" ಆನಾಪಾನಸತಿ ಧ್ಯಾನದಿಂದ ಎಲ್ಲಾ ಭಾಗ್ಯಗಳನ್ನು ಪಡೆದು ಕೊಳ್ಳಬಹುದು "

 

 

ನನ್ನ ಹೆಸರು  N.M ಮುರುಗೇಂದ್ರಯ್ಯ. ನನಗೆ  75 ವರ್ಷ. ತರಳಬಾಳುಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಂಟಪದಲ್ಲಿ ಮಂಡಲ ಧ್ಯಾನ ನಡೆಯುತ್ತಿದ್ದಾಗ ಶ್ರೀ A.ಕೊಟ್ರಪ್ಪನವರ ಒತ್ತಾಯದಿಂದಾಗಿ ಅವರ ಜೊತೆ ಧ್ಯಾನಕ್ಕೆ ಹೋದೆ. ಆಗ ನನಗೆ ಮಂಡಿನೋವು ಬಹಳ ಇತ್ತು ನಡೆಯುವುದಕ್ಕೆ ಆಗುತ್ತಿರಲಿಲ್ಲ ಆದರೂ ಹೋದೆ.

ಆ ದಿನದ ಒಂದು ಗಂಟೆಯ ಧ್ಯಾನದಲ್ಲಿ ನನಗೆ ಹೊಸ ಅನುಭವಗಳಾದವು. ಮನಸ್ಸು ಬಹಳ ಉಲ್ಲಾಸದಿಂದ ಮತ್ತು ಆನಂದದಿಂದ ಇತ್ತು. ಧ್ಯಾನ ಮುಗಿದ ಮೇಲೆ ಶ್ರೀ ಮಾಗನೂರು ಸೋಮೇಶ ಗೌಡರು ಕಂಡರು ಅವರು ನನ್ನ ಕೈಲ್ಲಿರುವ ಕೋಲನ್ನು ನೋಡಿ "ಸ್ವಾಮಿ! ನಾಳೆಯಿಂದ ಕೋಲನ್ನು ತರಬೇಡಿ ದೃಢಮನಸ್ಸಿನಿಂದ ನಡೆದುಕೊಂಡು ಬಂದು ದೃಢಮನಸ್ಸಿನಿಂದ ಧ್ಯಾನ ಮಾಡಿ ಈ ಮಂಡಲ ಧ್ಯಾನ ಮುಗಿಯುವುದರೊಳಗೆ ನಿಮ್ಮ ಮಂಡಿನೋವು ಹೋಗುತ್ತದೆ" ಎಂದು ಹೇಳಿದರು. ಅವರ ಪ್ರೋತ್ಸಾಹದಿಂದ ನಾನು ಮರುದಿನ ಕೋಲನ್ನು ಬಿಟ್ಟು ಧ್ಯಾನಕ್ಕೆ ಬರುವುದಕ್ಕೆ ಪ್ರಾರಂಭಮಾಡಿದೆನು.

ಒಂದು ದಿನ ಧ್ಯಾನಾರ್ಥಿಗಳೆಲ್ಲರನ್ನು ಮೈತ್ರೇಯ ಬುದ್ಧ ಪಿರಮಿಡ್ ನೋಡಲು ಬೆಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿ ನಾವೆಲ್ಲ ಪಿರಮಿಡ್‌ನಲ್ಲಿ ಧ್ಯಾನ ಮಾಡಿದೆವು ಆ ಧ್ಯಾನದ ಅನುಭವಗಳನ್ನು ವರ್ಣಿಸುವುದು ಅಸಾಧ್ಯ. ಮಾರನೆಯ ದಿನ ಮಧ್ಯಾಹ್ನ ಊಟ ಆದ ಮೇಲೆ ದಾವಣಗೆರೆಗೆ ಹೊರಡಲು ಸಿದ್ಧರಾದೆವು. ಆಗ, ಶ್ರೀ ಅನಿಮೇಶ್ ಗೌಡರು ನಮ್ಮನ್ನೆಲ್ಲಾ ಪಿರಮಿಡ್‌ಗೆ ಕರೆದುಕೊಂಡು ಹೋಗಿ ಒಂದು ಗಂಟೆಯ ಕಾಲ ಧ್ಯಾನ ಮಾಡಿಸಿದರು. ಇನ್ನೇನು ಧ್ಯಾನ ಮುಗಿಯುವುದಲ್ಲಿತ್ತು ಆಗ ನನ್ನ ಎರಡು ಕಾಲುಗಳು ನಡುಗುವುದಕ್ಕೆ ಪ್ರಾರಂಭವಾದವು. ನಾನು ಗಾಬರಿಯಿಂದ ಕಣ್ಣುಬಿಟ್ಟು ನಿಂತುಕೊಂಡೆನು. ಆಗ ನನಗಿದ್ದ ಮಂಡಿನೋವು ಇರಲಿಲ್ಲ. ನನ್ನ ಮಂಡಿನೋವು ಎಲ್ಲಾ ಹೋಗಿ ಸಂಪೂರ್ಣವಾಗಿ ಅರಾಮವಾಗಿದ್ದೆ. ಈ ಧ್ಯಾನದಲ್ಲಿ ಎಂಥ ಅದ್ಭುತ ಶಕ್ತಿಯಿದೆ ಎಂಬುದು ನನಗೆ ಮನವರಿಕೆಯಾಯಿತು.

