" ಧ್ಯಾನಾವ ಮಾಡೋಣ - ಧ್ಯಾನಾವ ಹಂಚೋಣ "

 

 

ನನ್ನ ಹೆಸರು ಕವಿತ, ಗುಲ್ಬರ್ಗಾ ನಿವಾಸಿ, ಇರುವುದು ಆಂಧ್ರಪ್ರದೇಶದ ಜೈಹಿರಾಬಾದ್‌ನಲ್ಲಿ. ನನಗೆ 1999ರಲ್ಲಿ ಮದುವೆಯಾಯಿತು. ನನ್ನ ಪತಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.  ನನಗೆ 12 ವರ್ಷದ ಮಗ ಮತ್ತು 7 ವರ್ಷದ ಮಗಳು ಇದ್ದಾರೆ. ನಾನು ಎರಡು ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ನನ್ನ ಬಾಲ್ಯದ ಜೀವನದಲ್ಲಿಯೆ ಆಧ್ಯಾತ್ಮಿಕತೆಯಲ್ಲಿ ತೊಡಗಿದ್ದೆ. 

 

ನಾನು ಶಿವನ ಭಕ್ತೆ. ಶಿವನೇ ನನ್ನ ಆರಾಧ್ಯ ದೇವನು ಎಂದು ನಂಬಿದ್ದೇನೆ. ಒಮ್ಮೆ ನಮ್ಮ ಪರಿಚಯದವರು ಧ್ಯಾನದ ಬಗ್ಗೆ ಹೇಳಿದರು. ಆದರೆ ನಾನು ನಂಬಲಿಲ್ಲ. ಇದರ ವಿಷಯವಾಗಿ ನಮ್ಮಿಬ್ಬರಿಗೂ ಸಂಘರ್ಷವಾಯಿತು. ಅವರು ಪದೆ, ಪದೆ ಹೇಳುವುದರಿಂದ ಧ್ಯಾನದಲ್ಲಿ ಎಂತಹ ಶಕ್ತಿ ಇದೆ ಪರೀಕ್ಷಿಸಬೇಕೆಂದು ಕುತೂಹಲವಾಯಿತು. ಪ್ರತಿದಿನ ಒಂದು ಗಂಟೆ ಧ್ಯಾನ ಮಾಡಲು ಪ್ರಾರಂಭಿಸಿದೆ. ಮೂರು, ನಾಲ್ಕು ದಿನಗಳಲ್ಲಿ ಕುಳಿತಾಗ ಶಿವನು ಮತ್ತು ಪಾರ್ವತಿದೇವಿ ಪ್ರತ್ಯಕ್ಷವಾಗಿ ನನ್ನ ಮೇಲೆ ಹೂವಿನ ಸುರಿಮಳೆಯನ್ನು ಸುರಿಸಿದರು. ನನ್ನ ಜೊತೆಗೆ ಮಾತನಾಡಿದರು. ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು. ಆಗ ನನಗೆ ದಿವ್ಯಚೈತನ್ಯ ಧ್ಯಾನ ಸ್ಥಿತಿಯಲ್ಲಿದ್ದೆ ಎಂದು ತಿಳಿದು ನನಗೆ ತುಂಬಾ ಆಶ್ಚರ್ಯವೆನಿಸಿತು ಮತ್ತು ಆನಂದವಾಯಿತು. 

 

ನಾನು ಧ್ಯಾನ ಮಾಡುವುದನ್ನು ಆರಂಭಿಸಿದ ಕೇವಲ 3 ತಿಂಗಳಲ್ಲಿಯೇ ಮಹಾಶಿವರಾತ್ರಿಯಂದು ಕಡ್ತಾಲ್‌ನಲ್ಲಿ ಪತ್ರೀಜಿಯವರನ್ನು ಭೇಟಿಯಾಗುವ ಭಾಗ್ಯ ದೊರಕಿತು. ಪತ್ರೀಜಿ ಗುಂಪಿನಲ್ಲಿ ಕುಳಿತಿದ್ದರು. ನಾನು ಅಲ್ಲಿ ಭಯದಿಂದ ದೂರದಲ್ಲಿ ನಿಂತುಕೊಂಡಿದ್ದೆ. ಆದರೆ, ಅಷ್ಟೊಂದು ಜನರಲ್ಲಿ ಪತ್ರೀಜಿ ನನ್ನನ್ನು ಕರೆದು ಬಹಳ ಪ್ರೀತಿಯಿಂದ ತಂದೆಯಂತೆ ಅಪ್ಪಿಕೊಂಡರು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ನನಗೆ ನನ್ನ ತಂದೆಯನ್ನು ಅಪ್ಪಿಕೊಂಡಿದ್ದೇನೆಂದು ಅನಿಸಿತು. ಪತ್ರೀಜಿಯ ಬಗ್ಗೆ ನನಗೆ ಹೆಮ್ಮೆ, ಗೌರವ, ಒಳ್ಳೆಯ ಅಭಿಪ್ರಾಯ ಮೂಡಿದವು. ನಾನು ಯಾವ ಗುರುವನ್ನೂ ನಂಬಿರಲಿಲ್ಲ. ನನ್ನ ಮೊದಲ ಗುರು ಪತ್ರೀಜಿ, ನನ್ನ ಕೊನೆಯ ಗುರುವು ಕೂಡಾ ಪತ್ರೀಜಿ. 

