" ಧ್ಯಾನದಿಂದ ಬ್ರಹ್ಮಾನಂದದ ಜೀವನ ಪಡೆಯಿರಿ "

 

 

ಹಾಯ್ ಫ್ರೆಂಡ್ಸ್, ನನ್ನ ಹೆಸರು ಸಿಂಧು. ನನಗೆ ಆನಾಪಾನಸತಿ ಧ್ಯಾನ ಪರಿಚಯವಾಗಿದ್ದು 2009ರಲ್ಲಿ. ಚಿಕ್ಕವಯಸ್ಸಿನಿಂದಲೂ ನನಗೆ "ನಾನು ಯಾರು? ನಾನು ಎಲ್ಲಿಂದ ಬಂದೆ? ನನ್ನ ಜೀವನದ ಗುರಿ ಏನು? ಸತ್ಯ ಎಂದರೇನು?" ಮುಂತಾದ ಆಲೋಚನೆಗಳು ನನ್ನನ್ನು ಪ್ರತಿಕ್ಷಣ ಕಾಡುತ್ತಾ ನನ್ನನ್ನು ದುಃಖಕ್ಕೆ ಒಳಗಾಗುವಂತೆ ಮಾಡುತ್ತಿದ್ದವು. ಆಕಾಶ, ನಕ್ಷತ್ರಗಳನ್ನು ನೋಡುತ್ತಾ ಇದ್ದಾಗ, "ನಾನು ನಕ್ಷತ್ರಲೋಕದಿಂದ ಬಂದಿದ್ದೇನೆ, ಅದೇ ನನ್ನ ಶಾಶ್ವತನಿವಾಸ, ನಾನು ನನ್ನ ಮನೆಗೆ ಯಾವಾಗ ಹೋಗುವೆ?" ಎಂದು ಬಹಳ ಗಾಢವಾಗಿ ಅನಿಸುತ್ತಿತ್ತು. ನಾನು ಒಬ್ಬ ಡಾಕ್ಟರ್, ಇಂಜಿನಿಯರ್ ಮುಂತಾದ ಪ್ರಾಪಂಚಿಕ ಹುದ್ದೆಗಳಲ್ಲಿ ಕೆಲಸ ಮಾಡಬೇಕೆಂದು ಅನ್ನಿಸುತ್ತಿರಲಿಲ್ಲ.

 

ನಾನು ಜೀವನದಲ್ಲಿ "ನನ್" ಆಗಬೇಕು, ಎಲ್ಲರಿಗೂ ಸೇವೆ ಮಾಡಬೇಕು, ಎಲ್ಲರಿಗೂ ಮಾರ್ಗದರ್ಶನ ಮಾಡಬೇಕು ಎಂಬ ಭಾವನೆಗಳು ಚಿಕ್ಕಂದಿನಿಂದಲೇ ಬಹಳ ಗಾಢವಾಗಿತ್ತು. ಹೆಚ್ಚು ಆಲೋಚನೆಗಳಿಂದ ನನ್ನ ಮೈಂಡ್ ತುಂಬಿದಾಗ, ನನಗೆ ಇಷ್ಟು ಆಲೋಚನೆಗಳು ಬೇಡ ಎಂದುಕೊಂಡಾಗ, ಕೆಲವೊಮ್ಮೆ ಆಲೋಚನಾರಹಿತ ಸ್ಥಿತಿ ಅನುಭವಕ್ಕೆ ಬರುತ್ತಿತ್ತು. ಯಾವುದಾದರೂ ಆಧ್ಯಾತ್ಮಿಕ ಪುಸ್ತಕವನ್ನು ಓದಿದಾಗ, "ಸತ್ಯವನ್ನು ಅನುಭವಿಸಬೇಕೆಂದರೆ ಕೇವಲ ಪುಸ್ತಕ ಓದಿದರೆ ಸಾಲದು, ಪುಸ್ತಕದಲ್ಲಿರುವ ವಿಷಯಗಳನ್ನು ಆಚರಣೆಯಲ್ಲಿಡಬೇಕು, ಆಗ ಮಾತ್ರ ಸತ್ಯ ತಿಳಿಯುತ್ತದೆ, ಇದೇ ಆಧ್ಯಾತ್ಮಿಕತೆ" ಎಂದರೆ ಎಂದು ಅನ್ನಿಸುತ್ತಿತ್ತು. ಪ್ರತಿದಿನ ನಾನು ಮಲಗುವ ಮುನ್ನ ಕಣ್ಣು ಮುಚ್ಚಿಕೊಂಡಾಗ ನನಗೆ ನಕ್ಷತ್ರಗಳು, ಬಣ್ಣಗಳು ಕಾಣುತ್ತಿದ್ದವು.