ಒಂದು ದಿನ ನಮ್ಮ ಮನೆಗೆ ನಮ್ಮ ಅತ್ತೆಯವರಾದ K.M ವೀರಮ್ಮ (98 ವರ್ಷ), ಇವರು ಆರೋಗ್ಯ ಸರಿಯಿಲ್ಲವೆಂದು ನಮ್ಮ ಮನೆಗೆ ಬಂದರು. ಇವರಿಗೆ ಓಡಾಡಲು ಬರುತ್ತಿರಲಿಲ್ಲ. ಬಹಳ ನಿಶಕ್ತಿ ಮತ್ತು ಸುಸ್ತು. ಕೈಕಾಲುಗಳ ನೋವಿನಿಂದ ಬಹಳ ಸಂಕಟ ಪಡುತ್ತಿದ್ದರು. ಇವರನ್ನು ನಾವು ಡಾಕ್ಟರ್‌ಗೆ ತೋರಿಸಿ ಔಷಧಿ ಇಂಜಕ್ಷನ್ ಕೊಡಿಸಿ ಉಪಚಾರ ಮಾಡಿದೆವು. ಆದರೆ ಇವರಿಗೆ ಸ್ವಲ್ಪವೂ ಗುಣವಾಗಲಿಲ್ಲ ಆದ ಕಾರಣ ಅವರು ಅವರ ಊರಾದ ನೇರ್ಲಿಗೆಗೆ ಹೊರಡಲು ಸಿದ್ಧರಾದರು. ಹೊರಡುವುದಕ್ಕೆ ಮೊದಲು ನನ್ನ ಬಳಿಬಂದು "ನನಗೆ ಈ ಜೀವನ ಸಾಕಾಗಿದೆ ಬದುಕುವುದಕ್ಕೆ ಆಸೆ ಇಲ್ಲ, ಈ ಯಾತನೆಯನ್ನು ತಾಳಲಾರೆ ನೀವು ಧ್ಯಾನ ಮಾಡುವಾಗ ನನ್ನನ್ನು ಶಿವನಪಾದ ಸೇರಿಸಿಕೊಳ್ಳಲು ಸಂಕಲ್ಪಮಾಡಿರಿ" ಎಂದು ತಿಳಿಸಿದರು. ನಾನು ಒಳ್ಳೆಯದು ಧ್ಯಾನ ಮಾಡುವಾಗ ನಿಮ್ಮ ಆರೋಗ್ಯದ ಬಗ್ಗೆ ಸಂಕಲ್ಪ ಇಟ್ಟುಕೊಳ್ಳುತ್ತೇನೆ. ಆದರೆ, ನೀವು ಪ್ರತಿದಿನ ನಿಮಗೆ ವೇಳೆ ಸಿಕ್ಕಾಗಲೆಲ್ಲಾ ಮಲಗಿಕೊಂಡೇ ಧ್ಯಾನ ಮಾಡಿ ಎಂದು ಹೇಳಿ ಅವರನ್ನು ಅವರ ಊರಿಗೆ ಕಳುಹಿಸಿ ಕೊಟ್ಟೆವು.

ನಾನು ಪ್ರತಿದಿನ ಧ್ಯಾನ ಮಾಡುವಾಗ "ನಮ್ಮ ಅತ್ತೆಯವರಿಗೆ ಬಹಳ ವಯಸ್ಸಾಗಿದೆ ಅವರಿಗೆ ನೋವುಗಳನ್ನು ತಡೆದುಕೊಳ್ಳುವ ಶಕ್ತಿಯಿಲ್ಲ ಇವರನ್ನು ನಿಮ್ಮ ಪಾದಕ್ಕೆ ಸೇರಿಸಿಕೊ, ಇಲ್ಲದಿದ್ದರೆ, ಇವರ ಅನಾರೋಗ್ಯವನ್ನು ಗುಣಪಡಿಸಿ ಆರೋಗ್ಯವಂತರನ್ನಾಗಿ ಮಾಡು" ಎಂದು ಸಂಕಲ್ಪಮಾಡಿ ಪ್ರತಿ ದಿನ ಧ್ಯಾನ ಮಾಡುತ್ತಿದ್ದೆನು. 15 ದಿನಗಳಾದ ಮೇಲೆ ನೇರ್ಲಿಗೆಯಿಂದ ಫೋನ್ ಬಂದಿತು "ನಿಮ್ಮ ಅತ್ತೆಯವರು ಬಹಳ ಆರೋಗ್ಯವಾಗಿದ್ದಾರೆ ಕುಳಿತುಕೊಂಡು ಧ್ಯಾನಮಾಡುತ್ತಾರೆ, ಮನೆ ತುಂಬಾ ಅಡ್ಡಾಡುತ್ತಾರೆ ಬಹಳ ಆನಂದದಿಂದ ಇದ್ದಾರೆ" ಎಂದು. ಇದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಧ್ಯಾನದಿಂದ ನಾವು ಏನು ಬೇಕಾದರೂ ಪಡೆದುಕೊಳ್ಳಬಹುದು. ಧ್ಯಾನವನ್ನು ನನ್ನ ಜೀವನದ ಕೊನೆಯವರೆಗೂ ತಪ್ಪದೆ ಮಾಡುತ್ತೇನೆ ಮತ್ತು ಧ್ಯಾನ ಪ್ರಚಾರವನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿದೆನು.

ಈ ಅದ್ಭುತವಾದ ಶಕ್ತಿ ಉಳ್ಳ ಧ್ಯಾನವನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ ದೇವ ಮಾನವ, ಧ್ಯಾನ ಜಗದ್ಗುರು, ಧ್ಯಾನ ಚಕ್ರವರ್ತಿ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ಕೋಟಿ ಕೋಟಿ ನಮನಗಳು.

 

N.M.ಮುರುಗೇಂದ್ರಯ್ಯ
ದಾವಣಗೆರೆ

Go to top