" ಧ್ಯಾನ-ಜ್ಞಾನ ಗಳಿಕೆಗಿಂತ ಮುಖ್ಯವಾದದ್ದು ಏನೂ ಇಲ್ಲ "

 

ಮಾಕಂ ಪ್ರಣೀತ, ಹೈದರಾಬಾದ್

ಚಿಕ್ಕ ವಯಸ್ಸಿನಲ್ಲೇ ಜಗದ್ಗುರು ಬ್ರಹ್ಮರ್ಷಿ ಪತ್ರೀಜಿಯವರ ಜೊತೆ ಸಾಂಗತ್ಯ ಬೆಳೆಸಿ, ಅನೇಕಾನೇಕ ಅದ್ಭುತ ಧ್ಯಾನಾನುಭವಗಳನ್ನು ತನ್ನದಾಗಿಸಿಕೊಂಡ ಪ್ರಣೀತ ಜೊತೆ ಇದೊಂದು ಸಂದರ್ಶನ... "ಚಿಕ್ಕ ಮಕ್ಕಳಲ್ಲಿ ಕೂಡಾ ಶ್ರೇಷ್ಠಯೋಗಿಗಳು ಇರುತ್ತಾರೆ" ಎನ್ನುವ ಪರಮ ಸತ್ಯವನ್ನು ತಿಳಿಯಪಡಿಸುತ್ತದೆ, ಈ ಸಂದರ್ಶನ. ಸಿಕಂದ್ರಾಬಾದ್ ಪಿರಮಿಡ್ ಮಾಸ್ಟರ್ ಎಸ್.ರಾಜಶೇಖರ್ ಅವರು ಸಂದರ್ಶನ ಮಾಡಿದ್ದಾರೆ.


ರಾಜಶೇಖರ್ : ಹಲೋ ಪ್ರಣೀತ, ನಿನ್ನಿಂದ ಕೆಲವು ವಿಶೇಷ ಧ್ಯಾನ ಅನುಭವಗಳನ್ನು "ಧ್ಯಾನ ಕಸ್ತೂರಿ" ಓದುಗರಿಗೆ ನೀಡಬೇಕೆಂದುಕೊಂಡಿದ್ದೇನೆ.

 

ಪ್ರಣೀತ : ನಮ್ಮ ತಾಯಿ "ಎಮ್.ನಿರ್ಮಲಾದೇವಿ"ಯವರು ಪಿರಮಿಡ್ ಧ್ಯಾನ ಪ್ರಚಾರ ಮಾಡುತ್ತಾ ಇದ್ದಾರೆ ಅಲ್ಲವೆ. 2000ನೇ ವರ್ಷ ಜನವರಿಯಲ್ಲಿ ಅಮ್ಮನಿಗೆ ಧ್ಯಾನದ ಜೊತೆ ಪತ್ರೀಸಾರ್ ಜೊತೆ... ಒಳ್ಳೆಯ ಪರಿಚಯ ಭಾಗ್ಯ ಸಿಕ್ಕಿತು. ತಾನು ಧ್ಯಾನ ಮಾಡಿಕೊಳ್ಳುತ್ತಾ ನನ್ನನ್ನು ಸಹ 15 ನಿಮಿಷಗಳ ಕಾಲ ಧ್ಯಾನ ಮಾಡೆಂದು ಬಲವಂತ ಮಾಡುತ್ತಿದ್ದಳು. ನನಗೆ ಆಗ 11 ವರ್ಷಗಳ ವಯಸ್ಸು. ಕೇವಲ ಅಮ್ಮನ ಮೇಲೆ ಭಯ ಭಕ್ತಿ ಇದ್ದಿದ್ದರಿಂದ ಎರಡೂ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದೆ. ಆದರೆ, "ಯಾವಾಗ ಎದ್ದು ಹೊರಟುಹೋಗೋಣ?" ಎನ್ನುವ ಯೋಚನೆ ಬಿಟ್ಟು ಮತ್ತೊಂದು ಇರುತ್ತಿರಲಿಲ್ಲ.

 

ರಾಜಶೇಖರ್ : ನಿಮಗೆ ಧ್ಯಾನದ ಅನುಭವ ಯಾವಾಗ ಆಯಿತು?

 

ಪ್ರಣೀತ : 2000 ರ ಫೆಬ್ರವರಿ ದಿನಾಂಕ 16... ಅಮ್ಮ ನನ್ನ... ಮತ್ತು ನಮ್ಮ ಸೋದರತ್ತೆಯವರನ್ನು... ಅವರ ಮಕ್ಕಳನ್ನು ಪತ್ರೀಸಾರ್ ಹತ್ತಿರ ಕರೆದುಕೊಂಡು ಹೋದರು. ತಕ್ಷಣ ಸಾರ್ ನಮ್ಮೆಲ್ಲರನ್ನು ಧ್ಯಾನಕ್ಕೆ ಕೂಡಿಸಿದರು. ನಾನು ಬೇಸರದಿಂದ ಮತ್ತು ಇಷ್ಟವಿಲ್ಲದೆ ಧ್ಯಾನದಲ್ಲಿ ಕುಳಿತ್ತಿದ್ದೆ. ಐದು ನಿಮಿಷಗಳು ಅತಿ ಭಾರವಾಗಿ ಕಳೆಯಿತು. ಆಗ ಸಾರ್ ಕೊಳಲು ನುಡಿಸಲು ಆರಂಭಿಸಿದರು. ನಾದಸ್ವರ ಕೇಳಿಸಿಕೊಂಡ ನಾನು ಎಲ್ಲವನ್ನೂ ಮೀರಿ ಪರವಶಳಾದೆ. ಆ ತಕ್ಷಣವೇ ನನ್ನ ಮನಸ್ಸು ಶೂನ್ಯವಾಯಿತು ನನಗೆ ತುಂಬಾ ಸುಂದರವಾದ ಜಲಪಾತಗಳು, ಹಸಿರು ಮರಗಳ ಎಲೆಗಳು, ಬಗೆ ಬಗೆಯ ಬಣ್ಣಗಳು ಕಾಣಿಸಿಕೊಂಡವು ಅರ್ಧಗಂಟೆ ನಂತರ ಸಾರ್ "ಓಕೆ" ಎಂದು ಹೇಳುವುದರಿಂದ ನಾನು ಬಾಹ್ಯ ಪ್ರಪಂಚಕ್ಕೆ ಬಂದೆ. ಮರುದಿನದಿಂದ ನನ್ನಷ್ಟಕ್ಕೆ ನಾನೆ ತುಂಬಾ ಇಷ್ಟದಿಂದ ಧ್ಯಾನಕ್ಕೆ ಕುಳಿತಕೊಳ್ಳಲಾರಂಭಿಸಿದೆ. ನನ್ನಲ್ಲಿ ಬಂದ ಈ ಬದಲಾವಣೆ ನೋಡಿ ನಮ್ಮ ತಾಯಿ ತುಂಬಾ ಸಂತೋಷಪಟ್ಟರು. ಅಷ್ಟೇ ಅಲ್ಲದೆ ಪತ್ರೀಜಿಯವರ ಅಕ್ಕ "ಸುಧಾ ಮೇಡಮ್" ಅಮ್ಮನಿಗೆ ಫೋನ್ ಮಾಡಿ "ಭವಿಷ್ಯತ್ತಿನಲ್ಲಿ ನಿಮ್ಮ ಮಗಳು ತುಂಬ ದೊಡ್ಡ ಮಾಸ್ಟರ್ ಆಗುತ್ತಾಳೆಂದು ಪತ್ರೀಸಾರ್ ಹೇಳಿದ್ದಾರೆ" ಎಂದು ಅಮ್ಮನಿಗೆ ಹೇಳಿದರಂತೆ. ಅದರಿಂದ ಅಮ್ಮ ಬ್ರಹ್ಮಾನಂದವನ್ನು ಪಡೆದಷ್ಟು ಖುಷಿಪಟ್ಟರು.

 

ನಾನು ಧ್ಯಾನ ಪ್ರಾರಂಭಿಸಿದ ವಾರದಲ್ಲೇ ಉಜ್ಜಯನಿ ಅಮ್ಮನವರು ಅನೇಕಾನೇಕ ರೂಪಗಳಲ್ಲಿ ನನಗೆ ದರ್ಶನವನ್ನು ನೀಡಿದರು, ಅವುಗಳಲ್ಲಿ ನಾಲಿಗೆಯನ್ನು ಹೊರಗೆ ಚಾಚಿದ ಒಂದು ಉಗ್ರರೂಪ ಕಾಣಿಸಿದ ತಕ್ಷಣ ನಡೆಯುತ್ತಿದ್ದ ನನ್ನ ಶರೀರ ಹಿಂದಕ್ಕೆ ಉರಳಿ ಬಿತ್ತು. ಅಮ್ಮ ತುಂಬಾ ಹೆದರಿ ನಾಲ್ಕು ದಿನಗಳ ನಂತರ ಅಲ್ವಾಲ್‌ನಲ್ಲಿರುವ ಒಬ್ಬ ಹಿರಿಯ ಮಾಸ್ಟರ್ ಹತ್ತಿರಕ್ಕೆ ನನ್ನ ಕರೆದುಕೊಂಡು ಹೋದರು. "ಆ ಅಮ್ಮ... ಆ ದೇವಿ... ಪ್ರಣೀತಾಳ ಪೂರ್ಣಾತ್ಮ. ಅದಕ್ಕೆ ಆಕೆಯ ದರ್ಶನವಾಗುತ್ತಿದೆ. ಇದರಲ್ಲಿ ಹೆದರಬೇಕಾದ ಅವಶ್ಯಕತೆ ಇಲ್ಲ" ಎಂದು ಆಕೆ ಹೇಳಿ ಕಳಿಸಿದರು. ಒಂದು ಬಾರಿ ಧ್ಯಾನದಲ್ಲಿ ನನ್ನ ಕರುಳಿನಿಂದ ಒಂದು ಧ್ವನಿ ನನ್ನ ಕಿವಿಗಳಿಗೆ ಕೇಳಿಸಿತು. "ನಾನು ಯಾರೋ ಅಲ್ಲ... ಪೂರ್ವ ಜನ್ಮದಲ್ಲಿ ನಿನ್ನ ರೂಪವೇ, ದೇಹ ಇದೆ ನೆನಪಿಗೆ ಬರುತ್ತಿದೆಯಾ, ಆಗ ನಿನ್ನ ಹೆಸರು ’ಹ್ಯೂಎನ್ ತ್ಸಾಂಗ್’" ಎಂದು ಸ್ಪಷ್ಟವಾಗಿ ಕೇಳಿಸಿತು. ಇದರಿಂದ ತುಂಬಾ ಹೆದರಿದ ನಾನು ಅಮ್ಮನ ಹತ್ತಿರಕ್ಕೆ ಓಡಿ "ಇದೆಲ್ಲಾ ಏನು?" ಎಂದು ಭಯದಿಂದ ಕಿರುಚಿದೆ. ಭಯಪಟ್ಟ ಅಮ್ಮ ಸಾರ್ ಹತ್ತಿರ ಹೋಗಿ ಹೇಳಿದರು. ತಕ್ಷಣ ಸಾರ್ "ಹೆದರುವುದು ಏಕೆ? ಹರ್ಷವರ್ಧನ ಎನ್ನುವ ಮಹಾರಾಜರ ಕಾಲದಲ್ಲಿ... ಭಾರತ ದೇಶಕ್ಕೆ ಆಗಮಿಸಿದ ದೊಡ್ಡ ಮಾಸ್ಟರ್ ಮತ್ತು ಬುದ್ಧಿಸ್ಟ್ ಮಾಂಕ್ ’ಹ್ಯೂಎನ್ ತ್ಸಾಂಗ್’ ಎನ್ನುವ ಆತನೆ ಈ ಜನ್ಮದಲ್ಲಿ ಪ್ರಣೀತ. ಇನ್ನೂ ಹೆಚ್ಚಾಗಿ ಆತ್ಮ ಪ್ರಗತಿಯನ್ನು ಹೊಂದಿ ವಿದೇಶಗಳಲ್ಲಿ ಮುಖ್ಯವಾಗಿ ಚೈನಾದಲ್ಲಿ ಜ್ಞಾನವನ್ನು ಹಂಚಲು ಬಂದಿರುವ ಮಾಸ್ಟರ್ ನಮ್ಮ ಪ್ರಣೀತ" ಎಂದು ಹೇಳಿದರು.

 

ರಾಜಶೇಖರ್ : ಅನಂತರ ನಿನ್ನ ಆತ್ಮ ಪ್ರಯಾಣ ಹೇಗೆ ನಡೆಯಿತು?

