಜನೆಗಳನ್ನು ರೂಪಿಸಲು ಮತ್ತು ಅವಲೋಕಿಸಲು, ಪ್ರತಿ 8 ವಾರಗಳಿಗೆ ಒಮ್ಮೆ ನಾವು ಸಭೆ ಸೇರುತ್ತೇವೆ. ಪಿರಮಿಡ್ ವ್ಯಾಲಿಯನ್ನು ಸ್ಥಾಪಿಸಿ, ಇದುವರೆವಿಗೂ ಮುನ್ನಡೆಸಿಕೊಂಡು ಬಂದಿರುವುದು ಇಡೀ ಟ್ರಸ್ಟ್ ತಂಡದ ಸಾಮೂಹಿಕ ಪ್ರಯತ್ನವಾಗಿದೆ.

 

ನಮ್ಮ ಉಪಾಧ್ಯಕ್ಷರಾದ ಶ್ರೀ ಶ್ರೇಯಾನ್ಸ್ ಡಾಗಾರವರು P.S.S. ಆಂದೋಲನದಲ್ಲಿ ಗಟ್ಟಿಯಾಗಿ ನಿಂತಿರುವ ಒಂದು ಆಧಾರಸ್ಥಂಭವಾಗಿದ್ದಾರೆ. ಅವರು, ಉತ್ತಮತೆಯನ್ನು ರೂಪಿಸಲು ಸದಾ ಕನಸು ಕಾಣುವ ಮತ್ತು ಯಾವಾಗಲೂ ಶ್ರೇಷ್ಠವಾದ ಹೊಸ ಪರಿಕಲ್ಪನೆಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಪಿರಮಿಡ್ ವ್ಯಾಲಿ ಯೋಜನೆಗೆ ಅವರು ನೀಡಿರುವ ಆರ್ಥಿಕ ಬೆಂಬಲವನ್ನು ಯಾವ ರೀತಿಯಲ್ಲಿಯೂ ಸಹ ಅಳೆಯಲಾಗದು. ಉಬ್ಬುಶಿಲ್ಪದ ಭಿತ್ತಿಚಿತ್ರಗಳು, ಪ್ರತಿಮೆಗಳು, ಪಗೋಡ ಪರಿಕಲ್ಪನೆ, ಪರಿಸರ ಸ್ನೇಹಿ ಪರಿಕಲ್ಪನೆಗಳು ಇತ್ಯಾದಿ ಸೇರಿದಂತೆ ಪಿರಮಿಡ್ ವ್ಯಾಲಿಯಲ್ಲಿ ನಿರ್ಮಾಣಗೊಂಡಿರುವ ಎಲ್ಲಾ ಸೌಲಭ್ಯಗಳ ಶ್ರೇಯಸ್ಸು ಅವರಿಗೇ ಸಲ್ಲುತ್ತದೆ.

 

ಸಂಸ್ಥಾಪನಾ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಶ್ರೀ ಪಾಲ್ ವಿಜಯ್ ಕುಮಾರ್, ಪಿರಮಿಡ್ ವ್ಯಾಲಿಯ ಪ್ರದೇಶಾಭಿವೃದ್ಧಿ ಮತ್ತು 2003-2005 ಅವಧಿಯಲ್ಲಿ ಪಿರಮಿಡ್ ರಚನೆಯನ್ನು ಸ್ಥಾಪಿಸುವಲ್ಲಿ ಶ್ರಮವಹಿಸಿ ದುಡಿದಿದ್ದಾರೆ. 2006-2008 ಅವಧಿಯಲ್ಲಿ ವ್ಯವಸ್ಥಾಪಕ ಟ್ರಸ್ಟಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು ಶ್ರೀ I.V.ರೆಡ್ಡಿಯವರು. ಅವರ ಕಾಲದಲ್ಲಿ ಪಿರಮಿಡ್ ವ್ಯಾಲಿಯ ಭೂದೃಶ್ಯ ಸುಧಾರಣೆ ಕಂಡಿತು. ನೀರಿನ ಝರಿ ರೂಪುಗೊಂಡಿತು. ಅಲ್ಲದೆ, ಅವರ ನೇತೃತ್ವದಲ್ಲಿ ಬೃಹತ್ ಪಿರಮಿಡ್‌ನಲ್ಲಿ ಹಲವಾರು ಸೌಕರ್ಯಗಳು, ಸೌಲಭ್ಯಗಳು ನಿರ್ಮಾಣಗೊಂಡವು.

