" ನಮ್ಮ ಕುಟುಂಬ ಧ್ಯಾನಕುಟುಂಬ, ಆನಂದಮಯ ಕುಟುಂಬ ಮತ್ತು ಆತ್ಮಜ್ಞಾನಿಗಳ ಕುಟುಂಬ "

 

ನನ್ನ ಹೆಸರು ಸ್ವಾತಿ. ನಾನು ಚಿಕ್ಕಂದಿನಿಂದಲೂ ತುಂಬಾ ಸೆನ್ಸಿಟಿವ್ ಮತ್ತು ಕೋಪದಿಂದ ಇದ್ದವಳು. ಯಾರ ಜೊತೆಗೂ ಸ್ನೇಹದಿಂದ ಬೆರೆಯಲು ಭಯಪಡುತ್ತಿದ್ದವಳು. ನನಗೆ ದೇವರ ಮೇಲೆ ಎಷ್ಟು ಭಕ್ತಿ ಇತ್ತೋ ದೆವ್ವಗಳ ಮೇಲೆ ಅಷ್ಟೇ ಭಯವೂ ಇತ್ತು.  ಒಬ್ಬಳೇ ಅಡುಗೆ ಮನೆಗೆ ಹೋಗಲೂ ಸಹ ಹೆದರುತ್ತಿದ್ದೆ.  ಈ ಸೃಷ್ಟಿಯ ಬಗ್ಗೆ, ಮಾನವನ ಜನ್ಮದ ಬಗ್ಗೆ ತಿಳಿಯಲು ತುಂಬಾ ಕುತೂಹಲ ಇತ್ತು.  ಒಂದು ದಿನ ಟಿವಿಯಲ್ಲಿ 2012 ರ ನಂತರ ಸತ್ಯಯುಗ ಪ್ರಾರಂಭ ಎಂದು ಹೇಳಿದಾಗ ನಾನು ಸತ್ಯಯುಗವನ್ನು ನೋಡಬೇಕು.  ಆ ಸಮಯದಲ್ಲಿ ನಾನೂ ಸಹ ಇರಬೇಕು ಎಂದುಕೊಂಡೆ.  ಆದರೆ, ಸತ್ಯಯುಗ ಎಂದರೆ ಸಾಮಾನ್ಯವೇ, ಹೇಗೆ, ಏನು ಮಾಡಬೇಕು ಅಂತ ತಿಳಿದಿರಲಿಲ್ಲ.  ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಸರಿಯಾದ ಗುರುಗಳು ಸಿಗಬೇಕು ಎಂದು 2012 ರ ಮಾಘಮಾಸದಲ್ಲಿ ದಿನವೂ ತಣ್ಣೀರಿನ ಸ್ನಾನ ಮಾಡಿ ಸೂರ್ಯನಿಗೆ ಪ್ರಾರ್ಥಿಸುತ್ತಿದ್ದೆ. ಆಗ ನನಗೆ 2010 ಫೆಬ್ರವರಿಯಲ್ಲಿ ನಿತ್ಯ ಎಂಬ ಪಿರಮಿಡ್ ಮಾಸ್ಟರ್ ನನಗೆ ಆನಾಪಾನಸತಿ ಧ್ಯಾನವನ್ನು ಮತ್ತು ಧ್ಯಾನದಲ್ಲಿ ತನಗೆ ಆದ ಅನುಭವಗಳನ್ನು ತಿಳಿಸಿದಳು.  ಆಗಿನಿಂದ ಧ್ಯಾನ ಮಾಡಲು ಪ್ರಾರಂಭಿಸಿದೆ.

 