 

ಪ್ರಣೀತ : ಅನಂತರ ನಾನು ಯಾರನ್ನು ನೋಡಿದರೂ ಅವರ ಪೂರ್ವಜನ್ಮಗಳು ನನಗೆ ತಿಳಿಯುತ್ತಿತ್ತು. ಕೆಲವರಿಗೆ ಹೇಳುತ್ತಿದೆ ಮನುಷ್ಯರಿಗೆ ಸಂಬಂಧಿಸಿದ್ದೇ ಅಲ್ಲದೆ ಪ್ರಾಕೃತಿಕ ಘಟನೆಗಳು ಕೂಡಾ ಕೆಲವು ಮುಂಚಿತವಾಗಿಯೇ ಕಾಣುತ್ತಿತ್ತು. ಉದಾಹರಣೆಗೆ 2000-2001 ವರ್ಷದಲ್ಲಿ ಸಂಬಂಧಿಸಿದ ಪ್ರವಾಹದ ಭೀಭತ್ಸವನ್ನು, ಟ್ಯಾಂಕ್‌ಬಂಡ್ ಮೇಲೆ ನೀರು ಬರುವುದು, ಮಾರೇಡುಪಲ್ಲಿ ಮುಂತಾದ ಪ್ರದೇಶಗಳು ಮುಳುಗಿ ಹೋಗುವುದು... ಇವೆಲ್ಲಾ ಸಹ... ನಾನು ಮೂರು ತಿಂಗಳ ಮುಂಚಿತವಾಗಿಯೆ ಧ್ಯಾನದಲ್ಲಿ ನೋಡುವುದು... ಅನೇಕರಿಗೆ ತಿಳಿಸುವುದು ಮತ್ತು ಇವೆಲ್ಲಾ ನಿಜವಾಗಿಯೂ ನಡೆದಾಗ ಎಲ್ಲರೂ ನನ್ನ ಅಭಿನಂದಿಸಿದರು.

 

ರಾಜಶೇಖರ್ : "ಆಸ್ಟ್ರಲ್ ಟ್ರಾವೆಲಿಂಗ್" ಮಾಡಲಿಲ್ಲವಾ?

 

ಪ್ರಣೀತ : ಅದನ್ನು ಆಸ್ಟ್ರಲ್ ಟ್ರಾವೆಲಿಂಗ್" ಎನ್ನುತ್ತಾರೆಂದು ಆಗ ನನಗೆ ತಿಳಿದಿರಲಿಲ್ಲ ಎಲ್ಲೆಲ್ಲೋ ಹೋಗುತ್ತಿದ್ದೆ ಏನೇನೋ ಮಾಡುತ್ತಿದ್ದೆ ಇದೆಲ್ಲಾ ನಮ್ಮ ಅಮ್ಮನಿಗೆ ಹೇಳಿದರೆ ಆಕೆಗೆ ನಂಬಿಕೆ ಬರದೆ ನನಗೆ ಒಂದು ಪರೀಕ್ಷೆ ಇಟ್ಟಳು. "ಅಮೇರಿಕಾದಲ್ಲಿರುವ ನಮ್ಮ ಸೋದರ ಮಾವನ ಮನೆಯಲ್ಲಿ ಏನು ನಡೆಯುತ್ತಿದೆ? ಈ ಕ್ಷಣ ಅವರೆಲ್ಲಾ ಏನು ಮಾಡುತ್ತಿದ್ದಾರೆ? ಅವರೆಲ್ಲಾ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದ್ದಾರೆ? ಮಾವನ ಚಿಕ್ಕಮಗು ಏನು ಮಾಡುತ್ತಿದ್ದಾಳೆ?" ಎಂದು ಪ್ರಶ್ನೆಗಳ ಮಳೆಯನ್ನು ಸುರಿಸಿದಳು. ನಾನು ಒಂದು ನಿಮಿಷ ಕಣ್ಣುಗಳನ್ನು ಮುಚ್ಚಿಕೊಂಡು "ಅವರು ಟಿ.ವಿ. ನೋಡುತ್ತಿದ್ದಾರೆ, ಇಂತಹ ಬಣ್ಣದ ಬಟ್ಟೆಗಳನ್ನು ಧರಿಸಿದ್ದಾರೆ ಮತ್ತು ಮಾವನ ಮಗಳು ಸಂತೋಷ ಉತ್ಸಾಹದಿಂದ ಕೇಕೆ ಹಾಕುತ್ತಿದ್ದಾಳೆ" ಎಂದು ಹೇಳಿದೆ. ತಕ್ಷಣ ಅಮ್ಮ ಅವರಿಗೆ ಫೋನ್ ಮಾಡಿ ಕೇಳಿದಾಗ" ನಾನು ಹೇಳಿದ್ದು ಅಕ್ಷರ ಸಹ ಸತ್ಯ" ಎಂದು ತಿಳಿದು ಬಂತು.. ಆಗಿಂದ ಅಮ್ಮ ನನ್ನನ್ನು ಸ್ವಲ್ಪ ಮಟ್ಟಿಗೆ ನಂಬುತ್ತಿದ್ದಳು ನಾನು ಈಗ ಆಕೆಗೆ ಪುಟ್ಟ ಗುರುವು ಸಹ ಹೌದು.

 

ರಾಜಶೇಖರ್ : ಆಸ್ಟ್ರಲ್ ಮಾಸ್ಟರ‍್ಸ್ ಭೌತಿಕವಾಗಿಯು ಸಹ ಕಾಣುತ್ತಿರುತ್ತಾರೆಂದು ಹೇಳುತ್ತಾರೆ; ಏನಾದರೂ ಅಂತಹ ಅನುಭವ?

 

ಪ್ರಣೀತ : ನಿಜಕ್ಕೂ ನಾನು ಈ ವಿಷಯ ಹೇಳಬಾರದು. ಏಕೆಂದರೆ, ಇದು ಯಾರಿಗೂ ನಂಬಲಾಗುವುದಿಲ್ಲ. ಆದರೆ, ನೀವು ಕೇಳಿರುವುದರಿಂದ ಹೇಳುತ್ತೇನೆ. ಕೆಲವು ದಿನಗಳವರೆಗೂ ನನಗೆ ಎರಡು ಹಸಿರು ಬಣ್ಣದ ಎರಡು ಕಣ್ಣುಗಳು ಮಿಣುಕು ಮಿಣುಕಾಗಿ ಮಿಂಚುತ್ತಾ ಕಾಣುತ್ತಿತ್ತು. "ಈ ಕಣ್ಣುಗಳು ಯಾರದು?" ಎಂದು ಎಷ್ಟು ಕೇಳಿದರೂ ನನಗೆ ಉತ್ತರ ಸಿಗುತ್ತಿರಲಿಲ್ಲ. ಒಂದು ದಿನ ರಾತ್ರಿ ಮಂಚದ ಮೇಲೆ ಮಲಗಿಕೊಂಡು... ಇನ್ನು ಕಣ್ಣುಗಳನ್ನು ಮುಚ್ಚಿರಲಿಲ್ಲ.. ಏನೋ ಶಬ್ದ ಕೇಳಿಸಿತು. ಪರೀಕ್ಷಿಸಿ ನೋಡಿದರೆ ನನ್ನ ಮಂಚದ ಮೇಲೆ "ರಾಂಪಾ"ರವರು ಕುಳಿತುಕೊಂಡಿದ್ದರು. ನಾನು ಬೆಚ್ಚಿಬಿದ್ದು ಏಳಲುಹೋದೆ ಅವರು ನನ್ನ ಪರವಾಗಿಲ್ಲ ಎಂದು ಹೇಳಿ "ಈ ಕ್ಷಣದಿಂದ ನಾನು ನಿನಗೆ ಗೈಡಿಂಗ್ ಮಾಸ್ಟರ್, ಪ್ರತಿರಾತ್ರಿ ನೀನು ನಿದ್ದೆ ಮಾಡುವುದಕ್ಕೂ ಮುಂಚೆ ಒಂದೊಂದು ಕಾನ್ಸೆಪ್ಟ್ ಹೇಳುತ್ತೇನೆ. ಏನಾದರೂ ಸರಿ ಕೇಳು" ಎಂದರು. ನನಗೆ ತಕ್ಷಣ "ಅಮ್ಮನವರು ನನ್ನ ’ಪೂರ್ಣಾತ್ಮ’ " ಎನ್ನುವ ವಿಷಯ ನೆನಪಿಗೆ ಬಂದು "ಪೂರ್ಣಾತ್ಮ ಅಂದರೆ ಏನು?" ಎಂದು ಕೇಳಿದೆ. "ನೀನು ಚಿಕ್ಕ ಹುಡುಗಿ... ಆದ್ದರಿಂದ ಈಗಿನ ಸ್ಥಿತಿ ನೋಡಿಕೊಂಡು ಹೇಳುತ್ತೇನೆ. ಒಂದು ಟೊಮೇಟೊನ ನಾಲ್ಕು ಭಾಗಗಳನ್ನಾಗಿ ಮಾಡಿ ಬೇರೆ ಬೇರೆ ಕಡೆ ಇಟ್ಟಿದ್ದಿಯಾ ಎಂದುಕೊ... ಅವು ಬೇರೆ ಬೇರೆಯಾಗಿ ಕಾಣಿಸುತ್ತಿದ್ದರೂ ಕೂಡಾ ಅವೆಲ್ಲಾ ಕೂಡಾ ಒಂದೆ ಟೊಮೇಟೊನಲ್ಲಿನ ಭಾಗಗಳೆ ಅಲ್ಲವೇ, ಪೂರ್ಣಾತ್ಮದಿಂದ ಬೇರೆ ಆದ ಭಾಗಗಳೇ ಆದರೂ ನೀನು ಕೂಡಾ ಒಂದು ಅಂಶಾತ್ಮವೇ" ಎಂದು ಚೆನ್ನಾಗಿ ವಿವರಿಸಿದರು.

 

ಎರಡನೆಯ ದಿನ ರಾತ್ರಿ ಕೂಡಾ ಎಂದಿನಂತೆ ಅವರು ಆಗಮಿಸಿದರು. ಅವರ ತಲೆಯ ಸುತ್ತೂ... ದೇಹದ ಉದ್ದಕ್ಕೂ ಅತ್ಯಂತ ಪ್ರಕಾಶವಾದ ಬಂಗಾರದ ಕಾಂತಿ ಆವರಿಸಿತ್ತು"ನಿಮ್ಮ ಸುತ್ತೂ ಇರುವ ಕಾಂತಿ ಯಾಕೆ ಹೀಗಿದೆ?" ಎಂದು ಕೇಳಿದೆ. ತಕ್ಷಣ "ಅವರು ನಿನ್ನ ಈ ಪ್ರಶ್ನೆಯೇ ಈ ದಿನದ ಕಾನ್ಸೆಪ್ಟ್ ಇದನ್ನು ’ಆರಾ’ ಎನ್ನುತ್ತಾರೆ. ನಮ್ಮ ಶರೀರದಲ್ಲಿ ಆರು ಚಕ್ರಗಳಿರುತ್ತವೆ. ಅವು ಬೆನ್ನುಮೂಳೆಯ ಕೊನೆಯ ರಂಧ್ರದಿಂದ ಪ್ರಾರಂಭವಾಗುತ್ತದೆ. ಪ್ರತಿ ಒಂದು ಚಕ್ರಕ್ಕೂ ಒಂದು ಪ್ರತ್ಯೇಕವಾದ ಬಣ್ಣ ಇರುತ್ತದೆ... ಆ ಚಕ್ರ ಮತ್ತು ಆ ಬಣ್ಣ ಆಗಿನ ಆ ಮನುಷ್ಯನ ಮಾನಸಿಕ, ಆಧ್ಯಾತ್ಮಿಕ ಸ್ಥಿತಿಗೆ ಅನುಗುಣವಾಗಿ ಶಾರೀರಿಕ, ಮಾನಸಿಕ, ಆರೋಗ್ಯ, ಅನಾರೋಗ್ಯಗಳಿರುತ್ತವೆ. ನಿರಂತರ ಧ್ಯಾನ, ಸ್ವಾಧ್ಯಾಯ, ಸಜ್ಜನ, ಆಚಾರ್ಯ ಸಾಂಗತ್ಯಗಳಿಂದ ಒಂದೊಂದು ಚಕ್ರವನ್ನು ದಾಟುತ್ತಾ ಚಕ್ರಾತೀತ ಸ್ಥಿತಿಯಾದ ಸಹಸ್ರಾರಕ್ಕೆ ಸೇರಬಲ್ಲವರಾದಾಗ.. ಈಗ ನಿನಗೆ ಕಾಣಿಸಿದ ನನ್ನ ’ಆರಾ’ ಯಾವ ಮನುಷ್ಯನಿಗಾದರೂ ಸಿದ್ಧಿಸುತ್ತದೆ" ಎಂದು ಹೇಳಿದರು. ಅಷ್ಟೇ ಅಲ್ಲದೇ, ಅವರು ನೇರವಾಗಿ ಕುಳಿತುಕೊಂಡು ತನ್ನ ದೇಹದಲ್ಲಿರುವ ಆ ಚಕ್ರಗಳನ್ನು ಒಂದಾದ ನಂತರ ಒಂದನ್ನು ಸಕ್ರಿಯಗೊಳಿಸಿ (ಆಕ್ಟಿವೇಟ್ ಮಾಡಿ) ತೋರಿಸಿದರು.

