" ಧ್ಯಾನ ಮಾಡುವುದರಿಂದ A to Z ಅನುಕೂಲವಾಗಿದೆ "

 

ನನ್ನ ಹೆಸರು ರಮಾದೇವಿ. A.V. ನಮ್ಮ ಊರು ಚಿಂತಾಮಣಿ. ನನಗೆ ಇಬ್ಬರು ಗಂಡು ಮಕ್ಕಳು.

 

ನನಗೆ ಮೊದಲಿನಿಂದಲೂ ಆಧ್ಯಾತ್ಮ ವಿಚಾರ, ಧ್ಯಾನ ಇವುಗಳಲ್ಲಿ ತುಂಬ ಆಸಕ್ತಿ ಇತ್ತು. ನನ್ನ ತವರೂರು ಮಾಗಡಿ, ಅಲ್ಲಿ ಯಾರೇ ಗುರುಗಳು ಬಂದು ಆಧ್ಯಾತ್ಮ ಬೋಧನೆ, ವಿಚಾರಗಳನ್ನು ಹೇಳುತ್ತಾರೆಂದು ತಿಳಿದರೆ ಸಾಕು ಅಲ್ಲಿ ಹೋಗುತ್ತಿದ್ದೆ.  ಆಗೆಲ್ಲಾ ನಾವು ಬಾಬಾರವರ ಮೂಲರೂಪವನ್ನು ಮನದಲ್ಲಿ ನೆನೆಯುತ್ತ ಧ್ಯಾನ ಮಾಡುತ್ತಿದ್ದೆವು. ನನಗೆ ಬಾಬಾರವರಲ್ಲಿ ತುಂಬ ನಂಬಿಕೆ. ಬೇರೆ ಗುರುಗಳು ಬಂದಾಗ ಬೇರೆ ವಿಧವಾಗಿ ಜಪಮಾಡಿ ಅಂತ ಹೇಳುತ್ತಿದ್ದರು. ಆದರೂ ಅದೆಲ್ಲಾ ಕೆಲವು ದಿನಗಳ ಕಾಲ ಮಾಡಿ ನನಗೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಎಲ್ಲವನ್ನು ಬಿಟ್ಟುಬಿಟ್ಟೆ. 

 

ನಂತರ, ಮದುವೆಯಾದ ಕೆಲವು ವರ್ಷಗಳ ನಂತರ ಸುಜಾತರವರ ಮನೆಯಲ್ಲಿ ಆನಾಪಾನಸತಿ ಧ್ಯಾನವನ್ನು ಹೇಳಿಕೊಟ್ಟರು. ದಿನಾಲೂ ಅವರ ಮನೆಗೆ ಹೋಗಿ ಇದ್ದು ಧ್ಯಾನ ಮಾಡಿ ಬರುತ್ತಿದ್ದೆನು. ಆಗ ಅವರು ‘ಶ್ರೀ ಶಿರಡಿ ಸಾಯಿ ಸಚ್ಚರಿತೆ’ ಪುಸ್ತಕವನ್ನು ಕೊಟ್ಟರು. ಅದನ್ನು ಓದಿದಾಗ ಅದರಲ್ಲಿ ಅಂತರ್ಮುಖವಾಗಬೇಕು ಅಂತ ಬರೆದಿದ್ದಾರೆ. ಹೇಗೆ ಅಂತ ಗೊತ್ತಾಗುತ್ತಿರಲಿಲ್ಲ. 

 

ಆದರೆ, ಈಗ ಶ್ರೀ ಸುಭಾಷ್ ಪತ್ರಿಸಾರ್‌ರವರು ತುಂಬಾ ಸರಳವಾದ ಪದ್ಧತಿಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಈ ಆನಾಪಾನಸತಿಯ ಧ್ಯಾನವನ್ನು ಪ್ರಪಂಚದಾದ್ಯಂತ ಊರು ಊರುಗಳಿಗೂ ಹೋಗಿ ಹೇಳಿಕೊಟ್ಟಿರುತ್ತಾರೆ. ಚಿಂತಾಮಣಿಗೂ ಸಹ ಬಹಳಸಾರಿ ಬಂದಿದ್ದಾರೆ. ಅವರು ಬಂದಾಗೆಲ್ಲ ತಪ್ಪದೆ ನಾನು ಅವರ ಕ್ಲಾಸಿಗೆ ಹೋಗುತ್ತಿದ್ದೆ.