 

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು, ಪ್ರಸ್ತುತ, ವ್ಯಾಲಿಯ ಉಸ್ತುವಾರಿಯನ್ನು ನಿಭಾಯಿಸುತ್ತಿರುವ, ನಿವಾಸಿ ಟ್ರಸ್ಟಿಯಾಗಿರುವ ಶ್ರೀ P.S.R.K ಪ್ರಸಾದ್ ವ್ಯಾಲಿಯಲ್ಲಿನ ಎಲ್ಲಾ ಸೌಕರ್ಯಗಳ ನಿರ್ಮಾಣ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಾರೆ. ಪ್ರಸ್ತುತ ಪಿರಮಿಡ್ ವ್ಯಾಲಿಯ ಕಾರ್ಯಕ್ರಮಗಳು ಮತ್ತು ಕಾರ್ಯಾಚರಣೆಗಳನ್ನು ನಿರ್ವಹಿಸುವ ಇವರು ಪಿರಮಿಡ್‌ಗೆ ಮೊದಲ ಇಟ್ಟಿಗೆಯನ್ನು ಹಾಕಿದಾಗಿನಿಂದಲೂ ಸಹ ಇಲ್ಲಿಯೇ ಇದ್ದಾರೆ. ವ್ಯಾಲಿಯಲ್ಲಿನ ಯೋಜನೆಗಳಿಗೆ ಇವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಲು ನಿಜಕ್ಕೂ ಸಹ ಪದಗಳೇ ಇಲ್ಲ.

 

ಟ್ರಸ್ಟಿ ಹಾಗೂ ಖಜಾಂಚಿಯಾಗಿರುವ ಶ್ರೀ ಮುರಳಿ ಮೋಹನ್ ರಾಜುರವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿನ ನಿರ್ಮಾಣ ಚಟುವಟಿಕೆಗಳು ಮತ್ತು ವ್ಯಾಲಿ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಪ್ರಧಾನ ಆಧಾರಸ್ಥಂಭವಾಗಿ ನಿಂತಿದ್ದಾರೆ. ವಾಸ್ತುಶಿಲ್ಪಿ ಶ್ರೀಮತಿ ಭಾರತಿ ಪ್ರೇಮ್ ನೇತೃತ್ವದ ತಾಂತ್ರಿಕ ತಂಡವು ಕ್ಯಾಂಪಸ್‌ನಲ್ಲಿ ಸುಂದರ ಮತ್ತು ಪರಿಸರ ಸ್ನೇಹಿ ಸೌಲಭ್ಯಗಳನ್ನು ಪ್ರಮುಖವಾಗಿ ಸೃಷ್ಟಿಸುವಲ್ಲಿ ಮಹೋನ್ನತವಾದ ಕೆಲಸವನ್ನು ನಿರ್ವಹಿಸಿದೆ. ನಿರ್ಮಾಣದ ಬಗ್ಗೆ ಹೇಳುವಾಗ, ಟ್ರಸ್ಟಿಗಳಾದ ಶ್ರೀ ಗಾರಪಾಟಿ ಸತ್ಯನಾರಾಯಣರವರನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿದೆ. ವ್ಯಾಲಿಯಲ್ಲಿ ಅನೇಕ ಸೌಲಭ್ಯಗಳನ್ನು ನಿರ್ಮಿಸಲು ಅಗತ್ಯವಿರುವ ದೇಣಿಗೆಗಳನ್ನು ಸಂಗ್ರಹಿಸುವಲ್ಲಿ ಅವರು ಏಕವ್ಯಕ್ತಿಯಾಗಿ ಶ್ರಮವಹಿಸಿ ದುಡಿದಿದ್ದಾರೆ.