 

ಆ ದಿನದಿಂದ ನನಗೆ ಎದುರು ಬಂದ ಪ್ರತಿ ವ್ಯಕ್ತಿಯ ಆರಾ, ಅವರ ಚಕ್ರಸ್ಥಿತಿ, ಆ ಸ್ಥಿತಿಯಿಂದ ಅವರ ಮನಸ್ತತ್ವಗಳು ಮತ್ತು ಅವರ ಬ್ಲಾಕ್ಸ್ ಎಲ್ಲಾ ಕಣ್ಣಿಗೆ ಕಟ್ಟಿದ ಹಾಗೆ ಕಾಣಿಸುತ್ತಿತ್ತು. ಒಂದು ಉದಾಹರಣೆ ಹೇಳಬೇಕೆಂದರೆ ನಾನು ನಮ್ಮ ಅಮ್ಮನ ಜೊತೆ ಸೇರಿ ಒಂದು ಕ್ಲಾಸ್‌ಗೆ ಹೋದಾಗ ಒಬ್ಬಾತ ಕ್ಲಾಸ್‌ಗೆ ಬಂದಿದ್ದರು. ಆತ ಒಳಗೆ ಬರುತ್ತಲೇ... ಆತನ ಹೊಟ್ಟೆಯ ಭಾಗದಲ್ಲಿ ನನಗೆ ’ಫುಟ್ ಬಾಲ್’ ಗಾತ್ರದ ಕಪ್ಪು ಮಚ್ಚೆ ಕಾಣಿಸಿತು. ನಾನು ಸ್ವಲ್ಪವೂ ಅನುಮಾನಿಸದೆ ’ನಿಮಗೆ ಫ್ರೀಕ್ವೆಂಟಾಗಿ ತಡೆಯಲಾಗದಷ್ಟು ಹೊಟ್ಟೆ ನೋವು ಬರುತ್ತಾ ಇರುತ್ತದಾ?" ಎಂದು ಕೇಳಿದೆ. ಆತ ತಕ್ಷಣ "ಹೌದು.. ನನಗೆ ಪ್ರಾಣ ಹೋಗುವಷ್ಟು ಹೊಟ್ಟೆ ನೋವು ಬರುತ್ತದೆ" ಎಂದು ಹೇಳಿದರು.

 

ನನಗೆ ಬರುವ ಪ್ರತಿಯೊಂದು ಅನುಭವವನ್ನು ಅಮ್ಮ ಕುರುಡು ನಂಬಿಕೆ ಇಟ್ಟುಕೊಳ್ಳದೆ ನ್ಯೂಟನ್ ಅಂಕಲ್ ಅವರನ್ನು ವಿಚಾರಿಸುತ್ತಿದ್ದರು. ಅವರು "ಮೇಡಮ್ ಪ್ರಣೀತ ಹೇಳಿದ ಪ್ರತಿ ಒಂದು ಮಾತು ನಿಜವೇ.. ’ಭ್ರಮೆ’ ಅಲ್ಲ. ’ಸುಳ್ಳು’ ಕೂಡಾ ಅಲ್ಲ. ಆಕೆಯ ಸ್ಥಿತಿ ಏನು ಎಂಬುದನ್ನು ಸಾಕ್ಷಾತ್ತು ಪತ್ರೀಸಾರ್ ಹೇಳಿದ ಮೇಲೆ ನಿಮಗೆ ಏಕೆ ಇನ್ನೂ ಅನುಮಾನ ಬರುತ್ತಿದೆ?" ಎಂದು ಬುದ್ಧಿ ಹೇಳಿದರು.ಇನ್ನು ರಾಂಪಾ ಮಾಸ್ಟರ್ ನನಗೆ ’ವಾಕ್‌ಇನ್ಸ್’ ಬಗ್ಗೆ ವಿವರಿಸುತ್ತಾ... "ಯಾರ ಶರೀರ, ಮನಸ್ಸು, ಬುದ್ಧಿ ಸ್ಪಷ್ಟವಾಗಿ ಇರುತ್ತದೆಯೋ... ಯಾರು ವಿಶ್ವಕಲ್ಯಾಣಕ್ಕಾಗಿ ಕೆಲಸ ಮಾಡೋಣ ಎಂದುಕೊಳ್ಳುತ್ತಾರೋ.. ಅವರ ಆತ್ಮ.. ಅವರನ್ನು ನೆನೆಸಿಕೊಂಡ ಮಹಾತ್ಮನ ಆತ್ಮ ಪರಸ್ಪರ ಸಂಪರ್ಕಿಸುತ್ತದೆ. ಸುದೀರ್ಘವಾಗಿ ಮಾತುಕತೆಗಳು ನಡೆದನಂತರ, ಸಮಾವೇಶಗಳಾದ ನಂತರ... ಮಹಾತ್ಮನ ಆತ್ಮ ತನ್ನನ್ನು ಆಹ್ವಾನಿಸಿದ ಶುದ್ಧಮೂರ್ತಿ ಶರೀರದಲ್ಲಿ ಪ್ರವೇಶ ಮಾಡುತ್ತದೆ. ಹಾಗೆ ಪ್ರವೇಶ ಮಾಡಿದ ತಕ್ಷಣ ಹಗಲು-ರಾತ್ರಿ, ನಿದ್ರೆ-ಹಸಿವು ಅಂತಹ ಭೌತಿಕ ಅವಶ್ಯಕತೆಗೆ ಅತಿ ಕಡಿಮೆ ಪ್ರಾಧಾನ್ಯತೆ ನೀಡುತ್ತಾ.. ನಿರ್ವಿರಾಮವಾಗಿ ಆಧ್ಯಾತ್ಮಿಕ ಸತ್ಯಗಳನ್ನು ತಾನು ಆಚರಿಸುತ್ತಾ.. ಇತರರನ್ನು ಆಚರಿಸುವ ಹಾಗೆ ಮಾಡುತ್ತಾ ಪ್ರಪಂಚಕ್ಕೆ ಒಂದು ಮಾದರಿ ರೀತಿ ಬೆಳಗುತ್ತದೆ. ಹಾಗೆಯೇ, "ಸುಭಾಷ್ ಪತ್ರಿ" ಅವರ ದೇಹದಲ್ಲಿರುವ ದಿವ್ಯಾತ್ಮ ಸಹ ಎಷ್ಟು ಶ್ರೇಷ್ಠವಾದದ್ದೊ ಹೇಳಲು ಸಾಧ್ಯವಿಲ್ಲ. ಇತರರಿಗೆ ಅವಶ್ಯಕತೆ ಇದೆ ಎಂದುಕೊಂಡ ಪ್ರತಿಯೊಂದು ಬಾರಿ ತಾನು ತಾತ್ಕಾಲಿಕವಾಗಿ ಪಕ್ಕಕ್ಕೆ ಸರಿದು ಅನೇಕ ಜನ ಮಹಾತ್ಮರಿಗೆ ಸ್ವಲ್ಪ ಹೊತ್ತು ತನ್ನ ಸ್ಥಾನವನ್ನು ನೀಡುತ್ತಿದೆ. ಅದಕ್ಕೆ ನಮ್ಮ ಪತ್ರೀಜಿ ಅನೇಕ ಬಗೆಯ ವರ್ತನೆಗಳಿಂದ ಎಲ್ಲರನ್ನೂ ಆಶ್ಚರ್ಯ ಪಡಿಸುತ್ತಾ ಇರುತ್ತಾರೆ" ಎಂದರು.

 

ರಾಜಶೇಖರ್ : ಇನ್ನೂ "ಆಸ್ಟ್ರಲ್ ಟ್ರಾವೆಲಿಂಗ್" ಬಗ್ಗೆ ವಿಶೇಷಗಳು?

 

ಪ್ರಣೀತ : ನಾನು ಧ್ಯಾನದಲ್ಲಿ ಮಗ್ನವಾಗುತ್ತಾ ಸ್ವಲ್ಪ ಆಳವಾಗಿ ಹೋದ ತಕ್ಷಣ... ಒಂದು ಚಂದವಾಗಿರುವ ಹಸಿರು ಎಲೆಗಳಿಂದ ತುಂಬಿರುವ ದೊಡ್ಡ ವೃಕ್ಷ ಕಾಣಿಸುತ್ತಿತ್ತು. ಹಾಗೆ 15 ದಿನಗಳು ನಿತ್ಯ ಆ ವೃಕ್ಷ ಬಿಟ್ಟು ಇನ್ನೇನು ಕಾಣಿಸುತ್ತಿರಲಿಲ್ಲ. ಬೇಸರದಿಂದ ನಾನು "ಪ್ರತಿ ದಿನ, ಪ್ರತಿ ಧ್ಯಾನದಲ್ಲೂ ನನಗೆ ಈ ಮರ ಒಂದೇ ಕಾಣಿಸುತ್ತಿದೆ; ಇದರ ಅರ್ಥವೇನು?" ಎಂದು ಅಮ್ಮನನ್ನು ಕೇಳಿದರೆ "ನನಗೆ ಗೊತ್ತಿಲ್ಲ: ನೀನೆ ಕೇಳು" ಎಂದು ಹೇಳಿದಳು. ಇನ್ನೂ 15 ದಿನಗಳ ಕಾಲ ನಾನು "ನೀನು ಯಾರು? ಯಾಕೆ ಹೀಗೆ ಕಾಣುತ್ತಿರುವೆ?" ಎಂದು ಕೇಳಿದರೆ... ಕೊನೆಗೆ ಆ ವೃಕ್ಷರಾಜ "ನಾನು ಬೋಧಿವೃಕ್ಷ... ನನ್ನ ನೆರಳಲ್ಲೇ ಸಿದ್ಧಾರ್ಥನು ಬುದ್ಧನಾದನು" ಎಂದು ಉತ್ತರವನ್ನು ನೀಡಿತು. ಆಗಿಂದ ನನಗೆ "ಬುದ್ಧನ ನಿಜಸ್ವರೂಪ ನೋಡಬೇಕೆಂಬುವ ತಪನೆ ಅಧಿಕವಾಯಿತು. ಆ ತಪನೆ ಇನ್ನೂ ಹೆಚ್ಚಾಗಿ ನಾನು ಒಂದು ಬಾರಿ ಆಸ್ಟ್ರಲ್‌ನಲ್ಲಿ ಒಂದು ಪುರಾತನ ಮಂದಿರಕ್ಕೆ ಹೋದೆ. ಆ ಗುಡಿಯ ಮುಂದೆ ಒಂದು ಸುಂದರವಾದ ಸರೋವರವಿದೆ, ಆ ಸರೋವರದ ಮುಂದೆ ದಡದ ಮೇಲೆ ಯಾರೊ ಕುಳಿತಿದ್ದಾರೆ. ಅವರು ತಮ್ಮ ಬೆನ್ನಿನ ಮೇಲೆ ಬಟ್ಟೆಯೊಂದನ್ನು ಹೊದ್ದುಕೊಂಡು ಕುಳಿತಿರುವುದು ಕಾಣುತ್ತಿದೆ. ನಾನು ನಿಧಾನವಾಗಿ ಅವರ ಬೆನ್ನನ್ನು ತಾಕುವಷ್ಟು ಹತ್ತಿರಕ್ಕೆ ಹೋದೆ ನೀರಿನಲ್ಲಿ ಅವರ ಪ್ರತಿಬಿಂಬ ಕಾಣುತ್ತಿದೆ. ಆ ಪ್ರತಿಬಿಂಬ ಮತ್ತ್ಯಾರದೊ ಅಲ್ಲ. ಬುದ್ಧ ಭಗವಾನರದೇ. ನಾನು ಅವರ ಮುಂದಕ್ಕೆ ಹೋಗಿ ನೋಡಲಾಗಲಿಲ್ಲ. ಆದರೆ, ಆ ಕಾರುಣ್ಯಮೂರ್ತಿ ನೀರಿನಲ್ಲಿರುವ ತನ್ನ ಪ್ರತಿಬಿಂಬ ರೂಪದಿಂದ ಅವರ ಶರೀರ ದರ್ಶನ ನೀಡಿದರು.

 

ರಾಜಶೇಖರ್ : ನಿಮಗೆ ತೃಪ್ತಿ ಆಯಿತಾ?

