" ಆನಾಪಾನಸತಿ ಧ್ಯಾನದಿಂದ... ನನ್ನ ಆಧ್ಯಾತ್ಮಿಕ ಪ್ರಗತಿ "

 

 

ನನ್ನ ಹೆಸರು ಸತ್ಯವತೀದೇವಿ. ನಾನು ಹುಟ್ಟಿದ್ದು ಭೀಮವರಂ ಹತ್ತಿರ ಇರುವ "ಪಾಲಕೋಡೇರು" ಎನ್ನುವ ಗ್ರಾಮದಲ್ಲಿ. ನಾನು ವಿಜಯವಾಡದಲ್ಲಿ ಉಪಾಧ್ಯಾಯಳಾಗಿ ಕೆಲಸ ಮಾಡುತ್ತಿದ್ದೆ.  ಈಗ ಇರುವುದು ಬೆಂಗಳೂರಿನಲ್ಲಿ. ಬಾಲ್ಯದಿಂದಲೂ ನನಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಇರುವುದರಿಂದ ಡಿಗ್ರಿಯಲ್ಲಿ "ಫಿಲಾಸಫೀ" ತೆಗೆದುಕೊಂಡಿದ್ದೆ. 

 

ಆಧ್ಯಾತ್ಮಿಕ ಮಾರ್ಗದಲ್ಲಿ ಇರುವುದರಿಂದಲೇ... ಅನೇಕ ಕಷ್ಟಗಳು ಬಂದರೂ ಎಲ್ಲಾ ನಮ್ಮ ಒಳ್ಳೆಯದಕ್ಕೇ ಎಂದುಕೊಳ್ಳುತ್ತಾ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಜೀವನ ಸಾಗಿಸುವುದು ನನಗೆ ಅಭ್ಯಾಸವಾಗಿದೆ. ಆದರೆ, ಒಬ್ಬ"ಸತ್ಯಾನ್ವೇಷಿ"ಯಾಗಿ ನಾನು ಪ್ರಯಾಣ ಬೆಳೆಸಿದ ಅನೇಕ ಆಧ್ಯಾತ್ಮಿಕ ಮಾರ್ಗಗಳಲ್ಲಿ ನನಗೆ ಜ್ಞಾನ ಲಭ್ಯವಾದರೂ ಅಂತ್ಯದಲ್ಲಿ "ಆನಾಪಾನಸತಿ" ಧ್ಯಾನದಲ್ಲಿ ಬಂದಿರುವುದು... ನಿಜಕ್ಕೂ ನನ್ನ ಪೂರ್ವಜನ್ಮ ಸುಕೃತವೇ. 

 

ಹದಿನೈದು ವರ್ಷಗಳ ಹಿಂದೆ ವಿಜಯವಾಡದಲ್ಲಿ ಒಬ್ಬ ಗೆಳತಿಯ ಮನೆಯಲ್ಲಿ ಟೇಬಲ್ ಮೇಲೆ "ಆನಾಪಾನಸತಿ" ಪುಸ್ತಕವನ್ನು ನೊಡಿದೆ.  ನನಗೆ ಬುದ್ಧನೆಂದರೆ ಮತ್ತು ಅವರು ಹೇಳಿರುವಂತಹ ಅಷ್ಟಾಂಗ ಮಾರ್ಗವೆಂದರೆ ತುಂಬಾ ಇಷ್ಟ.  ಆ ಪುಸ್ತಕದ ಮುಖಪುಟದಲ್ಲಿ ಧ್ಯಾನಭಂಗಿಯಲ್ಲಿರುವ ಬುದ್ಧನ ಚಿತ್ರ ಇತ್ತು. ಹಿಂಭಾಗದಲ್ಲಿ ಚಾಯ್ ಕುಡಿಯುತ್ತಿರುವ ಪತ್ರೀಜಿಯವರ ಚಿತ್ರ ಮತ್ತು ಅದರ ಕೆಳಗಡೆ "ಧ್ಯಾನವೆಂದರೆ.. ಚಾಯ್ ಕುಡಿಯುವಷ್ಟು ಸುಲಭ" ಎಂದು ಬರೆದಿತ್ತು. 

