" ಧ್ಯಾನವೆಂದರೆ ಆತ್ಮವನ್ನು ಬಲಗೊಳಿಸುವುದು "

 

 

ನನ್ನ ಹೆಸರು ಕವಿತಾ ನಾಗರಾಜ್, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು, ಕೆಂಚವೀರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ಧ್ಯಾನಕ್ಕೆ ಬರುವ ಮುಂಚೆ ಹಾಗೂ ಧ್ಯಾನಕ್ಕೆ ಬಂದ ನಂತರ ನನ್ನ ಜೀವನದಲ್ಲಿ ನಡೆದಿರುವ ಕೆಲವು ಸಂಗತಿಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

 

ಧ್ಯಾನಕ್ಕೆ ಬರುವ ಮುನ್ನ:-

 

ಚಿಕ್ಕಂದಿನಿಂದಲೂ ನಮ್ಮ ತಂದೆಯವರಾದ ಕೆ.ಎಸ್.ಶೇಷಾದ್ರಿ ನಿವೃತ್ತ ಶಿಕ್ಷಕರು ತಮಗಿರುವ ಮೂವರು ಹೆಣ್ಣು ಮಕ್ಕಳಿಗೆ, "ನಾವು ಮಾಡುವ ಕೆಲಸದಲ್ಲಿ ನ್ಯಾಯ ನಿಷ್ಠೆಯಿಂದ ನಡೆದುಕೊಳ್ಳಬೇಕು, ಏನೇ ಕಷ್ಟ ಬಂದರೂ ಇನ್ನೊಬ್ಬರ ಮುಂದೆ ಕೈ ಚಾಚದೆ ಸ್ವಾವಲಂಬಿಯಾಗಿ ಬದುಕಬೇಕು" ಎಂಬುದಾಗಿ ನಮ್ಮ ಮನದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದರು. ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮದುವೆಯಾದ ನನಗೆ ಜೀವನದಲ್ಲಿ ಅನೇಕ ಕಷ್ಟನಷ್ಟಗಳು ಎದುರಾದವು. ಆರ್ಥಿಕವಾಗಿ ಅಷ್ಟೇಅಲ್ಲದೆ, ದೈಹಿಕ ಹಾಗೂ ಮಾನಸಿಕವಾಗಿಯೂ ನಾನು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದೆನು. ಆಗ ನನಗೆ ನನ್ನ ಸಂಬಂಧಿಕರು, ಸ್ನೇಹಿತರು ಯಾವುದೋ ಜಾತಕ ದೋಷವಿರಬೇಕು ದೇವರ ಪೂಜೆ ಮಾಡಿಸು ಎಂದು ಹೇಳಿದರು. ಆದರೆ ಮೊದಲಿನಿಂದಲೂ ನನ್ನ ಮನದಲ್ಲಿ ಮನೆ ಮಾಡಿಕೊಂಡಿದ್ದ, ನ್ಯಾಯನಿಷ್ಠೆ, ಸ್ವಾವಲಂಬನೆ ಎಂಬ ಪದಗಳು ನನಗೆ ಇದಾವುದರ ಕಡೆಯೂ ಮನಸ್ಸನ್ನು ಹರಿಯಲು ಬಿಡಲಿಲ್ಲ. ಪೂಜೆ ಪುನಸ್ಕಾರಗಳಿಂದ ಯಾವುದೂ ಬಗೆ ಹರಿಯುವುದಿಲ್ಲ. ವಿಧಿಲಿಖಿತ ಹೇಗಿದ್ದರೆ ಹಾಗಾಗಲಿ ಎಂದುಕೊಂಡು ಧೃತಿಕೆಡದೆ ಧೈರ‍್ಯವಾಗಿ ಮುಂದುವರೆದೆನು.

