" ಈ ಭೂಮಿಯ ಮೇಲೆ ನಡೆದಾಡುವ ದೇವರು - ಪತ್ರೀಜಿ "

 

2012 ಜನವರಿ 15 ರಂದು ನಡೆದ " ಮಹಿಳಾ ಧ್ಯಾನ ಯಜ್ಞ " ದ ವಾರ್ಷಿಕೋತ್ಸವದಂದು ಪಿರಮಿಡ್ ಮಾಸ್ಟರ್‌ಗಳಾದ ಶ್ರೀಮತಿ ಮತ್ತು ಶ್ರೀ ತುರಾಯಿರವರನ್ನು, ಶ್ರೀಮತಿ ಪುಷ್ಪಾಮೋಹನ್‌ರವರು ಸಂದರ್ಶನ ಮಾಡಿದರು. 


ಪುಷ್ಪಾಮೋಹನ್ : ನಿಮ್ಮ ಪೂರ್ತಿ ಹೆಸರೇನು?

 

ತುರಾಯಿ : ನನ್ನ ಹೆಸರು ಹನುಮಂತಪ್ಪ, ನಮ್ಮ ತಂದೆಯವರ ಹೆಸರು ಎಲ್ಲಪ್ಪ. ನಮ್ಮ ಮನೆ ಹೆಸರು ತುರಾಯಿ. ಆದರೆ, ಎಲ್ಲರೂ ನನ್ನ H.Y. ತುರಾಯಿ ಅಂತ ಕರೆಯುತ್ತಾರೆ.

 

ಪುಷ್ಪಾಮೋಹನ್ : ನಿಮ್ಮ ಊರು?

 

ತುರಾಯಿ : ನಮ್ಮ ಹುಟ್ಟೂರು ಕುಷ್ಟಗಿ ತಾಲೂಕು ಚಳಗೆರೆ ಗ್ರಾಮ ಕೊಪ್ಪಳಜಿಲ್ಲೆ. ಈಗ ನಾವು ವಾಸ ಇರುವುದು ದಾವಣಗೆರೆಯಲ್ಲಿ.

 

ಪುಷ್ಪಾಮೋಹನ್ : ನೀವು ಏನು ಕೆಲಸ ಮಾಡ್ತಾ ಇದ್ದೀರ?

 

ತುರಾಯಿ : ಈಗ ನಾನು D.S.P ಆಗಿ ಕೆಲಸ ಮಾಡುತ್ತಿದ್ದೇನೆ. ಗುಂಟೂರಿನಲ್ಲಿ 1979ರಲ್ಲಿ B.A. ಪದವಿ ಮುಗಿದ ತಕ್ಷಣವೆ ನಾನು ಸಬ್‌ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾಗಿದೆ. 1992ರಲ್ಲಿ ಸರ್ಕಲ್‌ಇನ್‌ಸ್ಪೆಕ್ಟರಾದೆ, 2003ರಿಂದ D.S.P ಆಗಿ ಕೆಲಸ ಮಾಡುತ್ತಿದ್ದೇನೆ.

 

ಪುಷ್ಪಾಮೋಹನ್ : ನಿಮಗೆ ಧ್ಯಾನದ ಪರಿಚಯ ಯಾರು ಮಾಡಿಕೊಟ್ಟರು?

 