 

ನಾನು ಸಹ ಈ ಧ್ಯಾನವನ್ನು ಕಲಿತು ಧ್ಯಾನದ ಕರಪತ್ರಗಳ ಪ್ರತಿಗಳನ್ನು ಮಾಡಿಸಿ ನಾನು ಎಲ್ಲಿ ಹೋದರು ಅದನ್ನು ತೆಗೆದುಕೊಂಡು ಹೋಗಿ ಹಂಚುತ್ತೇನೆ. ನನ್ನ ಓರಗಿತ್ತಿ ಶೈಲಜ ಜೊತೆ ಸ್ಕೂಲ್‌ಗಳಿಗೆ ಹೋಗಿ ಅಲ್ಲಿಯೂ ಸಹ ವಿಚಾರಗಳನ್ನು ಹೇಳುತ್ತೇವೆ. 

 

ಧ್ಯಾನ ಮಾಡುವುದರಿಂದ ಅನೇಕ ಅನುಭವಗಳು ಆಗಿವೆ. ಧ್ಯಾನ ಕಲಿತ ಸ್ವಲ್ಪ ದಿನದಲ್ಲೆ ನನಗೆ ಒಂದು ಸಂದೇಶ ಬಂದಿತು. ಧ್ಯಾನದಲ್ಲಿ ಕುಳಿತಿರುವಾಗ ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ಆಗ ಎದುರಿಗೆ ಸರಿಯಾಗಿ ಒಂದು ದೊಡ್ಡ ಬಂಡೆಕಲ್ಲು ಕಾಣಿಸಿತು. ಏನು ಬಂಡೆಕಲ್ಲು ಕಾಣಿಸುತ್ತಿದೆಯಲ್ಲಾ ಅಂದುಕೊಳ್ಳುತ್ತಿರುವ ತಕ್ಷಣ ಬಂದ ಉತ್ತರ ಏನೆಂದರೆ "ಸಂಸಾರದಲ್ಲಿ ಎಷ್ಟೇ ಏರುಪೇರಾದರೂ, ಎಷ್ಟೇ ಕಲಹಗಳಾದರೂ ನಿನ್ನ ಮನಸ್ಸನ್ನು ಕಲ್ಲಿನಂತೆ ಗಟ್ಟಿಮಾಡಿಕೊ" ಎಂದು ಬಂತು. ತಕ್ಷಣ ಎಚ್ಚರಿಕೆಯಾಗಿ ನನ್ನ ಜೊತೆಯಲ್ಲಿದ್ದವರಿಗೆಲ್ಲಾ ಈ ಅನುಭವವನ್ನು ಹೇಳಿಕೊಂಡು ತುಂಬಾ ಸಂತೋಷಪಟ್ಟೆ. 

 

10 ವರ್ಷದಿಂದ ಈಗಿನ ವರೆಗೂ ಧ್ಯಾನವನ್ನು ಬಿಡದೆ ನನಗೆ ಸಮಯ ಸಿಕ್ಕಾಗೆಲ್ಲ ಧ್ಯಾನವನ್ನು ಮಾಡುತ್ತೇನೆ. ಮತ್ತು ಪುಸ್ತಕಗಳನ್ನು ಸಹ ಓದುತ್ತೇನೆ. ಒಂದು ದಿನ ಸಾಯಂಕಾಲ 4 ಗಂಟೆಗೆ ನಮ್ಮ ಮನೆಯಲ್ಲಿ ಪಿರಮಿಡ್ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದಾಗ ನನಗೆ ಒಂದು ಧ್ವನಿ ಕೇಳಿಸಿತು. ಅದೇನೆಂದರೆ ’ಇದೇ ನಿಗೂಢ ರಹಸ್ಯ, ಇದೇ ನಿಗೂಢ ರಹಸ್ಯ’ ಅಂತ ಕೇಳಿಸಿತು. ಆಗ ನಾನು ಯಾವುದು ಅಂತ ಕೇಳಿದಾಗ ತುಂಬ ಆಳವಾಗಿ ಮತ್ತು ಅಗಲವಾಗಿ ನೋಡಿದಷ್ಟೆಲ್ಲಾ ಬಿಳಿಯಾಗಿ ಕಾಣಿಸಿತು. ಮತ್ತು ಇನ್ನೊಂದು ಸಾರಿ ಧ್ಯಾನಕ್ಕೆ ಕುಳಿತಾಗ ಜ್ಞಾನ ಎಂದರೆ ಏನು ಅಂತ ಅಂದುಕೊಂಡು ಕುಳಿತೆ. ಆಗ, ರಾಧಾಕೃಷ್ಣ ಇಬ್ಬರು ಕಾಣಿಸಿದರು. ಆದರೆ, ಆಗ ನಾನು ಅಂದುಕೊಂಡೆ ನಾನು ಕೃಷ್ಣನನ್ನು ಕರೆಯಲಿಲ್ಲವಲ್ಲ ಎಂದುಕೊಂಡು ಸುಮ್ಮನಾಗಿ ಬಿಟ್ಟೆ. ಸ್ವಲ್ಪ ಸಮಯದ ನಂತರ ಧ್ಯಾನದಿಂದ ಎದ್ದೆ ಆಗ ಏನೂ ಗೊತ್ತಾಗಲಿಲ್ಲ. ಆದರೆ, ಬೆಳಗ್ಗೆ ನಿನ್ನೆ ಬಂದ ಅನುಭವವನ್ನು ಜ್ಞಾಪಿಸಿಕೊಳ್ಳುತ್ತಿರುವಾಗ ಗೊತ್ತಾಯಿತು. ನಾನು ಜ್ಞಾನ ಎಂದರೆ ಏನು ಅಂತ ಪ್ರಶ್ನಿಸಿದ್ದಕ್ಕೆ ಶ್ರೀ ಕೃಷ್ಣ ಕಾಣಿಸಿದನು. ಇದರ ಅರ್ಥ ಭಗವತ್‌ಗೀತೆಯನ್ನು ಚೆನ್ನಾಗಿ ಓದಿ ಅದರಲ್ಲಿರುವಂತೆ ನಡೆಯುವುದೆ ಜ್ಞಾನ ಅಂತ ಗೊತ್ತಾಯಿತು.

