" ಧ್ಯಾನದಿಂದ ಸಮಸ್ಯೆಗಳಿಂದ ನಾವು ಇನ್ನೂ ಉನ್ನತವಾಗಿ ಏರಲು ಸಾಧ್ಯವಾಗುತ್ತದೆ "

 

ನನ್ನ ಹೆಸರು ಕೃಷ್ಣಕುಮಾರಿ. ನನಗೆ ಇಬ್ಬರು ಹೆಣ್ಣು ಮಕ್ಕಳು. ಚಿಕ್ಕ ಮಗಳು ಸ್ಕೂಲಿಗೆ ಸೇರಿದ ಮೇಲೆ, ಅಂದರೆ, 2001 ರಲ್ಲಿ ಜೀವನ ಅಂದರೆ ಇಷ್ಟೇನಾ, ಇನ್ನೂ ಏನೋ ಇದೆ. ಅದು ಏನು ಅಂತ ಗೊತ್ತಿಲ್ಲ. ಇಂತಹ ತಪನೆ ಶುರುವಾಯಿತ್ತು.

 

ನನಗೆ ಶಿರಡಿ ಸಾಯಿಬಾಬಾ ಎಂದರೆ ತುಂಬಾ ತುಂಬಾ ಇಷ್ಟ. ಸಾಯಿ ವಿಗ್ರಹ ನೋಡಿದರೆ ಮೈಪುಳಕ ಬಂದು ಕಣ್ಣಲ್ಲಿ ನೀರು ಬರುತ್ತದೆ. ವಿಗ್ರಹವನ್ನು ಎಷ್ಟು ಹೊತ್ತು ನೋಡುತ್ತಿದ್ದರೂ ತೃಪ್ತಿ ಅನ್ನಿಸುತ್ತಿರಲಿಲ್ಲ. ನಮ್ಮ ಎದುರು ಮನೆಯಲ್ಲಿ ಸುಜಾತಕ್ಕ ಇದ್ದರು. ಅವರು ಸಹ ಸಾಯಿ ಭಕ್ತರು. ಅವರನ್ನು ಮಾತನಾಡಲು ಹೋದಾಗ ಅವರು ನನ್ನನ್ನು ಮೊದಲ ಸಲ ಧ್ಯಾನಕ್ಕೆ 10 ನಿಮಿಷ ಕೂರಿಸಿದರು. ಆವತ್ತಿನಿಂದ ಈವತ್ತಿನವರೆಗೆ ಹಿಂದಿರುಗಿ ನೋಡಿದವಳಲ್ಲ.

 

ನಾನು 4 ಹೊತ್ತೂ ಬಾಬಾಗೆ ಆರತಿ, ನೈವೇದ್ಯ, ಅಭಿಷೇಕ ಮಾಡಿದವಳು. ಸಚ್ಚರಿತೆ ಮೊದಲ ಸಲ ಓದಿದಾಗ, ಸಾಯಿಬಾಬಾ ಅವರು ಅಭಯವನ್ನು ಕೊಟ್ಟಿದ್ದರು. ಇವೆಲ್ಲವನ್ನು ಕೆಲವು ತಿಂಗಳಿನಲ್ಲೇ ಬಿಟ್ಟುಬಿಟ್ಟೆ. ಮಾಡಬೇಕು ಎಂದು ಅನಿಸಲಿಲ್ಲ. ವಿಗ್ರಹವನ್ನು ಎತ್ತಿ ಇಟ್ಟುಬಿಟ್ಟೆ. ನನಗೆ ತಿಳಿಯದೆಯೇ ಈ ಎಲ್ಲ ಬದಲಾವಣೆಗಳು ನನ್ನಲ್ಲಿ ಕಾಣಿಸಿದವು.

 

ಜೀವನದಲ್ಲಿ ಎಷ್ಟೋ ಕಷ್ಟ-ನಷ್ಟ, ಸುಖ-ದುಃಖಗಳು ಇದ್ದವು. ಹಾಗಿದ್ದಾಗಲೇ ಧ್ಯಾನಕ್ಕೆ ಕಾಲಿಟ್ಟೆ. ಆರಂಭದಲ್ಲಿ ಅನಾರೋಗ್ಯ ತುಂಬಾ ಆಯಿತು. ಏಕೆ ಎಂದು ಅರ್ಥವಾಗಲಿಲ್ಲ. ಆದರೂ ಧ್ಯಾನ ಬಿಡಲಿಲ್ಲ. ಧ್ಯಾನಕ್ಕೆ ಬಂದ ಮೇಲೆ "ಇವೆಲ್ಲ ಸಹಜ ಮತ್ತು ಈ ಸಮಸ್ಯೆಗಳಿಂದ ನಾವು ಇನ್ನೂ ಉನ್ನತವಾಗಿ ಏರಲು ಸಾಧ್ಯ" ಎಂದು ಆಮೇಲೆ ಗೊತ್ತಾಯಿತು.