ತುರಾಯಿ : ನನಗೆ ಧ್ಯಾನವನ್ನು ಪರಿಚಯಿಸಿದ ಗುರು ‘ಸಂತೋಷ್’, ದಾವಣಗೆರೆಯ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಅವರು ಒಮ್ಮೆ ನಮ್ಮ ಮನೆಗೆ ಸುಮಾರು ರಾತ್ರಿ 8 ಗಂಟೆಗೆ ಬಂದು ರಾತ್ರಿ 11 ಗಂಟೆವರೆಗೂ ನನಗಾಗಿ ಕಾಯುತ್ತಿದ್ದರು. "ಯಾಕಪ್ಪಾ ಇಷ್ಟು ಹೊತ್ತು ಕೂತಿದ್ದಿಯಾ? ಏನು ನಿನ್ನ ಹೆಸರು?" ಎಂದು ಕೇಳಿದೆ. ಆಗ ಆ ಹುಡುಗ ತನ್ನ ಹೆಸರು ಸಂತೋಷ್ ಎಂದು ಹೇಳಿದರು. ಅವರು ಕೂಡಾ ಒಬ್ಬ ಗ್ರೇಟ್ ಮಾಸ್ಟರ್. ಅವರು ಬಂದು ನನಗೆ ಧ್ಯಾನದ ಬಗ್ಗೆ ವಿವರಿಸಿದರು. ಅದನ್ನೆಲ್ಲಾ ಕೇಳಿದ ನಾನು ಹೇಳಿದೆ: ನೋಡಪ್ಪಾ ಸುಮ್ಮನೆ ಕಣ್ಣು ಮುಚ್ಚಿಕೊಂಡು ಕುಳಿತರೆ ಏನಾಗುತ್ತೆ? ಇದೆಲ್ಲಾ ನನಗೆ ಯಾಕೆ ಬೇಕು? ದಯವಿಟ್ಟು ಬೇರೆ ಯಾರಿಗಾದರು ಹೇಳು, ನನಗೆ ಧ್ಯಾನದ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದೆ. ಆಗ ಆ ಹುಡುಗ ಹೇಳಿದ... ಅದೇನು ಕಷ್ಟ ಇಲ್ಲ ಅಂಕಲ್... ಸುಮ್ಮನೆ ಕಣ್ಣುಮುಚ್ಚಿಕೊಂಡು ಕುಳಿತು ’ಶ್ವಾಸದ ಮೇಲೆ ಗಮನ’ ಇಟ್ಟರೆ ಸಾಕು ಎಂದು ಹೇಳಿದ. ನಾನು ಪೊಲೀಸ್ ಇಲಾಖೆಯಲ್ಲಿನ ಶಿಸ್ತಿನ ಸಿಪಾಯಿ ಆಗಿರುವುದರಿಂದ, ಅವನನ್ನು ನಾನು ಸ್ವಲ್ಪ ಹೆದರಿಸಿ ಗದರಿಸಿದೆ. ಅವರ ಮೇಲೆ ಸಿಟ್ಟಿನಿಂದ ಕೋಪಮಾಡಿಕೊಂಡು, ಯಾಕೆ ಹೀಗೆ ಮಾಡುತ್ತಿದ್ದೀಯ ಎಂದು ನಾನು ಆತನನ್ನು ಬೈದರೂ ಸಹ ಅದ್ಯಾವುದನ್ನೂ ಆತ ಮನಸ್ಸಿಗೆ ಹಚ್ಚಿಕೊಳ್ಳದೆ, ಧ್ಯಾನ ಅಂದರೆ ಹೀಗೆ ಮಾಡಬೇಕು ಎಂದು ಸಮಾಧಾನದಿಂದ ಹೇಳುವ ರೀತಿನೋಡಿ ನನಗೆ ತುಂಬಾ ಇಷ್ಟ ಆಗಿ ನಾನು ಅವರನ್ನು ಗುರುವಾಗಿ ಸ್ವೀಕರಿಸಿದೆ. ನನ್ನದು ಪೊಲೀಸ್ ವೃತ್ತಿ... ತುಂಬಾ ಬಿಡುವಿಲ್ಲದಂತೆ ಇರುತ್ತೇನೆ. ಧ್ಯಾನವನ್ನು ಹೇಗೆ ಮುಂದುವರಿಸಬೇಕು ಅಂತ ನನಗೆ ಗೊತ್ತಿಲ್ಲ" ಎಂದೆ. ಆಗ, ಅವರು ನಾನೇ ಬರುತ್ತೇನೆ ಅಂಕಲ್ ನಾಳೆ ಬೆಳಿಗ್ಗೆ 4 ಗಂಟೆಗೆ ಬಂದು ನಿಮ್ಮನ್ನು ಎಬ್ಬಿಸುತ್ತೇನೆ... ಧ್ಯಾನ ಮಾಡಿ..... ಎಂದು ಹೇಳಿದ."

 

ಪುಷ್ಪಾಮೋಹನ್ : ತುಂಬಾ ತಾಳ್ಮೆಯಿಂದ ಹೇಳಿದ್ದಾನಲ್ಲವೇ?

 

ತುರಾಯಿ : "ಹೌದು ತುಂಬಾ ತಾಳ್ಮೆಯಿಂದ ಹೇಳಿದ. ಆದರೆ, ಬೆಳಿಗ್ಗೆ ಅವರು ಬರುವ ಭರವಸೆ ನನಗಿರಲಿಲ್ಲ. ರಾತ್ರಿ 11, 12 ಗಂಟೆಯವರೆಗೂ ಆ ಹುಡುಗ ನಮ್ಮ ಮನೆಯಲ್ಲೇ ಇದ್ದ. ಇನ್ನು ಬೆಳಿಗ್ಗೆ 4 ಗಂಟೆಗೆ ಏನು ಬರುತ್ತಾನೆ? ಆತ ಬರುವುದೂ ಇಲ್ಲ, ನಾನು ಧ್ಯಾನ ಮಾಡುವುದೂ ಇಲ್ಲ ಎಂದುಕೊಂಡು ಸುಮ್ಮನೆ ’ಹುಂ’ ಎಂದು ಬಿಟ್ಟೆ. ಆದರೆ, ಸರಿಯಾಗಿ ಬೆಳಗಿನ ಜಾವ 4 ಗಂಟೆಗೆ ಆ ಹುಡುಗ ಬಂದೇಬಿಟ್ಟ. ನನ್ನ ಧರ್ಮಪತ್ನಿಯನ್ನು ಮತ್ತು ನನ್ನನ್ನೂ ಒಟ್ಟಿಗೆ ಧ್ಯಾನಕ್ಕೆ ಕೂಡಿಸಿ ಧ್ಯಾನ ಹೇಳಿಕೊಟ್ಟದ್ದು ಅದೊಂದೇ ದಿನ, ಅದೇ ದಿನ Spiritual Reality CD ತೋರಿಸಿದರು. ಮೊದಲನೆಯ ಸಲ ಕುಳಿತಿದ್ದಾಗ ಮನಸ್ಸಿಗೆ ಬಹಳ ನೆಮ್ಮದಿ ಸಿಕ್ಕಿತು. ಏಕೆಂದರೆ, ಆಗ ನನಗೆ D.S.P ಆಗಿ ಬಡ್ತಿ ದೊರೆತು, posting ಎಲ್ಲಿಗೆ ಸಿಗುತ್ತದೆಯೋ ಎಂದು ಯೋಚನೆ ಆಗಿತ್ತು. ನಂತರ, ಕೂಡ್ಲಿಗಿಗೆ posting ಆಗಿ, ಅಲ್ಲಿನ ರಾಜಕೀಯ ಒತ್ತಡದಿಂದ ನನಗೆ ತುಂಬಾ ಟೆನ್ಷನ್ ಇತ್ತು. ಈ ಧ್ಯಾನ ಅನ್ನುವುದು ಒಂದು ರೀತಿ ಒಳ್ಳೆ ಸಮಯದಲ್ಲೇ ಸಿಕ್ಕಿದೆ. ಇದರಿಂದ ಒಂದುರೀತಿ ಒಳ್ಳೆಯದೇ ಆಯಿತು ಎಂದು ತಿಳಿದು ನಾನು ಧ್ಯಾನಕ್ಕೆ ಕುಳಿತೆ.