 

ನಾನು 11 ನೇ ತರಗತಿಯಲ್ಲಿದ್ದಾಗ ನನ್ನ ಜೂನಿಯರ್ ನವ್ಯಶ್ರೀ ಆನಾಪಾನಸತಿ ಧ್ಯಾನದ ಬಗ್ಗೆ ಹೇಳಿದಳು. ಆ ದಿನವೇ ನಾನು ಮನೆಯಲ್ಲಿ ಧ್ಯಾನ ಮಾಡಿದಾಗ, ಈ ಧ್ಯಾನವು ನನಗೆ ಹೊಸದೇನು ಅಲ್ಲ, ಈ ಧ್ಯಾನದ ಮಾರ್ಗದಲ್ಲಿ ನಾನು ಮೊದಲಿನಿಂದಲೇ ಇದ್ದೇನೆ, ಇದೇ ನನ್ನ ಜೀವನ ಎಂದು ಅನಿಸಿತು. ಆದರೆ, ನಮ್ಮ ಮನೆಯಲ್ಲಿ ಧ್ಯಾನದ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಧ್ಯಾನವು ಮುದುಕರಿಗೆ, ಸನ್ಯಾಸಿಗಳಿಗೆ, ಯುವ ವಯಸ್ಸಿನವರಿಗಲ್ಲ, ಧ್ಯಾನ ಮಾಡಿದರೆ ಕೆಟ್ಟದಾರಿಯಲ್ಲಿ ಹೋಗುತ್ತಾರೆ ಮುಂತಾದ ಅಭಿಪ್ರಾಯಗಳು ನಮ್ಮ ಮನೆಯಲ್ಲಿ ಇತ್ತು. ಆದ್ದರಿಂದ ನಾನು ನನ್ನ ಕೊಠಡಿಗೆ ಹೋಗಿ ಬಾಗಿಲು ಮುಚ್ಚಿಕೊಂಡು ಒಬ್ಬಳೇ ಧ್ಯಾನ ಮಾಡುತ್ತಾ ಪುಸ್ತಕಗಳನ್ನು ಓದುತ್ತಿದ್ದೆನು. ನನ್ನ ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ನನಗೆ ನನ್ನ ಆತ್ಮಸಂಗಾತಿ (Soul friends) ಧ್ಯಾನಿ ‘ರಾಮು’ರವರ ಪರಿಚಯವಾಯಿತು. ಆ ದಿನದಿಂದ ನಮ್ಮಿಬ್ಬರ ನಡುವೆ ಬಹಳಷ್ಟು ಆಧ್ಯಾತ್ಮಿಕ ಸಂಭಾಷಣೆ ನಡೆಯುತ್ತಾ ಬಂತು. PSSM, ಪತ್ರೀಜಿ, ಪಿರಮಿಡ್ ಮಾಸ್ಟರ್‌ಗಳು ಮಾಡುತ್ತಿರುವ ಸೇವೆಯ ಬಗ್ಗೆ ಬಹಳಷ್ಟು ತಿಳಿಯಿತು. ನಾನು ನನ್ನ ಜೀವನದ ಗುರಿ ತಿಳಿದುಕೊಳ್ಳಬೇಕು, ನನಗೆ ಸತ್ಯ ತಿಳಿಯಬೇಕು ಎನ್ನುವ ಭಾವನೆಗಳ ತೀವ್ರತೆಯಿಂದ ನಾನು ದುಃಖದಿಂದ ಅನುಕ್ಷಣ ನರಳುತ್ತಾ ಇದ್ದೆನು. ಈ ಭಾವನೆಗಳ ತೀವ್ರತೆಯಿಂದ ನಾನು || PUC ಗಣಿತ ಪರೀಕ್ಷೆಗೆ 3 ದಿನ ರಜೆಯಿದ್ದರೂ, 2 ದಿನ ಓದಲಿಕ್ಕೆ ಆಗಲಿಲ್ಲ. ಪರೀಕ್ಷೆಯ ಒಂದು ದಿನ ಮುಂಚೆ ಕೇವಲ 2 ಗಂಟೆ ಬಹಳ ಕಷ್ಟಪಟ್ಟು ಓದಿದೆನು. ಪರೀಕ್ಷೆಯಲ್ಲಿ ಪತ್ರೀಜಿ ಮತ್ತು ಪ್ರಕೃತಿಗೆ ಮನಸ್ಸಿನಲ್ಲಿ ಸಹಾಯ ಕೋರಿ ಪರೀಕ್ಷೆ ಬರೆದನು, ನನಗೆ 78% ಮಾರ್ಕ್ ಗಣಿತ ಪರೀಕ್ಷೆಯಲ್ಲಿ ಬಂತು. ನನಗೆ 12ನೇ ತರಗತಿ ಫಲಿತಾಂಶ ಮೊದಲೇ ತಿಳಿದಿತ್ತು 83% ಎಂದು. ನನಗೆ ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಸಿಕ್ಕಿತು. ಧ್ಯಾನ ಮಾಡಲಿಕ್ಕೆ, ಪುಸ್ತಕಗಳು ಓದಲಿಕ್ಕೆ ಹೆಚ್ಚಿನ ಸಮಯ ದೊರಕಿತು. ಧ್ಯಾನದ ಬಗ್ಗೆ ನನ್ನ ಸ್ನೇಹಿತರಿಗೆ ತಿಳಿಸುತ್ತಾ, "ಪಿರಮಿಡ್ ಶಕ್ತಿ ಮತ್ತು ಪಿರಮಿಡ್ ಹೇಗೆ ನಿರ್ಮಿಸಬೇಕು?" ಎನ್ನುವ ಕಾರ್ಯಾಗಾರಗಳನ್ನು ನಮ್ಮ ಕಾಲೇಜಿನಲ್ಲಿ ಮಾಡಿದೆ. ವಿದ್ಯಾರ್ಥಿಗಳಿಂದ ಅದ್ಭುತವಾದ ಪ್ರತಿಕ್ರಿಯೆ ಬಂತು. ಮತ್ತು ವಿದ್ಯಾರ್ಥಿಗಳೇ ಸ್ವತಃ ನನ್ನ ಹತ್ತಿರ ಬಂದು ಧ್ಯಾನದ ಬಗ್ಗೆ, ಪಿರಮಿಡ್ ಬಗ್ಗೆ ತಿಳಿದುಕೊಂಡು ಅವರೂ ಸಹ ಧ್ಯಾನ ಮಾಡಿದರು. ಧ್ಯಾನದಿಂದ ನನ್ನ ತರಗತಿಯ ಓದನ್ನು, ನನ್ನ ಎಲ್ಲಾ ಚಟುವಟಿಕೆಗಳನ್ನು ಸಮಸ್ಥಿತಿಯಲ್ಲಿ ನಿಭಾಯಿಸುತ್ತಾ, ಯಾವಾಗಲು ನನ್ನ ಜೊತೆಗೆ ನಾನು ಇರುತ್ತಿದ್ದೆನು. ಯಾವುದೇ ಕ್ವಿಜ್, ಪರೀಕ್ಷೆಗೆ ನಾನು ಸದಾಸಿದ್ಧಳಾಗಿ ಇರುತ್ತಿದ್ದೆ. ಪರೀಕ್ಷೆಯ ಭಯವಿರಲಿಲ್ಲ. ನನಗೆ ಇಂಜಿನಿಯರಿಂಗ್ ಮೊದಲನೇ ವರ್ಷ, ಪರೀಕ್ಷೆಯಲ್ಲಿ 97% ಅಂಕಗಳು ಬಂತು.