 

ಧ್ಯಾನವನ್ನು ಮೊದಲಲ್ಲಿ ಒಂದು ಕೆಲಸದಂತೆ ಮಾಡಿದೆ. ಅದರ ಆಳ-ಅಗಲ ಗೊತ್ತಿರಲಿಲ್ಲ. ಮಾಡುತ್ತ ಮಾಡುತ್ತಾ ಆಳ ತಿಳಿಯುತ್ತಾ, ಸಾಧನೆ ಜಾಸ್ತಿ ಮಾಡುತ್ತಾ, ಗೆಳತಿಯರ ಜೊತೆ ಚರ್ಚೆ ಮತ್ತು ಪುಸ್ತಕಗಳನ್ನು ಓದುತ್ತಾ ನಾನು ಬೆಳೆಯತೊಡಗಿದೆ. ನಮ್ಮ ಊರಿನಲ್ಲಿ ಯಾರೇ ಸೀನಿಯರ್ ಮಾಸ್ಟರ್‌ಗಳ ಕ್ಲಾಸ್ ಆಗಲಿ ಎಲ್ಲದಕ್ಕೂ ಹೋಗುತ್ತಿದ್ದೆ. ಎಲ್ಲಾ ಮಂಡಲ ಧ್ಯಾನಕ್ಕೂ ಹಾಜರಾಗುತ್ತೇನೆ. ಧ್ಯಾನದ ಕರಪತ್ರಗಳನ್ನು ಮನೆ ಮನೆಗೂ ತಲುಪಿಸುತ್ತೇನೆ. ಈಗ ಶಾಲೆಗಳಿಗೂ ಹೋಗಿ ಧ್ಯಾನವನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ. ತುಂಬಾ ಹೆಮ್ಮೆ ಅನ್ನಿಸುತ್ತೆ. ನನಗೆ ತಿಳಿದಿರುವ ಜ್ಞಾನವನ್ನು ಹಂಚಲು ಒಳ್ಳೆಯ ಅವಕಾಶ ದೊರೆತಿದೆ.

 

ನನಗೆ ಮೊದಲಿನಿಂದಲೂ ಧ್ಯಾನದಲ್ಲಿ ಯಾವುದೇ ಅನುಭವಗಳಿಲ್ಲ. ನನ್ನಲ್ಲಿ ಆಲೋಚನೆಗಳು ಮತ್ತು ಗುಣದಲ್ಲಿ ತುಂಬಾ ಬದಲಾವಣೆ ಬಂದಿದೆ. ಮೌನವಾಗಿ ಮತ್ತು ಕತ್ತಲಲ್ಲಿ ಇರಬೇಕೆಂದು, ತುಂಬಾ ಇಷ್ಟ. ಪತ್ರೀಜಿಯವರನ್ನು ಕಂಡರೆ ತುಂಬಾ ಇಷ್ಟ. ಎಷ್ಟು ಹೊತ್ತು ನೋಡಿದರೂ ಸಾಲದು, ತೃಪ್ತಿಯಿರುತ್ತಿರಲಿಲ್ಲ. ಆದರೆ, ಒಂದು ವರ್ಷದಿಂದ ಪತ್ರೀಜಿಯವರನ್ನಾಗಲಿ ಅಥವಾ ಸಾಯಿಬಾಬಾರವರನ್ನಾಗಲಿ ನೋಡಬೇಕು ಅಂತ ಅನ್ನಿಸುವುದಿಲ್ಲ. ನಾನು ಅರ್ಥಮಾಡಿಕೊಂಡಿದ್ದು ಏನು ಎಂದರೆ: "ವ್ಯಕ್ತಿ ಅಥವಾ ಮೂರ್ತಿಯಲ್ಲಿ ಏನೂ ಇಲ್ಲ. ಅವರು ಮಾಡಿದ್ದು, ಹೇಳಿದ್ದು ನಾವು ಮಾಡುತ್ತಾ ಉನ್ನತವಾಗಿ ಬೆಳೆಯಬೇಕು" ಪತ್ರೀಜಿಯವರನ್ನು ಕಂಡರೆ ತುಂಬಾ ಭಯ ಇರುತ್ತಿತ್ತು. ಮಾತನಾಡುತ್ತಿರಲಿಲ್ಲ ಅವಕಾಶ ಬಂದರೂ ಸಹ..