 

ಪುಷ್ಪಾಮೋಹನ್ : "ನಿಮ್ಮ ಶ್ರೀಮತಿಯವರ ಹೆಸರೇನು?"

 

ತುರಾಯಿ : "ಅವರ ಹೆಸರು ಲಕ್ಷ್ಮೀ ತುರಾಯಿ."

 

ಪುಷ್ಪಾಮೋಹನ್ : "ಅವರು ಧ್ಯಾನ ಮಾಡುತ್ತಾರಾ?"

 

ತುರಾಯಿ : "ಹೌದು... ಅವರು ಸಹ ಧ್ಯಾನ ಮಾಡುತ್ತಾರೆ."

 

ಪುಷ್ಪಾಮೋಹನ್ : ನಿಮ್ಮ ಕುಟುಂಬದಲ್ಲಿ ಎಲ್ಲರೂ ಧ್ಯಾನ ಮಾಡುತ್ತಾರಾ?

 

ತುರಾಯಿ : ಮೊದಲು ನಮ್ಮ ಮಕ್ಕಳಿಬ್ಬರು "ಏಕೆ ಕಣ್ಣು ಮುಚ್ಚಿಕೂತಿದ್ದೀರ?" ಎಂದು ಕೇಳಿದರು. ಆದರೆ, ಅವರು ನಮ್ಮಲ್ಲಾಗಿರುವ ಬದಲಾವಣಿ ಕಂಡು ಅವರೂ ಸಹ ಧ್ಯಾನ ಮಾಡಲು ಒಲವು ತೋರುತ್ತಿದ್ದಾರೆ.

 

ಲಕ್ಷ್ಮಿ ತುರಾಯಿ : ಅವರು ಧ್ಯಾನ ಮಾಡದಿದ್ದರೂ, ಅವರು ಧ್ಯಾನದ line ನಲ್ಲಿ ಇದ್ದಾರೆ. ಧ್ಯಾನಿಗಳು ಹೇಗೆ ಇರಬೇಕೊ ಹಾಗಿದ್ದಾರೆ. ಅವರು ವಿದ್ಯಾರ್ಥಿಗಳಾದ್ದರಿಂದ, ನಮ್ಮ ಹಾಗೆ ಗಂಟೆಗಟ್ಟಲೆ ಕುಳಿತು ಧ್ಯಾನ ಮಾಡದಿದ್ದರೂ, ನಮ್ಮನ್ನು ನೋಡಿ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಧ್ಯಾನದ ತರಗತಿಗಳಲ್ಲಿ ಹೇಳಿಕೊಡುತ್ತಾರೊ ಅದೇ ರೀತಿಯಲ್ಲಿದ್ದಾರೆ. ಅವರು ಪೂರ್ಣವಾಗಿ ಧ್ಯಾನಕ್ಕೆ ಬರುತ್ತಾರೆ ಎನ್ನುವ ನಂಬಿಕೆ ನಮಗಿದೆ. ಏಕೆಂದರೆ, ಮೂಲತಃ ನಾವಿಬ್ಬರು ಧ್ಯಾನದಲ್ಲಿದ್ದೇವಲ್ಲವೆ.

 

ಪುಷ್ಪಾಮೋಹನ್ : ಧ್ಯಾನಕ್ಕೆ ಮುಂಚೆ ನಿಮ್ಮ ಮನೊಭಾವನೆ ಹೇಗಿತ್ತು? ಇತರರ ಜೊತೆ ನಿಮ್ಮ ವರ್ತನೆ ಹೇಗಿತ್ತು? ಏಕೆಂದರೆ, D.S.P ಅಂದ ಮೇಲೆ ನೀವು ಕಳ್ಳರು, ಕೊಲೆಗಾರರು ಎಲ್ಲಾ negative people ಇರುತ್ತಾರಲ್ಲವೆ. ಅವರ ಜೊತೆ ನಿಮ್ಮ ವರ್ತನೆ ಹೇಗಿತ್ತು. ಧ್ಯಾನ ಮಾಡಿದ ಮೇಲೆ ಅವರ ಜೊತೆ ನಿಮ್ಮ ವರ್ತನೆ ಹೇಗಿದೆ? ಯಾವ ತರಹ ನೀವು ಎಲ್ಲರನ್ನೂ ಧ್ಯಾನಿಗಳಾಗಿ ಬದಲಾಯಿಸುತ್ತಿದ್ದೀರ?

 

ತುರಾಯಿ : ನಾನು ಧ್ಯಾನಕ್ಕೆ ಬರುವುಕ್ಕಿಂತಾ ಮುಂಚೆ, ಅದರಲ್ಲೂ sub - Inspector ಆಗಿದ್ದಾಗ, ನನಗೆ ಗೊತ್ತಿದ್ದವರಷ್ಟೇ ನನ್ನನ್ನು ಬಂದು ಮಾತನಾಡಿಸಬೇಕು. ಉಳಿದವರೆಲ್ಲಾ ನನ್ನೊಡನೆ ಮಾತನಾಡಲು ಬರುವುದೇ ಬೇಡ ಎಂದು ಹೇಳುತ್ತಿದೆ. ಅಷ್ಟು ಮನಸ್ಸು ಕಠೋರವಾಗಿತ್ತು. ನನ್ನ ಕೆಲಸ ನಾನು ಮಾಡಬೇಕು. ಕಳ್ಳರನ್ನು ಹೊಡೆಯಬೇಕು, ಬಡಿಯಬೇಕು, ಗಲಾಟೆ ಇಲ್ಲದ ಹಾಗೆ ಮಾಡಬೇಕು. ನಾನು ಅಷ್ಟು ಸಿಟ್ಟಿನ ಸ್ವಭಾವದವನು. 