 

ಪತ್ರೀಜಿ ಭೂಮಿಯ ಮೇಲೆ ಈ ವಿಶ್ವಕ್ಕಾಗಿ, ಲೋಕಕ್ಕಾಗಿ ಮತ್ತು ನಮಗಾಗಿ ಜನ್ಮತಾಳಿ ಬಂದಂತಹ ಜೀವಂತ ದೇವರು. ನನಗೆ ಪತ್ರೀಜಿಯವರು ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯದ ಫಲವೇನೋ,ಅಥವಾ ಶಿವನನ್ನು ಆರಾಧನೆ ಮಾಡಿದ ಫಲವೇನೋ! ಆಧ್ಯಾತ್ಮಿಕ ಜೀವನದಲ್ಲಿ ಶಿವ ನನ್ನ ದೇವರಾದರೆ, ಭೌತಿಕ ಜೀವನದಲ್ಲಿ ಪತ್ರೀಜಿಯೇ ನನ್ನ ದೇವರು. 

 

ನನ್ನ ಪತಿಗೆ ಧ್ಯಾನ ಅಂದರೆ ಇಷ್ಟ, ಆದರೆ ಸರಿಯಾಗಿ ಮಾಡುತ್ತಿರಲಿಲ್ಲ. ಆದಕಾರಣ ಅವರಿಗೆ ನಂಬಿಕೆ ಇರಲಿಲ್ಲ. ನನಗೆ ಬಹಳ ವರ್ಷಗಳಿಂದ ಹುತ್ತಕ್ಕೆ ಪೂಜೆ ಮಾಡುವ ಅಭ್ಯಾಸವಿತ್ತು. ಒಮ್ಮೆ ಹುತ್ತಕ್ಕೆ ಪೂಜೆ ಮಾಡಲು ನನ್ನ ಪತಿಯ ಜೊತೆ ಹೋದಾಗ ಒಂದು ಆಲೋಚನೆ ಬಂತು "ನಾಗದೇವತೆ ಒಮ್ಮೆ ನನಗೆ ದರ್ಶನಕೊಡು" ಎಂದು ಹೃದಯಪೂರ್ವಕವಾಗಿ ಬೇಡಿಕೊಂಡೆ. ಹಾವು ಬಂದು ಹೆಡೆಯೆತ್ತಿ ದರ್ಶನ ನೀಡಿತು. ಆಂಧ್ರಪ್ರದೇಶದ ವಿಜಯವಾಡದ ಸೀನಿಯರ್ ಮಾಸ್ಟರ್ ಕೃಷ್ಣಮೂರ್ತಿಯವರಿಗೆ ಫೋನ್ ಮೂಲಕ ಮಾತನಾಡಿ ಚರ್ಚೆ ಮಾಡಿದಾಗ ಅದು ಸಾಧ್ಯವೆಂದು ಹೇಳಿದರು. ನನಗೆ ನಂಬಿಕೆ ಇನ್ನೂ ಹೆಚ್ಚಾಯಿತು. ಧ್ಯಾನದಲ್ಲಿ ಬಹಳ ಮಹತ್ವಪೂರ್ಣವಾದ ಶಕ್ತಿ ಇದೆಯೆಂದು ತಿಳಿದುಕೊಂಡೆ. ನಂತರ ಒಂದು ದಿನಕ್ಕೆ 12, 15 ಗಂಟೆಗಳ ಕಾಲ ಧ್ಯಾನವನ್ನು ಮಾಡಲು ಆರಂಭಿಸಿದೆ. ಒಂದು ನಿಮಿಷವೂ ಕೂಡಾ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಅಕ್ಕ, ಪಕ್ಕದವರ ಜೊತೆ ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಆವಾಗಲೆ ನನಗೆ ಧ್ಯಾನದ ಪರಿಪೂರ್ಣ ಮಹತ್ವ ತಿಳಿದಿದ್ದು. ಈಗ ನಾನು ಪ್ರತಿದಿನ, ಪ್ರತಿ ಕ್ಷಣವೂ ಕೂಡಾ ಆನಂದದಲ್ಲಿ ತೇಲಾಡುತ್ತಿದ್ದೇನೆ. ಹೇಗಿದ್ದೇನೆಂದರೆ ನೀರಿನಲ್ಲಿದ್ದ ಕಮಲದ ಹೂವಿನಂತೆ. ಹಾಗೆ ನನ್ನನ್ನು ತೇಲಾಡಿಸಿದವರು ಯಾರು ಎಂದರೆ, ಪತ್ರೀಜಿ. 