 

ತುಂಬಾ ಹೊತ್ತು ಅವರನ್ನು ಹಾಗೇ ನೋಡುತ್ತಾ ಇದ್ದು ಬಿಟ್ಟೆ, "ಯಾರಿವರು"? "ಮುಸ್ಲಿಮ್" ಇದ್ದಹಾಗೆ ಇದ್ದಾರೆ ಆದರೆ... ಹೆಸರು ನೋಡಿದರೆ "ಸುಭಾಷ್ ಪತ್ರಿ" ಎಂದು ಬರೆದಿದೆ, ಉತ್ತರ ಭಾರತದವರು ಯಾರೋ ಇರಬಹುದು" ಎಂದುಕೊಂಡೆ. 

 

ಅಷ್ಟರಲ್ಲೇ ನನ್ನ ಸ್ನೇಹಿತೆ ಬಂದು ನಾನು ನೋಡುತ್ತಿರುವ ಪುಸ್ತಕವನ್ನು ನೋಡಿ "ನಮ್ಮ ನೆಂಟರು ಯಾರೋ ಕೊಟ್ಟರು... ನಿಮಗೆ ಬೇಕಾದರೇ ತೆಗೆದುಕೊಳ್ಳಿ" ಎಂದಳು. ಅವಳಿಗೆ ಧನ್ಯವಾದಗಳನ್ನು ತಿಳಿಸಿ... ಆ ಪುಸ್ತಕವನ್ನು ತಂದು ಓದಿದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟವಾಯಿತು. ನಾವೆಲ್ಲಾ ಆಗಲೇ ಪೂಜೆಗಳು ಮಾಡುವುದನ್ನು ಬಿಟ್ಟು ಈ "ಆನಾಪಾನಸತಿ" ಧ್ಯಾನ ಇನ್ನೂ ಚೆನ್ನಾಗಿದೆ ಎಂದುಕೊಂಡೆವು. 

 

2003 ನೇ ವರ್ಷದಲ್ಲಿ ನಾವು ಕರ್ನೂಲ್ ಹತ್ತಿರ ಇರುವ ಎಮ್ಮಿಗನೂರು ಎನ್ನುವ ಊರಿಗೆ ಬಂದ ನಂತರ, ಆಕಸ್ಮಿಕವಾಗಿ ಒಂದು ದಿನ "ಶ್ರೀ ರಾಘವೇಂದ್ರ ಪಿರಮಿಡ್ ಧ್ಯಾನ ಕೇಂದ್ರ"ವನ್ನು ನೋಡಿ.. ಅದರ ಒಳಗೆ ಹೋದ ತಕ್ಷಣ... ಅಲ್ಲಿ ನನ್ನ ಸ್ವಾಗತಿಸುವ ಹಾಗೆ ಬಣ್ಣ ಬಣ್ಣದ ರಂಗೋಲಿ ಮತ್ತು ಹೂಗಳಿಂದ ಅಲಂಕರಿಸಿತ್ತು. ಹಿಂದಿನ ದಿನವೇ ಅಲ್ಲಿಗೆ ಮೊದಲನೆಯ ವಾರ್ಷಿಕೋತ್ಸವಕ್ಕೆ ಪತ್ರೀಜಿ ಬಂದು ಹೋದರೆಂದು ತಿಳಿದು... "ಅಯ್ಯೋ ನಿನ್ನೆ ಬಂದಿದ್ದರೇ ಚೆನ್ನಾಗಿರುತ್ತಿತ್ತು.  ಪತ್ರೀಜಿ ಅವರ ದರ್ಶನ ಭಾಗ್ಯ ದೊರಕುತ್ತಿತ್ತು" ಎಂದನಿಸಿತು.  ಆ ದಿನದಿಂದ ಅಲ್ಲಿಗೆ ಸದಾ ಹೋಗುತ್ತಿದ್ದೆ. 

 

ಬಾಲ ಕಾರ್ಮಿಕರ ಶಾಲೆಯಲ್ಲಿ "ಕೇರ್ ಟೇಕರ್" ಆಗಿ ನಾನು ಉದ್ಯೋಗ ಮಾಡುತ್ತಾ... ಆ ಮಕ್ಕಳನ್ನು... ಪಿರಮಿಡ್‌ಗೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ನನ್ನ ಜೊತೆ ಕೆಲಸ ಮಾಡುವ ಉಪಾಧ್ಯಾಯರಿಗೆ ಕೂಡ ಧ್ಯಾನವನ್ನು ಕುರಿತು ಹೇಳಿ ಹುಣ್ಣಿಮೆ ಧ್ಯಾನಕ್ಕೆ ಕರೆದುಕೊಂಡು ಹೋಗುತ್ತಿದ್ದೆ. 