 

ಪ್ರಣೀತ : "ಇಲ್ಲ ಇಲ್ಲ ನೀರಿನಲ್ಲಿರುವ ಪ್ರತಿಬಿಂಬವನ್ನು ನೋಡಿದೆನೇ ವಿನಹ... ಪ್ರತ್ಯಕ್ಷವಾಗಿ ನೋಡಲಾಗಲಿಲ್ಲ ಎನ್ನುವ ಕೊರಗು ನನ್ನನ್ನು ಗಂಟೆಗಟ್ಟಲೆ ಧ್ಯಾನ ಮಾಡುವ ಹಾಗೆ ಮಾಡಿತು. ಹೀಗೆ ಕೆಲವು ದಿನಗಳು ನಡೆದ ನಂತರ, ಈಗಿನ ಕಾಲದ ಹೆಲಿಕಾಪ್ಟರ್‌ನಂತಹ ವಿಚಿತ್ರ ವಾಹನ ಒಂದು ಬಂದು, ನನ್ನನ್ನು ಮೊದಲು ಸೂಕ್ಷ್ಮಲೋಕಗಳಿಗೆ ಕರೆದುಕೊಂಡು ಹೋಯಿತು. ಅಲ್ಲಿಯ ವಿಹಾರ ಪೂರ್ಣಗೊಂಡ ತಕ್ಷಣ "ಇಲ್ಲಿ ಸೂಕ್ಷ್ಮ ಶರೀರವನ್ನು ಬಿಟ್ಟು ಬಿಡು" ಎಂದು ಕೇಳಿಸಿತು. ಹೆಚ್ಚು ಕಷ್ಟವಿಲ್ಲದೇನೆ ನಾನು ಅದನ್ನು ತ್ಯಜಿಸಿದೆ. ತಕ್ಷಣ ಕಾರಣ ಶರೀರದಿಂದ ಕಾರಣಲೋಕಕ್ಕೆ, ಮಹಾಕಾರಣ ಶರೀರದಿಂದ ಮಹಾಕಾರಣ ಲೋಕಕ್ಕೆ ಪಯಣಿಸಿದೆ. "ನಮ್ಮ ಇಲ್ಲಿಯ ಶರೀರ ಈ ಲೋಕದಲ್ಲಿ ಮಾತ್ರ ಹೇಗೆ ಸೀಮಿತವೊ.. ಹಾಗೆಯೇ, ಆ ಲೋಕಗಳಿಗೆ ಆಯಾ ದೇಹಗಳಿಂದ ಮಾತ್ರವೇ ಹೋಗಬಲ್ಲೆವು" ಎಂದು ನನಗೆ ಮೊದಲನೆಯ ಬಾರಿ ಅರ್ಥವಾಯಿತು. ಕಟ್ಟಕಡೆಗೆ ಆ ವಿಮಾನ ನನ್ನನ್ನು ಸತ್ಯಲೋಕಕ್ಕೆ ತಲುಪಿಸಿತು. ಅಲ್ಲಿ ಅರೆಮುಚ್ಚಿದ ಕಣ್ಣುಗಳಿಂದ ಅತ್ಯಂತ ಪ್ರಸನ್ನವಾದ, ಪ್ರಶಾಂತವಾದ, ಪ್ರಕಾಶವಾದ ದೇಹದಿಂದ ಧ್ಯಾನದಲ್ಲಿ ಮಗ್ನವಾಗಿರುವ ಬುದ್ಧ ಭಗವಾನರ ನಿಜರೂಪ ಕಾಣಿಸಿತು. ಅವರ ಸುತ್ತಾ ಎಂಬತ್ತು ಕಿಲೋಮೀಟರ್‌ಗಳವರೆಗೂ ಅತ್ಯಂತ ಪ್ರಕಾಶವಾದ ಬಂಗಾರ ಬಣ್ಣದ ’ಆರಾ’ ವಿಸ್ತರಿಸಿದೆ.

 

ರಾಜಶೇಖರ್ : "ಎಂಬತ್ತು ಕಿಲೋಮೀಟರ್‌ಗಳ ಪರಧಿ" ಎಂದು ಹೇಗೆ ನಿರ್ಧಾರಿಸಿಕೊಂಡಿರುವೆ?

 

ಪ್ರಣೀತ : ನನಗೆ ಆ ಮಾತು ಸ್ಪಷ್ಟವಾಗಿ ಕೇಳಿಸಿತು.

 

ರಾಜಶೇಖರ್ : ಧ್ಯಾನಕ್ಕಿಂತಾ ಮುಂಚೆ.. ಅನಂತರ.. ನಿನ್ನ ಮನಸ್ತತ್ವದಲ್ಲಿ ಆದ ಒಳ್ಳೆಯ ಬದಲಾವಣೆಗಳು ಏನಾದರೂ ಇದ್ದರೆ ಹೇಳು.

 

ಪ್ರಣೀತ : ಪತ್ರೀಸಾರ್ ನನ್ನ ಮೊದಲನೆಯ ಬಾರಿ ಅವರ ಸಮಕ್ಷಮದಲ್ಲಿ ಧ್ಯಾನ ಮಾಡಿಸುವುದಕ್ಕಿಂತಾ ಮುಂಚೆ... ನನಗೆ ಬೇಕಾದ ಕನಿಷ್ಠ ಅವಶ್ಯಕತೆಗಳನ್ನು ಸಹ ಹೊಂದಿಸಿಕೊಳ್ಳಲಾಗದಂತಹ ಪರಿಸ್ಥಿತಿ ನನ್ನದಾಗಿತ್ತು. ಅದರ ಜೊತೆ ಮನೆಯಲ್ಲಿ ವಿನಹ ಹೊರ ಪ್ರಪಂಚದಲ್ಲಿ ಯಾರೊಬ್ಬರ ಜೊತೆಯಲ್ಲೂ ಸಾಮಾನ್ಯದ ವಿಷಯಗಳು ಮಾತನಾಡಲು ಕೂಡಾ ತುಂಬಾ ಭಯವಾಗುತ್ತಿತ್ತು. ಮತ್ತು ತುಂಬಾ ಈ ಸಂಕೋಚ ಸ್ವಭಾವದಿಂದ ನಮ್ಮ ಅಧ್ಯಾಪಕರ ಜೊತೆ ಕೂಡಾ ಮಾತನಾಡಲಾಗುತ್ತಿರಲಿಲ್ಲ. ಈ ಅವಲಕ್ಷಣಗಳ ಜೊತೆ ನೆನಪಿನಶಕ್ತಿ ಸಹ ಕಡಿಮೆ ಇತ್ತು. ಅಷ್ಟೇ ಅಲ್ಲದೆ ಅತಿ ತೀವ್ರಕರವಾದ ಆಸ್ತಮಾ ವ್ಯಾಧಿಯು ಸದಾ ತೊಂದರೆ ಕೊಡುತ್ತಿತ್ತು.

 

ಧ್ಯಾನವನ್ನು ಇಷ್ಟದಿಂದ ಮಾಡಲು ಪ್ರಾರಂಭಿಸಿದ ಒಂದು ತಿಂಗಳಲ್ಲೇ ಎಲ್ಲಾ ಸಮಸ್ಯೆಗಳೂ... ಸಂಪೂರ್ಣ ವಾಸಿಯಾಯಿತು. ಆದರೆ... ಇತರರ ಜೊತೆ ಮಾತನಾಡಲು ಭಯ, ಸಂಕೋಚ ಮಾತ್ರ ಸ್ವಲ್ಪವೂ ಹೋಗಲಿಲ್ಲ. ಇವುಗಳನ್ನು ಹೋಗಲಾಡಿಸಲು ಪತ್ರೀಜಿ ಮಾಡಿರುವಂತಹ ಸಹಾಯ ಅಷ್ಟಿಷ್ಟಲ್ಲ. ಅವರ ನೇತೃತ್ವದಲ್ಲಿ ನಡೆದ ಬಹುತೇಕ ಪ್ರತಿಯೊಂದೂ ಸಭೆಯಲ್ಲೂ ನನ್ನಿಂದ ಮಾತನಾಡಿಸುತ್ತಿದ್ದರು, ತೊದಲು ತೊದಲಾಗಿ ಮಾತನಾಡಲು ಪ್ರಾರಂಭಿಸಿದ ನನ್ನ ಭಾಷಣ ತಡೆಯಿಲ್ಲದೇ ಸಾಗಲು ಏಕೈಕ ಮೂಲ ಕಾರಣ ಪತ್ರೀಸಾರೇ.

 

10ನೆಯ ತರಗತಿ ಪರೀಕ್ಷೆ ಬರೆಯುತ್ತಿರುವಾಗ... ನನಗೆ ಒಂದು ಪ್ರಶ್ನೆಗೆ ಉತ್ತರ ಗೊತ್ತಾಗಲಿಲ್ಲ. ಒಂದು ಬಾರಿ ಕಣ್ಣುಗಳನ್ನು ಮುಚ್ಚಿಕೊಂಡು ಪತ್ರೀಸಾರ್‌ನ ನೆನೆದು ಒಂದು ನಿಮಿಷ ಧ್ಯಾನ ಮಾಡಿದ ತಕ್ಷಣ ನನ್ನ ಟೀಚರ್ ಧ್ಯಾನದಲ್ಲಿ ಕಾಣಿಸಿಕೊಂಡು ಉತ್ತರವೆಲ್ಲಾ ತಿಳಿಸಿಕೊಟ್ಟರು. ನಿಜಕ್ಕೂ ಆ ಪ್ರಶ್ನೆಗೆ ಉತ್ತರ ಬರೆಯದೇ ಇದ್ದರೆ ನಾನು ಪರೀಕ್ಷೆಯಲ್ಲಿ ಉತ್ತೀರ್ಣವಾಗುತ್ತಿರಲಿಲ್ಲ. ನಮ್ಮ ಪತ್ರೀಸಾರ್ ಪ್ರಭಾವಗಳು ಹೀಗಿರುತ್ತವೆ ಇನ್ನು, ಆಗಿಂದ ನನಗೆ ಅಡ್ಡಿ ಎನ್ನುವುದೇ ಬರಲಿಲ್ಲ. ನನಗೆ 13 ವರ್ಷಗಳ ವಯಸ್ಸಿನಲ್ಲೇ ನಾನು "ಪೈಮಾ ವೈಸ್ ಪ್ರೆಸಿಡೆಂಟ್" ಆಗಿ ಆಯ್ಕೆಯಾಗಿದ್ದೆ.

 

ಆ ದಿನಗಳಲ್ಲಿ "ಪೈಮಾ ಮೈತ್ರೇಯ" ಎನ್ನುವ ವಾರ್ತಾಪತ್ರವನ್ನು (ನ್ಯೂಸ್ ಲೆಟರ್) ಪ್ರಕಟಿಸುತ್ತಿದ್ದೆವು. ಅದಕ್ಕೆ ಲೇಖನಗಳನ್ನು ಬರೆಯುವುದು, ವಿನ್ಯಾಸ, ಸಂಪಾದನೆ (ಎಡಿಟ್) ಮುಂತಾದ ವಿಭಾಗಗಳಲ್ಲಿ ನಾನು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿದ್ದೆ.

 

ರಾಜಶೇಖರ್ : ನೀವೆಲ್ಲಾ ’ಚಿಕ್ಕ ಮಕ್ಕಳಲ್ಲವೇ’... ಇದಕ್ಕೆಲ್ಲಾ ಹಣದ ವ್ಯವಸ್ಥೆ ಹೇಗಾಯಿತು?

 

ಪ್ರಣೀತ : ಪ್ರತಿಯೊಂದೂ ಬಾರಿ... ಪ್ರತಿಯೊಬ್ಬರನ್ನು ಹಣ ಕೇಳಿಪಡೆದು ಮುದ್ರಿಸುವುದು ತುಂಬಾ ಕಷ್ಟಕರವಾಗಿಯೇ ಇರುತ್ತಿತ್ತು. ನಾವೆಲ್ಲಾ ಸದಸ್ಯರು ಸೇರಿ ಬೆಂಗಳೂರು ಪಿರಮಿಡ್‌ನಲ್ಲಿ ಬುದ್ಧಪೂರ್ಣಿಮೆಯ ದಿನ ಕುಳಿತುಕೊಂಡು ಯೋಚಿಸುತ್ತಿರುವಾಗ ನಾನು... "ನಮಗೇ ಅಂತ ಸ್ವಲ್ಪ ಹಣ ಇರಬೇಕು... ಅದು ಒಂದು ಲಕ್ಷ ರೂಪಾಯಿಗಳಾದರೇ ಚೆನ್ನಾಗಿರುತ್ತದೆ" ಎಂದು ಧೃಡವಾಗಿ ಹೇಳಿದೆ. ನಮ್ಮ ಸದಸ್ಯರೆಲ್ಲಾ ನನ್ನ ಕಡೆ ವಿಚಿತ್ರವಾಗಿ ನೋಡಿದರು. ನಮ್ಮ ಸಮಾವೇಶ ಮುಗಿಸಿ ನಾವು ಹೊರಬಂದ ತಕ್ಷಣ ಮುಂಬಯಿ ಗ್ರೇಟ್ ಮಾಸ್ಟರ್ ಶ್ರೀ ಶ್ರೇಯಾನ್ಸ್ ದಾಗಾ ಅವರು ಕಾಣಿಸಿಕೊಂಡರು. ಅವರೆ, ಸ್ವಯಂ ಆಗಿ ಬಂದು ನಮ್ಮನ್ನು ಮಾತನಾಡಿಸಿ "ನಿಮ್ಮ ಪತ್ರಿಕೆ ಓದಿದ್ದೇನೆ... ತುಂಬಾ ಚೆನ್ನಾಗಿದೆ. ಇದನ್ನು ನಿಲ್ಲಿಸದೇ ಪ್ರಕಟಿಸಲು ಸ್ವಲ್ಪ ಹೆಚ್ಚು ಹಣ ಕೈಯಲ್ಲಿ ಇರಬೇಕಲ್ಲವೇ? ಎಷ್ಟು ಹಣವಿದ್ದರೆ ಚೆನ್ನಾಗಿರುತ್ತೆ ಅಂತಿರಾ? ಒಂದು ಲಕ್ಷ ಆದರೆ ಸಾಕಾ..." ಎಂದರು. ನಾವು ಆಶ್ಚರ್ಯದಿಂದ ಹೊರ ಬರುವುದಕ್ಕಿಂತಾ ಮುಂಚೆಯೇ ಅವರು... ಚೆಕ್ ಬರೆದು ಕೊಡುವುದು... ತಕ್ಷಣವೇ ನಡೆದುಹೋಯಿತು, "ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ನಾವು ತ್ರಿಕರಣ ಶುದ್ಧಿಯಿಂದ ಸಂಕಲ್ಪ ಮಾಡಿಕೊಂಡರೆ... ಅದು ಬೇಗ ಫಲಿಸುತ್ತದೆ ಎಂಬುದು ನಮಗೆ ತುಂಬಾ ಚೆನ್ನಾಗಿ ಅರ್ಥವಾಯಿತು.

