" ಪಿರಮಿಡ್ ವ್ಯಾಲಿಯಲ್ಲಿರುವವರೆಲ್ಲಾ ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನನ್ನನ್ನು ಆದರಿಸುತ್ತಾರೆ "

 

 

ನಾನು 2008 ಸೆಪ್ಟೆಂಬರ್ 19ರಂದು ಪಿರಮಿಡ್ ವ್ಯಾಲಿಯಲ್ಲಿ ಕೆಲಸಕ್ಕೆ ಸೇರಿದೆ. ಇಲ್ಲಿನ ಸಿಬ್ಬಂದಿ ವರ್ಗದೊಂದಿಗೆ ಪರಿಚಯ ಮಾಡಿಕೊಂಡು, ಧ್ಯಾನ ಕಲಿತು, ಧ್ಯಾನಾಭ್ಯಾಸ ಪ್ರಾರಂಭಿಸಿದೆ. ನನ್ನ ಹೊಸ ಜೀವನ ಪ್ರಾರಂಭವಾಯಿತು ಎಂದು ಅನ್ನಿಸಿತು.

 

ಅಕ್ಟೋಬರ್ 2ರಂದು ನಾನು ವ್ಯಾಲಿಯಲ್ಲಿಯೇ ಪತ್ರೀಜಿಯವರನ್ನು ಭೇಟಿ ಮಾಡಿದೆ, ನನಗೆ ಸರಿಯಾದ ಒಬ್ಬ ಗುರು ದೊರೆತರು ಎಂದು ಅರಿತೆ. ಅದೇ ದಿನದಂದು ಬೆಂಗಳೂರಿನಲ್ಲಿ ಪತ್ರೀಜಿಯವರ ನೇತೃತ್ವದಲ್ಲಿ ಬಹಳ ದೊಡ್ಡ ಸಸ್ಯಾಹಾರಿ ರ‍್ಯಾಲಿ ನಡೆಯಿತು. ನಾನು ಕೂಡ ಭಾಗವಹಿಸಿದೆ. ಅಂದಿನಿಂದ ನಾನೂ ಸಹ ಸಸ್ಯಾಹಾರಿಯಾಗಿರುತ್ತೇನೆ ಎಂದು ನಿರ್ಧರಿಸಿದೆ. ವ್ಯಾಲಿಯ ಸಿಬ್ಬಂದಿಯಾದ ನಂತರ ಇದು ಮೊದಲನೆಯ ಬದಲಾವಣೆ.

 

ಪಿರಮಿಡ್ ವ್ಯಾಲಿಯಲ್ಲಿ ಅನೇಕ ಮಾಸ್ಟರುಗಳನ್ನು ನಾನು ಭೇಟಿ ಮಾಡಿದೆ. ಮತ್ತು ಎಲ್ಲಾ ಸಿಬ್ಬಂದಿ ವರ್ಗದ ಜೊತೆ ಕೆಲಸ ಮಾಡಿ ಅನೇಕ ಕಾರ್ಯಗಳನ್ನು ಕಲಿತುಕೊಂಡೆ. ವ್ಯಾಲಿಯ ಎಲ್ಲಾ ವಿಭಾಗಗಳಲ್ಲೂ ಸೇವೆ ಮಾಡಿ ಅನುಭವ ಪಡೆದಿರುವೆನು. ವ್ಯಾಲಿಗೆ ಬಂದ ನಂತರ ಇಲ್ಲಿನ ಆಡಳಿತ ವರ್ಗದವರು ದೃಶ್ಯ-ಶ್ರವಣ ಉಪಕರಣಗಳ ನಿರ್ವಹಣೆಯ ತರಬೇತಿಗೆ ಬೆಂಗಳೂರಿನ ಹೆಸರಾಂತ ಕಂಪೆನಿಗಳಿಗೆ ನನ್ನನ್ನು ಕಳುಹಿಸಿ ಆ ತಂತ್ರಜ್ಞಾನದ ತರಬೇತಿ ನನಗೆ ಸಿಗಲು ಏರ್ಪಾಟು ಮಾಡಿದರು. ಈ ವಿಚಾರದಲ್ಲಿ ಒಬ್ಬ ತಂತ್ರಜ್ಞನಾಗಲು ಈ ತರಬೇತಿ ಸಹಾಯಕವಾಯಿತು. ದೂರದ ಸ್ಥಳದಿಂದ ಬಂದ ನನಗೆ ಪ್ರೋತ್ಸಾಹ ನೀಡಿ ನನ್ನ ವೃತ್ತಿಯಲ್ಲಿ ಉತ್ತಮ ತರಬೇತಿ ಮತ್ತು ಅನುಭವ ಹೊಂದಲು ಕಾರಣರಾದ ಇಲ್ಲಿನ ಆಡಳಿತ ವರ್ಗಕ್ಕೆ ನನ್ನ ಕೃತಜ್ಞತೆಗಳು. ಪಿರಮಿಡ್ ವ್ಯಾಲಿಯಲ್ಲಿ ಈ ವಿಚಾರದಲ್ಲಿನ ಬೆಂಬಲ ಮಾತ್ರವಲ್ಲದೆ, ಇಲ್ಲಿನವರ ಪ್ರೀತಿ ಹಾಗೂ ಸೌಹಾರ್ದಯುತವಾದ ನಡವಳಿಕೆ ಅವಿಸ್ಮರಣೀಯ.

