" ಜ್ಯೇಷ್ಠಾದೇವಿ ಅಂದರೆ ಯಾರೆಂದು ತಿಳಿದು ಬಂತು "

 

 

ನನ್ನ ಹೆಸರು ಪುಷ್ಪಾಮೋಹನ್.

 

ನಾನು "ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ" ನಲ್ಲಿ ಪ್ರವೇಶಿಸಿದ್ದು ತುಂಬಾ ಆಕಸ್ಮಿಕವಾಗಿ . . . ನನ್ನ ರೊಟ್ಟ ಮುರಿದು ತುಪ್ಪದಲ್ಲಿ ಬಿದ್ದ ಹಾಗೆ ಆಯಿತು.
2004 ಮಾರ್ಚ್‌ನಲ್ಲಿ ನನ್ನ ಆಧ್ಯಾತ್ಮಿಕ ಬಂಧುಗಳಾದ "ಶ್ರೀ ರಾಮ್ ಸಿಂಗ್" ಎನ್ನುವ ಮಾಸ್ಟರ್, "ಸ್ಪಿರಿಚ್ಯುವಲ್ ರಿಯಾಲಿಟಿ" C.D. ತೋರಿಸಿ ಪುಣ್ಯಕಟ್ಟಿಕೊಂಡರು. ಅದು ನೋಡುತ್ತಾ ನಾನು ತುಂಬಾ ಆನಂದಾಶ್ಚರ್ಯಗಳಿಗೆ ಒಳಗಾದೆ. ನನ್ನ ಅದೃಷ್ಟವೇನೋ ಎನ್ನುವ ಹಾಗೆ . . . ಅನಂತರ ಹದಿನೈದು ದಿನಗಳಲ್ಲೇ "ಬ್ರಹ್ಮರ್ಷಿ ಪತ್ರೀಜಿ ಜೆ.ಪಿ ನಗರದಲ್ಲಿ ಪಿರಮಿಡ್ ಮಾಸ್ಟರ್ ಶ್ರೀದೇವಿ ಅವರ ಮನೆಯಲ್ಲಿ ಕೇರ್ ಸೆಂಟರ್ ಪ್ರಾರಂಭಿಸಲು ಬರುತ್ತಿದ್ದಾರೆ" ಎನ್ನುವ ಶುಭವಾರ್ತೆ ತಿಳಿದುಬಂತು.

 

ಅದು ಬೆಂಗಳೂರಿನಲ್ಲಿ ಮೊದಲನೆಯ ಪಿರಮಿಡ್ ಸೆಂಟರ್,ಇಂದು ಅದು ಶಾಖೋಪಶಾಖೆಗಳಾಗಿ ಹರಡಿಕೊಂಡಿದೆ. "ಮತ್ತೆ ಆ ಮಹಾ ವೃಕ್ಷದಲ್ಲಿನ ಭಾಗವೇ ನಮ್ಮ "ವಿಶ್ವಚೈತನ್ಯ ಪಿರಮಿಡ್ ಧ್ಯಾನ ಕೇಂದ್ರ" ಎಂದು ಹೇಳಲು ನಾನು ಹೆಮ್ಮೆಪಡುತ್ತಿದ್ದೇನೆ. ಆ ದಿನ ಶ್ರೀದೇವಿ ಅವರ ಮನೆಗೆ ಸುಮಾರು 50 ಜನ ಮಾಸ್ಟರ‍್ಸ ಬಂದಿದ್ದರು. ಅವರ ಜೊತೆ ಪತ್ರೀಸಾರ್ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾನು ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲಾ ಹೈದರಾಬಾದ್‌ನಲ್ಲಿಯೇ. ಆದ್ದರಿಂದ... ನನಗೆ ತೆಲುಗು ಭಾಷೆ ಎಂದರೆ ತುಂಬಾ ಇಷ್ಟ.

