" ಧ್ಯಾನದಿಂದ ನೆಮ್ಮದಿಯಾಗಿದ್ದೇನೆ "

 

 

ನನ್ನ ಹೆಸರು ನಂಜುಂಡಪ್ಪ. ನಮ್ಮದು ಶಿವಮೊಗ್ಗ. ಚಿಕ್ಕಂದಿನಿಂದಲೂ ಆಧ್ಯಾತ್ಮದಲ್ಲಿ ಬಹಳ ಆಸಕ್ತಿ ಇದ್ದರೂ ಅದನ್ನು ವ್ಯಕ್ತಪಡಿಸಲು ಅಥವಾ ಆ ದಾರಿಯಲ್ಲಿ ಮುನ್ನಡೆಯುವ ಕ್ರಮ ಗೊತ್ತಿಲ್ಲದೆ ಬಹಳ ಗೊಂದಲದಲ್ಲಿದ್ದೆ. ಹೀಗೆ ಒಮ್ಮೆ ನನ್ನ ಸ್ನೇಹಿತರೊಂದಿಗೆ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಹೋಗಿದ್ದಾಗ "Complete Meditation Guide" ಎಂಬ CD ನೋಡಿ ಖರೀದಿಸಿದ್ದೆ.  ಪ್ರತಿದಿನವೂ ಮನೆಯಲ್ಲಿ ಧ್ಯಾನಮಾಡಲು ಪ್ರಯತ್ನಿಸಲು ಶುರುಮಾಡಿದೆ.  ಈ ಸಮಯಕ್ಕೆ ಸರಿಯಾಗಿ ನನ್ನ ಮತ್ತೊಬ್ಬ ಸ್ನೇಹಿತರು ನನ್ನಲ್ಲಿರುವ ಆಧ್ಯಾತ್ಮ ಜಿಜ್ಞಾಸೆಯನ್ನು ಕಂಡು ನನ್ನನ್ನು ಬೆಂಗಳೂರಿನ ಕೆಬ್ಬೆದೊಡ್ಡಿ ಹಳ್ಳಿಯಲ್ಲಿರುವ ಅತಿದೊಡ್ಡ ಪಿರಮಿಡ್‌ಗೆ ಕರೆದುಕೊಂಡು ಹೋದರು.  ಧ್ಯಾನ ಎಂದರೇನು ಅದನ್ನು ಹೇಗೆ ಮಾಡುವುದು ಎಂಬೆಲ್ಲಾ ಸರಿಯಾದ ಅಡಿಪಾಯಗಳು ನನಗಲ್ಲಿ ದೊರೆತವು. 

 

ಪಿರಮಿಡ್ ಒಳಗಿನ ಧ್ಯಾನವು ಬಹಳ ಸಂತೋಷ ನೆಮ್ಮದಿಯನ್ನು ನನ್ನಲ್ಲಿ ಮೂಡಿಸಿದ್ದನ್ನು ಕಂಡು ನಾನು ಆಗಾಗ್ಗೆ ಪಿರಮಿಡ್‌ಗೆ ಬರಲು, ಅಲ್ಲಿ ಸಾಕಷ್ಟು ಸಮಯ ಧ್ಯಾನಮಾಡಲು ಆರಂಭಿಸಿದೆ. ನನಗೆ ಆ ಪಿರಮಿಡ್‌ನಲ್ಲಿ ಸತ್ಯವತಿ ಮೇಡಮ್‌ರವರು ಪರಿಚಯವಾದರು. ಧ್ಯಾನಾವಸ್ಥೆಯಲ್ಲಿ ನನ್ನನ್ನು ಕಂಡ ಸತ್ಯವತಿ ಮಾಸ್ಟರ್ ತಮ್ಮ ಮನೆಯಲ್ಲಿರುವ ಪಿರಮಿಡ್‌ಗೆ ಬರಲು ಆಹ್ವಾನಿಸಿದರು (ವಿಶೇಷವೆಂದರೆ ಅವರ ಮನೆ ನಮ್ಮ ಮನೆ ಹತ್ತಿರವೇ) 40 ದಿನಗಳ ಕಾಲ ಅಲ್ಲಿ ಧ್ಯಾನಮಾಡಲು ಅವರು ಸೂಚಿಸಿದರು.  ನಾನು `ಆತ್ಮವಿದ್ಯಾ ಪಿರಮಿಡ್ ಧ್ಯಾನಕೇಂದ್ರ’ಕ್ಕೆ ಪ್ರತಿದಿನ ಹೋಗುತ್ತಿದ್ದೆ. ಆ ದಿನದಿಂದಲೇ ನನ್ನ ಆಧ್ಯಾತ್ಮ ಜೀವನವು ನುಜ್ಜು ಗುಜ್ಜು ದಾರಿಯಿಂದ ಹೆದ್ದಾರಿಗೆ ಬಂದಿತು. ದಿನವೂ ಒಂದೊಂದು ಹೊಸ ಅನುಭವ, ಮನಸ್ಸಿಗೆ ಬಹಳ ಆಹ್ಲಾದಕರವಾಗಿತ್ತು. 