 

ತಾಂತ್ರಿಕ ತರಬೇತಿಯ ನಂತರ ಕಬೀರ್ ಭವನ ಮತ್ತು ಸ್ವಚ್ಛಂ ಹಾಲ್ ಎರಡೂ ಕಡೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮಗಳಿಗೆ ಇತರೆ ಸಿಬ್ಬಂದಿಯ ಸಹಕಾರಗಳೊಂದಿಗೆ ನಾನು ಬೆಳಕು ಮತ್ತು ಶಬ್ದ ವ್ಯವಸ್ಥೆಗಳನ್ನು ಏರ್ಪಡಿಸಿ ನಿರ್ವಹಿಸಲು ಸಾಧ್ಯವಾಗಿದೆ. ಇಲ್ಲಿ ಕಾರ್ಯಕ್ರಮ ನಡೆಸಿದ ವಿವಿಧ ಸಂಘ-ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ನನ್ನ ವೃತ್ತಿ ಜೀವನದಲ್ಲಿ ತೃಪ್ತಿ ಹೊಂದಿದ್ದೇನೆ.

 

ಪಿರಮಿಡ್ ಶಕ್ತಿಯ ಪೂರ್ಣಪ್ರಯೋಜನವನ್ನು ಪಡೆಯುತ್ತಾ ಪ್ರತಿನಿತ್ಯ 3 ಗಂಟೆಗಳ ಕಾಲ ಧ್ಯಾನ ಮಾಡುತ್ತೇನೆ. ಇತ್ತೀಚೆಗೆ ಪಿರಮಿಡ್ ವ್ಯಾಲಿಯ ಸಿಬ್ಬಂದಿ, ಸ್ವಯಂಸೇವಕರು, ಆಡಳಿತ ಮಂಡಳಿಯವರು ಹಾಜರಾಗಿದ್ದ ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ ಸಮುಖದಲ್ಲಿ ನನ್ನ ಮದುವೆಯ ಆರತಕ್ಷತೆ ಕಾರ್ಯ ನಡೆದು ಎಲ್ಲರಿಂದಲೂ ಶುಭಹಾರೈಕೆ ಸ್ವೀಕರಿಸಿದ್ದು ನನ್ನ ಜೀವನದಲ್ಲಿ ನಾನು ಮರೆಯಲು ಅಸಾಧ್ಯವಾದ ಅನುಭವ.

 

ವ್ಯಾಲಿಯಲ್ಲಿ ನನ್ನ ಎಲ್ಲಾ ಕಾರ್ಯಗಳಿಗೂ ಉತ್ತಮ ಪ್ರೋತ್ಸಾಹ ದೊರತಿದೆ. ನಾನು ವೈಯುಕ್ತಿಕವಾಗಿ ಅಭಿವೃದ್ಧಿ ಹೊಂದಲು ಸಂಪೂರ್ಣ ಸ್ವಾತಂತ್ರ್ಯ ದೊರಕಿದೆ. ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ನನ್ನನ್ನು ಆದರಿಸುತ್ತಿರುವ ವ್ಯಾಲಿಯವರಿಗೆಲ್ಲಾ ನನ್ನ ಕೃತಜ್ಞತೆಗಳು.

 

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಇತ್ತೀಚೆಗೆ ಪಿರಮಿಡ್ ವ್ಯಾಲಿಯಲ್ಲಿ ಸೌಕರ್ಯಗಳನ್ನು ಪ್ರಾರಂಭಿಸಲಾಗಿದೆ. ಇದು ವ್ಯಾಲಿಯಲ್ಲಿ ನೆಲೆಸಿರುವ ಸಿಬ್ಬಂದಿಗೆ ಹೊಸ ಕೊಡುಗೆಯಾಗಿದೆ. ಪಿರಮಿಡ್ ವ್ಯಾಲಿಯಲ್ಲಿ ಸೇವೆ ಸಲ್ಲಿಸುವುದು ಒಂದು ಆನಂದದ, ಅದ್ಭುತವಾದ ಅನುಭವ. ವೈಯಕ್ತಿಕವಾಗಿ, ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಲು ಪಿರಮಿಡ್ ವ್ಯಾಲಿಯು ಒಂದು ಉತ್ತಮ ತಾಣವಾಗಿದ್ದು ನನ್ನ ಜೀವನವನ್ನು ವ್ಯಾಲಿಯ ಸೇವೆಗೆ ಸಮರ್ಪಿಸುತ್ತಿದ್ದೇನೆ.

 

ನಾಗೇಶ್
ಪಿರಮಿಡ್ ವ್ಯಾಲಿ
ಬೆಂಗಳೂರು

Go to top