 

ಭಗವಾನ್ ರಮಣ ಮಹರ್ಷಿ ಅವರ ಸ್ಫೂರ್ತಿಯಿಂದ... ಸಾಧನೆಯಲ್ಲಿ ಭಾಗವಾಗಿ... ನಾನು 2 ದಿನಗಳು, 4 ದಿನಗಳು, 100 ದಿನಗಳು ಮತ್ತು ಒಂದು ವರ್ಷ ಮೌನವ್ರತವನ್ನು ಆಚರಿಸಿದೆ. ಹಾಗೆ ಮಾಡುತ್ತಿರುವಾಗ ನನ್ನ ಜೀವನದಲ್ಲಿ ಅನೇಕಾನೇಕ ಅದ್ಭುತಗಳು ನಡೆದಿವೆ. ಮೌನವ್ರತ ಮಾಡುವಾಗ ಮನಸ್ಸು ಪ್ರಶಾಂತವಾಗಿ ಆಲೋಚನಾರಹಿತ ಸ್ಥಿತಿಯಲ್ಲಿ ಇರುತ್ತಿತ್ತು. ಆಂತರ್ಯದಿಂದ ಅನೇಕಾನೇಕ ಸಂದೇಶಗಳು ಬರುತ್ತಿತ್ತು.  ಧ್ಯಾನದಲ್ಲಿ ಸಮಾಧಿ ಸ್ಥಿತಿ, ಬ್ರಹ್ಮಾನಂದದ ಅನುಭೂತಿ ಲಭ್ಯವಾಯಿತು.  ಸದಾ ಆನಂದವಾಗಿ... ಪ್ರಕೃತಿಯಲ್ಲಿ ಯಾವುದನ್ನು ನೋಡಿದರೂ ಯಾರನ್ನು ನೋಡಿದರೂ... ನನ್ನನ್ನು ನಾನು ನೋಡಿಕೊಳ್ಳುತ್ತಿರುವ ಹಾಗೆ ಇರುತ್ತಿತ್ತು.  ಪ್ರೇಮ ಭಾವನೆಯಿಂದ ಮಾತುಗಳಲ್ಲಿ ಹೇಳಲಾರದ ಅನಿರ್ವಚನೀಯವಾದ ಆನಂದವನ್ನು ಅನುಭವಿಸುತ್ತಿದ್ದೆ.  ನನ್ನ ‘ಅಂತರಾತ್ಮ ಪ್ರೇರಣೆ’ಯಿಂದ ನನ್ನ ಜೀವನದಲ್ಲಿ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು ಪ್ರಾರಂಭವಾಗಿದೆ.  ಪತ್ರೀಜಿಯವರು ಹೇಳಿದಂತೆ "ನಮ್ಮ ವಾಸ್ತವಕ್ಕೆ ನಾವೇ ಕಾರಣ" ಎಂಬುದು ಸತ್ಯ.  ಈಗ ನನಗೆ ನಕಾರಾತ್ಮಕ ಆಲೋಚನೆಗಳು ಬರುವುದೇ ಇಲ್ಲ.  ಜೀವನವು ಆನಂದವಾಗಿದೆ.  ಸಂಪೂರ್ಣ ಆರೋಗ್ಯವನ್ನು ಹೊಂದಿದ್ದೇನೆ.  ಪ್ರತಿಯೊಂದು ಕೆಲಸದಲ್ಲೂ ಯಶಸ್ಸೇ. 

 

2007 ನಲ್ಲಿ ಬೆಂಗಳೂರಿಗೆ ಬಂದ ನಂತರ ಪಿರಮಿಡ್ ವ್ಯಾಲಿಯಲ್ಲಿ "ಪಿರಮಿಡ್ ಸ್ಪಿರಿಚ್ಯುಯಲ್ ಅಕಾಡೆಮಿ"ಯವರು ಕನ್ನಡದಲ್ಲಿ ನಡೆಸಿದ ಏಳು ದಿನಗಳ ರೆಸಿಡೆನ್ಷಿಯಲ್ ಕೋರ್ಸ್ ಪೂರ್ತಿ ಆದನಂತರ, ಪತ್ರೀಜಿ ಅವರ ಸ್ವಹಸ್ತದಿಂದ ಸರ್ಟಿಫಿಕೇಟ್ ಪಡೆದುಕೊಂಡು ನನ್ನ ಜನ್ಮ ಧನ್ಯವಾಯಿತೆಂದು ಭಾವಿಸಿದೆ. ಪಿರಮಿಡ್ ವ್ಯಾಲಿಯಲ್ಲೇ ಇದ್ದು... ಈ ಕೋರ್ಸ್ ಮಾಡುವ ಅವಕಾಶ ಎಲ್ಲರಿಗೂ ಲಭ್ಯ. ಪ್ರತಿಯೊಬ್ಬರೂ ಸಹ ಈ ಅವಕಾಶವನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಂಡು ಇನ್ನೂ ಅನೇಕರಿಗೆ... ತಮ್ಮ ಜ್ಞಾನವನ್ನು ಹಂಚಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. 