 

ಈಗ ಮೊದಲಿಗಿಂತಲೂ ನನಗೆ ತುಂಬಾ ಧೈರ್ಯ ಬಂದಿದೆ. ಯಾರನ್ನೂ, ಯಾವುದನ್ನೂ ಕೇರ್ ಮಾಡುವುದಿಲ್ಲ. ನನಗೆ ಅನಿಸಿದ್ದು ನಾನು ಮಾಡುತ್ತೇನೆ ಅಷ್ಟೇ. ಇದರಿಂದ ಕುಟುಂಬದಲ್ಲಿ ಸ್ವಲ್ಪ ಇರುಸು ಮುರುಸು ಆಯಿತು. ಆದರೂ ಧೈರ್ಯದಿಂದ ಮುನ್ನಡೆಯುತ್ತಿದ್ದೇನಿ.

 

ಈ ಚಳಿಗಾಲದಲ್ಲಿ ಅಥವಾ ಬೇಸಿಗೆಯಲ್ಲಿ ನನಗೆ ಚಳಿಯ ಅಥವಾ ಬಿಸಿಲಿನ ಪರಿಣಾಮ ಅಷ್ಟಾಗಿ ಆಗಲಿಲ್ಲ, ನನಗೆ ಆಶ್ಚರ್ಯವಾಯಿತು. ನನ್ನ ಜೀವನದಲ್ಲಿ ನನಗೆ ಪ್ರಕೃತಿ ಸಹಕರಿಸುತ್ತಿದೆ ಅಂತ ಅನ್ನಿಸುತ್ತೆ. ಪುಸ್ತಕದಲ್ಲಿ ಓದಿದ್ದೆ. ಆದರೆ, ಈ ಅನುಭವ ನನಗೆ ಆಯಿತು. ತುಂಬಾ ಆನಂದವಾಗುತ್ತಿದೆ.


ನನಗೆ ಮೂರು ವರ್ಷದ ಹಿಂದೆ ಗರ್ಭಕೋಶದ ಆಪರೇಷನ್ ಆಯಿತು. ಆಯುರ್ವೇದಿಕ್ ಮೆಡಿಸಿನ್ ಮತ್ತು ಧ್ಯಾನದಿಂದ ಅರ್ಧ ಕಮ್ಮಿ ಮಾಡಿಕೊಂಡೆ. ಆದರೂ, ಧೈರ್ಯಸಾಲದೆ ಆಪರೇಷನ್ ಮಾಡಿಸಿಕೊಂಡೆ. ಈಗ ಇರುವಷ್ಟು ಧೈರ್ಯ ಆಗ ಇರಲಿಲ್ಲ.

 

ಈಗ ನನ್ನ ಜೀವನದಲ್ಲಿ ನನ್ನನ್ನು ಹಿಂತಿರುಗಿ ನೋಡಿಕೊಂಡರೆ ನಾನು ಬೃಹದಾಕಾರವಾಗಿ ಬೆಳೆದು ನಿಂತಿದ್ದೀನಿ. ನನಗೆ ನಾನೇ ಅಂತ ಅರ್ಥವಾಯಿತು. ಪತ್ರೀ ಸಾರ್ ಹೇಳುತ್ತಿರುತ್ತಾರೆ "ಎವರಿಕಿ ವಾರೇ ಯಮುನಾ ತೀರೆ" ಅಂತ, ಕೇಳಿದರೆ ಅರ್ಥವಾಗುವುದಿಲ್ಲ. ಅನುಭವದಲ್ಲಿ ಬಂದರೆ ಅರ್ಥ ಮತ್ತು ಆನಂದವಾಗುತ್ತದೆ.

 

ಈ "ಸಂಧಿಕಾಲ"ದ ಮೊದಲು ಮತ್ತು ಸಂಧಿಯುಗದಲ್ಲಿ ಇರುತ್ತಾ, ಪತ್ರೀಜಿ ಹೇಳಿರುವುದನ್ನು ಮಾಡುತ್ತಾ, ತಿಳಿಸುತ್ತಾ, ನಾವೆಲ್ಲಾ ಬೆಳೆಯುತ್ತಾ ಇದ್ದೇವೆ. ಹೀಗಾಗಿ, ನಾವೆಲ್ಲರೂ ತುಂಬಾ ಅದೃಷ್ಟವಂತರು ಅಲ್ಲವೇ!

 

ಕೃಷ್ಣಕುಮಾರಿ
ಚಿಂತಾಮಣಿ

ಫೋನ್ : +91 90364 55589

Go to top