" ಧ್ಯಾನದಿಂದ ಬಹಳಷ್ಟು ದಿವ್ಯಚಕ್ಷುವಿನ ಅನುಭವಗಳು ಆಗಿವೆ "

 

ನಾನು ಒಬ್ಬ ಗಣಿತ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ. ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿ ವಾಸವಾಗಿದ್ದು. ಕಳೆದ ಐದು ವರ್ಷಗಳಿಂದ ಪ್ರತಿದಿನ ಧ್ಯಾನ ಮಾಡುತ್ತಿದ್ದೇನೆ. ಮೊದಲು ಧ್ಯಾನದ ಬಗ್ಗೆ ನನಗೆ ಸರಿಯಾದ ತಿಳಿವಳಿಕೆ ಇರಲಿಲ್ಲ. ನಮ್ಮ ಮನೆಯ ಪಕ್ಕದ ದೇವಸ್ಥಾನದ ಆವರಣದಲ್ಲಿ ಧ್ಯಾನ ಕಾರ್ಯಕ್ರಮ ಪ್ರಾರಂಭವಾದಾಗ ನಾನು ಕುತೂಹಲದಿಂದ ಮತ್ತು ಸಂಶಯಾತ್ಮಕ ದೃಷ್ಟಿಯಿಂದ ಒಂದು ದಿನ ಧ್ಯಾನ ಮಾಡಲು ಕುಳಿತೆ. ಮರುದಿನದಿಂದ ಮನಸ್ಸು ಆ ಕಡೆ ಎಳೆಯತೊಡಗಿತು. ಪ್ರಾರಂಭದ ದಿನಗಳಲ್ಲಿ ಒಂದು ಗಂಟೆ ಕುಳಿತುಕೊಳ್ಳಲು ಕಷ್ಟವಾದರೂ ನಂತರದ ದಿನಗಳಲ್ಲಿ ಯಾವ ತೊಂದರೆಯು ಆಗಲಿಲ್ಲ. ದಿನದಿಂದ ದಿನಕ್ಕೆ ಧ್ಯಾನದ ಬಗ್ಗೆ ಆಸಕ್ತಿ ಬೆಳೆಯತೊಡಗಿತು. ನಂತರ, ಇದಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆನು. ಇದರಿಂದ ಆಸಕ್ತಿ ಹೆಚ್ಚಾಗಿ ಧ್ಯಾನದಲ್ಲಿ ಹೆಚ್ಚು ಮಗ್ನವಾಗಲು ಪ್ರೇರಣೆ ಉಂಟಾಯಿತು.

 

ಧ್ಯಾನದಲ್ಲಿ ನನಗೆ ಅನೇಕ ಅನುಭವಗಳು ಉಂಟಾಗಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ. ಧ್ಯಾನಕ್ಕೆ ಕುಳಿತ ಹತ್ತು ನಿಮಿಷದ ನಂತರ ನಿಧಾನವಾಗಿ ಮೊದಲು ತಲೆ, ನಂತರ ಶರೀರ ತಿರುಗುವ ಅನುಭವ ಶುರುವಾಗುತ್ತದೆ. ಮೈಯಲ್ಲಿನ ನಡುಕ ಮತ್ತು ಕೆಲವು ಭಾಗಗಳಲ್ಲಿ ಒಂದು ರೀತಿಯ ಹಿಂಸೆಯಾಗುವುದು. ಆಮೇಲೆ ದಿವ್ಯಚಕ್ಷು ತೆರೆದು ಬೇರೆ ಬೇರೆ ಬಣ್ಣಗಳು ಕಾಣಿಸುತ್ತದೆ. ಅನಂತರ ಮೋಡಗಳು ಮತ್ತು ಸಮುದ್ರದ ಅಲೆಗಳು ಚಲಿಸಿದಂತೆ ಮತ್ತು ದಟ್ಟವಾದ ಕರಿನೆರಳು ಹಾಗೂ ಮನುಷ್ಯಾಕಾರದ ನೆರಳು ಕಾಣಿಸುವುದು. ಆಕಾಶದಲ್ಲಿ ತೇಲಾಡುತ್ತ, ನಕ್ಷತ್ರಲೋಕಗಳಲ್ಲಿ ಸಂಚರಿಸುತ್ತ ಅನೇಕ ಗ್ಯಾಲಾಕ್ಸಿಗಳಲ್ಲಿ ಸಂಚರಿಸಿ ಮತ್ತೆ ವಾಪಸಾದಂತಹ ಹಾಗೂ ಪುನರ್ಜನ್ಮದ ಅನುಭವಗಳು ಉಂಟಾಗುತ್ತವೆ. ಒಂದು ದಿನ ಧ್ಯಾನ ಮಗ್ನನಾಗಿದ್ದಾಗ ಇದ್ದಕ್ಕಿದ್ದಂತೆ ಭಗವಾನ್ ಬುದ್ಧನು ನನ್ನೆದುರಿಗೆ ಪ್ರತ್ಯಕ್ಷವಾದಾಗ ಪರಮಾನಂದವಾಯಿತು.

 

 ಧ್ಯಾನದಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿದೆ. ದಿನ ನಿತ್ಯದ ಕೆಲಸಗಳನ್ನು ಲವಲವಿಕೆಯಿಂದ ಮಾಡುತ್ತೇನೆ ಮತ್ತು ಮಾನಸಿಕವಾಗಿ ಉಲ್ಲಾಸಭರಿತನಾಗಿರುತ್ತೇನೆ. ಕುಟುಂಬದಲ್ಲಿ ನೆಮ್ಮದಿ ನೆಲೆಸಿದೆ. ಧ್ಯಾನವನ್ನು ನಿರಂತರವಾಗಿ ಮಾಡಿ ಆತ್ಮಜ್ಞಾನವನ್ನು ಪಡೆಯುವ ಹಂಬಲವಿದೆ. ಈ ಧ್ಯಾನದ ಜ್ಞಾನವನ್ನು ಕೊಟ್ಟಿರುವ ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ಕೃತಜ್ಞತೆಗಳು. ಎಲ್ಲರೂ ಧ್ಯಾನಮಾಡಿ ಸುಖವಾಗಿರಿ ಎಂದು ಹಾರೈಸುತ್ತೇನೆ.

 

B.K.ತಿಪ್ಪೇಸ್ವಾಮಿ
ದಾವಣಗೆರೆ
ಫೋನ್  : +91 9446441608

Go to top