" ದಿವ್ಯವಾದ ತೃಪ್ತಿಯು ಸಿಕ್ಕಿದೆ "

 

 

ನನ್ನ ಹೆಸರು ಶೈಲಜ. ಸುಮಾರು ಹನ್ನೊಂದು ವರ್ಷಗಳಿಂದ ಧ್ಯಾನವನ್ನು ಮಾಡುತ್ತಾ ಇದ್ದೇನೆ. ನಾನು ಈ ‘ಆನಾಪಾನಸತಿ’ ಧ್ಯಾನವನ್ನು ನಮ್ಮ ಚಿಂತಾಮಣಿಯ ಸುಜಾತ ಎನ್ನುವರಿಂದ ಕಲಿತೆ. ನನಗೆ ಅಯಾಸವಾದಾಗಲೆಲ್ಲಾ ಧ್ಯಾನ ಮಾಡಿ ನನ್ನ ಮನಸ್ಸನ್ನು ವಿಶ್ರಾಂತಿಗೊಳಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಪದ್ಮಲತಾರವರು ಚಿಂತಾಮಣಿಯಲ್ಲಿ ‘ಶ್ರೀನಿವಾಸ’ ಸರ್ರವರಿಂದ “ಸೇತ್” ಕ್ಲಾಸ್ ಆಯೋಜಿಸಿದ್ದರು. ನಾನು ಎಲ್ಲ ಧ್ಯಾನ ಕ್ಲಾಸ್ಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. ನನಗೆ ಆಗ ತುಂಬಾ ಮಂಡಿ ನೋವು ಇತ್ತು. ಈ ಸೇತ್ ಕ್ಲಾಸಿನಲ್ಲಿ ನಾನು ಗಮನಿಸಿದ್ದು ಏನೆಂದರೆ ನನ್ನ ಕಾಲು ನೋವು ಶೇ.70ರಷ್ಟು ವಾಸಿಯಾಯಿತು. ಅಲ್ಲದೆ ನನಗೆ ಬಿಳಿ ಬಣ್ಣದಲ್ಲಿ ಅಗೋಚರ ಶಕ್ತಿಯೊಂದು ನನ್ನೊಳಗೆ ಪ್ರವೇಶಿಸಿದ್ದನ್ನು ನಾನು ಕಂಡೆ. ಹೀಗೆ ನನಗೆ ಧ್ಯಾನದಲ್ಲಿ ಹಿಂದೆಂದೂ ಇರದ ಬಲವಾದ ನಂಬಿಕೆ ಬಂತು.

 

ಇದಾದ ಮೇಲೆ ನಾನೊಂದು ಪಿರಮಿಡ್ ಕೊಂಡುಕೊಂಡೆ. ನಾನು ಹೆಚ್ಚಿನ ಸಮಯ ಧ್ಯಾನ ಮಾಡಲು ಆರಂಭಿಸಿದೆ. ನಾನು ನಮ್ಮ ಮನೆಯಲ್ಲಿ ಪಿರಮಿಡ್ ಕೆಳಗೆ ನನ್ನ ಗೆಳತಿಯಾದ ಕುಮಾರಿಯವರ ಜೊತೆ ಧ್ಯಾನ ಮಾಡುತ್ತಿರಬೇಕಾದರೆ ಹಗಲು ಎರಡು ಗಂಟೆಯಾಗಿತ್ತು. ನಾನು ದಿಗ್ಬ್ರಮೆಗೊಳ್ಳುವಂತಹ ದೃಶ್ಯ ಕಂಡೆ. ‘ದುರ್ಗಾ ದೇವಿ’ ಅತಿ ಎತ್ತರವಾಗಿ ನಿಂತು ತನ್ನ ಎರಡು ಕಣ್ಣುಗಳಿಂದ ಬಿಳಿ ಬಣ್ಣದ ಕಿರಣವನ್ನು ನನ್ನ ಮೇಲೆ ಬಿಟ್ಟಳು. ಆ ಶಕ್ತಿಯನ್ನು ನಾನು ತಕ್ಷಣವೇ ಅನುಭವಿಸಿದೆ. ಇದು ನಾನು ನನ್ನ ಜೀವನದಲ್ಲಿ ಮರೆಯಲಾಗದ ಒಂದು ಘಟನೆ. ಇದೇ ನನ್ನ ಜೀವನದ ‘ಟರ್ನಿಂಗ್ ಪಾಯಿಂಟ್’ ಎಂದೂ ಸಹ ಹೇಳಬಹುದು.