 

ರಾಜಶೇಖರ್ : ಪತ್ರೀಸಾರ್ ಅವರ ಜೊತೆ ಇನ್ನೂ ನಿನ್ನ ಅನುಭವಗಳನ್ನು ವಿವರಿಸು?

 

ಪ್ರಣೀತ : ಹೌದು! ಎಲ್ಲದಕ್ಕಿಂತಾ ಅದೇ ಮುಖ್ಯ ಪತ್ರೀಜಿ ಅವರ ಜೊತೆ ಮೂರು ದಿನಗಳವರೆಗೂ ಪ್ರಯಾಣಿಸುವ ಭಾಗ್ಯ ನನಗೂ... ವಾಣಿ ಮೇಡಮ್ ಮಗಳು "ಚಂದನ"ಗೂ ದೊರಕಿತ್ತು. ಅವರು ನಮ್ಮನ್ನು ಅನೇಕ ಪ್ರದೇಶಗಳಿಗೆ ಕರೆದುಕೊಂಡು ಹೋದರು.. ಮತ್ತು ಕರೆದುಕೊಂಡು ಹೋದ ಪ್ರತಿ ಒಂದು ಸಭೆಯಲ್ಲೂ ಅವರು ಮಾತನಾಡುವುದರೊಂದಿಗೆ, ನಮಗೂ ಸಹ ಮಾತನಾಡಲು ಅವಕಾಶ ನೀಡಿ, ನಮ್ಮಲ್ಲಿರುವ ಪ್ರತಿಭೆ ಹೊರಬರುವ ಹಾಗೆ ಮಾಡಿದರು. ಅನೇಕ ನೂತನ ಸಂದೇಶಗಳನ್ನು ನೀಡಿದರು. ಸತ್ಯಾನ್ವೇಷಣೆಯಲ್ಲಿರುವವರು ಎಂತಹ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಮತ್ತು ನಾವಿಬ್ಬರೂ ಎಂತಹ ತಪ್ಪುಗಳನ್ನು ಮಾಡಿದ್ದೆವು ಎಂಬುದನ್ನು ಕೂಡಾ ತುಂಬಾ ವಿವರವಾಗಿ ತಿಳಿಯಪಡಿಸಿದರು. ಪ್ರಯಾಣಗಳಲ್ಲಿ ಆಯಾಸಪಡದೇ ಆನಂದವನ್ನು ಹೇಗೆ ಪಡೆಯಬೇಕು ಎಂಬುದನ್ನು ಮೊದಲನೆಯ ಬಾರಿ ಅರ್ಥವಾಗುವ ಹಾಗೆ ಮಾಡಿದರು.

 

ಆ ಮೂರು ದಿನಗಳಲ್ಲಿ ನಾನು ಅವರನ್ನು ಒಂದು ಪ್ರಶ್ನೆ ಕೇಳಿದೆ. "ನಮ್ಮನ್ನು ಹೊರ ಪ್ರದೇಶಗಳಲ್ಲಿ ತಿರುಗಾಡಿಸಿ ಸಂತೋಷಪಡುವ ಹಾಗೆ ಮಾಡುತ್ತಿದ್ದೀರ. ನನಗೆ ನನ್ನ ಒಳಗೆ ಕೂಡಾ ಹೋಗಿ ನನ್ನ ರಕ್ತಮಾಂಸಗಳನ್ನು, ಕರಳುಗಳನ್ನು, ಎದೆ ಮುಂತಾದ ಅಂಗಗಳನ್ನು ನೋಡಿಕೊಳ್ಳಬೇಕೆನ್ನಿಸುತ್ತಿದೆ, ಅವನ್ನು ತೋರಿಸುತ್ತೀರಾ?" ಎಂದು ಕೇಳಿದೆ. ಅವರು ಸ್ವಲ್ಪ ಕೋಪದಿಂದ ನನ್ನ ಕಡೆ ನೋಡಿ "ನೋಡಬೇಕಾದರೆ ಬಂದು ನನ್ನ ಎದುರಿಗೆ ಕುಳಿತುಕೊಂಡು ಧ್ಯಾನ ಮಾಡು" ಎಂದು ನನ್ನ ಕೂರಿಸಿದರು. ನಾನು ಕುಳಿತು ಒಂದು ನಿಮಿಷ ಸಹ ಆಗಿರಲಿಲ್ಲ... ನನ್ನ ಒಳಗೆ ಹೊರಟುಹೋದೆ. ನನಗೆ ಸಮಸ್ತ ಲೋಕಗಳು, ಹೊಳೆಯುತ್ತಿರುವ ಕಾಂತಿಗಳಿಂದ ತುಂಬಿರುವ ಅನೇಕ ಜನ ಮಾಸ್ಟರ‍್ಸ್ ಕಾಣಿಸಿಕೊಂಡರು. ಅವರು ನನಗೆ ಅನೇಕ ವಿಷಯಗಳು ತಿಳಿಸಿದರು. ಆದರೆ... ನನಗೆ ಎಲ್ಲಾ ಅರ್ಥವಾಗಲಿಲ್ಲ. ತುಂಬಾ ಸ್ಪಷ್ಟವಾಗಿ ಹೇಳಿದ್ದು ಏನೆಂದರೆ "ಧ್ಯಾನ-ಜ್ಞಾನ ಸಂಪಾದನೆಗಿಂತಾ ಮುಖ್ಯವಾದದ್ದು ಏನೂ ಇಲ್ಲ. ಅವುಗಳನ್ನು ಹೇರಳವಾಗಿ ನೀಡುತ್ತಿರುವ ಪತ್ರೀಸಾರ್‌ನ ಮೀರಿದ ಗುರುವು ಸದ್ಯಕ್ಕೆ ಈ ಪ್ರಪಂಚದಲ್ಲಿ ಯಾರೂ ಇಲ್ಲ" ಎಂದು ಒತ್ತಿ ಒತ್ತಿ ಹೇಳಿದರು. ನೀನು, ಪತ್ರೀಸಾರ್, ನಾವೂ, ಈ ಸಮಸ್ತ ಲೋಕಗಳೂ ಎಲ್ಲಾ ಸಹ... ಯಾರಿಗೆ ಯಾರೂ ಬೇರೆ ಅಲ್ಲ" ಎಂದು ಹೇಳಿದರು. ಆ ಕ್ಷಣದಲ್ಲಿ "ನಾನೇ ಎಲ್ಲಾ" ಎನ್ನುವ ಅದ್ಭುತ ಸತ್ಯ ನನಗೆ ಅರ್ಥವಾಯಿತು.

 

ರಾಜಶೇಖರ್ : ನೋಡಿದ್ದಿಯಾ ಮತ್ತೆ ನೀನು... ಪತ್ರೀಜಿ ಅಂದರೆ ಏನೋ ನನಗೆ ಅರ್ಥವಾಗುವ ಹಾಗೆ ಮಾಡಿದ್ದೀಯ. ಮತ್ತೆ ಪತ್ರೀಜಿ ಆರಾ ನೋಡಿದ್ದೀಯಾ?

 

ಪ್ರಣೀತ : ಅಮ್ಮಾ ಅದು ಮಾಡದೇ ಇರುತ್ತೇನಾ? ಆದರೆ, ನಾನು ನೋಡಬೇಕೆಂದು ಎಷ್ಟು ಸಲ ಕುಳಿತುಕೊಂಡರೂ ಕಾಣಿಸಲಿಲ್ಲ ಆದರೆ, ಒಂದು ದಿನ ನನ್ನ ಮನಸ್ಸು ಮೊದಲೇ ಶೂನ್ಯವಾಗಿದ್ದ ಸಂದರ್ಭದಲ್ಲಿ ಧ್ಯಾನಕ್ಕೆ ಕುಳಿತುಕೊಂಡೆ. ಆಗ ಸಾರ್ ಕಾಣಿಸಿಕೊಂಡರು. ಅವರು ಸಹ ಧ್ಯಾನ ಭಂಗಿಯಲ್ಲೇ ಇದ್ದರು... ಅವರ ಸುತ್ತೂ ಬಂಗಾರದ ಕಾಂತಿಯುತ ಕಿರಣಗಳು ಸ್ವಲ್ಪದೂರದವರೆಗೂ ವ್ಯಾಪಿಸಿದೆ. "ಹೀಗೆ ಎಷ್ಟು ದೂರ ಇದ್ದಿರಬಹದು?" ಎಂದು ನಾನು ಪರೀಕ್ಷಿಸಿ ನೋಡಿದರೆ, ಎಲ್ಲಿಂದ ನೋಡಿದರೂ..."120 ಕಿಲೋಮೀಟರ್‌ಗಳು" ಎನ್ನುವ ಬೋರ್ಡ್‌ಗಳು ಕಾಣಿಸಿತು ಆ ಬಂಗಾರದ ಬಣ್ಣ ತುಂಬಾ ಕಾಂತಿಯುತವಾಗಿ... ಬಂಗಾರದ ಸೂರ್ಯನನ್ನು ಹತ್ತಿರದಿಂದ ನೋಡಿದರೆ ಹೇಗಿರುತ್ತದೊ ಹಾಗೆಯೇ ಇದೆ. ನನ್ನ ಶರೀರದಲ್ಲೆಲ್ಲಾ ನಡುಕ ಉಂಟಾಗಿ ನಾನು ಕಣ್ಣು ತೆಗೆದುಬಿಟ್ಟೆ. ಹಾಗೆ ತೆರೆಯದೇ ಹೋಗಿದ್ದರೆ "ನನ್ನ ಮೂರನೆಯ ಕಣ್ಣು ಸಹ ಸ್ಫೋಟಗೊಳ್ಳುತ್ತಿತ್ತೋ ಏನೊ" ಎನ್ನುವಷ್ಟು ಭಯವಾಗಿತ್ತು.

 

ಇನ್ನೊಂದು ದಿನ ಬೆಳಗ್ಗೆ ಹೊತ್ತು ನಮ್ಮಮ್ಮ ನನಗೆ ಜಡೆ ಹಾಕುತ್ತಿದ್ದರು. ನಾನು ಜಡೆ ಹಕಿಸಿಕೊಳ್ಳುತ್ತಲೇ ಟಿ.ವಿ. ನೋಡುತ್ತಿದ್ದೆ. ಟಿ.ವಿ. ಮೂಲಕ ಲಕ್ಷಾಂತರ ಜನಕ್ಕೆ ಪರಿಚಿತರಾದ ಒಬ್ಬ ಆಧ್ಯಾತ್ಮಿಕ ಶಾಸ್ತ್ರಜ್ಞರ ಪ್ರವಚನ ನಡೆದಿತ್ತು. ತಕ್ಷಣ ನನ್ನ ಕಂಠ ಸಾವಿರ ಕಂಠಗಳಾಗಿಸಿ ಪ್ರತಿಧ್ವನಿಸುತ್ತಾ "ಈತ ಸೆಕೆಂಡ್ ಬಾಡಿ ಮಾಸ್ಟರ್... ನಮ್ಮ ಪತ್ರೀಜಿ 7ನೇ ಬಾಡಿ ಮಾಸ್ಟರ್ ನಿತ್ಯ ಸತ್ಯಲೋಕ ವಾಸಿ" ಎನ್ನುವ ಕೂಗು ಹೊರಹೊಮ್ಮಿತು. ಅಮ್ಮ ಒಂದು ಕ್ಷಣ ಹೆದರಿ "ಏಕೆ ಹಾಗೆ ಕಿರುಚುತ್ತಿದ್ದೀಯ?" ಎನ್ನುತ್ತಾ ಪೆಚ್ಚು ಮುಖ ಹಾಕಿಕೊಂಡರು. ನಾನು ಕೂಗಿದ ಆ ಕೂಗು ನನ್ನದು... ಎಂದು ನನಗೆ ಈಗಲೂ ನಂಬಲಾಗುತ್ತಿಲ್ಲ.