 

ಪ್ರಸ್ತುತ, ಇತರ ಎಲ್ಲಾ ಟ್ರಸ್ಟಿಗಳಾದ ಶ್ರೀ ಶಿವರಾಮಪ್ಪನವರು, ಶ್ರೀ ಶೈಲೇಂದ್ರ ಜೈನ್‌ರವರು, ಶ್ರೀಮತಿ ಅಂಜು ಸರಾಫ್‌ರವರು ಮತ್ತು ಶ್ರೀ ಭೀಮೇಶ್ ರೆಡ್ಡಿಯವರು ವ್ಯಾಲಿಯ ಅಭಿವೃದ್ಧಿ ಕಾರ್ಯಕ್ಕೆ ತಮ್ಮ ನಿರಂತರ ಬೆಂಬಲವನ್ನು ನೀಡಿ, ನಿರಂತರ ಶ್ರಮಿಸುತ್ತಿದ್ದಾರೆ. ಹಿಂದಿನ ಟ್ರಸ್ಟಿಗಳಾದ ಶ್ರೀ ಸುರೇಶ್ ಬಾಬು, ಶ್ರೀ ರಾಘವರಾವ್, ಶ್ರೀಮತಿ ಇಂದಿರಾ ಬಾಬು ಮೋಹನ್ ಮತ್ತು ಶ್ರೀ ಅನಂತರಾವ್ ಇವರುಗಳು ಆರಂಭದ ದಿನಗಳಲ್ಲಿ ಸಲ್ಲಿಸಿದ ಸೇವೆಯು ಅಮೂಲ್ಯವಾದುದು.

 

ಪಿರಮಿಡ್ ವ್ಯಾಲಿಯು, ಪ್ರಸ್ತುತ, ಪ್ರತಿ ತಿಂಗಳು ಹತ್ತು ಉಚಿತ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಉಚಿತ ಅನ್ನದಾನ ಸೇವಾ ಕಾರ್ಯಕ್ರಮವು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿದೆ. ವ್ಯಾಲಿಯ ಕಾರ್ಯಚಟುವಟಿಕೆಗಳ ಸುಗಮ ನಿರ್ವಹಣೆಯಲ್ಲಿ ಮತ್ತು ವ್ಯಾಲಿಯ ವೆಬ್‌ಸೈಟ್ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಶ್ರೀ ಸಾಯಿ ಸಾಗರ್ ಮತ್ತು ಕಾರ್ಯದರ್ಶಿ ಲಲಿತಾ ಸುಬ್ರಹ್ಮಣ್ಯಂರವರ ನೇತೃತ್ವದ ನಮ್ಮ ಸಾಹಿತ್ಯ ಮತ್ತು ಸಾರ್ವಜನಿಕ ಸಂಪರ್ಕ ತಂಡದ ಕಾರ್ಯವು ಸ್ತುತ್ಯರ್ಹವಾಗಿದೆ.

 

ಮತ್ತು, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್‌ನ ಟ್ರಸ್ಟಿಗಳು ಮತ್ತು ಹಿರಿಯ ಹಿರಿಯ ಪಿರಮಿಡ್ ಮಾಸ್ಟರ್‌ಗಳು, ವರ್ಷವಿಡೀ, ವ್ಯಾಲಿಯಲ್ಲಿ ಸಂಘಟಿಸುವ ಕಾರ್ಯಕ್ರಮಗಳು ಮತ್ತು ನೀಡುತ್ತಿರುವ ಬೆಂಬಲ ಬಹಳವಾಗಿ ಮೆಚ್ಚುವಂತಿವೆ. ಶ್ರೀ B.ನಾರಾಯಣ್, ಶ್ರೀ ಭೀಮೇಶ್ ರೆಡ್ಡಿ, ಶ್ರೀ ಪ್ರೇಮ್ ಕುಮಾರ್, ಡಾ ಶೋಭಾ, ಶ್ರೀ ಪ್ರೇಮನಾಥ್, ಶ್ರೀ ಬಾಲಕೃಷ್ಣ, ಶೀ ವೀರರಾಘವರಾವ್, ಶ್ರೀ ದೀಪಕ್, ಶ್ರೀ ನಾಗರಾಜ್, ಸುಧಾಕರ ರೆಡ್ಡಿ, ಡಾ. ಸತ್ಯನಾರಾಯಣ, ಶ್ರೀಮತಿ ಪುಷ್ಪಾ ಮೋಹನ್, ಶ್ರೀಮತಿ ಗಿರಿಜಾ ರಾಜನ್, ಶ್ರೀ ಚಂದು, ಶ್ರೀ ರಂಗಸ್ವಾಮಿ, ಶ್ರೀ ಅಯ್ಯಪ್ಪ ಮತ್ತು ಇತರ ಹಲವಾರು ಮಾಸ್ಟರ್‌ಗಳು ಸೇರಿದಂತೆ ಎಲ್ಲರಿಗೂ ವಿಶೇಷವಾದ ಧನ್ಯವಾದಗಳು.