 

ಧ್ಯಾನಕ್ಕೆ ಬಂದ ಮೇಲೆ ಮನಸ್ಸು ಎಂದರೇನು, ಆತ್ಮ ಎಂದರೇನು ಎಂಬುದನ್ನು ಅರಿತುಕೊಂಡೆ. ಬರಿ ಹೊಡೆದು ಬಡಿದು ಮಾತ್ರ ನಾವು ಜನಗಳನ್ನು ಸುಧಾರಿಸಿಬಹುದು ಎಂದು ಮೊದಲು ತಿಳಿದಿದ್ದೆ. ಕಾನೂನು case ಹಾಕಿ ನಾವು ಸಮಾಜಕ್ಕೆ ಒಳ್ಳೆ ರೀತಿಯಲ್ಲಿ ತರಬೇಕಪ್ಪಾ ಅಂದರೆ ಅದು ಸಾಧ್ಯ ಆಗಲ್ಲ. ಏಕೆಂದರೆ, ಹೊಡೆಯುವುದರಿಂದ ಆ ಕಳ್ಳನ ಮನಸ್ಸು ಬದಲಾಗುವುದಿಲ್ಲ. ಪೊಲೀಸ್ ಅಂದರೆ ಹೊಡೆಯುತ್ತಾರೆ, ಬಡಿಯುತ್ತಾರೆ ಅಷ್ಟೇತಾನೆ ಎಂದು ತಿಳಿದು ಸೆರೆಮನೆಯಿಂದ ಹೊರಬಂದನಂತರ ಅವನು ತನ್ನ ಕೆಲಸ ತಾನು ಮಾಡುತ್ತಿರುತ್ತಾನೆ. ಅದಕ್ಕಿಂತಾ ಅವರನ್ನು ಕೂಡಿಸಿಕೊಂಡು ಏತಕ್ಕಾಗಿ ಈ ಕೆಲಸ ಮಾಡಿದೆ, ಹೀಗೆ ಮಾಡುವುದು ತಪ್ಪಲ್ಲವೆ. ಹೀಗೆ ತಿಳಿವಳಿಕೆ ಕೊಡುವುದರಿಂದ ಅವನಲ್ಲಿ ಬದಲಾವಣೆ ಬರಲು ಸಾಧ್ಯವಿದೆ ಎಂಬುದನ್ನು ಧ್ಯಾನಕ್ಕೆ ಬಂದ ನಂತರ ತಿಳಿದುಕೊಂಡೆ. ಹೊಡೆದು ಬಡಿದು ಅವನನ್ನು ಬಾಯಿಬಿಡಿಸಬಹುದು. ಆದರೆ, ಈ ಧ್ಯಾನದಿಂದ ಏನಾಗುತ್ತದೆ ಅಂದರೆ ಅವನನ್ನು ನೋಡಿದ ತಕ್ಷಣ ಹೇಳಬಹುದು. ಇವನು ಕಳ್ಳತನ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂದು ಮೊದಲೇ ತಿಳಿದುಕೊಳ್ಳಬಹುದು. ಇದೆಲ್ಲಾ ಈ ಧ್ಯಾನದ ಶಕ್ತಿ ಮತ್ತು ಗುರು ಹಿರಿಯರ ಆಶೀರ್ವಾದ ಎಂದು ಹೇಳಬಹುದು."

 

ಧ್ಯಾನದಿಂದ ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದು. ಆದರೆ, ನಾವು ಎಲ್ಲರಲ್ಲೂ ಪ್ರೀತಿ, ವಿಶ್ವಾಸ ಇಟ್ಟು ಹೇಳಿದರೆ, ಅವರು ಸಹ ನಮ್ಮನ್ನು ಪ್ರೀತಿ, ವಿಶ್ವಾಸದಿಂದ ನೋಡುತ್ತಾರೆ. ಮೊದಲು ಪೊಲೀಸ್ ಇಲಾಖೆಯಲ್ಲಿ ಹೇಗಿತ್ತು ಅಂದರೆ ನನ್ನ ಅಧಿಕಾರ, ದರ್ಪ ಕಾನೂನು ನೋಡಿ ಜನ ಹೆದರುತ್ತಿದ್ದರು. ಅದರೆ, ಈಗ ನನ್ನನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ. ಹೆದರಿ ಒಪ್ಪಿಕೊಳ್ಳುವುದಕ್ಕೂ, ಪ್ರೀತಿಯಿಂದ ಹೇಳಿದಕ್ಕೆ ಒಪ್ಪಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಇದರಿಂದ ನಮಗೆ ಆತ್ಮಸಂತೋಷ ಅನಿಸುತ್ತದೆ.

 

ಪುಷ್ಪಾಮೋಹನ್ : ನಿಜ... ನಿಜ ... ಮೊದಲು ನೀವು ಮಾಂಸಾಹಾರಿಗಳು. ನೀವು ಮಾಂಸ ತಿಂದುಕೊಂಡೇ ಬಂದಿದ್ದೀರ. ಈಗ ಸಸ್ಯಾಹಾರಿಗಳಾಗಿ ನಿಮ್ಮ ಜೀವನ ಹೇಗಿದೆ? ಮನಸ್ಸಿನಲ್ಲೂ, ಶರೀರದಲ್ಲೂ ಯಾವ ತರಹ ಬದಲಾವಣೆ ಆಗಿದೆ?

