" ಧ್ಯಾನದ ಮಹತ್ವ "

 

 

ನನ್ನ ಹೆಸರು ಗಂಗಾಮನ್ಮಥ. ಪಿರಮಿಡ್ ಧ್ಯಾನ ಪ್ರಚಾರದ ಕೇಂದ್ರಬಿಂದುವಾಗಿರುವ ಬ್ರಹ್ಮರ್ಷಿ ಪತ್ರೀಜಿ ಗುರುಗಳಿಗೆ ನಮಸ್ಕರಿಸುತ್ತಾ ಧ್ಯಾನದ ಬಗ್ಗೆ ನನಗೆ ಅನಿಸಿದ ಅನುಭವಗಳನ್ನು ಈ ಬರವಣಿಗೆಯ ಮೂಲಕ ತಿಳಿಸಬಯಸುತ್ತೇನೆ. 

 

ಮೊದಲು ನನಗೆ ಇದ್ದ ವೀಕ್‌ನೆಸ್ ಏನೆಂದರೆ ಭಯ, ಕೋಪ, ಟೆನ್‌ಷನ್. ಇವು ನನ್ನನ್ನು ಕಾಡುತ್ತಿದ್ದ ಸಮಸ್ಯೆಗಳು. ಇವುಗಳಿಂದ ಹೊರಬರಲು,ಯೋಗ, ವಾಕಿಂಗ್, ಡಾಕ್ಟರುಗಳ ಭೇಟಿ. ಡಾಕ್ಟರುಗಳ ಸಲಹೆ ಇಂತಹ ಹಲವು ಪ್ರಯತ್ನಗಳನ್ನು ನಾನು ಮಾಡಿದೆ. ಆದರೆ, ಅದರ ಉಪಯೋಗ ಮಾತ್ರ ಏನು ಕಾಣಲಿಲ್ಲ. ನೀವು ಟೆನ್‌ಷನ್ ಕಡಿಮೆ ಮಾಡಿ, ಎಲ್ಲಾ ಸರಿ ಹೋಗುತ್ತೆ ಎನ್ನುತ್ತಿದ್ದರು ಡಾಕ್ಟರ್. ಆ ಟೆನ್‌ಷನ್ ಕಡಿಮೆ ಮಾಡಿಕೊಳ್ಳುವುದಕ್ಕೆ ನಿಮ್ಮ ಹತ್ತಿರ ಬರುವುದು, ಎಂದಾಗ ಮಾತ್ರೆಗಳನ್ನು ಕೊಡುತ್ತಿದ್ದರು. ಮಾತ್ರೆ ಮುಗಿಯುವವರೆಗೆ ಸರಿ ಎನಿಸುತಿತ್ತು. ನಂತರ, ಮತ್ತೆ ಅದೇ ರೀತಿ. ಈ ಟೆನ್‌ಷನ್ ಸಮಸ್ಯೆ ನನ್ನನ್ನು ವಿಪರೀತ ಕಾಡುತಿತ್ತು. ಇದ್ದಕ್ಕಿದ್ದ ಹಾಗೆ ಬರುವುದು. ಅದು ಅತಿಯಾದಾಗ ತಲೆನೋವು, ವಿಚಿತ್ರ ತಲೆನೋವು. ಆ ತಲೆನೋವು ನೆನಸಿಕೊಂಡರೆ ನನಗೆ ಭಯವಾಗುತ್ತಿತ್ತು. ನಾನು ಮಾಡುವ ಟೆನ್‌ಷನ್ ಉಪಯೋಗಕ್ಕೆ ಬಾರದಿರುವುದು ಎಂದು ಗೊತ್ತು. ಆದರೂ, ಅದನ್ನು ನಿಯಂತ್ರಣೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಬೇರೆಯವರಿಗೆಲ್ಲ ಹಾಗೆ ಇರಬೇಕು, ಹೀಗೆ ಇರಬೇಕು ಎಂದು ಹೇಳುತ್ತಿದ್ದೆ. ಆದರೆ, ನನ್ನನ್ನೆ ನಾನು ಕಂಟ್ರೋಲ್ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ನನ್ನ ಜೀವನವೇ ಇಷ್ಟು ಎಂದುಕೊಂಡಿದ್ದು ಎಷ್ಟೋ ಸಲ ಉಂಟು. ಯಾವ ತಪ್ಪಿಗೆ ಈ ನೋವು ಎಂದು ಯೋಚಿಸಿದ್ದು ಉಂಟು. 