 

ಉದ್ದೇಶಿತ ಹೊಸ ಟ್ರಸ್ಟಿಗಳಾಗಿ ಶ್ರೀ S.K.ರಾಜನ್‌ರವರು ನಮ್ಮೊಂದಿಗೆ ಸೇರಿಕೊಳ್ಳುತ್ತಿರುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ. ದಾವಣಗೆರೆ ಪಿರಮಿಡ್ ಸೊಸೈಟಿಯ ಸಂಸ್ಥಾಪಕ ಮಾಸ್ಟರ್‌ಗಳಾದ ಶ್ರೀ ಸೋಮಶೇಖರ ಗೌಡರು ಮತ್ತು ಅನಿಮಿಷರವರು ವ್ಯಾಲಿಯ ನಿತ್ಯ ಅನ್ನದಾನ ಸೇವಾ ಯೋಜನೆಯ ನೇತೃತ್ವವನ್ನು ವಹಿಸಿಕೊಂಡು ಮುನ್ನಡೆಸುತ್ತಿರುವುದು ಅತ್ಯಂತ ಹರ್ಷವನ್ನು ನೀಡುವ ಹಾಗೂ ಇಲ್ಲಿ ವಿಶೇಷವಾಗಿ ದಾಖಲಾರ್ಹವಾದ ಸಂಗತಿಯಾಗಿದೆ.

 

ಇಡೀ ಟ್ರಸ್ಟ್ ತಂಡದ ಪರವಾಗಿ, ಎಲ್ಲಾ ಪೋಷಕರು, ಪ್ರಾಯೋಜಕರು ಮತ್ತು ಒಟ್ಟಾರೆ ಸಂಸ್ಥಾಪನೆಗೆ ಸಾಕಷ್ಟು ಕೊಡುಗೆಯನ್ನು ಉದಾರವಾಗಿ ನೀಡಿ, ಈ ಪಿರಮಿಡ್ ವ್ಯಾಲಿಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಎಲ್ಲಾ ದಾನಿಗಳಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು.

 

"ಪತ್ರಿ ಸರ್ ... ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ವಿಜ್ಞಾನಿ ಮತ್ತು ಆಧ್ಯಾತ್ಮಿಕ ಇಂಜಿನಿಯರ್"

 

P.S.S.M.ನ ಸಿದ್ಧಾಂತಗಳಲ್ಲಿ ನನಗೆ ಅತ್ಯುತ್ತಮ ಎನಿಸಿದ ಅಂಶವೇನೆಂದರೆ, "ಯಾರೂ ಶಿಷ್ಯರಲ್ಲ, ನೀವೂ ಮಾಸ್ಟರ್ ಆಗಿರಿ" ಎಂಬ ಪರಿಕಲ್ಪನೆ. ಇಲ್ಲಿ ಪ್ರತಿಯೊಬ್ಬರೂ ಸಹ ಮಾಸ್ಟರ್ ಹೌದು, ಮತ್ತು ಪ್ರತಿಯೊಬ್ಬರನ್ನೂ ಸಹ ಸಮಾನರನ್ನಾಗಿ ಭಾವಿಸಲಾಗುತ್ತದೆ. "ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಅವಲಂಬಿಸಬೇಕು" ಎನ್ನುವ ತತ್ವವು ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಸ್ವತಃ ಆತ್ಮವಿಶ್ವಾಸದಿಂದ ಇರಲು ಮತ್ತು ಭಯರಹಿತನಾಗಿ ಇರಲು ಕಾರಣವಾಗಿದೆ.