 

ತುರಾಯಿ : ಖಂಡಿತಾ ಆಗಿದೆ. ಹೇಳಲು ತುಂಬಾ ಸಂತೋಷ ಆಗ್ತಾಯಿದೆ. ನಾನು ಚಿಕ್ಕವನಾಗಿಂದಲೂ ನಾನು ಸುಮಾರು 52 ವರ್ಷಗಳವರೆಗೂ ಕೂಡಾ ನಾನು ಮಾಂಸಾಹಾರಿಯೇ. ಈಗ ನನಗೆ 56 ವರ್ಷ, ನಾನು ಧ್ಯಾನಕ್ಕೆ ಬಂದು 4 ವರ್ಷಗಳಾಗಿದೆ. 52 ವರ್ಷ ಆಡು, ಕೋಳಿ ಅವನ್ನೆಲ್ಲಾ ತಿನ್ನುತ್ತಿದ್ದೆ. ನಾನು ಮಾಂಸ ಇಲ್ಲದೆ ಊಟ ಮಾಡುತ್ತಿರಲಿಲ್ಲ. ಬೆಳಗ್ಗೆ ಟಿಫಿನ್‌ಗೆ, ಮಧ್ಯಾಹ್ನ ಊಟಕ್ಕೆ, ರಾತ್ರಿ ಊಟಕ್ಕೆ ಮಾಂಸಾಹಾರ ಬೇಕು. ಅಷ್ಟು ಮಾಂಸಾಹಾರ ಪ್ರಿಯನಾಗಿ ಬಿಟ್ಟಿದ್ದೆ ನಾನು.

 

ಮಾಂಸಾಹಾರ ತಿನ್ನುವುದರಂಥ ಕೆಟ್ಟ ಅಭ್ಯಾಸ ಬೇರೆ ಯಾವುದೂ ಇಲ್ಲ. ನಾನು ಮೊದಲಿನಿಂದಲೂ ಕಬಡ್ಡಿ ಆಟಗಾರ. ಇಷ್ಟೆಲ್ಲಾ ಇದ್ದರೂ, ಕೆಲಸದ ಒತ್ತಡದಿಂದ ನನಗೆ 2003ರಲ್ಲೇ ನನಗೆ ಸಕ್ಕರೆ ಖಾಯಲೆ ಬಂತು. ಎಲ್ಲರ ಜೊತೆಗೂ ನಾವು ಹೊಂದಾಣಿಕೆ ಮಾಡಿಕೊಂಡು ಇರುವ ಹಾಗಿಲ್ಲ. ಯಾವುದಾದರು ಒಂದು ಫಿರ್ಯಾದು ಬಂದಾಗ, ಒಬ್ಬರಿಗೆ ನ್ಯಾಯ ಕೊಡಿಸಲು ಹೋದರೆ ಹತ್ತು ಜನ ನಮಗೆ ವಿರೋಧಿಗಳಾಗುತ್ತಾರೆ. ಅವರಿನ್ನೆಲ್ಲಾ ಎದುರಿಸಬೇಕಾಗುತ್ತದೆ. ಈ ಟೆನ್ಷನ್‌ಗಳಿಂದ ಸಕ್ಕರೆ ಖಾಯಲೆ ಬಂತು. ಯಾವಾಗಲೂ ನಾನು ವ್ಯಾಯಾಮ ಮಾಡಿ ಆರೋಗ್ಯವಾಗಿ ಇದ್ದರೂ ಸಹ ನನಗೆ ಸಣ್ಣ ಆಘಾತ ಆಯಿತು. ನಾನು ಆಸ್ಪತ್ರೆ ಅಂದರೆ ಎಂದಿಗೂ ನೋಡಿರಲಿಲ್ಲ. ಟಾಬ್ಲೆಟ್ಸ್ ಅಂದರೆ ಗೊತ್ತಿಲ್ಲ, ಇನ್‌ಜಕ್ಷನ್ ಅಂದರೆ ಗೊತ್ತಿರಲಿಲ್ಲ. ಒಮ್ಮೆ ನನಗೆ ಸಕ್ಕರೆ ಮಟ್ಟ 420 ಆದಾಗ ಡಾಕ್ಟರ್ ನನ್ನ ಚೆನ್ನಾಗಿ ಬೈದುಬಿಟ್ಟರು.

 

ನಾನು ಮಾಂಸಾಹಾರ ತಿನ್ನುವುದರಿಂದ ಇದು ಬಂದಿದೆ ಎಂದು ಆಗ ನನಗೆ ಅರ್ಥವಾಗಲಿಲ್ಲ. ನಾನು ಸುಮಾರು 7 ವರ್ಷಗಳಿಂದ ಗುಳಿಗೆ, ಇನ್‌ಜಕ್ಷನ್ ತೆಗೆದುಕೊಂಡರೂ ಸಹ ನನಗೆ ಸಕ್ಕರೆ normal ಗೆ ಬಂದಿರಲಿಲ್ಲ. ಆದರೆ ಧ್ಯಾನ ಮಾಡಿದ ಮೇಲೆ ಯಾವ ಮಾತ್ರೆಗಳೂ ಇಲ್ಲದೆಯೇ ಈಗ ನನ್ನ ಸಕ್ಕರೆ ಮಟ್ಟ 110, 120 ಇರುತ್ತದೆ.

 

ಪುಷ್ಪಾಮೋಹನ್ : ನೋಡಿದಿರಾ, ಎಷ್ಟು ಬದಲಾವಣೆ ಬಂತು ಅಂತ.