 

ಜನವರಿ 1ನೇ ತಾರೀಖು ಹೊಸ ವರ್ಷದ ದಿನ ನಿಟ್ಟುವಳ್ಳಿಯ ದುರ್ಗಮಾತೆಯ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹಾಕಿರುವ ಬ್ಯಾನರ್ ನೋಡಿ ನಮ್ಮ ಮಾನೆಯವರು ಹೇಳಿದರು. ನಮ್ಮ ಮನೆಯ ಹತ್ತಿರವೇ ಧ್ಯಾನ ಶಿಬಿರವಿದೆ. ಹೋಗಿ ಬಾ, ಯೋಗಕ್ಕೆ ಕಡಿಮೆಯಾಗದ ಟೆನ್‌ಷನ್ ಧ್ಯಾನಕ್ಕೆ ಕಡಿಮೆಯಾಗುತ್ತಾ? ಎಂದೆನಿಸಿತು ನನ್ನ ಮನಸ್ಸಿನಲ್ಲಿ. ಆದರೂ ಬ್ಯಾನರನ್ನು ಓದಿದಾಗ ನನಗೆ ಆಕರ್ಷಣೆಯಾಗಿ ಮತ್ತು ಹೋಗಿ ನೋಡಲೇಬೇಕು ಎನಿಸಿದ್ದು ಅದರಲ್ಲಿರುವ ಒಂದು ಪದ ಅದೇ "ಪಿರಮಿಡ್ ಧ್ಯಾನ" 

 

ಪಿರಮಿಡ್ ಎನ್ನುವುದು ನನ್ನ ಮನಸ್ಸಿನಲ್ಲಿ ಏನೋ ಒಂದು ರೀತಿಯ ಕುತೂಹಲ ಮೂಡಿಸಿತು. ಅಂದೇ ತೀರ್ಮಾನ ಮಾಡಿದೆ, 3-1-2010 ರಂದು ಇರುವ ಉದ್ಘಾಟನೆಗೆ ಹೋಗಿ ಬರಬೇಕೆಂದು. ಹೋಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಪತ್ರೀಜಿ ಗುರುಗಳ ದರ್ಶನ ಹೊಂದಿದೆ. ಈ ಧ್ಯಾನದ ಬಗ್ಗೆ ತಿಳಿದು ಸಂತೋಷದ ಜೊತೆ ಆಶ್ಚರ್ಯವಾಯಿತು. ಕಾರಣ, ಯಾವಾಗಲಾದರೂ ಮಾಡಿ, ಎಲ್ಲಿಯಾದರೂ ಮಾಡಿ, ಆದರೆ ನಿಮ್ಮ ಉಸಿರಾಟದ ಜೊತೆ ಮಾಡಿ ಎಂದು ಹೇಳಿದ ಅವರ ಮಾತು ವಿಚಿತ್ರವೆನಿಸಿತು. ಸುಲಭದಿಂದ ನಮಗೆ ಒಳ್ಳೆಯದಾಗುತ್ತದೆ ಎಂದರೆ ನಮ್ಮ ಮನಸ್ಸು ಬೇಗ ಒಪ್ಪುವುದಿಲ್ಲ ಅಲ್ವೇ? 