 

ಮೊದಲನೆಯ ಬಾರಿ ಪತ್ರೀಜಿಯವರನ್ನು ಭೇಟಿ ಆದಾಗ ಅವರು ನನ್ನನ್ನು ಮಾತನಾಡಿಸಲಿಲ್ಲ. ಸುಮ್ಮನೆ ನನ್ನ ಕಡೆ ನೋಡಿದರಷ್ಟೆ. ನಾನು ಸಹ ಅವರ ಕಡೆ ನೋಡಿ, ಬುದ್ಧಿವಂತಳ ಹಾಗೆ ಒಂದು ಕಡೆ ಕುಳಿತುಕೊಂಡು ಎಲ್ಲರನ್ನು ಗಮನಿಸುತ್ತಿದ್ದೆ. ಅವರು ಯಾರ ಮೇಲೋ ಕೋಪಿಸಿಕೊಳ್ಳುತ್ತಿದ್ದರು. ಎದೆ ಢವ ಢವ ಎಂದು ಹೊಡೆದುಕೊಳ್ಳುವುದರಿಂದ ಸುಮ್ಮನೆ ತಲೆ ಬಗ್ಗಿಸಿಕೊಂಡು ಧ್ಯಾನದಲ್ಲಿ ಮಗ್ನಳಾದೆ.

 

ಇನ್ನೊಂದು ಸಲ ನಾನು ನನ್ನ ಸ್ನೇಹಿತಳನ್ನು ‘ಪತ್ರೀಸಾರ್ ಬೆಂಗಳೂರು ಬಂದಿದ್ದಾರೆ ಬಾ.... ನಿನಗೆ ಪರಿಚಯ ಮಾಡಿಸುತ್ತೇನೆ’ ಎಂದು ಹೇಳಿ ದೊಡ್ಡಸ್ತಿಕೆಯಿಂದ ಕರೆದುಕೊಂಡು ಹೋದೆ.

 

ಪತ್ರೀಜಿ ಆಕೆಯನ್ನು "ಏಕೆ ಬಂದಿದ್ದೀರ?” ಎಂದು ಕೇಳಿದರು” ಸುಮ್ಮನೆ... ನಿಮ್ಮನ್ನು ನೋಡಲು ಬಂದಿದ್ದೇನೆ” ಎಂದು ಆಕೆ ಉತ್ತರ ನೀಡಿದಳು.

 

ಹಾಗೆ ಹೇಳಿದ ತಕ್ಷಣ ಅವರು ಕೋಪಿಸಿಕೊಂಡು . . "ನಾನೇನಾದರೂ ಐಶ್ವರ್ಯ ರೈಯಾ?? ನನ್ನ ನೋಡಲು... ಹೋಗು ಇಲ್ಲಿಂದ ” ಎಂದು ಜೋರಾಗಿ ಬೈದು ಕಳಿಸಿದರು.

 

ನನ್ನ ಗೆಳತಿಗೆ ತೆಲುಗು ಬರುವುದಿಲ್ಲ. ಆಕೆಗೆ ಏನೂ ಅರ್ಥ ವಾಗದೆ ಏನು ಹೇಳುತ್ತಿದ್ದಾರೆ? ಎಂದು ನನ್ನ ಕೇಳಿದಳು.

 

"ನಿಮ್ಮನ್ನು ಇಲ್ಲಿಂದ ಹೊರಟುಹೋಗಲು ಹೇಳಿದರು” ಎಂದು ನಾನು ಆಕೆಗೆ ಕನ್ನಡದಲ್ಲಿ ತಿಳಿಸಿದೆ.

 

ಆಕೆ ನೊಂದುಕೊಂಡು ಹೊರಟು ಹೋದಳು.

 

ಪತ್ರೀಜಿ ಪುನಃ ನನ್ನನ್ನು "ನೀನೇಕೆ ಬಂದೆ?” ಎಂದು ಕೇಳಿದರು. ನಾನು ಹೆದರುತ್ತಲೇ ಬುದ್ಧಿವಂತಿಕೆಯಿಂದ ”ಈ ದಿನ ನಿಮ್ಮ ಜೊತೆ ಇದ್ದು, ನಿಮ್ಮ ಮಾತುಗಳು ಕೇಳಬೇಕೆಂದು ಬಂದಿದ್ದೇನೆ ಸಾರ್” ಎಂದು ನಿಧಾನವಾಗಿ ಹೇಳಿದೆ.

 

ಸಾರ್ ಎರಡು ನಿಮಿಷಗಳು ಕಣ್ಣುಗಳನ್ನು ಮುಚ್ಚಿಕೊಂಡು, ಏನು ಹೇಳುತ್ತಾರೋ ಎಂದು ನಾನು ಕಾತುರದಿಂದ ನೋಡುತ್ತಿರುವಾಗ "ಸರಿ ಇರು” ಎಂದು "ಮೇಡಮ್ ಈಕೆಗೆ ಸಹ ಟಿಫನ್ ಕೊಡಿ” ಎಂದರು.