 

ನಾನು ನೋಡಿದ ಮೊದಲನೆಯ ಪಿರಮಿಡ್ ಎಂದರೆ ಅದು ಪಿರಮಿಡ್ ವ್ಯಾಲಿಯಲ್ಲಿನ ಮೈತ್ರೇಯ ಬುದ್ಧಾ ಪಿರಮಿಡ್ ಮೊದಲನೆಯ ಕ್ಲಾಸ್ ಪತ್ರೀಜಿಯವರ "ಶ್ರೀಕೃಷ್ಣಾಮೃತ ಶ್ರೀಮದ್ಭಗವದ್ಗೀತಾ ವಿಜ್ಞಾನಸಾರ". ಕಾಲೇಜಿನಲ್ಲಿ ನನ್ನ ಸೀನಿಯರ್‌ಗಳಿಗೆ ಆನಾಪಾನಸತಿ ಧ್ಯಾನದ ಬಗ್ಗೆ ತಿಳಿದಿತ್ತು. ಆದರೆ, ಅವರು ಧ್ಯಾನದಲ್ಲಿ ಹೆಚ್ಚು ಆಸಕ್ತಿ ತೋರಿಸಿರಲಿಲ್ಲ. ನಾನು ಧ್ಯಾನ ಮಾಡುವುದನ್ನು ಅವರು ತಿಳಿದುಕೊಂಡು, ಹಾಸ್ಟೆಲ್‌ನ ನನ್ನ ಕೊಠಡಿಗೆ ಬಂದು ಧ್ಯಾನದ ಬಗ್ಗೆ ಚರ್ಚಿಸಿ, ನಾನು ಬರೆದಿದ್ದ ನನ್ನ ಧ್ಯಾನಾನುಭವಗಳನ್ನು ನನ್ನ ಡೈರಿಯಿಂದ ಓದಿ ತುಂಬಾ ಪ್ರಭಾವಿತರಾದರು. ಅಂದಿನಿಂದ ಅವರು ಧ್ಯಾನ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಟಾಟಾ ಕನ್ಸಲ್ಟೆನ್‌ಸಿ ಕಂಪೆನಿಗೆ ಕ್ಯಾಂಪಸ್ ಇಂಟರ್ವ್ಯೂಗೆ ಆಯ್ಕೆಯಾದೆನು. ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಮತ್ತು ನನಗೆ ಅತ್ಯಂತ ಇಷ್ಟವಾದ ಪುಸ್ತಕವೆಂದರೆ ರಾಮ್ತಾ. Ramtha, The white Book ಪುಸ್ತಕವನ್ನು ಓದುತ್ತಿದ್ದಾಗ ರಾಮ್ತಾ ಅವರೇ ಆ ಪುಸ್ತಕದ ಬಗ್ಗೆ, ಅವರ ಬಗ್ಗೆ ಹೇಳುತ್ತಾ ಅನುಕ್ಷಣ ಅವರು ನನ್ನೊಡನೆ ಇದ್ದಾರೆ ಎಂದು ತುಂಬಾ ಗಾಢವಾಗಿ ಅನ್ನಿಸುತ್ತಿತ್ತು. ರಾಮ್ತಾ ಅವರ ಉಪಸ್ಥಿತಿ, ವಿಶ್ವಪ್ರೇಮ ಮತ್ತು ಅವರ ಸ್ಪರ್ಶವನ್ನು ತುಂಬಾ ಆಳವಾಗಿ ಅನುಭವಿಸಿದೆನು. ಅದೇ ಸಮಯದಲ್ಲಿ ರಾಮ್ತಾ ಅವರು ಕೂಡ ನನ್ನಲ್ಲಿ ಉದಯಿಸುತ್ತಿರುವ ಪ್ರತಿಯೊಂದು ಭಾವನೆಯನ್ನು ಪ್ರೀತಿಯಿಂದ ಗಮನಿಸುತ್ತಿದ್ದರು ಎಂದು ತಿಳಿಯಿತು.

 

ನನಗೆ ಬಹಳಷ್ಟು ಅನುಭವಗಳು ಕನಸಿನ ರೂಪದಲ್ಲಿ (Dream in a Dream) ಬರುತ್ತಿದ್ದವು. ಕನಸಿನಲ್ಲಿ ನಾನು ತುಂಬಾ ಎಚ್ಚರಿಕೆಯಿಂದಿರುತ್ತೇನೆ. ಇದರಿಂದ ನನ್ನ ಮೈಂಡ್, ನನ್ನ ಸೂಕ್ಷ್ಮಶರೀರದ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿಯುತ್ತಿತ್ತು. ಕನಸಿನಿಂದ ಹೊರಬರುವ ಮುನ್ನ ನನಗೆ ಈ ಕನಸು ಎಲ್ಲಾ ನೆನಪಿರಬೇಕು ಎಂದು ಅಂದುