" ನನ್ನ ಕನಸು ನನಸಾಯಿತು "

 

 

ನನ್ನ ಹೆಸರು ಮೀನಾಸುದರ್ಶನ್. ನನ್ನ ವಾಸಸ್ಥಳ ಚೆಳ್ಳಕೆರೆ. ನಾನು ಆನಾಪಾನಸತಿ ಧ್ಯಾನವನ್ನು ಸುಮಾರು 5 ವರ್ಷಗಳಿಂದ ಮಾಡುತ್ತಿದ್ದೇನೆ. ಈ ಧ್ಯಾನಕ್ಕೆ ಬಂದಾಗಿನಿಂದ ಒಂದೇ ಒಂದು ಆಸೆ, ಅದೇನೆಂದರೆ, ಈಜಿಪ್ಟ್‌ನಲ್ಲಿರುವ ಗೀಜಾ ಪಿರಮಿಡ್‌ನ ಕಿಂಗ್ಸ್ ಛೇಂಬರ್‌ನಲ್ಲಿ ಬ್ರಹ್ಮರ್ಷಿ ಪತ್ರೀಜಿಯವರೊಂದಿಗೆ ಧ್ಯಾನವನ್ನು ಮಾಡುವುದು. ಅಕ್ಟೋಬರ್ 12ರಂದು ನನ್ನ ಪತಿ ಸುದರ್ಶನ್, ಮಗಳು ಐಶ್ವರ್ಯ ಮತ್ತು ಅಮ್ಮ ಚಂದ್ರಕಲಾರೊಂದಿಗೆ ಬೆಂಗಳೂರಿನಿಂದ ಶಾರ್ಜಾ ಮೂಲಕ ಈಜಿಪ್ಟ್‌ಗೆ ಪ್ರಯಾಣ ಬೆಳೆಸಿದೆವು. ಈ ಪ್ರಯಾಣವು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಹೌದು.

 

17 ರಂದು ಬೆಳಿಗ್ಗೆ ಗೀಜಾ ಸ್ಟೇಷನ್‌ನಲ್ಲಿ ಇಳಿದಾಗ, ನಮಗೆ ಅಚ್ಚರಿ ಕಾದಿತ್ತು. ಏನೆಂದರೆ, ನಮ್ಮನ್ನು ಸ್ವಾಗತಿಸಲು ಆಧ್ಯಾತ್ಮಿಕ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿಯವರು ಸ್ಟೇಷನ್‌ಗೆ ಬಂದಿದ್ದರು. ಅವರ ಈ ಸರಳ, ಸಜ್ಜನಿಕೆಯನ್ನು ನೋಡಿ ನಮಗೆ ತುಂಬಾ ಆಶ್ಚರ್ಯ ಹಾಗೂ ಆನಂದ ಒಟ್ಟಿಗೇ ಆಯಿತು.

 

18ನೇ ತಾರೀಖು, ನಾನು ಜೀವನದಲ್ಲಿ ಮರೆಯಲಾರದಂತಹ ದಿನ, ನನ್ನ ಕನಸು ನನಸಾದಂತಹ ದಿನ, ಬೆಳಗಿನ ಜಾವ 6 ಗಂಟೆಗೆ ಗೀಜಾ ಪಿರಮಿಡ್‌ಗೆ ಪ್ರಯಾಣ ಬೆಳೆಸಿದೆವು. ಪಿರಮಿಡ್‌ಗಳನ್ನು ಕಂಡಾಕ್ಷಣ ರೋಮಾಂಚನವಾಯಿತು. ಗೀಜಾ ಪಿರಮಿಡ್‌ನಲ್ಲಿ ಕಡಿದಾದ ಹಾದಿಯಲ್ಲಿ ಕಿಂಗ್ಸ್ ಛೇಂಬರ್ ತಲುಪಿದೆವು. ಅಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ ಕೊಳಲುನಾದ ಹಾಗೂ ಸಂದೇಶಗಳೊಂದಿಗೆ ಸುಮಾರು ಒಂದು ಗಂಟೆಕಾಲ ಧ್ಯಾನವನ್ನು ಮಾಡಿದೆವು. ಆ ಧ್ಯಾನದ ಅನುಭವವು ಆನಂದದಾಯಕ. "ನಾನೊಂದು ಶಕ್ತಿಯ ಚಂಡಿನಂತಾಗಿ, ನನ್ನ ಶರೀರವೇ ಇಲ್ಲದಂತಾಗಿತ್ತು. ಪತ್ರೀಜಿಯವರ ಕೊಳಲುನಾದ ಹಾಗೂ ಧ್ವನಿಯ ಪ್ರತಿಧ್ವನಿಯು ಪಿರಮಿಡ್‌ನ ತಳದಿಂದ, ತುದಿಯವರೆಗೂ ಕೇಳಿಸುತ್ತಿತ್ತು. ಪಿರಮಿಡ್ ಒಂದು ಖಾಲಿ, ವಿಶಾಲವಾದ ಕಟ್ಟಡವೆಂದು ಭಾಸವಾಯಿತು". ಕ್ವೀನ್ಸ್ ಛೇಂಬರ್‌ನಲ್ಲೂ ಸಹ ಕೆಲ ಹೊತ್ತು ಧ್ಯಾನವನ್ನು ಮಾಡಿದೆವು.

 

ಈ ಪ್ರವಾಸದ ಸಂಘಟಕರಾದ ಶ್ರೀ ಸಾಯಿಕುಮಾರ್‌ರೆಡ್ಡಿ ಹಾಗೂ ಶ್ರೀ ವೇಣುರವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನನ್ನ ಕನಸು ನನಸಾಗಲು ಕಾರಣರಾದಂದಹ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ಅನಂತಾನಂತ ವಂದನೆಗಳು.

 

ಮೀನಾ ಸುದರ್ಶನ್
ಚೆಳ್ಳಕೆರೆ

ಫೋನ್  : +91 81237 04810

Go to top