 

ಅವರ ಎದುರಿಗೆ ಕುಳಿತುಕೊಂಡು ತಿನ್ನಲು ಭಯವಾದರೂ.... ಹೇಗೋ ಆಕಡೆ ಈಕಡೆ ನೋಡುತ್ತಾ ತಿನ್ನುವುದನ್ನು ಮುಗಿಸಿದೆ. ಪತ್ರೀಜಿ ನನ್ನ ಸ್ನೇಹಿತಳನ್ನು ಕೋಪದಿಂದ ಹೋರಟುಹೋಗು ಅಂದಾಗ ಆಕೆಯ "ವಾಕ್‌ಕ್ಷೇತ್ರ” ಸರಿಯಾಗಿ ಇಲ್ಲವೆಂದು ಗಮನಿಸಿ ತಕ್ಷಣ ನಾನು ನನ್ನ ವಾಕ್ಕನ್ನು ಸರಿಪಡಿಸಿಕೊಂಡು ಆ ಸಮಯಕ್ಕೆ ತಕ್ಕ ಹಾಗೆ ನಾನು ಮಾತನಾಡಿದೆ.

 

ಆಗಿಂದ... "ಎಲ್ಲಿದ್ದರೂ ಸರಿಯೆ... ಹುಷಾರಾಗಿ ಮಾತನಾಡಬೇಕು; ಅನಾವಶ್ಯಕವಾಗಿ ಮಾತನಾಡಬಾರದು; ಸುಮ್ಮನೆ ಇತರರ ಸಮಯವನ್ನು ವ್ಯರ್ಥ ಮಾಡಬಾರದು” ಎಂದು ನಾನು ತಿಳಿದುಕೊಂಡೆ.

 

ಬುದ್ಧಿ ಬಂದಾಗಲಿಂದಲೂ... ಈ ಪಾಠವನ್ನು ನನಗೆ ಯಾರೂ, ಎಲ್ಲೂ ಹೇಳಿಕೊಡಲಿಲ್ಲ. ಇದು ನಡೆದ ಒಂದು ತಿಂಗಳು ನಂತರ ”ಪುನಃ ಪತ್ರೀಜಿ ಬೆಂಗಳೂರಿಗೆ ಬಂದು ಪಿರಮಿಡ್ ವ್ಯಾಲಿಗೆ ಹೋದರು” ಎಂದು ತಿಳಿದ ತಕ್ಷಣ ನಾನು ನನ್ನ ಆಧ್ಯಾತ್ಮಿಕ ಮಿತ್ರರ ಜೋತೆ ಸೇರಿ ವ್ಯಾಲಿಗೆ ಹೋದೆ. ಅವರು ದೂರದಿಂದಲೇ ಎಲ್ಲರನ್ನು ಗಮನಿಸಿದರು. ಪಿರಮಿಡ್ ಆಗ ತಳಪಾಯ ಹಾಕುವ ಹಂತದಲ್ಲಿತ್ತು.

 

ಬಂದ ತಕ್ಷಣ ಅವರು ಪಿರಮಿಡ್ ತಳಪಾಯದ ಹತ್ತಿರ ಹೋಗಿ ಪರಿಶೀಲನೆ ನಡೆಸಿದರು. ಅನಂತರ ನಮ್ಮೆಲ್ಲರನ್ನು ಕುರಿತು ನಿಮ್ಮ ನಿಮ್ಮ ಅನುಭವಗಳನ್ನು ತಿಳಿಸಿ ಎಂದರು.

 

"ದೇವರೇ ನನ್ನನ್ನು ಮಾತ್ರ ಏನೂ ಕೇಳಬಾರದಪ್ಪಾ" ಎಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿಕೊಂಡೆ. ಏಕೆಂದರೆ, ನಾನು ಆಗ ಇನ್ನೂ ಬಾಹ್ಯ ಪೂಜೆಗಳನ್ನು ಬಿಟ್ಟಿರಲ್ಲಿಲ್ಲ.