 

ತುರಾಯಿ : ಖಂಡಿತಾ ಆದರಿಂದ ನಾವು ಕೊಡ್ಲಿಗಿಯಲ್ಲಿದ್ದಾಗಿನಿಂದ ಧ್ಯಾನ ಮಾಡಲು ಪ್ರಾರಂಭಿಸಿದ್ದೇವೆ. ಆಗ ನನಗೆ ಎಲ್ಲೂ posting ಸಹ ಬಂದಿರಲಿಲ್ಲ. ನಾವು ಬಿಡುವಾಗಿದ್ದೆವು, ಪಿರಮಿಡ್ ವ್ಯಾಲಿಯಲ್ಲಿ ನಡೆದ ಬೃಹತ್ ಮೈತ್ರೇಯ ಬುದ್ಧ ಪಿರಮಿಡ್‌ನ ಉದ್ಘಾಟನೆ ಮತ್ತು ಬುದ್ಧ ಪೂರ್ಣಿಮೆ ಕಾರ್ಯಕ್ರಮಕ್ಕೆ ಬಂದಿದ್ದೆವು. ಎಲ್ಲಾ ಗುರುಗಳು ತರಹ ಇವರೂ ಎಂದುಕೊಂಡು, ಬ್ರಹ್ಮರ್ಷಿ ಪತ್ರೀಜಿಯವರು ಬಂದ ತಕ್ಷಣ ನಮ್ಮ ಟ್ರಾನ್ಸ್‌ಫರ್ ಬಗ್ಗೆ ಕೇಳಿದೆವು. ನಾವು ಅವರಿಗೆ ನಮ್ಮ ಸಮಸ್ಯೆ ಹೇಳಿಕೊಂಡೆವು. ಅವರು ನಿನಗೆ ಏಕೆ ವರ್ಗಾವಣೆ ಬೇಕು? ಬೆಂಗಳೂರಿನಲ್ಲಿ ಏನಿದೆ? ಕೊಡ್ಲಿಗಿಯಲ್ಲಿ ಏನಿಲ್ಲ? ಎಂದು ಕೇಳಿದರು. ಹೀಗೆ ಕೇಳಿದಾಗ ಏನಪ್ಪಾ ಇವರು, ಗುರುಗಳ ಹತ್ತಿರ ಏನೋಕೇಳಕ್ಕೆ ಬಂದರೆ, ಏನೋ ವರ್ಗಾವಣೆ ಮಾಡಿಸುತ್ತಾರೇನೊ ಎಂದುಕೊಂಡರೆ ಇವರು ನೋಡಿದರೆ ಅಲ್ಲೇನಿದೆ ಇಲ್ಲೇನಿಲ್ಲಾ ಎಂದು ಕೇಳುತ್ತಾರಲ್ಲಾ ಎಂದುಕೊಂಡೆ.

 

ಪುಷ್ಪಾಮೋಹನ್ : ಸೇವೆ ಎಲ್ಲಿ ಬೇಕಾದರು ಇದ್ದು ಮಾಡಬಹುದು ಅಂತ.

 

ತುರಾಯಿ : ಮಾಡಬಹುದು. ಆದರೆ, ನನಗೆ ಆಗ ಅರ್ಥವಾಗಲಿಲ್ಲ. ನಾನು ಆಗ ಆ ಹಾದಿಯಲ್ಲಿರಲಿಲ್ಲ. ಆಗ ನಮಗೆ ಒಳ್ಳೆಕಡೆ... ದುಡ್ಡು ಚೆನ್ನಾಗಿ ಬರುವ ಕಡೆ posting ಬರಬೇಕು, ಹಣಗಳಿಸಬೇಕು ಎನ್ನುವುದೇ ನಮಗಿತ್ತು. ನಮಗೆ ಇದೆಲ್ಲಾ ಏನೂ ಗೊತ್ತಿರಲಿಲ್ಲ.

 

ಪುಷ್ಪಾಮೋಹನ್ : ಎರಡು ವರ್ಷಕ್ಕೆ ಮುಂಚೆ ಅಲ್ಲವೇ?

 

ತುರಾಯಿ : ಹೌದು. ಎರಡು ವರ್ಷಕ್ಕೆ ಮುಂಚೆ. ಧ್ಯಾನಕ್ಕೆ ಬಂದ ನಂತರ ನಾನು ಯಾರು? ಯಾಕೆ ಹುಟ್ಟಿದ್ದೇನೆ? ಈ ಭೂಮಿಯ ಮೇಲೆ ನನ್ನ ಕರ್ತವ್ಯವೇನು? ನಾನು ಏನು ಮಾಡಿದರೆ ತೃಪ್ತಿ ಇರುತ್ತದೆ? ಅನಿಸಿದ್ದು. ಹಿರಿಯ ಮಾಸ್ಟರ್‌ಗಳೆಲ್ಲರೂ ಬಂದರು ಧ್ಯಾನ ಮಾಡಿಸಿದರು. ತುಂಬಾ ಚೆನ್ನಾಗಿತ್ತು. ಭೀಮೇಶ್‌ರೆಡ್ಡಿಯವರು ಬಂದು ಧ್ಯಾನ ಹೇಳಿಕೊಟ್ಟರು. ಅವರು ಬಂದುಹೋದ ಮೇಲೆ ಕೊಡ್ಲಿಗಿಯನಲ್ಲಿ ಧ್ಯಾನ ಬಹಳ ಪ್ರಚಾರವಾಯಿತು. ಅನಂತರ ತುರಾಯಿ ಸಾರ್ ನೀವೇ ಏಕೆ ಪಿರಮಿಡ್ ಕಟ್ಟಿಸಬಾರದು? ಎಂದು ಭೀಮೇಶ್‌ರವರು ಕೇಳಿದರು. ಆಗ ನಾನು ನಿಮ್ಮೆಲ್ಲರ ಸಹಾಯ ಸಹಕಾರ ಇದ್ದರೆ ಖಂಡಿತವಾಗಲೂ ಕಟ್ಟಿಸುತ್ತೇನೆ ಎಂದು ಹೇಳಿದೆ. ಅಲ್ಲಿ ಎರಡು, ಮೂರು ಧ್ಯಾನ ತರಗತಿಗಳು ನಡೆಯಿತು. ಮೂರು ತಿಂಗಳಲ್ಲಿ ಪುನಃ ನನಗೆ ಕೊಡ್ಲಿಗಿಯಿಂದ ವರ್ಗಾವಣೆ ಆಯಿತು.