ಆರಂಭದಲ್ಲಿ ಏನೂ ಅನುಭವಗಳು ಆಗುತ್ತಿರಲಿಲ್ಲ.  ಮೇ 2010 ರಲ್ಲಿ ಧ್ಯಾನಮಹಾಚಕ್ರದ ನಾಂದಿಗೆ ಕರ‍್ನೂಲಿಗೆ ಹೋದೆ. ಅಲ್ಲಿ ಪತ್ರೀಜಿಯವರು " ಪ್ರತಿಯೊಬ್ಬರು ಭೂಮಿಯ ಮೇಲೆ ಅವರವರ ಸ್ವ-ಇಚ್ಛೆಯಿಂದ, ಸ್ವಾನುಭವಗಳನ್ನು ಪಡೆಯಲು ಬಂದಿದ್ದಾರೆ.  ಯಾರೂ ಸಹ ಬಲವಂತದಿಂದ ಭೂಮಿಗೆ ಬಂದಿಲ್ಲ " ಎಂದು ಹೇಳಿದರು. ಆಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಗುರುಗಳು ಸಿಕ್ಕಿದರು ಎಂದು ನನಗೆ ಮಹದಾನಂದವಾಯಿತು. ಅಲ್ಲಿಗೆ ಬಂದಿದ್ದ ಸಾವಿರಾರು ಧ್ಯಾನಿಗಳು, ಪಿರಮಿಡ್ ಮಾಸ್ಟರ‍್ಸ್, ಅವರವರ ಅನುಭವಗಳು, ಅಲ್ಲಿನ ಸಜ್ಜನಸಾಂಗತ್ಯ ಎಲ್ಲವನ್ನು ನೋಡಿ ಆಶ್ಚರ್ಯ ಆಯಿತು.  ಮನುಷ್ಯನಿಗೆ ಆರೋಗ್ಯ ಕೆಡುವುದು ಅವನು ಮಾಡುವ ಸರಿಯಲ್ಲದ ಆಲೋಚನೆಗಳಿಂದ ಎಂದು ತಿಳಿದುಕೊಂಡೆ.  ಅಲ್ಲಿ ಪತ್ರೀಜಿಯವರನ್ನು ಭೇಟಿಯಾದಾಗ, ನನಗೆ ‘ಧ್ಯಾನ ಪ್ರಚಾರ ಮಾಡು’ ಎಂದು ಹೇಳಿದರು. ಆಗಿನಿಂದ ನನ್ನ ಧ್ಯಾನ ಪ್ರಚಾರದ ಪ್ರಯಾಣ ಸಾಗಿತು.  ನನಗೆ ಧ್ಯಾನ ಮಾಡುವುದಕ್ಕಿಂತ ಧ್ಯಾನ ಪ್ರಚಾರದಲ್ಲಿ ಹೆಚ್ಚಿನ ಜ್ಞಾನ ಮತ್ತು ಆನಂದ ಸಿಗುತ್ತದೆ. 

 

ನನಗೆ ಯಾರಾದರು ಯಾವುದೇ ವಿಷಯದ ಬಗ್ಗೆ ಹೇಳಿ ಅದಕ್ಕೆ ಸರಿಯಾದ ಉದಾಹರಣೆ ಕೊಟ್ಟರೆ ಮಾತ್ರ ಅರ್ಥ ಆಗುತ್ತಿತ್ತು.  ನಾನು ಯಾವಾಗಲೂ ನಕಾರಾತ್ಮಕವಾಗಿ ಆಲೋಚಿಸುತ್ತಿದ್ದೆ.  ಒಂದು ದಿನ ಧ್ಯಾನ ಮಾಡುತ್ತಿರುವಾಗ ಪತ್ರೀಜಿಯವರು ನಕಾರಾತ್ಮಕ ಮತ್ತು ಸಕಾರಾತ್ಮಕ ಆಲೋಚನೆಗಳ ಬಗ್ಗೆ ಉದಾಹರಣೆ ಸಮೇತ ವಿವರಿಸಿದರು. ಆಗಿನಿಂದ ನನ್ನಲ್ಲಿ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಯಿತು.  ನನಗೆ ಯಾವ ವಿಷಯದ ಬಗ್ಗೆ ಪ್ರಶ್ನೆಗಳಿದ್ದರೂ ಧ್ಯಾನದಲ್ಲಿ ಅಥವಾ ಕನಸಿನಲ್ಲಿ ಪತ್ರೀಜಿಯವರು ಉತ್ತರಗಳನ್ನು ತಿಳಿಸಿ ನನ್ನ ಸಂದೇಹಗಳನ್ನು ಬಗೆಹರಿಸುತ್ತಿದ್ದರು.  ನಾನು ದೆವ್ವಗಳು ಎಂದರೆ ತುಂಬಾ ಭಯ ಪಡುತ್ತಿದ್ದೆ. ಈಗ ಇಲ್ಲ.  ಏಕೆಂದರೆ, ನಾವು ದೇಹ ಇರುವ ಆತ್ಮಗಳು, ಅವು ದೇಹ ಇಲ್ಲದಿರುವ ಆತ್ಮಗಳು ಎನ್ನುವ ವ್ಯತ್ಯಾಸವನ್ನು ತಿಳಿದುಕೊಂಡೆ.  ನಮ್ಮ ಜೀವನದ ಪ್ರತಿಕ್ಷಣವೂ ನಮ್ಮ ಆಲೋಚನೆಗಳ ಮೂಲಕ ನಡೆಯುವುದು, ನಮ್ಮ ವಾಸ್ತವಕ್ಕೆ ನಾವೇ ಸೃಷ್ಟಿಕರ್ತರು ಎಂದು ತಿಳಿದು, ಒಂದು ದಿನ ಧ್ಯಾನದಲ್ಲಿ ಕುಳಿತು ನಮ್ಮ ಮನೆಯಲ್ಲಿ ಇರುವವರು ಎಲ್ಲರೂ ಧ್ಯಾನ ಮಾಡಬೇಕು, ಧ್ಯಾನ ಪ್ರಚಾರ ಮಾಡಬೇಕು ಎಂದು ಸಂಕಲ್ಪವನ್ನು ಮಾಡಿದೆ.  ಅದಾದ ಕೆಲವೇ ತಿಂಗಗಳಲ್ಲಿ ಎಲ್ಲರೂ ಧ್ಯಾನ ಮಾಡಲು, ಧ್ಯಾನ ಪ್ರಚಾರ ಮಾಡಲು ಪ್ರಾರಂಭಿಸಿದರು.  ಈಗ ನಮ್ಮ ಕುಟುಂಬ ಧ್ಯಾನ ಕುಟುಂಬ, ಆನಂದಮಯ ಕುಟುಂಬ ಮತ್ತು ಆತ್ಮಜ್ಞಾನಿಗಳ ಕುಟುಂಬ ಆಗಿದೆ.  ನಾನು ಪಿರಮಿಡ್ ಮಾಸ್ಟರ್ ಆಗಲು ಸಹಾಯ ಮಾಡಿದ ಆನಾಪಾನಸತಿ ಧ್ಯಾನಕ್ಕೆ, ಅದನ್ನು ಹೇಳಿಕೊಟ್ಟ ಪತ್ರೀಜಿಯವರಿಗೆ, ಎಲ್ಲಾ ಪಿರಮಿಡ್ ಮಾಸ್ಟರ‍್ಸ್‌ರವರಿಗೆ ಮತ್ತು ನನ್ನ ಕುಟುಂಬದವರಿಗೆ ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. 

