" ಆನಾಪಾನಸತಿ ಧ್ಯಾನವನ್ನು ನನಗೆ ಕೊಟ್ಟಿದ್ದು ಸಾಯಿನಾಥನೇ "

 

ನನ್ನ ಹೆಸರು ಕೃಷ್ಣಕುಮಾರಿ. ನಾನು ಹತ್ತು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಮೊದಲು ಧ್ಯಾನವನ್ನು ಒಂದು ಕೆಲಸದಂತೆ ಪ್ರಾರಂಭಿಸಿದೆ. ಪ್ರಾರಂಭಿಸಿದಾಗ ಆರೋಗ್ಯ ತುಂಬಾ ಏರುಪೇರಾಗಿತ್ತು. ಮೊದಲಿಗೆ ಏನೂ ಅರ್ಥವಾಗಲಿಲ್ಲ. ನಿಧಾನವಾಗಿ ನನಗೆ ಅರ್ಥವಾದದ್ದು ಏನೆಂದರೆ ನನ್ನ ಶರೀರ ಶುಭ್ರ ವಾಗುತ್ತಿದೆಯೆಂದು.

 

ನನಗೆ ಶಿರಿಡಿ ಸಾಯಿಬಾಬಾ ಎಂದರೆ ತುಂಬಾ ಇಷ್ಟ. ನಾಲ್ಕು ಹೊತ್ತು ಆರತಿ, ನೈವೇದ್ಯ, ಸಚ್ಛರಿತೆ ಓದುವುದು, ಅಭಿಷೇಕ ಎಲ್ಲಾ ಮಾಡುತ್ತಿದ್ದೆ. ನನಗೆ ಗೊತ್ತಿಲ್ಲದೆ ಸಾಯಿಬಾಬಾ ವಿಗ್ರಹವನ್ನು ಎತ್ತಿಟ್ಟು ಧ್ಯಾನದಲ್ಲಿ ಮುಂದುವರೆದೆ. `ಆನಾಪಾನಸತಿ’ ಧ್ಯಾನವನ್ನು ನನಗೆ ಕೊಟ್ಟಿದ್ದು ಸಾಯಿನಾಥನೇ. ನಾನು ಸಾಯಿಬಾಬಾಗೆ ತುಂಬಾ ಕೃತಜ್ಞಳು.

 

ಧ್ಯಾನದ ಸಮಯವನ್ನು ಹೆಚ್ಚಿಸಿಕೊಳ್ಳುತ್ತ, ಪುಸ್ತಕಗಳನ್ನು ಓದುತ್ತಾ, ಸೀನಿಯರ್ ಮಾಸ್ಟರ‍್ಸ್, ತರಗತಿಗಳನ್ನು ಕೇಳುತ್ತಾ ಬೆಳೆಯತೊಡಗಿದೆ. ನನ್ನಲ್ಲಿ ತುಂಬಾ ಬದಲಾವಣೆಗಳನ್ನು ಕಂಡುಕೊಂಡೆ. ಕೆಲಸವನ್ನು ಪ್ರೀತಿಸುತ್ತಿದ್ದೇನೆ ಮತ್ತು ಜವಾಬ್ದಾರಿಯಿಂದ ಮಾಡುತ್ತಿದ್ದೇನೆ. ಸೃಜನಾತ್ಮಕತೆ ಬೆಳೆದಿದೆ. ಧೈರ್ಯ, ವಿನಯ ಬೆಳೆದಿದೆ. ಎಲ್ಲರನ್ನೂ ಪ್ರೀತಿಸುತ್ತಿದ್ದೇನೆ. ಒಂದೊಂದು ಸಲ ಇದು ಏರುಪೇರಾದರೂ ಸಮತೋಲನ ಮಾಡಿಕೊಳ್ಳುತ್ತಿದ್ದೇನೆ. ಕೋಪ ಬಂದರೆ ಬೇಗ ಅದರಿಂದ ಹೊರಗೆ ಬರುತ್ತೇನೆ.

