" ಧ್ಯಾನ ಪ್ರಚಾರವೇ ನನ್ನ ಮುಖ್ಯ ಗುರಿ "

 

ನಾನು, ಧ್ಯಾನಾರ್ಥಿಯಾಗಿ ಸೇರುವುದಕ್ಕಿಂತ ಮುಂಚೆ, ಅಂದರೆ, ಸುಮಾರು ಎರಡುವರ್ಷಗಳ ಹಿಂದೆ ನನ್ನ ಎರಡೂ ಭುಜಗಳ ನೋವಿನಿಂದ ಬಳಲುತ್ತಿದ್ದೆ. ನಾನು ಆ ನೋವನ್ನು ತಾಳಲಾರದೆ ಆಪರೇಷನ್ ಮಾಡಿಸಿಕೊಳ್ಳುವುದೇ ಮದ್ದು ಎಂದು ಮಣಿಪಾಲ ಆಸ್ಪತ್ರೆ ಡಾಕ್ಟರ್‌ಗಳು ಪರೀಕ್ಷೆ ಮಾಡಿ ತಿಳಿಸಿದ್ದರಿಂದ, ಒಂದು ವರ್ಷದ ಹಿಂದೆ ಮಣಿಪಾಲ ಆಸ್ಪತ್ರೆಗೆ ಹೋಗಿ ಸೇರಿದೆ. ಅಲ್ಲಿ ಒಂದು ದಿನ ಎಲ್ಲಾ ಪರೀಕ್ಷೆಗಳನ್ನು ಮಾಡಿ ಮಾರನೇದಿನ ಆಪರೇಷನ್ ಮಾಡುವುದಾಗಿ ಡಾಕ್ಟರ್‌ಗಳು ತಿಳಿಸಿ ವ್ಯವಸ್ಥೆ ಮಾಡಿದರು. ನಾನು ಉಳಿದುಕೊಂಡಿದ ಹೋಟೆಲ್‌ನಲ್ಲಿ ಹಿಂದಿನ ಸಾಯಾಂಕಾಲ ಸುಮಾರು ಎರಡು ಗಂಟೆ ಧ್ಯಾನ ಮಾಡಿದ ನಂತರ ರಾತ್ರಿ ಮಲಗಿದೆ. ಬೆಳಿಗ್ಗೆ ಇನ್ನೇನು ಆಸ್ಪತ್ರೆಗೆ ಹೋಗಿ ವಾರ್ಡ್‌ಗೆ ಸೇರಬೇಕೆಂದುಕೊಂಡು ಹೊರಡುವ ಮುನ್ನ ನನ್ನ ಭುಜಗಳ ನೋವು ಅರ್ಧಕ್ಕರ್ಧ ಕಡಿಮೆ ಆದ ಅನುಭವವಾಗಿ ತಕ್ಷಣವೇ ಆಸ್ಪತ್ರೆಗೆ ಹೋಗಿ ಡಾಕ್ಟರ್‌ನ್ನು ಕಂಡು ನನ್ನ ಜೊತೆಗಿರಲು ಇನ್ನೊಬ್ಬರನ್ನು ಕರೆದುಕೊಂಡು ಒಂದು ವಾರ ಬಿಟ್ಟು ಆಪರೇಷನ್‌ಗೆ ಬರುತ್ತೇನೆಂದು ಹೇಳಿ ದಾವಣಗೆರೆಗೆ ವಾಪಾಸ್ ಬಂದೆನು.

 

ನಂತರ, ನನ್ನ ಮನಸ್ಸನ್ನು ಗಟ್ಟಿಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 5:30 ರಿಂದ 6:30 ರವರೆಗೆ ದಾವಣಗೆರೆ ಅನುಭವ ಮಂಟಪದಲ್ಲಿ ನಮ್ಮ ಸ್ನೇಹಿತರ ಜೊತೆ ಸೇರಿ ಧ್ಯಾನ ಮಾಡಲು ಶುರುಮಾಡಿದೆ. ಇದಾದ 2 ತಿಂಗಳ ನಂತರ ನನ್ನ ಭುಜಗಳ ನೋವು ಪೂರ್ತಿ ನಿಂತಿತ್ತು. ಒಂದು ದಿವ್ಯಶಕ್ತಿ ಮನಸ್ಸಿನಲ್ಲಿ ಗೋಚರವಾಗಿ "ಧ್ಯಾನದಿಂದ ಇಂತಹ ಫಲ ಪ್ರಾಪ್ತಿಯಾಗುತ್ತದೆ. ಆದ್ದರಿಂದ, ಧ್ಯಾನವನ್ನು ಮುಂದುವರೆಸು" ಎಂದು ಅಂತರ್‌ವಾಣಿ ನುಡಿದಂತೆ ಅನುಭವವಾಗಿ ಈಗ ಪ್ರತಿದಿನ ತಪ್ಪದೇ ಧ್ಯಾನ ಮಾಡುತ್ತಿದ್ದೇನೆ.

 

ಧ್ಯಾನದಿಂದ ಆರೋಗ್ಯ, ಮನಃಶ್ಶಾಂತಿ, ಸಮಾಧಾನ, ಲವಲವಿಕೆಯಿಂದ ಕೂಡಿದ ಜೀವನ, ಒಳ್ಳೆಯ ನಡತೆಯಿಂದ ಯಾವಾಗಲೂ ಆನಂದದಿಂದ ಇರುವ ಗುಣಗಳು ಬೆಳೆದು ನಿಜವಾದ ಮಾನವನಾಗಲು ಸಹಕಾರಿಯಾಗಿದೆ.

 

ಇದಲ್ಲದೆ ಧ್ಯಾನದಿಂದ ಜ್ಞಾನ, ಮನಶುದ್ಧಿ ಆಹಾರದಲ್ಲಿ ಹಿತ-ಮಿತ ಕಾಪಾಡಿಕೊಳ್ಳುವ ಬುದ್ಧಿಶಕ್ತಿ, ಒಳ್ಳೆಯ ಸ್ನೇಹಿತರ ಸಾಂಗತ್ಯ ತನ್ನಿಂದ ತಾನೇ ಬರುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದೆಂದು ನನ್ನ ನಂಬಿಕೆ.

 

ಧ್ಯಾನದ ಬಗ್ಗೆ ನನ್ನ ಸ್ನೇಹಿತರು, ಬಂಧು-ಬಾಂಧವರನ್ನು ಭೇಟಿಯಾದಾಗ ಅವರಿಗೆ ತಪ್ಪದೇ ಧ್ಯಾನದ ಬಗ್ಗೆ ಹೇಳುವುದಲ್ಲದೆ, ಒತ್ತಿಹೇಳುವ ಅಭ್ಯಾಸ ಮಾಡಿಕೊಂಡಿದ್ದೇನೆ ಹಾಗೂ ಧ್ಯಾನ ಪ್ರಚಾರವೇ ನನ್ನ ಮುಖ್ಯ ಗುರಿ.

 

 

G. R. ನಾಗರಾಜಪ್ಪ
ದಾವಣಗೆರೆ

Go to top