 

 

ಧ್ಯಾನಕ್ಕೆ ಬಂದ ನಂತರ:-

 

ಅಕ್ಟೋಬರ್ ೨೦೧೦ರಲ್ಲಿ ಚಳ್ಳಕೆರೆಯ ವಾಸವಿ ಮಹಲ್‌ನಲ್ಲಿ ಧ್ಯಾನ ಮಂದಿರದಲ್ಲಿ ನಡೆಯುತ್ತಿದ್ದ ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನನ್ನ ತಂದೆಯವರು ತಿಳಿಸಿದರು. ಧ್ಯಾನ ತರಗತಿಗೆ ಹಾಜರಾದ ನನಗೆ ಅಲ್ಲಿಯ ಸೀನಿಯರ್ ಮಾಸ್ಟರ್‌ರಾದ ನಾಗೇಂದ್ರ ಸರ್‌ರವರು "ಧ್ಯಾನವೆಂದರೆ ಯಾವ ದೇವರನ್ನು ಪೂಜಿಸುವುದಲ್ಲ, ಯಾವ ಮಂತ್ರ ಜಪವನ್ನು ಜಪಿಸುವುದಲ್ಲ ಕೇವಲ ನಮ್ಮ ಆತ್ಮವನ್ನು ಬಲಗೊಳಿಸಿಕೊಳ್ಳುವುದು" ಎಂದು ಹೇಳಿದಾಗ ನನ್ನ ವ್ಯಕ್ತಿತ್ವಕ್ಕೆ ಹತ್ತಿರವಾದ ಈ ನಿಯಮವನ್ನು ಪಾಲಿಸುವುದು ಸೂಕ್ತ ಎಂದು ತಿಳಿದೆನು. ಒಂದು ದಿನ ಸತ್ಸಂಗ ತರಗತಿಯಲ್ಲಿ ನಾಗೇಂದ್ರ ಸರ್‌ರವರು "ಮಾಂಸಾಹಾರವನ್ನು ತ್ಯಜಿಸಿದರೆ ಮಾತ್ರ ಧ್ಯಾನದ ಲಾಭವು ಫಲಿಸುವುದು" ಎಂದು ಹೇಳಿದರು. ಆದರೆ ಪ್ರಕೃತಿಯ ನಿಯಮದಂತೆ ಆಹಾರ ಸರಪಳಿಯ ಪ್ರಕಾರ ಮಾಂಸವನ್ನು ಸೇವಿಸುವುದು ತಪ್ಪಲ್ಲ. ಏಕೆಂದರೆ ಸಸ್ಯಾಹಾರವು ಸಹ ಸಜೀವಿಗಳ ದೇಹದಿಂದಲೇ ಬಂದುದಾಗಿದೆ ಎಂಬ ವಾದ ನನ್ನದಾಗಿತ್ತು. ಸುಮಾರು ೧೦ ವರ್ಷಗಳಿಂದ ನಾನು ಥೈರಾಯಿಡ್ ತೊಂದರೆಯಿಂದ ನರಳುತಿದ್ದ ನಾನು ಮೇ 2011ರಲ್ಲಿ ಬೆಂಗಳೂರು ಪಿರಮಿಡ್ ವ್ಯಾಲಿಯಲ್ಲಿ ನಡೆದ ಆಸ್ಟ್ರಲ್ ಸರ್ಜರಿ ತರಗತಿಯಲ್ಲಿ ಪಾಲ್ಗೊಂಡಾಗ ಅಲ್ಲಿ ಸೀನಿಯರ್ ಮಾಸ್ಟರ್‌ರಾದ ಪ್ರೇಮನಾಥ್ ಸರ್‌ರವರು "ಮಾಂಸಾಹಾರಿಗಳು ಈ ತರಗತಿಯಲ್ಲಿ ಭಾಗವಹಿಸುವಂತಿಲ್ಲ. ಏಕೆಂದರೆ, ಆಸ್ಟ್ರಲ್ ಮಾಸ್ಟರ್‌ಗಳು ಮಾಂಸಾಹಾರಿಗಳಿಗೆ ಸರ್ಜರಿ ಕಾರ್ಯವನ್ನು ಮಾಡುವುದಿಲ್ಲ. ಯಾರಾದರೂ ಮಾಂಸಾಹಾರಿಗಳಿದ್ದರೆ ಅಂತಹವರು ಹೊರಗಡೆಗೆ ಹೋಗಿ ಇಲ್ಲವಾದರೆ ಈ ದಿನದಿಂದಲೇ ಮಾಂಸ ಸೇವಿಸುವುದನ್ನು ತ್ಯಜಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿ ತರಗತಿಯಲ್ಲಿ ಪಾಲ್ಗೊಳ್ಳಿ" ಎಂದು ಹೇಳಿದರು. ಆದರೆ, ನನ್ನ ಮನದಲ್ಲಿ ಪ್ರಕೃತಿಯ ಆಹಾರ ಸರಪಳಿಯ ಬಗ್ಗೆ ಇದ್ದ ಅಭಿಪ್ರ್ರಾಯವು ಇದನ್ನು ಒಪ್ಪಲು ಬಿಡಲಿಲ್ಲ.