 

ಪುಷ್ಪಾಮೋಹನ್ : "ನೋಡಿ ಪರೀಕ್ಷೆ ಮಾಡಿದ ಹಾಗೆ"

 

ತುರಾಯಿ : "ಹಾಂ ...... ಆದರೆ ಆಯಿತು ಬಿಡಿ ಎಂದುಕೊಂಡು ಬೆಂಗಳೂರಿಗೆ ಬಂದು ರಿಪೋರ‍್ಟ್ ಮಾಡಿಕೊಂಡೆ. ಪುನಃ ಅವರು ನನ್ನ ಬಿಡಲಿಲ್ಲ. ಕೂಡ್ಲಿಗಿಗೆ ವರ್ಗಾವಣೆ ಮಾಡಿಸಿದರು. ಅಲ್ಲಿ ಏನು ಋಣ ಇದೆಯೊ ಗೊತ್ತಿಲ್ಲ ಮತ್ತೆ ಅಲ್ಲಿಗೇ ಬಂದಿದ್ದೇವೆ. ಧ್ಯಾನದಿಂದ ನನಗೆ ಆರೋಗ್ಯ ಚೆನ್ನಾಗಿದೆ, ಮನಸ್ಸಿಗೆ ನೆಮ್ಮದಿ ಇದೆ. ನಮ್ಮ ಕುಟುಂಬದಲ್ಲಿ ಒಳ್ಳೆಯ ಹೊಂದಾಣಿಕೆ, ಬದಲಾವಣೆ, ಸಂತೋಷ ಕಂಡುಬಂತು. ಇಷ್ಟೆಲ್ಲಾ ಫಲ ಸಿಗುವಾಗ ಏತಕ್ಕಾಗಿ ಇಲ್ಲಿ ಒಂದು ಪಿರಮಿಡ್ ಕಟ್ಟಿಸಬಾರದೆಂದು ಎನಿಸಿತು. ಅಲ್ಲಿ ಒಂದು ಸತ್ಯಸಾಯಿ ಬಾಬಾ ಸಂಘ ಇತ್ತು. ಅಲ್ಲಿ ಭಜನೆಗಳು ನಡೆಯುತ್ತಿದ್ದವು. ನಮಗೆ ಕೆಲವರು ಸ್ಥಳೀಯ ಜನರ ಸಹಾಯ ಬೇಕಲ್ಲವೆ? ಆದ್ದರಿಂದ, ಅಲ್ಲಿಗೆ ಹೋಗಿ, ಬನ್ನಿ ನಾವೆಲ್ಲಾ ಸೇರಿ ಒಂದು ಪಿರಮಿಡ್ ಕಟ್ಟಿಸೋಣ ಎಂದು ಅವರನ್ನೆಲ್ಲಾ ಕರೆದವು."

 