 

ಎಲ್ಲರಿಗೂ ನನ್ನ ಕಿರು ಮನವಿ : ನಾವು ಸತ್ಯಯುಗದ ಸಂಧಿಕಾಲದಲ್ಲಿ ಇದ್ದೇವೆ.  ಈ ಸಮಯದಲ್ಲಿ ನಮ್ಮ ಮಾನವ ಜನ್ಮ ಸಾಮಾನ್ಯವಲ್ಲ.  ನಮ್ಮ ಕುಟುಂಬದಲ್ಲಿ ಯಾರಾದರು ಸತ್ತುಹೋದರೆ ನಾವು ಎಷ್ಟು ಸಂಕಟಪಡುತ್ತೇವೆ? ಅಂತಹುದರಲ್ಲಿ ಭೂಮಿ ಎನ್ನುವ ಕುಟುಂಬದಲ್ಲಿ ಇರುವ ಪ್ರಾಣಿಗಳನ್ನು ಮಾನವರು ಕೊಂದುತಿನ್ನುತ್ತಿದ್ದಾರೆ.  ತಿಳಿಯದೆಯೇ ನಮ್ಮ ಕುಟುಂಬವನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ.  ಇದನ್ನು ನಿಲ್ಲಿಸುವುದಕ್ಕೆ ಪ್ರತಿಯೊಬ್ಬರು ಸಸ್ಯಾಹಾರಿಗಳಾಗಿ, ಧ್ಯಾನಿಗಳಾಗಿ, ಧ್ಯಾನ ಪ್ರಚಾರಕರಾಗಿ ಮತ್ತು ಆತ್ಮಜ್ಞಾನಿಗಳಾಗಬೇಕು.  ಸತ್ಯಯುಗವನ್ನು ನಮ್ಮ ಇಡೀ ಕುಟುಂಬದವರೆಲ್ಲರೂ ಸೇರಿ ಆನಂದವಾಗಿ ಸ್ವಾಗತಿಸಬೇಕು.

 

ಸ್ವಾತಿ ಸಂದೀಪ್
ರಾಮಕೃಷ್ಣ ಪಿರಮಿಡ್ ಧ್ಯಾನ ಕೇಂದ್ರ
ಕೊಳ್ಳೇಗಾಲ, ಫೋನ್ : +91 91416 88689

Go to top