" ಧ್ಯಾನದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ "

 

 

ನಾನು ಆನಾಪಾನಸತಿ ಧ್ಯಾನಕ್ಕೆ ಬಂದು 13 ವರ್ಷವಾಯಿತು. ಅದಕ್ಕಿಂತ ನಾಲ್ಕು ವರ್ಷ ಮೊದಲು S.S.Y ಧ್ಯಾನ ಮಾಡುತ್ತಿದ್ದೆ. ಶಿವಮೊಗ್ಗದಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದೆ. ಮೈಸೂರಿನ ಶ್ರೀಮತಿ ಮನೋರಮ ಮೇಡಂರವರು ಶಿವಮೊಗ್ಗದಲ್ಲಿ ಹತ್ತಾರು ಕಡೆ ಧ್ಯಾನ ತರಗತಿ ನಡೆಸುತ್ತಿದ್ದರು. ಆರಂಭದಲ್ಲಿ ನಾನು ದಿನಕ್ಕೆ ಒಂದು ಗಂಟೆ ಧ್ಯಾನ ಮಾಡುತ್ತಿದ್ದೆ. ನಮ್ಮ ಕಛೇರಿಯಲ್ಲಿ ಎಲ್ಲರಿಗಿಂತ ಎಲ್ಲದರಲ್ಲೂ ನಾನೇ ತುಂಬಾ ನೆಮ್ಮದಿಯಿಂದ ಇದ್ದೆ ಎನಿಸುತ್ತಿತ್ತು. ಕ್ರಮೇಣ ಧ್ಯಾನದ ಅವಧಿ ಹೆಚ್ಚಿಸುತ್ತ ಬಂದೆ. ನಂತರದ ದಿನಗಳಲ್ಲಿ ಕಛೇರಿಗೆ ಹೋಗುವುದು ಬೇಸರದ ವಿಷಯವಾಗುತ್ತಾ ಬಂತು. ಧ್ಯಾನಕ್ಕೆ ಕುಳಿತಾಗ ಅನಿಸುತ್ತಿತ್ತು "ಹೀಗೆ ಸಮಯದ ಅರಿವಿರದಂತೆ ಧ್ಯಾನ ಮಾಡಬೇಕೆಂದು". ನನ್ನ ಪತಿ, ಮಕ್ಕಳು ಸಹ ಸ್ವಯಂ ನಿವೃತ್ತಿ ಪಡೆಯುವಂತೆ ತಿಳಿಸಿದರು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆಸಾಲದ ಕಂತು ಇವೆಲ್ಲಾ ಕಣ್ಮುಂದೆ ಬಂದರೂ ಧ್ಯಾನದ ಆಸೆ ನನ್ನನ್ನು ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ ಮಾಡಿತು. 

 

ನಂತರದ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಹೆಚ್ಚಿನ ಸಮಯ ಧ್ಯಾನದಲ್ಲಿ ಕಳೆದೆ. ಸಾಂಸಾರಿಕ ಕೆಲಸಗಳು ನನ್ನ ಪರಿಶ್ರಮವಿಲ್ಲದೇ ಚೆನ್ನಾಗಿಯೇ ನಡೆಯುತ್ತಿವೆ. ಆರ್ಥಿಕವಾಗಿ ಸಮೃದ್ಧಿ, ಉತ್ತಮ ಆರೋಗ್ಯ, ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸ, ಶಾಂತಿ ನೆಮ್ಮದಿಯ ಜೀವನ ಸಾಗುತ್ತಿದೆ. ಮುಂದೇನೋ ಎನ್ನುವ ಭಾವನೆ ಯಾವತ್ತಿಗೂ ಇಲ್ಲ. ಕೈ ತುಂಬಾ ಸಂಬಳದ ಕೆಲಸ ಬಿಟ್ಟ ಬಗ್ಗೆ ಎಂದೂ ಪಶ್ಚಾತ್ತಾಪವಾಗದಂತಹ ಜೀವನ.

 

ನಂತರದ ದಿನಗಳಲ್ಲಿ ನನ್ನ ಪತಿಗೆ ವರ್ಗವಾದ ಕಾರಣ 6 ವರ್ಷ ಬೆಂಗಳೂರಿಗೆ ಹೋದೆವು. ಅಲ್ಲಿಂದ ಪಿರಮಿಡ್ ವ್ಯಾಲಿಯ ಸಂಪರ್ಕ, ಹಿರಿಯ ಧ್ಯಾನಿಗಳ ಸಂಗ, ಬುದ್ಧಪೂರ್ಣಿಮೆಯ ದಿನಗಳ ಸಂಭ್ರಮ, ಸೇತ್ ವಿಜ್ಞಾನ ಕಾರ್ಯಾಗಾರಗಳು, ಆತ್ಮಜ್ಞಾನದ ತರಗತಿಗಳು ಇವೆಲ್ಲ ನನ್ನನ್ನು ಆಧ್ಯಾತ್ಮದ ಉನ್ನತ ಸ್ಥಿತಿ ತಲುಪುವಂತೆ ಮಾಡಿದೆ. 

 

ಈಗ 2 ವರ್ಷದ ಹಿಂದೆ ನನ್ನ ಪತಿಗೆ ಮತ್ತೆ ಶಿವಮೊಗ್ಗಕ್ಕೆ ವರ್ಗಾವಣೆ ಆದನಂತರ ಮನೆಯ ಮುಂದೆ 9*9 ಅಡಿ ಪಿರಮಿಡ್ ಕಟ್ಟಿದ್ದೇವೆ. ನಾನು ಧ್ಯಾನಕ್ಕೆ ಬಂದಾಗಿನಿಂದ ಇದುವರೆಗೂ ನಾನು ಅಂದುಕೊಂಡಿದ್ದೆಲ್ಲ ನೆರವೇರಿದೆ. ಇಂದು ನಾನು ನೆಮ್ಮದಿಯ ಜೀವನದಲ್ಲಿದ್ದೇನೆ. 

 

‘ಧ್ಯಾನ ಕಸ್ತೂರಿ’ಯಲ್ಲಿರುವ ಪಿರಮಿಡ್ ’ಧ್ಯಾನ ಮಾಡುವ ವಿಧಾನ’ವನ್ನು ಜೆರಾಕ್ಸ್ ಮಾಡಿ ಯಾವಾಗಲೂ ಜೊತೆಯಲ್ಲಿ ಒಯ್ಯುತ್ತೇವೆ. ರೈಲಿನಲ್ಲಿ, ಬಸ್ಸಿನಲ್ಲಿ, ಸಮಾರಂಭಗಳಲ್ಲಿ ಭಾಗವಹಿಸುವಾಗ ಅಲ್ಲಿ ಸಾಧ್ಯವಾದಷ್ಟು ಜನರಿಗೆ ಅದನ್ನು ತಲುಪಿಸಿ, ಅವರೂ ಸಹ ನನ್ನಂತೆ ನೆಮ್ಮದಿಯ ಜೀವನ ನಡೆಸುವಂತೆ ಆಶಿಸುತ್ತೇನೆ. ಇಂತಹ ಧ್ಯಾನವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುತ್ತಿರುವ ಪತ್ರೀಜಿಯವರು ಮತ್ತು ಪಿರಮಿಡ್ ಮಾಸ್ಟರ್ಸ್ಗಳಿಗೆ ನನ್ನ ಮನಃಪೂರ್ವಕವಾದ ಧನ್ಯವಾದಗಳು.                                               

 

 

ಶೋಭಾ ಶಿರೂರ್‌ಕರ್

ಶಿವಮೊಗ್ಗ

+91 77607 46100

Go to top