 

ರಾಜಶೇಖರ್ : ಪ್ರಣೀತ ನಿನ್ನ ಅನುಭವಗಳು ತುಂಬಾ ಅದ್ಭುತವಾಗಿದೆ. ಇನ್ನು ಧ್ಯಾನದಿಂದ ನಿನಗೆ ಆದ ಮಾನಸಿಕ ಪ್ರಗತಿಯನ್ನು ಕುರಿತು ಹೇಳು.

 

ಪ್ರಣೀತ : "ಏಕಸಂಧಿಗ್ರಾಹಿ" ಎನ್ನುವ ಮಾತನ್ನು ಕೆಲವರನ್ನು ಕುರಿತು ಕೆಲವು ಬಾರಿ ಕೇಳಿಸಿಕೊಂಡೆ. ಆದರೆ,... ನನ್ನ ಧ್ಯಾನ ಸಾಧನೆ ಅದು ನನಗೆ ಸಾಧ್ಯವಾಗುವ ಹಾಗೆ ಮಾಡಿದೆ. 12ನೇ ವಯಸ್ಸಿನಲ್ಲೇ ನಾನು ನ್ಯೂಟನ್ ಅಂಕಲ್ ಅವರನ್ನು ಭೇಟಿಯಾಗಿ "ನಾವು ಇತರರನ್ನು ಹಿಂದಿನ ಜನ್ಮಗಳ ನೆನಪಿಗೆ ಕಳುಹಿಸುವ ವಿಧಾನವನ್ನು ನನ್ನ ಕಣ್ಣಿಂದ ನೋಡಬೇಕು ಎಂದು ಇಷ್ಟ" ಎಂದು ಕೋರಿದೆ. ಅವರು ಸಂತೋಷಪಟ್ಟು ನೋಡಲು ನನಗೆ ಅನುಮತಿ ನೀಡಿದರು. ಚೆನ್ನಾಗಿ ಅರ್ಥಮಾಡಿಕೊಂಡು ನಾನು ಮರುದಿನವೇ ಮೂರು ಜನರನ್ನು ಯಶಸ್ವಿಯಾಗಿ ಅವರೇ ತಮ್ಮ ಪೂರ್ವ ಜನ್ಮಗಳನ್ನು ನೋಡಿಕೊಳ್ಳುವಂತೆ ಮಾಡಿದೆ. ಇದು ಆಗಲೀ, ಇದಕ್ಕಿಂತಾ ಮುಂಚೆ ಹೇಳಿದ್ದಾಗಲಿ... ನನ್ನ ದೊಡ್ಡತನ ಹೇಳಕೊಳ್ಳಲಿಕ್ಕಾಗಿ ಹೇಳುತ್ತಿಲ್ಲ. ನನಗೆ ಮಾಡಲಾಗಿದ್ದು ಪ್ರತಿಯೊಬ್ಬರೂ ಮಾಡಬಲ್ಲರು ಧ್ಯಾನ ಸಾಧನೆ ಅಧಿಕವಾಗಿ ಮಾಡುತ್ತಾ ಧ್ಯಾನ ಪ್ರಚಾರ ಆದಷ್ಟು ಹೆಚ್ಚು ಮಾಡಿದರೆ ಯಾರಾದರೂ ಸರಿಯೆ ನನ್ನ ಹಾಗೆ... ಇನ್ನೂ ಹೇಳಬೇಕಾದರೆ ನನ್ನ ಮೀರಿಸಿದವರಾಗುತ್ತಾರೆಂದು ಘಂಟಾಘೋಷವಾಗಿ ಹೇಳಬಲ್ಲೆ.

 

ರಾಜಶೇಖರ್ : ಇನ್ನೂ ಪೂರ್ವ ಜನ್ಮಗಳನ್ನೇನಾದರೂ ನೋಡಿಕೊಂಡಿಯಾ?

 

ಪ್ರಣೀತ : ಉದ್ದೇಶಪೂರ್ವಕವಾಗಿಯೇ ನನ್ನ ಪೂರ್ವಜನ್ಮಗಳನ್ನು ನೋಡಿಕೊಳ್ಳಬೇಕೆಂಬ ಬಯಕೆ ನನಗೆ ಇಲ್ಲ. ಪತ್ರೀಸಾರ್ "ವರ್ತಮಾನಿಭವ" ಎನ್ನುತ್ತಾರಲ್ಲವೇ ಪ್ರಸ್ತುತ ಜನ್ಮವನ್ನು ಪೂರ್ತಿಯಾಗಿ ಫಲಪ್ರದಗೊಳಿಸಿಕೊಳ್ಳಬೇಕೆಂಬುವುದೇ ನನ್ನ ಗುರಿ. ಒಂದು ಜನ್ಮದಲ್ಲಿ ಅನಾಥ ಬಾಲಕನಾಗಿ ಜೀವಿಸಿದ ನನ್ನ ದೇಹ ಪಟ್ಟ ಮಾನಸಿಕ, ಶಾರೀರಿಕ ದುಸ್ಥಿತಿ ನನಗೆ ಈಗಲೂ ಆಗಾಗ ನೆನಪಿಗೆ ಬರುತ್ತಾ ಇರುತ್ತದೆ. ಆ ಜನ್ಮದ ವಾಸನೆಯೇ ಇರಬಹುದು... ಧ್ಯಾನ ಅಂದರೆ ಏನೂ ಕೂಡಾ ತಿಳಿಯದ ದಿನಗಳಿಂದ... ಇಂದಿನವರೆಗೂ ಕೂಡಾ ನನಗೆ ಅನಾಥರೆಂದರೆ ಅಪರಿಮಿತವಾದ ಪ್ರೀತಿ. "ಪ್ರಕೃತಿಯಲ್ಲಿರುವ ಪ್ರತಿ ಒಂದು ಕೂಡಾ ಚೈತನ್ಯದಿಂದ ಕೂಡಿರುವ ಅಣುಗಳಿಂದ ತುಂಬಿರುತ್ತದೆ" ಎಂದು ಪತ್ರೀಸಾರ್ ನನಗೆ ಒಂದು ಸಲ ಹೇಳಿದ್ದರು. ನನಗೆ ಇದನ್ನು ಅನುಭವದಲ್ಲಿ ತಂದುಕೊಳ್ಳಬೇಕೆಂಬ ಬಯಕೆ ಉಂಟಾಯಿತು.

 

ಮಾಸ್ಟರ್ ಚಾರಿ ಅವರು, ಮಾಸ್ಟರ್ ರಂಗಾರೆಡ್ಡಿ ಅವರು ಒಂದು ಸಲ ನನಗೆ ಒಂದು ಗೊಂಬೆಯನ್ನು ಬಹುಮಾನವಾಗಿ ನೀಡಿದರು. ಪೂರ್ತಿಯಾಗಿ ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಭದ್ರವಾಗಿ ಪ್ಯಾಕ್ ಮಾಡಿ ಕೊಟ್ಟರು. "ಒಳಗೆ ಇದ್ದಿದ್ದು ಗೊಂಬೆ" ಎಂದು ಕೂಡಾ ನನಗೆ ಗೊತ್ತಿಲ್ಲ. ನಾನು ಸ್ವಲ್ಪ ಹೊತ್ತು ಧ್ಯಾನ ಮಾಡಿ ಪೆಟ್ಟಿಗೆಯಲ್ಲಿರುವ ನಿನ್ನ ಆಕಾರವೇನು? ನಿನ್ನನ್ನು ಎಲ್ಲಿ ತಯಾರು ಮಾಡಲಾಗಿದೆ?" ಎಂದು ನನ್ನ ಜೀವಕೋಶಗಳನ್ನು ಕೇಳಿ ಪೆಟ್ಟಿಗೆಯನ್ನು ಕಿವಿ ಹತ್ತಿರ ಇಟ್ಟುಕೊಂಡೆ. ತಕ್ಷಣ ನನ್ನ ಕಿವಿಯಲ್ಲಿ "ನಾನು ಒಂದು ಪುಟ್ಟ ಮರಿ ಗೊಂಬೆ.. ತೈವಾನ್‌ನಲ್ಲಿ ನನ್ನ ತಯಾರು ಮಾಡಲಾಗಿದೆ" ಎಂದು ಕೇಳಿಸಿತು. ಪೆಟ್ಟಿಗೆ ತೆರೆದು ನೋಡಿದರೆ ಮಗು ಗೊಂಬೆ... ಅದರ ಮೇಲೆ "ಮೇಡ್ ಇನ್ ತೈವಾನ್" ಎಂದು ಬರೆದಿದೆ. ಈ ವಿಚಿತ್ರವಾದ ಅನುಭವದಿಂದ ಸೃಷ್ಟಿಯಲ್ಲಿ ಇರುವ ಪ್ರತಿ ಒಂದನ್ನೂ ಪ್ರೀತಿಸಬೇಕೆಂಬ ಪ್ರೇರಣೆ ನನಗೆ ಉಂಟಾಯಿತು.

 

ಧ್ಯಾನದಿಂದ ನನಗೆ ಸಿಗದೇ ಇರುವುದು ಯಾವುದೂ ಇಲ್ಲ. ನಾನು ಇಂಟರ್ ಆದ ತಕ್ಷಣ "ಇಂಜಿನಿಯರಿಂಗ್‌ಗೆ ಸೇರಬೇಕು" ಎಂದು ಅಂದುಕೊಂಡ ತಕ್ಷಣ Dr. B. N. ರೆಡ್ಡಿಯವರ ಸಹಾಯದಿಂದ ಎಮ್.ಜಿ.ಐ.ಟಿ.ನಲ್ಲಿ B.A. ಸೀಟ್ ಸಿಕ್ಕಿತು. ಕಾಲೇಜಿನಲ್ಲಿ ಕೂಡಾ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಯಕಿಯಾಗಿ ಮುಂದೆ ಇದ್ದು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದೆ" ಯಾವ ಕೆಲಸವಾದರೂ ಮಾಡಬಲ್ಲ ಶಕ್ತಿ, ಸಾಮರ್ಥ್ಯಗಳು ಕೂಡಾ ಅಖಂಡ ಧ್ಯಾನ ಸಾಧನೆ ಮತ್ತು ಪತ್ರೀಜಿ ಮಾರ್ಗದರ್ಶನದಿಂದಲೇ ನನಗೆ ಸಾಧ್ಯವಾಯಿತು" ಎಂದು ಹೇಳುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ ಬಿ.ಇ. ಕೊನೆಯ ವರ್ಷದಲ್ಲಿ ಕ್ಯಾಂಪಸ್ ಸೆಲಕ್ಷನ್ ನಡೆದು.. ನನಗೆ ಕಂಪ್ಯೂಟರ್ ಸೈನ್ಸ್ ಕಾರ್ಪೊರೇಷನ್, ಬಿರ್ಲಾ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೆಲಸ ಸಿಕ್ಕಿತು ಸಾಮಾನ್ಯರಿಗೆ ಎಟಕದಂತಹ ಇಂತಹ ಕಂಪೆನಿಗಳಲ್ಲಿ ಹೀಗೆ ಕೆಲಸ ಸಿಗುವುದು ಎಂದರೆ, ಅದು ಕೇವಲ ಲಿವಿಂಗ್ ಗಾಡ್ ಪತ್ರೀಜಿ, ಆಸ್ಟ್ರಲ್ ಮಾಸ್ಟರ್‌ಗಳ ಕರುಣೆ ಮತ್ತು ನನ್ನ ಧ್ಯಾನ ಸಾಧನೆಯಿಂದಲೇ ಇದು ಸಂಭವಿಸಿದೆ ಎನ್ನಬಹುದು.