ಪಿರಮಿಡ್ ಕಟ್ಟಿಸಲು ಸ್ಥಳವನ್ನು ಆಯ್ಕೆಮಾಡಿಕೊಳ್ಳಬೇಕಿತ್ತು. ಎಷ್ಟೊ ಕಡೆ ನೋಡಿದೆವು ನಮಗೆ ಅಷ್ಟು ಸರಿ ಅನಿಸಲಿಲ್ಲ. ಪ್ರತಿದಿನ ವಾಕಿಂಗ್‌ಗೆ ಹೋಗುವಾಗ 1.5 km ದೂರದಲ್ಲಿ ನಾವು ನೋಡಿದ್ದ ಒಂದು ಆಲದ ಮರ ಇತ್ತು. ಅಲ್ಲಿ ಕುಳಿತು ಧ್ಯಾನ ಮಾಡಿದೆವು. ಆ ಸ್ಥಳ ಚೆನ್ನಾಗಿತ್ತು. ನಾವೆಲ್ಲಾ ಸೇರಿ ಇಲ್ಲಿಯೇ ಪಿರಮಿಡ್ ಕಟ್ಟಿಸೋಣ ಎಂದುಕೊಂಡೆವು. ಸರಿ ಎಂದು ನಾವೆಲ್ಲಾ ಕುಳಿತು ಅರ್ಥಗಂಟೆ ಧ್ಯಾನ ಮಾಡಿ ಎದ್ದೆವು. ಆಗ ನನ್ನ ಶ್ರೀಮತಿಗೆ ಬುದ್ಧ ಈ ಜಾಗದಲ್ಲಿ ಕಂಡರು. ತಕ್ಷಣ ಬಹಳ ಸಂತೋಷವಾಯಿತು. ಆಗ ನಾವು ಇಲ್ಲೇ ಪಿರಮಿಡ್ ಕಟ್ಟಿಸೋಣ, ಇನ್ನೇನು ವಿಚಾರ ಮಾಡುವುದು ಬೇಡ ಎಂದು ನಿರ್ಧರಿಸಿದೆವು. ಸಮಾಜಕ್ಕಾಗಿ ನಾವು ಒಳ್ಳೆ ಕೆಲಸ ಇಲ್ಲಿಂದಲೇ ಮಾಡೋಣ ಎಂದುಕೊಂಡೆವು. ತಕ್ಷಣ ನಾವು ಎಂ.ಎಲ್.ಎ ಅವರನ್ನು ಸ್ಥಳಕ್ಕೆ ಕರೆಸಿ, ಅಭಿಪ್ರಾಯ ತಿಳಿಸಿದೆವು. ಪಿರಮಿಡ್‌ನ್ನು ಕಟ್ಟಲು ಪ್ರಾರಂಭಿಸಿದ ಮೇಲೆ ಒಂದು ಟ್ರಸ್ಟ್ ಅಂತ ಮಾಡಿಕೊಂಡೆವು. ಆಗ ಏನು ಹೆಸರು ಇಡಬೇಕೆಂದು ಹೇಳಿ ಪತ್ರೀಜಿಯವರನ್ನು ಕೇಳಿದೆವು. ಪ್ರತಿದಿನ ಅವರಿಗೆ ರಿಪೋರ್ಟ್ ಕೊಡುತ್ತಿದ್ದೆವು. ಸಾರ್ ಪಿರಮಿಡ್‌ಗೆ ಏನು ಹೆಸರು ಇಡಬೇಕು? ಎಂದು ಕೇಳಿದೆವು. ನೀವು ಅಂದುಕೊಂಡರಲ್ಲ ಅದೇ ಹೆಸರು ಇಟ್ಟುಬಿಡಿ ಎಂದರು. ನಮಗೆ ಗೊತ್ತಿಲ್ಲ ಸಾರ್ ನಾವೇನು ಅಂದುಕೊಂಡಿಲ್ಲ ಎಂದು ಹೇಳಿದೆವು. ಅದೇ " ಆತ್ಮಸಾಯಿ " ಎಂದು ಹೆಸರಿಡಿ ಎಂದು ಹೇಳಿದರು. ಅದರಿಂದ ಪೂಜ್ಯಗುರುಗಳ ಸಲಹೆಯಂತೆ ಅದೇ ಹೆಸರಿಟ್ಟೆವು. ಆ ತಿಂಗಳಲ್ಲೇ 30 x 30 ಪಿರಮಿಡ್ ಕಟ್ಟಿಸಿದ್ದಾಯಿತು. ಬಹಳ ಸಂತೋಷವಾಯಿತು. ಆ ಆಲದ ಮರಕ್ಕೂ ಅಲ್ಲಿಯ ಪ್ರಕೃತಿಯಲ್ಲಿ ಪಿರಮಿಡ್ ತುಂಬಾ ಚೆನ್ನಾಗಿತ್ತು. ಪತ್ರೀಜಿಯವರು ಆ ಪಿರಮಿಡ್ ಉದ್ಘಾಟನೆ ಮಾಡಿದರು.

 

ಪುಷ್ಪಾಮೋಹನ್ : ಪತ್ರೀಜಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

 

ತುರಾಯಿ : ನಾವು ನೋಡಿದಂತೆ ಅವರು " ಈ ಭೂಮಿಯ ಮೇಲೆ ನಡೆದಾಡುವ ದೇವರು " ಎಂದು ಹೇಳಬಹುದು.

 

ಪುಷ್ಪಾಮೋಹನ್ : ಹಾಗೆ ಅನಿಸುತ್ತೆ ಅಲ್ಲವೇ?

 

ತುರಾಯಿ : ಹೌದು ಮೇಡಂ... ಆದರೆ, ಅಂಥವರ ದರ್ಶನ ಆಗಿದೆ... ಅದೇ ನನ್ನ ಭಾಗ್ಯ ಎಂದು ತಿಳಿದಿದ್ದೇನೆ.

 

ಪುಷ್ಪಾಮೋಹನ್ : ಕೊನೆಯದಾಗಿ, ನೀವು ಜನರಿಗೆ ಏನು ಸಂದೇಶ ಕೊಡಲು ಇಷ್ಟಪಡುತ್ತಿರ?

 

ತುರಾಯಿ : ಕೊನೆಯದಾಗಿ... ನಾನು ಜನಗಳಿಗೆ ಹೇಳುವುದಿಷ್ಟೆ. ವಯಸ್ಸಾದ ಮೇಲೆ ಧ್ಯಾನಕ್ಕೆ ಬರಬೇಕಾಗಿಲ್ಲ. ಚಿಕ್ಕ ವಯಸ್ಸಿನಲ್ಲೇ ಧ್ಯಾನಕ್ಕೆ ಬರಬೇಕು. ಹಿರಿಯರು, ಕಿರಿಯರು ಹೆಂಗಸರು, ಗಂಡಸರು ಎಲ್ಲರೂ ಈ ಧ್ಯಾನಮಾಡಿ ಸುಂದರ ಜಗತ್ತನ್ನಾಗಿಸಬೇಕು. ಬ್ರಹ್ಮರ್ಷಿ ಪತ್ರೀಜಿಯವರ ಕನಸು ನನಸಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅದಕ್ಕಾಗಿ ಎಲ್ಲರೂ ಧ್ಯಾನಮಾಡಿ, ಧ್ಯಾನ ಹೇಳಿಕೊಡಿ. ಮತ್ತು ಸ್ವಾಧ್ಯಾಯ ಮಾಡಿ, ಸಜ್ಜನ ಸಾಂಗತ್ಯಮಾಡಿ.

 

ಪುಷ್ಪಾಮೋಹನ್ : ಧನ್ಯವಾದಗಳು.

 

 

ಶ್ರೀಮತಿ ಮತ್ತು ಶ್ರೀ ತುರಾಯಿ
ದಾವಣಗೆರೆ

Go to top