 

ಏನಾದರೂ ಆಗಲಿ ತರಗತಿಯಲ್ಲಿ ಪಾಲ್ಗೊಳ್ಳುತ್ತೇನೆ ಉಳಿದ ವಿಷಯ ಆಮೇಲೆ ಯೋಚಿಸಿದರಾಯಿತು ಎಂದುಕೊಂಡು ಅಲ್ಲಿಯೇ ಕುಳಿತುಕೊಂಡೆನು.

 

ತರಗತಿ ಪ್ರಾರಂಭವಾದ ಮೇಲೆ ಮಾಂಸವನ್ನು ಏಕೆ ಸೇವಿಸಬಾರದು ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ಪ್ರೇಮನಾಥ್ ಸರ್‌ರವರು ಹೇಳಿದರು. ಅದನ್ನು ಕೇಳಿದ ಮೇಲೆ ನನಗೆ ಜ್ಞಾನೋದಯವಾಗಿ ಅಂದಿನಿಂದ ಇಂದಿನವರೆಗೂ ಸಹ ಮಾಂಸಾಹಾರ ಸೇವಿಸುವುದು, ತಯಾರಿಸುವುದು, ಎಲ್ಲವನ್ನು ಸಹ ತ್ಯಜಿಸಿದೆನು. ಇದಕ್ಕೆ ಮನೆಯಲ್ಲಿ ಪ್ರಾರಂಭದಲ್ಲಿ ನಮ್ಮ ಮನೆಯವರು ಮತ್ತು ನನ್ನ ಮಗ ವಿರೋಧಿಸಿದರೂ ಸಹ ನನ್ನ ಆರೋಗ್ಯದಲ್ಲಿ ಆದ ಉತ್ತಮ ಬದಲಾವಣೆ ಹಾಗೂ ಆರ್ಥಿಕವಾಗಿ ಮುಂದುವರಿದಿದ್ದು ನೋಡಿ ಅವರು ಸಹ ನನಗೆ ಸಹಕರಿಸಿದರು. ಅಂದಿನಿಂದ ಹುಣ್ಣಿಮೆ ದಿನದಂದು ನಡೆಯುವ ದೀರ್ಘಧ್ಯಾನ ತರಗತಿಗಳು, ಆಸ್ಟ್ರಲ್ ಸರ್ಜರಿ ತರಗತಿಗಳು, ಸತ್ಸಂಗ ತರಗತಿಗಳು ಇತ್ಯಾದಿಗಳಲ್ಲಿ ಭಾಗವಹಿಸುತ್ತಲೇ ಇದ್ದೇನೆ. ಮತ್ತು ವೃತ್ತಿಯಲ್ಲಿ ಶಿಕ್ಷಕಿಯಾದ ನಾನು ಶಾಲೆಯಲ್ಲಿ ಮಕ್ಕಳಿಗೂ ಸಹ ಪ್ರತಿದಿನ ಧ್ಯಾನ ತರಗತಿಗಳನ್ನು ನಡೆಸುತ್ತಿದ್ದೇನೆ. ಇಲ್ಲಿಯೂ ಸಹ ಪ್ರಾರಂಭದಲ್ಲಿ ತೊಡಕಾಯಿತು. ಆದರೆ ಪಟ್ಟುಬಿಡದೆ ಇದನ್ನು ಮುಂದುವರೆಸಿದನು. ಈಗ ಸುಲಲಿತವಾಗಿ ಶಾಲೆಯ ಎಲ್ಲಾ ಮಕ್ಕಳು ಸಹ ಧ್ಯಾನವನ್ನು ಮಾಡುತ್ತಾರೆ. ಧ್ಯಾನದ ನಂತರ ಅವರು ಹೇಳುವ ಅನುಭವಗಳನ್ನು ಕೇಳಿದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಏಕೆಂದರೆ, ಅಂತಹ ಅನುಭವಗಳು ನನಗೂ ಸಹ ಇದುವರೆಗೆ ಆಗಿರುವುದಿಲ್ಲ. ನಾನು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ನನ್ನ ಕೈಲಾದಮಟ್ಟಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ನನ್ನ ಜೀವನದಲ್ಲಿ ಮುಂದೆಸಾಗುತ್ತಾ ಇದ್ದೇನೆ. ನಿಮ್ಮಿಂದಲೂ ಸಹ ನಾನು ಇದೇ ಬಯಸುತ್ತೇನೆ.