 

ಕಾರ್ಯಕ್ರಮ ಆದನಂತರ ನಾವು ಮನೆಗೆ ಹೋಗುತ್ತಿರುವಾಗ... ಪತ್ರೀಜಿ ಅವರು ನನ್ನ ಹತ್ತಿರ ಬಂದು . ."ನೀನು ತುಂಬಾ ದೂರ ಪ್ರಯಾಣ ಮಾಡಬೇಕಾಗಿದೆ. ಸಮಯ ವ್ಯರ್ಥ ಮಾಡಬಾರದು. ಫೋನಿನಲ್ಲಿ ಹೆಚ್ಚು ಮಾತನಾಡಬಾರದು” ಎಂದರು.

 

ನನಗೆ ತುಂಬಾ ಆಶ್ಚರ್ಯವಾಯಿತು. ಏಕೆಂದರೆ, ನಾನು ಹೆಚ್ಚಾಗಿ ಯಾರ ಮನೆಗೂ ಹೋಗಲು ಇಷ್ಟವಾಗುವುದಿಲ್ಲ. ಆದರೆ, ಫೋನಿನಲ್ಲೇ ತುಂಬಾ ಹೊತ್ತು ಮಾತನಾಡುತ್ತಾ ಎಲ್ಲರ ಜೊತೆ ಸಂಬಂಧವಿಟ್ಟುಕೊಳ್ಳುವ ಅಭ್ಯಾಸ. "ಅದು ಇವರಿಗೆ ಹೇಗೆ ಗೊತ್ತು?” ಎಂದು ಆಶ್ಚರ್ಯವಾಯಿತು. ಆಗಿಂದ ಫೋನಿನಲ್ಲಿ ಮಾತನಾಡುವುದನ್ನು ಪೂರ್ತಿ ಕಡಿಮೆ ಮಾಡಿದೆ.

 

ಹೀಗೆ ಹೆಜ್ಜೆ ಹೆಜ್ಜೆಗೂ ನಮ್ಮ ತಪ್ಪುಗಳನ್ನು ಪ್ರೀತಿಯಿಂದ ಸರಿಪಡಿಸುತ್ತಾ ನಮ್ಮ ಕೈಹಿಡಿದುಕೊಂಡು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಗುರುಗಳನ್ನು ನಾನು ಮೊದಲನೆಯ ಬಾರಿ ನೋಡುತ್ತಿದ್ದೇನೆ.

 

2007ನೇ ವರ್ಷದಲ್ಲಿ ಮಾನಸ ಸರೋವರ ಯಾತ್ರೆ...2008ನೇ ವರ್ಷದಲ್ಲಿ ಅಮರ್‌ನಾಥ್ ಯಾತ್ರೆಗೆ.... ಬ್ರಹ್ಮರ್ಷಿ ಪತ್ರೀಜಿಯವರ ಜೊತೆ ಸೇರಿ ಹೋಗುವುದು ನನ್ನ ಅನೇಕಾನೇಕ ಜನ್ಮಗಳ ಸುಕೃತ ಎಂದೇ ಹೇಳಬಹುದು.

 

ಮಾನಸ ಸರೋವರ ಯಾತ್ರೆ ಮಾಡುವಾಗ ಒಂದು ಸಂದರ್ಭದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರು ನನ್ನ ತುಂಬಾ ಬೈದುಬಿಟ್ಟರು. ಪುನಃ ಅಮರ್‌ನಾಥ್ ಯಾತ್ರೆಯಲ್ಲಿ ಇದ್ದಾಗ ಒಂದು ಸಂದರ್ಭದಲ್ಲಿ ಅದೇ ಗುರುವು ನನ್ನ ಕಡೆ ತುಂಬಾ ಪ್ರೀತಿಯಿಂದ ನನ್ನ ಕಣ್ಣುಗಳನ್ನು ನೋಡಿದರು. ಶಕ್ತಿಯ ಪ್ರಸಾರವಾದಂತಾಯಿತು.