 

ಇವಷ್ಟೇ ಅಲ್ಲದೆ, "ಟೀಚ್ ಫಾರ್ ಇಂಡಿಯಾ" ಎನ್ನುವ ಸಂಸ್ಥೆಯಲ್ಲಿ ಕೂಡಾ ನನಗೆ ಅವಕಾಶ ದೊರೆತಿತ್ತು. ಅದು ಪುಣೆನಲ್ಲಿರುವ ತುಂಬಾ ದೊಡ್ಡ ಸಂಸ್ಥೆ ಇವೆಲ್ಲ ಹುದ್ದೆಗಳು ಸಹ ಉತ್ತಮವಾದ ಅವಕಾಶಗಳೇ ಆಗಿರುವುದರಿಂದ ನಾನು ಆಯ್ಕೆಯ ಸಂದಿಗ್ಧತೆಯಲ್ಲಿದ್ದಾಗ... ಪತ್ರೀಸಾರ್ ಸಲಹೆ ಕೇಳಿದೆ. "ಬೋಧನೆ ಎನ್ನುವುದು ದಿವ್ಯತ್ವಕ್ಕೆ ಪ್ರತೀಕ; ಅದು ಯಾವ ಬೋಧನೆ ಆದರೂ ಸರಿಯೆ ದೈವತ್ವ ತುಂಬಿರುತ್ತದೆ ಆದ್ದರಿಂದ, ನೀನು ಮತ್ತೇನು ಯೋಚಿಸದೆ ಪುಣೆಯಲ್ಲಿನ ಕೆಲಸಕ್ಕೆ ಸೇರಿಕೋ" ಎಂದು ಧೃಢವಾಗಿ ಹೇಳಿಬಿಟ್ಟರು. ಹುಟ್ಟಿದಾಗಿನಿಂದಾ ಅಮ್ಮನ ಸೆರಗನ್ನು ಬಿಟ್ಟಿರಲಿಲ್ಲ. ರಾಜ್ಯವಲ್ಲದ ರಾಜ್ಯದಲ್ಲಿ ನಮ್ಮ ಭಾಷೆ ಸ್ವಲ್ಪವಾದರೂ ಕೇಳಿಸದ ಪ್ರಾಂತದಲ್ಲಿ ನಿಜಕ್ಕೂ ಅಲ್ಲೇ ಹುಟ್ಟಿ ಬೆಳೆದಷ್ಟು ಸುಲಭವಾಗಿ ಹುಷಾರಾಗಿ ನನಗೆ ಕೆಲಸ ಮಾಡಲು ಸಾಧ್ಯವಾಯಿತು ಅಷ್ಟೇ ಅಲ್ಲ, ನಮ್ಮ ಹೈದರಾಬಾದ್ ಗ್ರೇಟ್ ಮಾಸ್ಟರ್ ಶ್ರೀ ಮಧುಮೋಹನ್ ಅವರ ಸಲಹೆಯಂತೆ "ಯಾಷ್ ಟೆಕ್ನಾಲಜಿ" ಎನ್ನುವ ಕಾರ್ಪೊರೇಟ್ ಕಂಪೆನಿಯಲ್ಲಿ ಎರಡು ದಿನ ಧ್ಯಾನದ ತರಗತಿಗಳನ್ನು ಸಹ ನಡೆಸಿದೆ. ಪ್ರಾಪಂಚಿಕವಾದ ವಿವಿಧ ರಂಗಗಳಲ್ಲಿ ಪ್ರಾವೀಣ್ಯತೆಯನ್ನು ಸಂಪಾದಿಸಿದವರು ಅನೇಕರು ನನ್ನ ಕ್ಲಾಸ್‌ನ್ನು ಕೇಳಿಸಿಕೊಂಡು ತುಂಬಾ ಪ್ರಶಂಸಿದ್ದು ನಾನು ಎಂದೂ ಮರೆಯಲಾರದ ಮಧುರಾನುಭೂತಿ.

 

ರಾಜಶೇಖರ್ : ಚಿಕ್ಕ ಹುಡುಗಿಯಾದರೂ ಅನ್ಯ ಪ್ರದೇಶದಲ್ಲಿ ಸಹ ಧ್ಯಾನಾಮೃತವನ್ನು ಹಂಚುವುದು ತುಂಬಾ ಅದ್ಭುತಕರವಾದ ವಿಷಯ.

 

ಪ್ರಣೀತ : "ಅದು 'ಅನ್ಯ' ಪ್ರದೇಶವಾ? ’ನಮ್ಮ’ ಪ್ರದೇಶವಾ?" ಎನ್ನುವ ಆಲೋಚನೆ ನನ್ನ ಅಚೇತನ ಮನಸ್ಸಿನಲ್ಲಿ ಸಹ ಬರದ ಹಾಗೆ ರಾಂಪಾರವರು, ಪತ್ರೀಜಿ ಸೇರಿ ನನ್ನ ರೂಪಿಸಿದರು. ನನಗೆ ಅನೇಕ ಅವಕಾಶಗಳನ್ನು ಕಲ್ಪಿಸಿ ನನ್ನ ಆತ್ಮೋದ್ಧಾರಕ್ಕೆ ಸಹಾಯ ಮಾಡಿದರು.

 

"ಟೀಚ್ ಫಾರ್ ಇಂಡಿಯಾ"ನಲ್ಲಿ ಮಕ್ಕಳಿಗೆ ಬೋಧಿಸುತ್ತಿದ್ದರು. ಆ ಮಕ್ಕಳೆಲ್ಲರೂ ಭಯಂಕರವಾದ ಬಡತನದ ಕುಟುಂಬದಿಂದ ಬಂದವರು. ಕುಟುಂಬದ ಗಂಡಸರು ಕುಡಿತದ ಪಾಲಾಗಿ ಹೆಂಡತಿ ಮಕ್ಕಳನ್ನು ಇನ್ನೂ ದರಿದ್ರರನ್ನಾಗಿಸಿದ ಪ್ರದೇಶವದು. ದೊಡ್ಡವರನ್ನು ಆದಷ್ಟು ಕುಡಿತದಿಂದ ಬಿಡಿಸಲು, ಮಕ್ಕಳನ್ನು ದೈನ್ಯಸ್ಥಿತಿಯಿಂದ ಧೈರ್ಯಸ್ಥಿತಿಗೆ ಕರೆತರಲು ಸಾಕಷ್ಟು ಕೌನ್ಸೆಲಿಂಗ್‌ಗಳನ್ನು ನಿರ್ವಹಿಸಿದೆ. ಹಿಂದೆ ನನ್ನ ಅನಾಥಜನ್ಮ ನೆನಪಿಗೆ ಬಂದು ಅಲ್ಲಿರುವ ಎಲ್ಲಾ ಮಕ್ಕಳಿಗೂ ನನ್ನ ಸ್ನೇಹಿತರ ಮತ್ತು ಇತರ ಸಹಾಯ ಸಹಕಾರಗಳಿಂದ ಸ್ವಲ್ಪ ಧನವನ್ನು ಶೇಖರಿಸಿ ಸ್ವಲ್ಪ ಮಟ್ಟಿಗೆ ಅವರ ಹಸಿವೆಯನ್ನು ನೀಗಿಸಿದ್ದು ನನಗೆ ತುಂಬಾ ತೃಪ್ತಿಯನ್ನು ನೀಡಿತು. ಈ ವಿಷಯದಲ್ಲಿ ಪೈಮಾ ಮಾಸ್ಟರ‍್ಸ್ ನನಗೆ ತುಂಬಾ ಸಹಕಾರವನ್ನು ನೀಡಿದರು.

 

ಅನಂತರ, ಟೀಚ್ ಫಾರ್ ಇಂಡಿಯಾಗೆ ರಿಕ್ರೂಟ್‌ಮೆಂಟ್ ಅಸೋಸಿಯೇಟ್ ಆಗಿ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಾ "NALSAR", "ISB" ಅಂತಹ ಅತ್ಯಂತ ಹೆಸರವಾಸಿಯುಳ್ಳ ಕಾಲೇಜಿಗಳಲ್ಲಿ ಕೂಡಾ ಪ್ರಚಾರೋಪನ್ಯಾಸಗಳನ್ನು ನೀಡಿದೆ.

 

ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಮತ್ತೊಬ್ಬರು ಅಜ್ಞಾತ ಗುರುವು ಕೂಡಾ ನನಗೆ ಸಿಕ್ಕಿದರು. ಅವರು ಪದೇ ಪದೇ ಧ್ಯಾನದಲ್ಲಿ ಕಾಣಿಸಿಕೊಳ್ಳುತ್ತಾ "ಪ್ರತಿಯೊಬ್ಬರೂ ಪ್ರಾಪಂಚಿಕ ಜೀವನವನ್ನು ಆನಂದಿಸುತ್ತಲೇ... ಅಂತರ್‌ಲೋಕ ಆನಂದ ಸೌಖ್ಯಗಳನ್ನು ತಪ್ಪದೇ ಪಡೆಯಬೇಕು" ಎಂದು ಹೇಳುತ್ತಿದ್ದರು. "ನೀವು ಯಾರು?" ಎಂದು ಕೇಳಿದರೆ "ನಾನು ವೆಸ್ಲೀ" ಎಂದು ಹೇಳಿದರು. "ಅಮ್ಮ ಅವರು ಯಾರು?" ಎಂದು ನ್ಯೂಟನ್ ಅಂಕಲ್ ಅವರನ್ನು ಕೇಳಿದರೆ "ಅವರು ದೊಡ್ಡ ಆಧ್ಯಾತ್ಮಿಕ ಬೋಧಕರು. ನಮ್ಮ ಹೈದರಾಬಾದ್‌ನಲ್ಲೆ ಅವರ ಹೆಸರಲ್ಲಿ ಅನೇಕ ಶಾಲಾಕಾಲೇಜುಗಳು ಇವೆ ಅಲ್ಲವೇ" ಎಂದರು.

 

ರಾಜಶೇಖರ್ : ಈಗ ನೀನು ಮಾಡುತ್ತಿರುವ ಕೆಲಸವೇನು?

 

ಪ್ರಣೀತ : ನಾನು ಯಾವ ಇಂಟರ್ವ್ಯೂಗೆ ಹೋದರೂ ಒಂದು ಗಂಟೆಕಾಲ ಧ್ಯಾನ ಮಾಡಿ ಹೋಗುತ್ತಿದ್ದೆ. ಎಲ್ಲಿ ಹಾಜರಾದರೂ ಅಲ್ಲಿ ಸೆಲೆಕ್ಟ್ ಆಗುತ್ತಿದ್ದೆ "ಟೈಮ್ಸ್ ಆಫ್ ಇಂಡಿಯಾ"ನಲ್ಲಿ ಕೆಲಸ ಮಾಡಲು ಅವಕಾಶವಾಗಿತ್ತು. ಈ ನಡುವೆ "ಕ್ವಾಲ್ಕಾಮ್" ಎನ್ನುವ ಅಮೇರಿಕಾ ಕಂಪೆನಿಯಲ್ಲಿ ಕೆಲಸ ದೊರಕಿತು.

 

ರಾಜಶೇಖರ್ : ಇನ್ನು ನಿನಗೆ ಇಷ್ಟವಾದ ವಿಷಯಗಳನ್ನು ಕುರಿತು ಹೇಳಬಹುದಲ್ಲ.

 

ಪ್ರಣೀತ : ಎಲ್ಲಾ ಹೆಣ್ಣು ಮಕ್ಕಳ ಹಾಗೆ ನನಗೆ ಸಹ ಹೂಗಳೆಂದರೆ ವ್ಯಾಮೋಹ ಇತ್ತು. ಪತ್ರೀಸಾರ್ ಪರಿಚಯವಾಗುವುದಕ್ಕಿಂತಾ ಮುಂಚೆಯೇ 9, 10 ವರ್ಷಗಳ ಪ್ರಾಯದಲ್ಲಿ ಯಾವ ಗಿಡದ ಹತ್ತಿರ ಹೋಗಿ ಯಾವ ಹೂವು ಕೀಳಲು ಪ್ರಯತ್ನಿಸಿದರೂ... ಯಾವುದೊ ಅದೃಶ್ಯಹಸ್ತ ನನ್ನ ಕೈಯನ್ನು ಬಲವಂತವಾಗಿ ಹಿಂದಕ್ಕೆ ಎಳೆದುಹಾಕುತ್ತಿತ್ತು ಆ ಭಯದಿಂದ ಆಗ ಹೂಗಳನ್ನು ಕೀಳುವುದನ್ನು ಬಿಟ್ಟುಬಿಟ್ಟೆ. ಈಗ ಭಯದಿಂದ ಅಲ್ಲ.. ಪ್ರೀತಿಯಿಂದ... ಕೀಳುವುದನ್ನು ಬಿಟ್ಟಿದ್ದೇನೆ. "ಎಲ್ಲಾ ನಾನೆ, ನಾನೇ ಎಲ್ಲಾ" ಎನ್ನುವ ಆತ್ಮಬೋಧವೇ ಇದಕ್ಕೆ ಕಾರಣ.