 

ಮುಖ್ಯವಾಗಿ `ಎಲ್ಲದಕ್ಕೂ ನಾನೇ ಕಾರಣಕರ್ತೆ’ ಎನ್ನುವುದು ಜೀವನದಲ್ಲಿ ಅನುಭವವಾಗಿದೆ. ಯಾವುದೇ ಸಂದರ್ಭ ಬಂದರೂ ಅದರಲ್ಲಿನ ಜ್ಞಾನವನ್ನು ಮತ್ತು ಅನುಭವವನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ. ನನಗೆ ಆಲೋಚನೆಗಳಲ್ಲಿ ಮತ್ತು ಸ್ಥಿತಿಯಲ್ಲಿ ಬದಲಾವಣೆಗಳಿವೆ. ಅಂತರಾಳದಿಂದ ಬರುವ ಸಂದೇಶಗಳು (messages) ಎಲ್ಲಾ ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ ಮತ್ತು ಸಮಯ ಹಿಡಿಸುತ್ತಿದೆ. ಆ ಘಟನೆ ನಡೆದು ಹೋದ ಮೇಲೆ ತಿಳಿಯುತ್ತದೆ.

 

ಮಕ್ಕಳ ಮೇಲೆ ನನ್ನ ಆಸೆಗಳು, ಅಭಿಪ್ರಾಯಗಳನ್ನು ಹೇರುವುದಿಲ್ಲ. ಅವರವರ ಇಷ್ಟದಂತೆ ಅವರು ನಡೆದುಕೊಳ್ಳಲು ಬಿಡುತ್ತೇನೆ. ಅವರು ನನ್ನ ಸ್ನೇಹಿತರು. ಬಾಧ್ಯತೆಯಿಂದ ಕೆಲಸವನ್ನು ಮಾಡಬೇಕು ಎಂದು ತಿಳಿಸುತ್ತೇನೆ ಅಷ್ಟೇ. ಅವರು ಅದನ್ನು ಕೇಳಲಿ ಬಿಡಲಿ. ಮುಖ್ಯವಾಗಿ ಧೈರ್ಯದಿಂದ ಇರುತ್ತಿದ್ದೇನೆ. ಕೆಲವು ಘಟನೆಗಳಿಂದ ದುಃಖ ಬಂದರೂ ಅದರಲ್ಲೇ ಮುಳುಗದೆ ಬೇಗ ಹೊರಗೆ ಬರುತ್ತಿದ್ದೇನೆ.

 

ಸುಮಾರು ಒಂದು ವರ್ಷದಿಂದ ಧ್ಯಾನ ಪ್ರಚಾರಕ್ಕಾಗಿ ಎಲ್ಲಾ ಶಾಲೆಗಳಿಗೂ ಹೋಗುತ್ತಿದ್ದೇನೆ. ಇದರಿಂದ ತುಂಬಾ ಆನಂದ ಸಿಗುತ್ತಿದೆ. ನನ್ನ ಮನೆಯಾಯಿತು, ನನ್ನ ಕೆಲಸವಾಯಿತು ಎಂದಿದ್ದವಳು ನಾನು, ಈಗ ಹೊರಗಿನ ಪ್ರಪಂಚಕ್ಕೆ ಅಡಿಯಿಟ್ಟಿದ್ದೇನೆ. ಶಾಲೆಗಳಲ್ಲಿ ಮಕ್ಕಳು ಮತ್ತು ಗುರುಗಳು ತುಂಬಾ ಸಹಕರಿಸುತ್ತಾರೆ. ಯಾವಾಗ ಹೋದರೂ ಅವರು ಧ್ಯಾನಕ್ಕೆ ಕೂರುತ್ತಾರೆ.

 

ನನ್ನಲ್ಲಿ ಬದಲಾವಣೆಗೆ ಮತ್ತು ಬೆಳವಣೆಗೆ ಕಾರಣ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರು. ಅವರಿಗೆ ನನ್ನ ಅನಂತ ಅನಂತ ವಂದನೆಗಳು. ಅವರು ನನ್ನ ಪ್ರತೀ ಹೆಜ್ಜೆಗೂ ಜೊತೆಗಿದ್ದು ನನ್ನನ್ನು ಮುನ್ನಡೆಸುತ್ತಿದ್ದಾರೆ.

 

 

ಕೃಷ್ಣಕುಮಾರಿ
ಚಿಂತಾಮಣಿ
ಫೋನ್ : + 91 9036455589

Go to top