 

ಒಂದು ಸಲ ಕೋಪ ಮಾಡಿಕೊಂಡರು... ಇನ್ನೊಂದು ಸಲ ಪ್ರೀತಿಯಿಂದ ನೋಡುತ್ತಿದ್ದರೆ. "ಇದು ಗುರುಗಳು ನನಗೆ ಇಟ್ಟ ಪರೀಕ್ಷೆ” ಎಂದುಕೊಂಡು... ನನ್ನಲ್ಲಿ ನಾನೇ ಅಂತರಂಗ ಪರಿಶೀಲನೆ ಮಾಡಿಕೊಂಡೆ. ಅವರು ಬೈದಾಗಲಾಗಲೀ, ಪ್ರೀತಿಯಿಂದ ನೋಡಿದಾಗಲಾಗಲೀ.... ನನ್ನ ಮನಸ್ಸಿನಲ್ಲಿ ಯಾವ ರೀತಿಯ ಸ್ಪಂದನೆಯೂ ಇರಲಿಲ್ಲ. ಅವರಿಗಿರುವ ಲಕ್ಷ್ಯಾಂತರ ಶಿಷ್ಯರಲ್ಲಿ ಅವರು ಯಾರನ್ನು ಬೈದರೂ, ಯಾರ ವಿಷಯದಲ್ಲಿ ಪ್ರೀತಿ ತೋರಿಸಿದರೂ... ಅದು ಅವರಲ್ಲಿರುವ ನೆಗೆಟಿವ್ಸ್‌ನ ತೆಗೆದುಹಾಕಿ..... ಅವರನ್ನು ಸುಂದರ ಸಜೀವ ಶಿಲ್ಪಿಗಳ ಹಾಗೆ ಮಾರ್ಪಡಿಸಲಿಕ್ಕಾಗಿಯೆ.ಎಂದು ಅರ್ಥಮಾಡಿಕೊಂಡೆ.

 

"ನಮ್ಮೆಲ್ಲರಲ್ಲೂ ಭಗವಂತನಿದ್ದಾನೆ” ಎಂದು.... "ನಾವೇ ದೇವರೆಂದೂ...” ಅನುಭವಪೂರ್ವಕವಾಗಿ ನಮಗೆ ತಿಳಿಯಪಡಿಸಿದ ಪುಣ್ಯಾತ್ಮರು "ಬ್ರಹ್ಮರ್ಷಿ ಪತ್ರೀಜಿ". ಈ ಭೂಮಿಯ ಮೇಲೆ ನಡೆದಾಡುವ ಪರಮಾತ್ಮ ರೂಪದಲ್ಲಿರುವ ಬ್ರಹ್ಮರ್ಷಿ ಪತ್ರೀಜಿ ಎಲ್ಲರನ್ನು ಗುರ್ತಿಸಿ ಒಂದೇ ತರಹ ಪ್ರೀತಿಯನ್ನು ಹಂಚುತ್ತಾರೆ. ಅವರ ದೃಷ್ಟಿಯಲ್ಲಿ ಯಾರೂ ಹೆಚ್ಚಲ್ಲಾ, ಯಾರೂ ಕಡಿಮೆಯೂ ಅಲ್ಲ. ಇದು ಅವರು ಆಚರಿಸಿ ನಮಗೆ ಹೇಳಿಕೊಡುತ್ತಿದ್ದಾರೆ.

 

ಅಮರ್‌ನಾಥ್ ಯಾತ್ರೆಗೆ ಹೋದಾಗ ಕಾಶ್ಮೀರದಲ್ಲಿ "ಜ್ಯೇಷ್ಠಾದೇವಿ ಗುಡಿ” ಪ್ರಾಂಗಣದಲ್ಲಿರುವ ಕೊಠಡಿಗಳಲ್ಲಿ ನಾವೆಲ್ಲಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಪತ್ರೀಜಿ ಅಲ್ಲಿಗೆ ಬಂದು ಜ್ಯೇಷ್ಠಾದೇವಿಯ ಮಹಿಮೆ ಕುರಿತು ಹೇಳಿದರು. ಆ ದಿನ ನನ್ನ ಆನಂದ ವರ್ಣನಾತೀತ.

 

"ಇದುವರೆಗೂ . . ಜ್ಯೇಷ್ಠಾದೇವಿ ಅಂದರೇ ಲಕ್ಷ್ಮೀ ದೇವಿಗೆ ಜ್ಯೇಷ್ಠಸೋದರಿ ಎಂದೂ.... ‘ದರಿದ್ರ ಲಕ್ಷ್ಮಿ’ ಎಂದೂ ಎಂದು ಹಿರಿಯರು ತಿಳಿಸಿದರು.. ಅವರಿಗೆ ಆತ್ಮ ಜ್ಞಾನವಿಲ್ಲ. ಆದ್ದರಿಂದ, ಹಾಗೆ ಹೇಳಿದ್ದಾರೆ. ಆದರೆ, ನಿಜಕ್ಕೂ ಸತ್ಯವೇನೆಂದರೆ..... .ನಮ್ಮ ಶರೀರದಲ್ಲಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶ, ವಿಶ್ವಮಯ ಕೋಶ, ನಿರ್ವಾಣಮಯ ಕೋಶ ಎನ್ನುವ ಏಳು ಕೋಶಗಳಿವೆ.