 

2010 ಅಕ್ಟೋಬರ್ 19 ರಂದು ಬ್ರಹ್ಮರ್ಷಿ ಪತ್ರೀಜಿಯವರ ಆಶೀರ್ವಾದದಿಂದ ನಾನು "ಆತ್ಮವಿದ್ಯಾ ಪಿರಮಿಡ್ ಧ್ಯಾನ ಕೇಂದ್ರ" ಪ್ರಾರಂಭಮಾಡಿ ತರಗತಿಗಳನ್ನು ನಡೆಸುತ್ತಿದ್ದೇನೆ.  ನಮ್ಮ ಮನೆಯ ಮಾಲೀಕರಾದ ಶ್ರೀ ರಾಜಾರಾವ್ ಅವರ ಕುಟುಂಬಕ್ಕೆ ಈ ಧ್ಯಾನವನ್ನು ತಿಳಿಸಿ ಪಿರಮಿಡ್ ಬಗ್ಗೆ ಪರಿಚಯ ಮಾಡಿಸಿದ ಮೇಲೆ ಅವರು ರೂಫ್‌ಟಾಪ್ ಪಿರಮಿಡ್‌ನ್ನು (10*10) ಕಟ್ಟಿಸಿದರು. ಮೇಡಮ್ ಸ್ವರ್ಣಮಾಲಾ ಪತ್ರಿಯವರು 2010 ಏಪ್ರಿಲ್ 16ರಂದು ಪಿರಮಿಡ್ ಉದ್ಘಾಟಿಸಿದರು.  ಅಂದಿನಿಂದ ನನ್ನ ಜೀವನವೇ ಬದಲಾಗಿದೆ. ಧ್ಯಾನ, ಧ್ಯಾನಪ್ರಚಾರ ಮತ್ತು ಅನುವಾದ ಮಾಡುವುದರಲ್ಲಿ ನಾನು ತೊಡಗಿಕೊಂಡಿದ್ದೇನೆ.  ಪ್ರತಿ ಶನಿವಾರ ಪಿರಮಿಡ್ ವ್ಯಾಲಿಯಲ್ಲಿ ಸ್ವಯಂಸೇವಕಿಯಾಗಿ ಕೆಲಸಮಾಡಲು ಅವಕಾಶ ಕೊಟ್ಟಿರುವ "ನಡೆದಾಡುವ ಚೈತನ್ಯ ನಮ್ಮ ಪತ್ರೀಜಿ "ಅವರಿಗೆ ನನ್ನ ಅನಂತಾನಂತ ಕೋಟಿ ಆತ್ಮಪ್ರಣಾಮಗಳು.  ನನ್ನ ಈ ಜನ್ಮ ಧನ್ಯವಾಗಿದೆ.   

     

ಧ್ಯಾನ ಮಾಡುತ್ತಾ, ಎಲ್ಲರಿಗೂ ಧ್ಯಾನವನ್ನು ಹೇಳಿಕೊಡುತ್ತಾ, ಸ್ವಾಧ್ಯಾಯ ಉನ್ನತ ಸ್ಥಿತಿಗೆ, ಉತ್ತಮ ಲೋಕಗಳಿಗೆ ಹೋಗುವುದು ತುಂಬಾ ಅವಶ್ಯಕ. ಸಜ್ಜನ ಸಾಂಗತ್ಯದಿಂದ ಸ್ನೇಹವನ್ನು ಪಡೆಯುತ್ತಾ ನಾವೆಲ್ಲರೂ "ವಸುಧೈವ ಕುಟುಂಬಕಂ" ಎಂಬಂತೆ ಕಲೆತುಬೆರೆತು ಇರೋಣವೇ.

 

ಸತ್ಯವತಿ
ಬೆಂಗಳೂರು
ಆತ್ಮವಿದ್ಯಾ ಪಿರಮಿಡ್ ಧ್ಯಾನಕೇಂದ್ರ
ಫೋನ್ : +91 9620384424

Go to top