" ಧ್ಯಾನ ಮಾಡಿ, ಅನಾರೋಗ್ಯವೆಂಬ ಕತ್ತಲೆಯ ಕತ್ತನ್ನು ಹಿಡಿದು ದೇಹದಿಂದ ಹೊರಗೆ ನೂಕಿ "

 

ನಾನು ಸಿದ್ಧಯ್ಯ, ದಾವಣಗೆರೆಯ ನಿವಾಸಿ. ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ. ಈ ಹಿಂದೆ ಒಂದು ದೊಡ್ಡ ಶಾಲೆಯ ಜವಾಬ್ದಾರಿಯುತ ಸ್ಥಾನದಲ್ಲಿ ತುಂಬಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳಲ್ಲಿ ಏರುಪೇರಾಗಿ ಸಿಟ್ಟು, ಆತಂಕ, ಗೊಂದಲ, ಭಯ, ನಿರಾಸೆ, ಕೀಲುನೋವು, ನಿದ್ರಾಹೀನತೆ, ಅಸಿಡಿಟಿಯಂತಹ ತೊಂದರೆಗಳು ಪ್ರಾರಂಭವಾದುವು. ಇವುಗಳ ನಿವಾರಣೆಗಾಗಿ ತಜ್ಞವೈದ್ಯರ ಮೊರೆಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ನನ್ನ ಮನಃಸ್ಥಿತಿ ಹೇಗಿತ್ತೆಂದರೆ, ಒಂದು ಕಡೆ ಕರ್ತವ್ಯ ಪ್ರಜ್ಞೆಯಿಂದ ಮುನ್ನುಗ್ಗುವ ಛಲ, ಇನ್ನೊಂದು ಕಡೆ ಅನಾರೋಗ್ಯದಿಂದ ಹಿಮ್ಮೆಟ್ಟುವಂತಹ ದೌರ್ಬಲ್ಯ.

 

ನಾನು ಮುಂದೆ ನಿವೃತ್ತನಾದಾಗ ಈ ತೊಂದರೆಗಳು ಸರಿಯಾಗಬಹುದೆಂಬ ನಿರೀಕ್ಷೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿಹೊಂದಿ ಕರ್ತವ್ಯದಿಂದ ಬಿಡುಗಡೆ ಹೊಂದಿದೆ. ಹಿಂದಿನಿಂದಲೂ ಅಂಟಿಕೊಂಡು ಬಂದಿದ್ದ ಈ ತೊಂದರೆಗಳು ನಂತರವೂ ಕಡಿಮೆಯಾಗಲಿಲ್ಲ. ಅಲೊಪತಿ, ಆಯುರ್ವೇದ, ಹೊಮಿಯೋಪತಿ, ನ್ಯಾಚುರೋಪತಿ, ಮುಂತಾದ ಎಲ್ಲಾ ಪದ್ಧತಿಯ ಚಿಕಿತ್ಸೆಗಳ ಮೊರೆಹೋದರೂ ತಾತ್ಕಾಲಿಕ ಶಮನವಾಗುತ್ತಿತ್ತೇ ಹೊರತು ಶಾಶ್ವತ ಗುಣಕಾಣಿಸಿಲಿಲ್ಲ. ಇದರಿಂದಾಗಿ ಹಿಂದೊಮ್ಮೆ ಅತ್ಯಂತ ಕ್ರಿಯಾಶೀಲನಾಗಿದ್ದ ನಾನು ನಿಷ್ಕ್ರಿಯನಾಗಿ ಮೂಲೆ ಸೇರುವಂತಹ ಪರಿಸ್ಥಿತಿ ನನ್ನದಾಯಿತು.

 