 

ಇದಾದ ಮೇಲೆ ನಾನು ಧ್ಯಾನದ ಬಗ್ಗೆ ಜನರಲ್ಲಿ ಹೇಳಲು ಪ್ರಾರಂಭಿಸಿದೆ. ಅಷ್ಟೇಅಲ್ಲ, ನಾನು ಈಗ ಪ್ರತಿನಿತ್ಯ ಧ್ಯಾನ ಹಾಗೂ ಜ್ಞಾನವನ್ನು ಹಂಚಲು ಸುಮಾರು 30-35 ಶಾಲೆಗಳನ್ನು ಆಯ್ದುಕೊಂಡಿದ್ದೇನೆ. ಇದರಲ್ಲಿ ನನ್ನ ಸ್ನೇಹಿತೆಯರು ಪಾಲ್ಗೊಳ್ಳುತ್ತಾರೆ. ಇದರಿಂದ ನಾವು ಯಾವುದರಲ್ಲೂ ಕಾಣದ ಒಂದು ದಿವ್ಯವಾದ ತೃಪ್ತಿಯು ಸಿಕ್ಕಿದೆ. ಹೀಗೆ ಎರಡು ವರ್ಷಗಳು ಕಳೆದಿವೆ. ನಾನು ಧ್ಯಾನ ಪ್ರಚಾರ ನಿಲ್ಲಿಸಿದಾಗಲೆಲ್ಲ ನನಗೆ ಎಲ್ಲಿಂದಲಾದರೂ ಸಂದೇಶವು ಬರುತ್ತಿತ್ತು. ಅದು ನನ್ನನ್ನು ಧ್ಯಾನಪ್ರಚಾರ ಮಾಡಲು ಪ್ರೇರೇಪಿಸುತ್ತಿತ್ತು. ಹೀಗೆ ಕೆಲವು ಸಂದೇಶಗಳಲ್ಲಿ ಒಂದು ಹೀಗಿತ್ತು.

 

ಒಂದು ‘ಚೇರ್’ ನಿಲ್ಲಬೇಕಾದರೆ ಅದಕ್ಕೆ ನಾಲ್ಕು ಕಾಲುಗಳು ಬೇಕು. ಒಂದು ಕಾಲು ಸರಿ ಇಲ್ಲದಿದ್ದರೂ ಅದರ ಮೇಲೆ ಕೂರಲು ಸಾಧ್ಯವಾಗುವುದಿಲ್ಲ. ಹಾಗೆಯೆ ನಮ್ಮ ಈ ಜೀವನ ‘ಸಮತೋಲನವಾಗಿ’ ಇರಬೇಕಾದರೆ, ಮುಖ್ಯವಾಗಿ ನಾಲ್ಕು ಅಂಶಗಳನ್ನು ನಾವು ಪಾಲಿಸಬೇಕು. ಅವುಗಳೆಂದರೆ:

1. ಸರಿಯಾದ ಧ್ಯಾನ
2. ಸರಿಯಾದ ಜ್ಞಾನ
3. ಪಡೆದ ಜ್ಞಾನವನ್ನು ನಮ್ಮ ಜೀವನಕ್ಕೆ ಅಳವಡಿಸುವುದು
4. “ಸೇವೆ” ಅಥವಾ “ಜ್ಞಾನ - ಧ್ಯಾನ ಪ್ರಚಾರ”

 

ಈ ಸಂದೇಶ ನನ್ನಲ್ಲಿ ತುಂಬಾ ಹುರುಪು ತುಂಬಿತ್ತು. ಆ ದಿನದಿಂದ ಈ ದಿನದವರೆಗೂ ನಾನು ಬಿಡದೆ ಹೆಚ್ಚಾಗಿ ಚಿಂತಾಮಣಿಯ ಶಾಲೆಗಳಲ್ಲಿ ಮತ್ತು ಸುತ್ತಮುತ್ತಲಿನ ಶಾಲೆಗಳಿಗೆ ಧ್ಯಾನಪ್ರಚಾರ ಮಾಡುತ್ತಿದ್ದೇನೆ.

 

 

ಶೈಲಜ, ಚಿಂತಾಮಣಿ

ಫೋ :+91 9945730125

 

Go to top