 

ಒಂದು ಸಲ ನಮ್ಮ ಮನೆಯಲ್ಲಿ ನಮ್ಮ ಅಮ್ಮ, ನಾನು ಇನ್ನೂ ಕೆಲವರು ಸೇರಿ ಧ್ಯಾನ ಮಾಡುತ್ತಿದ್ದೆವು. ನಾನು ಸ್ವಲ್ಪ ಹೊತ್ತಿನ ನಂತರ ಕಣ್ಣುಗಳನ್ನು ಬಿಟ್ಟೆ. ಆಗಲೇ ನನ್ನ ಆಧ್ಯಾತ್ಮಿಕ ಜೀವನದಲ್ಲಿ ಪ್ರವೇಶಿಸಿದ ರಾಂಪಾ ಮಾಸ್ಟರ್ ಕಾಣಿಸಿಕೊಂಡರು. ಅವರು ನನ್ನ ಕಡೆ ನೋಡದೆ ನಮ್ಮ ಕೊಠಡಿಯ ಛಾವಣಿಯ ಕಡೆ ತದೇಕದೃಷ್ಟಿಯಿಂದ ನೋಡಿದರು. ಕೆಲವೇ ಕ್ಷಣಗಳಲ್ಲಿ ಛಾವಣಿ ಪೂರ್ಣವಾಗಿ ಆಕ್ರಮಿಸುತ್ತಾ ಒಂದು ದೊಡ್ಡ ಪಿರಮಿಡ್ ದರ್ಶನ ನೀಡಿತು. ಆ ದಿನಗಳಲ್ಲಿ ನಮಗೆ ಗೀಜಾ ಪಿರಮಿಡ್ ಮಾತ್ರ ಗೊತ್ತಿತ್ತು. ಆದರೆ, ಸಮುದ್ರ ಗರ್ಭದಲ್ಲಿ ಮುಳುಗಿರುವ ಅನೇಕ ಪಿರಮಿಡ್‌ಗಳು ನನಗೆ ಧ್ಯಾನದಲ್ಲಿ ಕಾಣಿಸಿಕೊಂಡಿದ್ದವು. ನ್ಯೂಟನ್ ಅಂಕಲ್‌ನ ಕೇಳಿದರೆ "ನಮಗೆ ಗೊತ್ತಿರುವ ಪಿರಮಿಡ್ಸ್‌ಗಿಂತ ಕೂಡಾ ಅತ್ಯಂತ ಪ್ರಾಚೀನ ಕಾಲದ್ದೇ ನೀನು ನೋಡಿದ್ದು. ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದರೂ, ಕಾಲಕ್ರಮೇಣ ಸಮುದ್ರ ಗರ್ಭದಲ್ಲಿ ಬೆರೆತು ಹೋಗಿದೆ".

 

ರಾಜಶೇಖರ್ : ಪತ್ರೀಜಿ ಅವರನ್ನು ಕುರಿತು ಇನ್ನೂ ಏನಾದರು ಹೇಳಬಹುದಾ?

 

ಪ್ರಣೀತ : 2000ನೇ ವರ್ಷ ನವೆಂಬರ್ 11ನೆಯ ದಿನಾಂಕ (ಸಾರ್ ಹುಟ್ಟಿದ ಹಬ್ಬದ ದಿನ) ನಾನು ಧ್ಯಾನದಲ್ಲಿ ಕುಳಿತಿರುವಾಗ... ಒಂದು ಸುಂಟರ ಗಾಳಿಯ ಹಾಗೆ ಇರುವಂತಹದ್ದು ಬಂದು ನನ್ನ ಸುತ್ತೂ ಹರಡಿ ಮೇಲಕ್ಕೆ ಕರೆದುಕೊಂಡು ಹೋಗಿ ಒಂದು ಕಡೆ ನಿಲ್ಲಿಸಿತು. ನಾನು ನೋಡುತ್ತಿರುವಾಗಲೇ... ನನಗೆ ಸ್ವಲ್ಪ ದೂರದಲ್ಲಿ ಹೊಗೆಯಹಾಗೆ, ಮಂಜಿನ ಹಾಗೆ ಇರುವಂತಹದ್ದು ಏರ್ಪಟ್ಟು ನಿಧಾನಕ್ಕೆ ತೇಲಿಹೋಗಿದೆ. ಆಗ ಅಲ್ಲಿ ಆಕಾಶದಲ್ಲಿ ತೇಲಾಡುತ್ತಿರುವ ಹಾಗೆ ಹತ್ತು ಜನ ಮಾಸ್ಟರ್ ಕುಳಿತಿದ್ದರು. ಅವರಲ್ಲಿ ಪತ್ರೀಸಾರ್, ಬುದ್ಧನು, ರಾಂಪಾ, ಮಹಾವತಾರ್ ಬಾಬಾಜಿ ಮತ್ತು ಶಿರಡಿ ಸಾಯಿಬಾಬಾ ಕೂಡಾ ಇದ್ದರು. ಅವರೆಲ್ಲರೂ ಪರಸ್ಪರ ಏನೊ ಮಾತನಾಡಿಕೊಳ್ಳುತ್ತಿದ್ದರು. ನನಗೆ ಒಂದು ಮಾತೂ ಅರ್ಥವಾಗಲಿಲ್ಲ. ಅದು ಮುಗಿದ ನಂತರ, ಸಾರ್ ನನ್ನ ಹತ್ತಿರ ಬಂದು.. ನನ್ನ ಭುಜವನ್ನು ತಟ್ಟಿ "ಗಾಬರಿ ಆಗಬೇಡ" ಭೂಲೋಕದಲ್ಲಿರುವ ಪ್ರಭುತ್ವದಲ್ಲಿ ಅನೇಕ ಶಾಖೆಗಳು ಹೇಗಿರುತ್ತವೊ.. ಹಾಗೆಯೇ ಇಲ್ಲಿ ಸಹ ಗ್ರಹಗಳಿಗೆ ಸಂಬಂಧಿಸಿದ ಆಡಳಿತ ವ್ಯವಸ್ಥೆ ಇರುತ್ತದೆ. ಅದನ್ನು ’ಇಂಟರ್ ಗೆಲಾಕ್ಟಿಕ್ ಫೆಡರೇಷನ್’ ಎನ್ನುತ್ತಾರೆ ಎಂದು ವಿವರಿಸಿ ಹೇಳಿದರು. ತಕ್ಷಣ ನನಗೆ ಧ್ಯಾನ ಭಂಗವಾಯಿತು.

 

ರಾಜಶೇಖರ್ : ಪ್ರಾಪಂಚಿಕವಾಗಿ ನಿನಗೆ ಸಂಭವಿಸಿದ ಘಟನೆಗಳ ಕುರಿತು ಹೇಳಬಹುದೆ?

 

ಪ್ರಣಿತ : 2001 ಮಾರ್ಚಿನಲ್ಲಿ ಒಂದು ಸಲ ನಾನು, ಅಮ್ಮ, ಶಾಲಿನಿ ಮೇಡಮ್, ಇಂದಿರಾ ಬಾಬೂಮೋಹನ್ ಅವರು ಎಲ್ಲರು ಸೇರಿ ಯಾದಗಿರಿ ಗುಟ್ಟಕ್ಕೆ ಹೋಗಿ ಹಿಂದಿರುಗಿ ಬರುತ್ತಿದ್ದೆವು. ರಸ್ತೆಯು ನಿರ್ಜನವಾಗಿದೆ. ನನಗೆ "ನಮ್ಮ ಕಾರನ್ನು ಮತ್ತೊಂದು ಕಾರು ಬಂದು ಡಿಕ್ಕಿಹೊಡೆಯುತ್ತದೆ ಅನಿಸಿತು." ಈ ಸಮಾಚಾರವನ್ನು ನಮ್ಮ ಅಮ್ಮನಿಗೆ ಹೇಳಿದೆ ಆದರೆ... "ಹೊರಡುವಾಗ ಏಕೆ ಆಶುಭಗಳನ್ನು ನುಡಿಯುತ್ತೀಯಾ?" ಎಂದು ಕೋಪದಿಂದ ಹೇಳಿದಳು. ಅಷ್ಟೇ, ಸ್ವಲ್ಪ ಸಮಯದಲ್ಲೇ ಪಕ್ಕದ ಸಂದಿಯಿಂದ ಒಂದು ಕಾರು ಬಂದು ಗುದ್ದಿತು. ದೇವರ ದಯೆಯಿಂದ ಯಾರಿಗೂ ಏನೂ ಆಗಲಿಲ್ಲ.

 

ಹಾಗೆಯೇ, ನನ್ನ ಶಾಲೆಯ ದಿನಗಳಲ್ಲಿ ನಾನು ಶಾಲೆಯಲ್ಲಿದ್ದರೂ ಕೂಡಾ ಪತ್ರೀಸಾರ್ ಆಂಧ್ರಪ್ರದೇಶದ ಯಾವುದೇ ಸ್ಥಳದಲ್ಲಿ ನಡೆದ, ಯಾವುದೇ ಸಭೆಯಲ್ಲಿ ಕೊಳಲು ನುಡಿಸಿದರೂ ಅದು ನನಗೆ ಕೇಳಿಸುತ್ತಿತ್ತು. ಆ ದಿನ, ದಿನಾಂಕ, ಕೊಳಲಿನ ದನಿ ಕೇಳಿಸಿದ ಸಮಯ ನೆನಪಿನಲ್ಲಿಟ್ಟುಕೊಂಡು ಅನೇಕಬಾರಿ ಇದನ್ನು ಖಚಿತಪಡಿಸಿಕೊಂಡಿದ್ದೇನೆ.
ಮತ್ತೊಂದು ಬಾರಿ ರೇಯಿಲಿಂಗ್ ಇಲ್ಲದ ನಮ್ಮ ಶಾಲೆಯ ಮೆಟ್ಟಲುಗಳ ಎರಡನೆಯ ಅಂತಸ್ತಿನಲ್ಲಿರುವ ನನ್ನ ತರಗತಿಯೊಳಗೆ ಪ್ರವೇಶಿಸುವಾಗ ಭಾರವಾದ ನನ್ನ ಬ್ಯಾಗ್ ಸಹಿತ ನಾನು ತೂಕಡಿಸಿ ಕೆಳಗೆ ಬೀಳುತ್ತಾ... "ಇನ್ನು ಇಷ್ಟೇ, ಎಲ್ಲಾ ಮುಗಿದುಹೋಯಿತು" ಎಂದುಕೊಂಡೆ. ಕೆಳಗೆಲ್ಲಾ ಚೆಲ್ಲಾಪಿಲ್ಲಿಯಾಗಿ ಗ್ರಾನೈಟ್ ಕಲ್ಲುಗಳಿದ್ದವು. ಕಾಲುಗಳು ಜಾರಿ ಹಿಡಿತ ತಪ್ಪಿದಾಗ ಕಾಣದ ಕೈಯೊಂದು ನನ್ನನ್ನು ಹುಷಾರಾಗಿ ಹಿಡಿದುಕೊಂಡು ಮೇಲಿನ ಮೆಟ್ಟಲುಗಳ ಮೇಲೆ ನಿಲ್ಲಿಸಿತು. "ಆ ಕೈಗಳು ನನಗೆ ಚೆನ್ನಾಗಿ ಪರಿಚಿತವಾದ ಪತ್ರೀಸಾರ್ ಕೈಗಳೆ" ಎಂದು ನನಗೆ ಸ್ಪಷ್ಟವಾಗಿ ಗೊತ್ತಾಗಿತ್ತು ಅನಂತರ, ಸಾರ್ ಜೊತೆ ಭೇಟಿ ಆದಾಗ ನಾನು ಏನೂ ಹೇಳದೆಯೇ ಅವರು "ನಕ್ಕರು, ನಡೆದರು, ಹತ್ತಿದರು, ಇಳಿದರು, ಏನು ಮಾಡಿದರೂ ಕೂಡಾ ಪ್ರತಿಕ್ಷಣ ಅರಿವಿನಿಂದ ಇರಬೇಕು. ಇನ್ಮುಂದೆ ಹುಷಾರಾಗಿರು" ಎಂದರು. "ಹೀಗೆ ಪ್ರತಿಕ್ಷಣ.. ನನಗೂ, ನಮ್ಮ ತಾಯಿಗೂ ಕೂಡಾ ಪತ್ರೀಸಾರ್ ಶಿಕ್ಷಣವನ್ನು, ರಕ್ಷಣೆಯನ್ನು ಕೊಟ್ಟು ಕಾಪಾಡುತ್ತಿದ್ದಾರೆ" ಎನ್ನುವುದು ಪರಮಸತ್ಯ.

 

ರಾಜಶೇಖರ್ : ತುಂಬಾ ಒಳ್ಳೆಯ ಸಮಾಚಾರ ಕೊಟ್ಟಿದ್ದೀಯಾ ಕೊನೆಗೆ ನಿನ್ನ ಸಂದೇಶವನ್ನು ಹೇಳು?

 

ಪ್ರಣೀತ : ಒಂದು ಹೂ ನಿಸ್ವಾರ್ಥತೆಯಿಂದ ತನ್ನ ಬಾಹ್ಯ ಸೌಂದರ್ಯದಿಂದ ಪ್ರಕೃತಿ ಸೌಂದರ್ಯಕ್ಕೆ ಬಣ್ಣವನ್ನು ತರುತ್ತಾ.. ಅಂತರ್ಗತ ಸುಗಂಧ ಪರಿಮಳಗಳನ್ನು ಎಷ್ಟು ಹರಡುತ್ತಿರುತ್ತದೊ... ಹಾಗೆಯೇ ಒಬ್ಬ ಧ್ಯಾನಿ ಸಹ ಪ್ರಪಂಚದಲ್ಲೆಲ್ಲಾ ಧ್ಯಾನ ಸುಗಂಧಗಳನ್ನು ಹರಡಬೇಕು.

 

S. ರಾಜಶೇಖರ್
ಸಿಕಿಂದ್ರಾಬಾದ್

Go to top