" ಧ್ಯಾನದಿಂದ ನನ್ನ ಆರೋಗ್ಯ ಸರಿಯಾಯಿತು "

 

ನನ್ನ ಹೆಸರು T.ವೆಂಕಟೇಶ್. ಸ್ಪೈನಲ್ ಕಾರ್ಡ್‌ನ ಶಸ್ತ್ರಚಿಕಿತ್ಸೆಯಾಗಿ ಏಳು ತಿಂಗಳಾಗಿದೆ. ನಡೆದಾಡಲು ಕಷ್ಟವಾಗಿತ್ತು. ಎರಡೂ ಕಡೆಯ Hip Joints ಹಿಡಿದುಕೊಂಡುಬಿಟ್ಟಿದ್ದರಿಂದ, ಓಡಾಡುವುದಕ್ಕೆ ಆಗುತ್ತಿರಲಿಲ್ಲ. ನನ್ನ ಸ್ನೇಹಿತರಾದ A.ಸತ್ಯನಾರಾಯಣರವರು ಧ್ಯಾನ ಮಾಡುವಂತೆ ತಿಳಿಸಿ, ಉಸಿರಾಟದಲ್ಲಿ ಏಕಾಗ್ರತೆ ಮಾಡುವಂತೆ ತಿಳಿಸಿದರು. ಮೊದಮೊದಲು ಏಕಾಗ್ರತೆ ತುಂಬಾ ಕಷ್ಟವಾಗಿತ್ತು. ನಂತರ, ಉಸಿರಾಟವನ್ನು ಲೆಕ್ಕಮಾಡಲು ಪ್ರಾರಂಭಿಸಿದೆ. ಆ ಮೇಲೆ ಉಸಿರಾಟವನ್ನೇ ಗಮನಿಸುವ ಏಕಾಗ್ರತೆಯು ಬಂತು. ಈಗ ಸುಮಾರು ಒಮ್ಮೆಗೆ ಒಂದು ಗಂಟೆಗೂ ಹೆಚ್ಚು ಕಾಲ ಧ್ಯಾನ ಮಾಡುತ್ತೇನೆ.

 

ಧ್ಯಾನವನ್ನು ಹೆಚ್ಚು ಹೆಚ್ಚು ಮಾಡಿದಂತೆಲ್ಲಾ, ಧ್ಯಾನದ ಅನುಭವಗಳು ಹೆಚ್ಚಾದವು. ಧ್ಯಾನ ಮಾಡುತ್ತಿರುವ ನನ್ನ ದೇಹವು ಮೇಲೇಳುವಂತಾಯಿತು. ಕೆಳಗಿನ ಸ್ಪೈನಲ್ ಕಾರ್ಡ್ ಒಡಿದುಕೊಳ್ಳುತ್ತಿರುವ ಅನುಭವವಾಯಿತು. ಮೂಲದ್ವಾರದಲ್ಲಿ ಉಸಿರಾಡುವಂತಹ ಅನುಭವ. ಕೆಳಗಿನಿಂದ ಮೇಲುಭಾಗದವರೆಗೆ ಮೈ ಬಿಸಿಯಾದಂತಾಯಿತು. ಹಣೆಯ ಮಧ್ಯಭಾಗದಲ್ಲಿ ಮತ್ತು ತಲೆಯ ನೆತ್ತಿಯ ಭಾಗದಲ್ಲಿ ಚಕ್ರ ತಿರುಗುವಂತಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಧ್ಯಾನದಲ್ಲಿದ್ದೆ. ಕುರ್ಚಿಯಲ್ಲಿ ಕುಳಿತಿದ್ದೆ, ನನ್ನ ದೇಹವು ತಾನಾಗಿಯೇ ಮೇಲೇಳುತ್ತಿರುವ ಅನುಭವವಾಯಿತು. ದಿಢೀರನೆ, ಮೇಲೆದ್ದೆ, ಕೈಕಾಲುಗಳು ನಡುಗಿದಂತಾಗಿ, ಮೈ ಮೇಲೆ ದೇವರು ಬಂದಾಗ ನಡುಗುತ್ತಾರಲ್ಲ ಹಾಗೆ ಆಯಿತು. ನಾನು ಒಮ್ಮೆಲೇ ಕಿರುಚಿದೆ. ನನಗರಿವಿಲ್ಲದಂತೆಯೇ ಅತ್ತುಬಿಟ್ಟೆ.

 

ಮಾರನೆಯ ದಿನ ನನಗೆ ಆಶ್ಚರ್ಯ. ನಾನು ಓಡಾಡುವಾಗ ಸೊಂಟಕ್ಕೆ ಬೆಲ್ಟ್ ಇಲ್ಲದೆ ನಡೆಯಲು ಸಾಧ್ಯವೇ ಇರಲಿಲ್ಲ. ಬೆಲ್ಟ್‌ನ್ನು ಉಪಯೋಗಿಸಲೇಬೇಕಿತ್ತು. ಅಂದು ಬೆಲ್ಟ್‌ನ ಅಗತ್ಯ ಕಾಣಲಿಲ್ಲ, ನನ್ನ ಮನಸ್ಸಿಗೆ ಬೆಲ್ಟ್ ಇಲ್ಲದೆ ಈ ದಿನ ವಾಕಿಂಗ್ ಹೋಗೋಣ ಅನಿಸಿತು. ಹಾಗೆಯೇ ಮಾಡಿದೆ. ನನ್ನ ನಡಿಗೆ ಬಹಳ ಸಲೀಸಾಗಿತ್ತು. ಬೆಳಗಿನ ವಾಕಿಂಗ್ ಕೂಡ ಹಿಂದಿನ ದಿನಕ್ಕಿಂತ ಬಹಳ ಸಲೀಸಾಗಿ, ವೇಗವಾಯಿತು. ಈಗ ದೇಹ ಬಹಳಷ್ಟು ಹಗುರವಾಗಿದೆ. ನನ್ನ ಆರೋಗ್ಯದ ಸಮಸ್ಯೆಯು ಪರಿಹಾರವಾಗಿತ್ತು. ಎಲ್ಲವೂ ಧ್ಯಾನದ ಮಹಿಮೆ ಎನಿಸಿತು.


T. ವೆಂಕಟೇಶ್
ಬೆಂಗಳೂರು

Go to top