 

ಮೊದಲ ದಿನ ಧ್ಯಾನ ಪ್ರಾರಂಭವಾಯಿತು, ಸುಮ್ಮನೆ ಕುಳಿತುಕೊಳ್ಳುವುದು ಎಂದರೆ ಕಷ್ಟದ ಕೆಲಸ, ಆದರೂ, ತಪ್ಪಿಸಲು ಮನಸ್ಸಿಲ್ಲ. ಸ್ವಲ್ಪ ದಿನ ನೋಡೋಣ, ಸರಿ ಎನಿಸದಿದ್ದರೆ ಬಿಟ್ಟರಾಯಿತು ಎಂದುಕೊಂಡು ನನ್ನ ಧ್ಯಾನ, ನನ್ನ ಉಸಿರಾಟದ ಜೊತೆ ಪ್ರಾರಂಭವಾಯಿತು. "ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ?" ಎಂಬಂತೆ ನನ್ನ ಮನಸ್ಸು ಕಣ್ಣು ಮುಚ್ಚಿದರೆ ಸಾಕು ಅದು ಎಲ್ಲಿರುತ್ತಿತ್ತೊ ಏನೋ ಅದನ್ನು ಕರೆದುಕೊಂಡು ಬರುವುದೇ ಕಷ್ಟವೆನಿಸಿತು. ಆಗ ನನಗೆ ಅರಿವಾಗಿದ್ದು ನನ್ನ ಮನಸ್ಸೆ ನನ್ನ ಮಾತು ಕೇಳುತ್ತಿಲ್ಲಾ ನಾನು ಹೇಳಿದ್ದು ಬೇರೆಯವರು ಕೇಳದಿದ್ದರೆ ನನಗೇಕೆ ಕೋಪ ಬರಬೇಕು? ಎನಿಸಿತು. ಸುಲಭ ಎಂದುಕೊಂಡಿದ್ದ ಈ ಧ್ಯಾನ ನನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ಆದರೂ, ಬಿಡದೆ ನನ್ನ ಧ್ಯಾನ ಮುಂದುವರೆಯಿತು. ಯಾರಾದರೂ ಏನಾದರೂ ಆರೋಗ್ಯದ ಬಗ್ಗೆ ಹೇಳಿದರೆ ಮೊದಲು ನಾನು ಕೊಡುತ್ತಿದ್ದ ಸಲಹೆ ಒಳ್ಳೆಯ ಡಾಕ್ಟರ್ ಹತ್ತಿರ ತೋರಿಸಿ ಎಂದು ಹೇಳುತ್ತಿದ್ದೆ. ಆದರೆ, ಈಗ ಅದರ ಬದಲು ನನ್ನ ಉತ್ತರ ‘ಧ್ಯಾನ ಮಾಡಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ’ ಎನ್ನುತ್ತೇನೆ.         

 

ನನಗೆ ಈ ಧ್ಯಾನದಿಂದ ಸಮಾಧಾನವಾಗಿದೆ. ಧ್ಯಾನ ಮುಗಿಸಿ ಕಣ್ಣು ತೆರೆದಾಗ ಏನೋ ಒಂದು ತರಹದ ನೆಮ್ಮದಿ, ಸಂತೋಷ ನನ್ನ ಮನಸ್ಸಿಗೆ. ನಮ್ಮ ಕೈಯಲ್ಲೆ ನಮ್ಮ ಆರೋಗ್ಯ ಇರುವಾಗ ನಾವ್ಯಾಕೆ ಈ ಧ್ಯಾನದಿಂದ ಉಪಯೋಗ ಪಡೆದುಕೊಂಡು ನಮ್ಮ ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬಾರದು ಅಲ್ಲವೆ?     

   

ಎಲ್ಲರೂ ಧ್ಯಾನ ಮಾಡೋಣ ಎಲ್ಲರೂ ಸುಖವಾಗಿರೋಣ. ಈ ಧ್ಯಾನದ ಬಗ್ಗೆ ಎಷ್ಟು ಬರೆದರೂ ಕಡಿಮೆ ಆದರೂ ಮುಗಿಸುತ್ತಿದ್ದೇನೆ.

 

 

P. ಗಂಗಾಮನ್ಮಥ
ದಾವಣಗೆರೆ

Go to top