 

ಶ್ರೇಷ್ಠ ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಪತ್ರೀಜಿ ನೀಡಿದ್ದಾರೆ ಮತ್ತು ಅನೇಕ ಮಾಸ್ಟರ್‌ಗಳ ಬೋಧನೆಯೊಳಗಿನ ಅರ್ಥವನ್ನು ತೆರೆದು ತೋರಿಸಿದ್ದಾರೆ. ಇವರು "ನುಡಿಯುವಲ್ಲಿ" ಮತ್ತು "ನಡೆಯುವಲ್ಲಿ" ಶ್ರೇಷ್ಠತೆಯನ್ನು ಮೆರೆದಿರುವ ಜೀವಂತ ಉದಾಹರಣೆಯಾಗಿದ್ದಾರೆ. ಅವರು, ಹೊಸ ಯುಗದ ಸಮಾಜದಲ್ಲಿನ ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಪರಿಹಾರಗಳನ್ನು ಒದಗಿಸಿರುವ ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ಇಂಜಿನಿಯರ್ ಆಗಿದ್ದಾರೆ.

 

ಪತ್ರಿ ಸರ್ ಒಡನೆ ನಡೆದಿರುವ ನನ್ನ ಪ್ರತಿಯೊಂದೂ ಭೇಟಿ, ಮಾತುಕತೆಯು, ನನಗೆ ಸ್ಪಷ್ಟವಾದ, ನಿರಂತರವಾದ ಶಿಕ್ಷಣವನ್ನು ಮತ್ತು ಹೊಸ ಹೊಸ ಅನುಭವವನ್ನು ಒದಗಿಸಿದೆ. "ಅದು ನಮ್ಮ ಜೀವನದ ಕೊನೆ ದಿನವೇನೋ ಎಂಬಂತೆ ಪ್ರತಿನಿತ್ಯವೂ ಸಹ ನಾವು ಜೀವಿಸಬೇಕು" ಎಂದು ಅವರು ಹೇಳುತ್ತಾರೆ. ನಮ್ಮ ಆದ್ಯತೆಗಳನ್ನು ನಿರ್ಧರಿಸಿಕೊಳ್ಳುವಲ್ಲಿ ಇದು ಸಂಪೂರ್ಣವಾದ ಸ್ಪಷ್ಟತೆಯನ್ನು ನೀಡುತ್ತದೆ. "ನಿಮ್ಮ ಜೊತೆಗಾರರಲ್ಲಿ ದೊಡ್ಡಸ್ತಿಕೆಯ ಬದಲಾಗಿ ಸಮಾನತೆಯನ್ನು ಹುಡುಕಿ..." ಎಂದು ಅವರು ಒಂದು ಸಂದರ್ಭದಲ್ಲಿ ಹೇಳಿದರು. ತಂಡದ ಕೆಲಸ ಸಾಧಿಸಲು, ಇದರ ಹೊರತಾಗಿ, ಯಾವುದೇ ಉತ್ತಮ ಮಾರ್ಗಗಳು ಇರಲು ಸಾಧ್ಯವಿಲ್ಲ.

 

ಪ್ರತಿಯೊಬ್ಬರಿಗೂ ಮತ್ತು ಎಲ್ಲರಿಗೂ ನನ್ನ ಸಂದೇಶವೇನೆಂದರೆ...: "ನಿಮಗೆ ಏನು ತಿಳಿದಿದೆಯೋ ಅಥವಾ ನಿಮ್ಮಲ್ಲಿ ಏನಿದೆಯೋ ಅದರೊಂದಿಗೆ ಸೇವೆ ಸಲ್ಲಿಸಲು ಬದ್ಧರಾಗಿ. ಕಲಿಯಲು ಇದೇ ಉತ್ತಮವಾದ ಮಾರ್ಗ ಮತ್ತು ಸ್ವಂತ ಪ್ರಗತಿಗೆ ಇದೇ ಅತ್ಯಂತ ವೇಗವಾದ ಮಾರ್ಗ ".

 

 

ಚಂದ್ರಶೇಖರ್ .P
ವ್ಯವಸ್ಥಾಪಕ ಟ್ರಸ್ಟಿ, ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್
ಬೆಂಗಳೂರು
ಮೊಬೈಲ್ : +91 8147093633

Go to top