 

ಅಲ್ಲಿ ಧ್ಯಾನ ಮಾಡುತ್ತಿರುವ ಮೂರನೇ ದಿನ ಎಂದಿನಂತೆ ಧ್ಯಾನಕ್ಕೆ ಕುಳಿತಿದ್ದ ನನಗೆ ಇದ್ದಕ್ಕಿದ್ದಂತೆ ಉಸಿರಾಟವು ವಿಪರೀತವಾಗಿ ಹಾಗೂ ಬಹಳ ಗಾಢವಾಗಿ ಆಗಲು ಆರಂಭಗೊಂಡಿತು. ಮೂಲಾಧಾರದ ಬಳಿ ಹಾವಿನ ಬಾಲ ಅಲುಗಾಡಿದ ಹಾಗಾಯಿತು. ಅದೇನೆಂದು ಅರಿಯುವಷ್ಟರಲ್ಲೆ ಸರ್ಪವು ನನ್ನ ಬೆನ್ನೇರಿ ನನ್ನ ಶಿರದ ಮೇಲೆ ಬಂದಂತಾಗಿ ನನ್ನ ಕತ್ತು ಮತ್ತು ಮುಖದ ಭಾಗವು ಹಾವಿನ ಹೆಡೆ ಎಂದೆನಿಸಿತು. ಉಸಿರಾಟವು ಬಹಳ ವೇಗವಾಗಿ ಗಾಢವಾಗಿ ನನ್ನ ಮೂಗಿನಿಂದಲ್ಲದೆ ನನ್ನ ಹಣೆಯಿಂದ (ಎರಡು ಹುಬ್ಬಿ ನಡುವೆ) ಉಸಿರಾಟವಾಗಲು ಆರಂಭವಾಯಿತು. ಕ್ಷಣಗಳು ನಿಮಿಷಗಳಾದದ್ದು ತಿಳಿಯಲೇ ಇಲ್ಲ. ನಾನು ಪ್ರಯತ್ನಪೂರ್ವಕವಾಗಿ ಹೊರಬರಲು ಪ್ರಯತ್ನಿಸಿ ವಿಫಲನಾದೆ.  ಕೆಲ ಕ್ಷಣಗಳ ನಂತರ ಉಸಿರಾಟವು ನಿಧಾನವಾಗತೊಡಗಿತು. ನನ್ನೊಳಗೆ ಬಚ್ಚಡಗಿದ್ದ ದುಃಖ ನೋವುಗಳೆಲ್ಲವೂ ಹೊರಬಂದಂತೆ ಧಾರಾಕಾರವಾಗಿ ಕಣ್ಣೀರು ಹೊರ ಬಂದಿತು.  ಮನಸ್ಸಿನಲ್ಲಿ ಏನೋ ಒಂದು ತರಹ ನೆಮ್ಮದಿ ಸಂತೋಷ ಮೂಡಿತು.  ನನಗಾದ ಈ ಅನುಭವವು "ಆನಾಪಾನಸತಿ" ಕ್ರಮದ ಧ್ಯಾನದಮೇಲಿನ ನನ್ನ ನಂಬಿಕೆ ಬೆಟ್ಟದಷ್ಟು ಬೆಳೆದಿದೆ.  ನಾನು ನಿತ್ಯವೂ ಧ್ಯಾನ ಮಾಡುತ್ತಿದ್ದೇನೆ ಹಾಗೂ ಇತರರಿಗೂ ತಿಳಿಸಲು ನಾನು ಪ್ರಯತ್ನ ಪಡುತ್ತಿದ್ದೇನೆ. 

 

ಬೆಂಗಳೂರಿನಲ್ಲಿ ಪಿರಮಿಡ್ ಸ್ಥಾಪಿಸಿದ ಬ್ರಹ್ಮರ್ಷಿ ಪತ್ರೀಜಿಯವರಿಗೆ, ಅದರಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ, ಸತ್ಯವತಿ ಮಾಸ್ಟರ್‌ಗೂ ನನ್ನ ಹೃತ್ಪೂರ್ವಕ ವಂದನೆಗಳು. 

 

ಧ್ಯಾನಂ ಶಿವಂ, ಶ್ವಾಸಂ ಗುರುಃ

 

ನಂಜುಂಡಪ್ಪ.B.R
ಶಿವಮೊಗ್ಗ

ಫೋನ್  : +91 9535511864

Go to top