 

ಇದರಲ್ಲಿ ‘ಲಕ್ಷ್ಮೀ’ ಎಂದರೆ ‘ವಿಶ್ವಮಯ ಕೋಶ’ ಮತ್ತು ‘ಜ್ಯೇಷ್ಠಾದೇವಿ’ ಎಂದರೆ ‘ನಿರ್ವಾಣಮಯ ಕೋಶ’. ಧ್ಯಾನ, ಜ್ಞಾನ ಯೋಗಿಗಳಾದ ಪಿರಮಿಡ್ ಮಾಸ್ಟರ‍್ಸ್ ಎಲ್ಲರೂ ನಿರ್ವಾಣಮಯ ಕೋಶದಲ್ಲಿ ಇರುವವರೇ. ಅದ್ದರಿಂದ, ಅವರಿಗೆ ’ದರಿದ್ರ’ ಎನ್ನುವುದು ಇರುವುದೇ ಇಲ್ಲ. ಅವರು ಸದಾ ಸಂತೋಷವಾಗಿ, ಆನಂದವಾಗಿ, ಹ್ಯಾಪಿ ಹ್ಯಾಪಿಯಾಗಿ... ಜೀವನವನ್ನು ನಡೆಸುತ್ತಿರುತ್ತಾರೆ. ಇದ್ದರೂ ಇಲ್ಲದ ಹಾಗೆ, ಇಲ್ಲದೇ ಇದ್ದರೂ ಇದ್ದ ಹಾಗೆ ಒಂದೇ ವಿಧವಾದ ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ. ಇದನ್ನೇ ‘ಆತ್ಮಜ್ಞಾನ’ ಎನ್ನುತ್ತೇವೆ. ಮತ್ತೆ ನಿರ್ವಾಣಮಯ ಕೋಶದಲ್ಲಿರುವವರೆಲ್ಲಾ ‘ಆತ್ಮಜ್ಞಾನ’ರಾದ ಪಿರಮಿಡ್ ಮಾಸ್ಟರ‍್ಸ್‌ಗಳೇ ...

 

"ಪ್ರತಿಯೊಬ್ಬರೂ ಪೂರ್ಣ ಮುಕ್ತ ಸ್ಥಿತಿಗೆ ಬರಬೇಕಾದರೇ . . . ‘ಜ್ಯೇಷ್ಠಾದೇವಿ’ಯ ಸ್ಥಿತಿಗೆ ಹೊಂದಿದ ನಿರ್ವಾಣಮಯ ಕೋಶದಲ್ಲಿ ಸೇರಬೇಕಾಗಿದೆ.” ಎನ್ನುತ್ತಾ ತುಂಬಾ ಒಳ್ಳೆಯ ವಿವರಣೆ ನೀಡಿದರು. ಆಗ ನನಗೆ ಜ್ಯೇಷ್ಠಾದೇವಿಯ ವಿಶಿಷ್ಟತೆ ತಿಳಿದು, ಆಕೆ ಎಂದರೆ ತುಂಬಾ ಗೌರವಭಾವ ಬೆಳೆಯಿತು.

 

ಹೀಗೆ, "ಎಲ್ಲಾ ಕಡೆ ‘ಪಾಸಿಟಿವ್ ಎನರ್ಜಿ’ ವಿನಹ ಇನ್ನೇನು ಇಲ್ಲ” ಎಂದು ತುಂಬಾ ಚೆನ್ನಾಗಿ ವಿವರಣೆ ನೀಡುವುದರಲ್ಲಿ ಪತ್ರೀಜಿ ಅವರನ್ನು ಮೀರಿದವರಿಲ್ಲ, ಅವರಿಗೆ ಅವರೇ ಸಾಟಿ.

 

 

ಪುಷ್ಪಾಮೋಹನ್
ಬೆಂಗಳೂರು

Go to top