ನನ್ನ ಕೆಲವು ಸ್ನೇಹಿತರು ತಮ್ಮ ದೈಹಿಕ ಹಾಗು ಮಾನಸಿಕ ತೊಂದರೆಗಳ ನಿವಾರಣೆಗಾಗಿ ಪ್ರತಿನಿತ್ಯ ಧ್ಯಾನಮಾಡಿ ತಮ್ಮ ಆರೋಗ್ಯ ಸುಧಾರಿಸಿಕೊಂಡಿದ್ದಾರೆ ಎಂದರು. ನನಗೂ ಸಹ ಪ್ರತಿನಿತ್ಯ ನಿಯಮಿತವಾಗಿ ಧ್ಯಾನಮಾಡಿ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಿ ಎಂದು ತಿಳಿಸಿದರು. ನಾನು ಕೊನೆಯ ಅಸ್ತ್ರವಾಗಿ ಧ್ಯಾನದ ಮೊರೆ ಹೋಗಬೇಕೆಂದು ನಿರ್ಧರಿಸಿ, ಧ್ಯಾನಕ್ಕೆ ಸಂಬಂಧಿಸಿದ ಕೆಲವು ಕಿರುಹೊತ್ತಿಗೆಗಳನ್ನು ಅಭ್ಯಾಸಮಾಡಿ, ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾದೆ. ಪ್ರಾರಂಭದಲ್ಲಿ ಮನೆಯಲ್ಲಿ ಕನಿಷ್ಠಪಕ್ಷ ಅರ್ಥಗಂಟೆಯಾದರು ಧ್ಯಾನ ಮಾಡಬೇಕೆಂದು ನಿರ್ಧರಿಸಿ, ಧ್ಯಾನ ಮಾಡಲು ಪ್ರಾರಂಭಿಸಿದೆ. ಆದರೆ, 10-15 ನಿಮಿಷಗಳು ಕಣ್ಮುಚ್ಚಿಕೊಂಡು ಕುಳಿತುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಈಗಾಗಲೇ ಕಸದ ತಿಪ್ಪೆಯಂತೆ ನನ್ನ ತಲೆಯಲ್ಲಿ ನಾನಾ ಯೋಚನೆಗಳು ಪ್ರಾರಂಭವಾಗಿ, ಧ್ಯಾನದ ನಡುವೆಯೇ ಎದ್ದು ಅಲ್ಲಿಗೆ ಮುಕ್ತಾಯ ಮಾಡುತ್ತಿದ್ದೆ. ಇದೇರೀತಿ 7-8 ದಿನ ಪ್ರಯತ್ನಮಾಡಿದರೂ ಕಣ್ಮುಚ್ಚಿ ಶಾಂತವಾಗಿ ಕುಳಿತುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮನಸ್ಸಿನಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಮಾಡಿ ಧ್ಯಾನ ಮಾಡುವುದನ್ನೇ ನಿಲ್ಲಿಸಿದೆ. ಈ ವಿಚಾರವನ್ನು ನನ್ನ ಸ್ನೇಹಿತರಿಗೆ ತಿಳಿಸಿದೆ. ಒಬ್ಬರೇ ಮನೆಯಲ್ಲಿ ಧ್ಯಾನ ಮಾಡುವುದರಿಂದ ಪ್ರಾರಂಭದಲ್ಲಿ ಎಲ್ಲರಿಗೂ ಇದೇ ಸ್ಥಿತಿಯಾಗುತ್ತದೆ, ಸಾಮೂಹಿಕ ಧ್ಯಾನ ಶಿಬಿರಕ್ಕೆ ಹಾಜರಾಗುವುದರಿಂದ ಕ್ರಮೇಣ ಈ ದಿಶೆಯಲ್ಲಿ ಪ್ರಗತಿ ಸಾಧಿಸಬಹುದು ಎಂದು ಅವರು ತಿಳಿಸಿದರು. ಅವರ ಸಲಹೆಯಂತೆ ದಾವಣಗೆರೆ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದಲ್ಲಿ ನಡೆಯುತ್ತಿದ್ದ ಸಾಮೂಹಿಕ ಧ್ಯಾನ ತರಗತಿಗೆ 2011 ರಲ್ಲಿ ಹಾಜರಾದೆ. ಅಲ್ಲಿ ಹಿರಿಯರು, ಸಹೃದಯರು ಆದ ಮಾಗನೂರು ಶ್ರೀ ಎಂ.ಬಿ. ಸೋಮಶೇಖರ ಗೌಡರು ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರತಿದಿನ ಬೆಳಿಗ್ಗೆ ತಪ್ಪದೆ ಇಲ್ಲಿಗೆ ಬಂದು ಧ್ಯಾನ ಮಾಡಿರಿ, ನಿಮ್ಮ ಎಲ್ಲಾ ತೊಂದರೆಗಳು ಕ್ರಮೇಣ ನಿವಾರಣೆಯಾಗುತ್ತವೆ ಎಂದು ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭದಲ್ಲಿ ಇಂಜನಿಯರ್ ಶ್ರೀ ಹನುಮಂತಪ್ಪನವರು, ಪ್ರಕಾಶ್‌ರವರು, ಪರಮೇಶ್ವರಪ್ಪನವರು, ಧ್ಯಾನ ಪೂರ್ವಸಿದ್ಧತೆಯ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಅಂದಿನಿಂದ ಪ್ರತಿದಿನ ಬೆಳಿಗ್ಗೆ 5.30 ರಿಂದ 6.೦೦ ವರೆಗೆ ನಡೆಯುವ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸುತ್ತಿದ್ದೇನೆ. 7 ತಿಂಗಳ ಅವಧಿಯಲ್ಲಿ ನನ್ನಲ್ಲಿ ಆಶ್ಚರ್ಯಕರ ಬೆಳವಣಿಗೆಗಳು ನಡೆದಿವೆ. ಆರೋಗ್ಯಸ್ಥಿತಿ ಸುಧಾರಿಸಿದೆ. ಅಂದಿನಿಂದ ಔಷಧಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಮನಶ್ಶಾಂತಿ ಸಿಕ್ಕಿದೆ, ಮಾನಸಿಕ ಒತ್ತಡ ಕಡಿಮೆಯಾಗಿ ಗೊಂದಲ, ನಿರಾಶೆ, ತಲ್ಲಣ ಇವೆಲ್ಲಾ ಕಡಿಮೆಯಾಗುತ್ತಿವೆ. ಮನಸ್ಸಿಗೆ ಏಕಾಗ್ರತೆ ಬರುತ್ತಿದೆ. ಜೀವನ ಶೈಲಿ ಸಂಪೂರ್ಣವಾಗಿ ಬದಲಾಗುತ್ತಿದೆ. ನಿಷ್ಕ್ರಿಯನಾಗಿ ಮೂಲೆ ಗುಂಪಾಗಿದ್ದ ನಾನು ಮತ್ತೊಮ್ಮೆ ಸಕ್ರಿಯನಾಗುತ್ತಿದ್ದೇನೆ.

 

ಏಳು ತಿಂಗಳಿನಲ್ಲಿಯೆ "ಧ್ಯಾನ" ನನ್ನ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಇದರಿಂದ ಮುಂದೆ ನಿಯಮಿತವಾಗಿ "ಧ್ಯಾನ" ಮಾಡುವುದರಿಂದ ನನ್ನ ಎಲ್ಲಾ ತೊಂದರೆಗಳನ್ನು ಕ್ರಮೇಣ ಬಗೆಹರಿಸಿಕೊಳ್ಳಬಹುದೆಂಬ ದೃಢವಿಶ್ವಾಸ ನನಗೆ ಮೂಡಿದೆ. ಧನ್ಯವಾದಗಳು.

 

H. S. ಸಿದ್ಧಯ್ಯ
ದಾವಣಗೆರೆ

Go to top