 

ಪಂಚಮಿ ಹಬ್ಬದ ದಿನ ಪೂಜೆ ಮಾಡುವುದಕ್ಕೆ ಹುತ್ತಕ್ಕೆ ನನ್ನ ಪತಿಯ ಜೊತೆ ಹೋಗಿದ್ದೆ. ಮತ್ತೊಂದು ಆಲೋಚನೆ ಬಂತು, "ಈ ಪ್ರಸಾದವನ್ನು ಸ್ವೀಕಾರ ಮಾಡು ನಾಗದೇವತಾ" ಎಂದು ಬೇಡಿಕೊಂಡೆ. ಹಾಲು ಮತ್ತು ಪ್ರಸಾದವನ್ನು ಹುತ್ತದ ಮುಂದೆ ಇಟ್ಟು ಹತ್ತಿರದ ಶಿವಾಲಯಕ್ಕೆ ಹೋಗಿದ್ದೆ. ಅಲ್ಲಿ ಹೋಗಿ ಶಿವನ ದರ್ಶನ ಮಾಡಿ ಬರುವಷ್ಟರಲ್ಲಿ ಅಲ್ಲಿ ನೈವೇದ್ಯ ಮತ್ತು ಹಾಲು ಏನೂ ಇರಲಿಲ್ಲ. ಆಶ್ಚರ್ಯವಾಗಿ ಮತ್ತೆ ಸರ್‌ಗೆ ಫೋನ್‌ಮಾಡಿ ಮಾತನಾಡಿದಾಗ ಅದು ನಿಜಸ್ಥಿತಿಯೆಂದು ಹೇಳಿದರು. ನನಗೆ ಹೇಳಲಾರದಷ್ಟು ಆನಂದವಾಯಿತು. ಇದನ್ನು ನೋಡಿದ ನನ್ನ ಪತಿಯೂ ಕೂಡಾ ಧ್ಯಾನಕ್ಕೆ ಸಂಪೂರ್ಣ ಶರಣಾಗತರಾಗಿದ್ದಾರೆ. ನನ್ನ ಪತಿ ಮತ್ತು ಮಕ್ಕಳು ಸಹ ಪ್ರತಿದಿನ ಒಂದು ಗಂಟೆ ಧ್ಯಾನ ಮಾಡುತ್ತಾರೆ. 

 

ನಾನು ಸೈನ್ಸ್ ವಿದ್ಯಾರ್ಥಿ ಅಲ್ಲ, ಆದರು ಸಹ ನಾನು ಆಧ್ಯಾತ್ಮಿಕ ಸೈನ್ಸ್ ತಿಳಿದುಕೊಳ್ಳುತ್ತಿದ್ದೇನೆ. ನಾನು ಕವಿಯತ್ರಿ ಅಲ್ಲ, ಕವಿತೆಯನ್ನು ರಚಿಸಿದ್ದೇನೆ. ನಾನು ಪ್ರತಿಯೊಂದು ಶಾಲೆ ಮತ್ತು ಕಾಲೇಜಿಗೆ ಹೋಗಿ ಧ್ಯಾನದ ಉಪನ್ಯಾಸ ಮಾಡುತ್ತಿದ್ದೇನೆ. ಪ್ರತಿಯೊಬ್ಬ ಮನುಷ್ಯರು ಕೂಡಾ ಈ ಧ್ಯಾನ ಚೈತನ್ಯಶಕ್ತಿಯಿಂದ ತಮ್ಮ ಬದುಕನ್ನು ತಾವು ನಿರ್ಮಿಸಿಕೊಳ್ಳಬಲ್ಲರು ಎಂದು ಎಲ್ಲಾ ಧ್ಯಾನಿಗಳಿಗೆ ನಾನು ಸಾರಿ ಸಾರಿ ಹೇಳುತ್ತೇನೆ. 

 

ಈ ಅಮೂಲ್ಯವಾದ ಧ್ಯಾನ ಮಾರ್ಗವನ್ನು ತೋರಿಸಿದಂತಹ ನನ್ನ ಗುರುವು ಪತ್ರೀಜಿಗೆ ನನ್ನ ಆತ್ಮದ ಶತಕೋಟಿ ಅಭಿನಂದನೆಗಳು. ಧ್ಯಾನಾವ ಹೊಂದೋಣ, ಧ್ಯಾನಾವ ಮಾಡೋಣ, ಧ್ಯಾನಾವ ಹಂಚೋಣ, ಸದಾ ಪತ್ರೀಜಿಯ ಜ್ಞಾನಾಮೃತ ಸವಿಯೋಣ ಎಂದು ಹೇಳಲು ಬಯಸುತ್ತೇನೆ. ಎಲ್ಲಾ ಧ್ಯಾನಿಗಳಿಗೆ ಶರಣು ಶರಣಾರ್ಥಿಗಳು. 

 

P. ಕವಿತ
ಗುಲ್ಬರ್ಗಾ
ಫೋನ್ : +91 9989152520

Go to top