 

ನನಗೆ ತುಂಬ ಕೋಪ ಇತ್ತು. ಈಗ ತುಂಬ ಕಡಿಮೆಯಾಗಿದೆ. ಅಕಸ್ಮಾತ್ ಯಾವಾಗಾದರೂ ಕೋಪಮಾಡಿಕೊಂಡರೆ ನನ್ನ ಮಕ್ಕಳು "ಧ್ಯಾನ ಮಾಡುವವರಿಗೆ ಕೋಪಾನೆ ಬರಬಾರದು" ಅಂತ ಹೇಳುತ್ತಾರೆ. ತಕ್ಷಣ ನಾನು ನಕ್ಕು ಶಾಂತವಾಗಿ ಬಿಡುತ್ತೇನೆ. ನನಗೆ ಯಾರ ಹತ್ತಿರವಾದರೂ ಮಾತಾಡಬೇಕೆಂದರೂ ಏನೋ ಒಂದು ಥರ ಭಯವಾಗುತ್ತಿತ್ತು. ಬಾಯೆಲ್ಲ ನಡುಕ ಬರುತ್ತಿತ್ತು. ಈಗ ಆ ರೀತಿ ಏನಿಲ್ಲ. ಧೈರ್ಯವಾಗಿ ಮಾತನಾಡುತ್ತೇನೆ. ಮತ್ತು ನನಗೆ ಕಾಲುನೋವು ಬರುತ್ತಿತ್ತು. ಧ್ಯಾನದಲ್ಲಿ ಕುಳಿತಾಗ ನೋವಿದೆ ಎಂದು ಅಂದುಕೊಂಡು ಕುಳಿತಾಗ ಅದಕ್ಕೂ ಸಹ ಉತ್ತರ ಬಂದಿತ್ತು. ನನಗೆ ಇನ್ನು ಅನೇಕ ವಿಧವಾದ ಅನುಭವಗಳು ಆಗಿವೆ. ಅನೇಕ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದೆ. ಒಟ್ಟಿನಲ್ಲಿ, ನಮಗೆ ಬೇಕಾದ್ದನೆಲ್ಲಾ ಕೊಡುವ ಕಲ್ಪವೃಕ್ಷ, ಕಾಮಧೇನುವಿಗಿಂತ ಹೆಚ್ಚಿನ ಲಾಭವನ್ನು ಧ್ಯಾನದಿಂದ ಪಡೆಯಬಹುದು. ಮತ್ತು ನನಗೆ ಎಲ್ಲಾ ವಿಧದಲ್ಲೂ ಧ್ಯಾನ ಮಾಡುವುದರಿಂದ A to Z ವರೆಗೂ ಅನುಕೂಲವಾಗಿದೆ.

 

 

A.V. ರಮಾದೇವಿ
ಚಿಂತಾಮಣಿ
ಫೋನ್ : +91 8095123444

Go to top