 

ಮುಖ್ಯವಾಗಿ ನಾನು ನಿಮ್ಮೆಲ್ಲರಿಗೂ ತಿಳಿಯಬಯಸುವುದೇನೆಂದರೆ ನಾವು ದೇವರು ದೇವರು ಎಂದು ಗುಡಿಯಲ್ಲಿರುವ ಕಲ್ಲು ವಿಗ್ರಹಕ್ಕೆ ಪೂಜೆ ಮಾಡುತ್ತೇವೆ ಇದರ ಜೊತೆಗೆ ನಿಜವಾದ ದೇವರಾದ ನಮ್ಮ ಆತ್ಮವನ್ನು ನಾವು ಪ್ರತಿದಿನವೂ ಬಲಪಡಿಸಿಕೊಳ್ಳಬೇಕು, ಅಭಿವೃದ್ಧಿಗೊಳಿಸಬೇಕು. ನಿಷ್ಠೆಯಿಂದ ಮಾಡುವ ಕೆಲಸಗಳಲ್ಲಿ ನಮಗೆ ಅನೇಕ ತೊಡಕುಗಳು ಎದುರಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ಎದುರಾಗುವ ತೊಡಕುಗಳಿಂದ ತೊಂದರೆಯಾದರೂ ಸಹ ನಾವು ದೃತಿಗೆಡದೆ ಧೈರ‍್ಯವಾಗಿ ಮುನ್ನುಗ್ಗಿದರೆ ನಮಗೆ ಜೀವನದಲ್ಲಿ ನಿಜವಾದ ಪ್ರಾಪ್ತಿಯು ಖಂಡಿತವಾಗಿ ದೊರೆಯುತ್ತದೆ ಎಂದು ನನ್ನ ಅನುಭವಗಳಿಂದ ತಿಳಿದಿದ್ದೇನೆ. ನೀವು ಸಹ ಪ್ರತಿದಿನವೂ ಧ್ಯಾನವನ್ನು ಮಾಡಿ ಉತ್ತಮ ಜೀವನವನ್ನು ನಿಮ್ಮದಾಗಿಸಿಕೊಳ್ಳುತ್ತೀರೆಂದು ನಂಬಿದ್ದೇನೆ.

 

 

ಕವಿತಾ ನಾಗರಾಜ್, ಚಳ್ಳಕೆರೆ

ಫೋ:+919844714464

 

Go to top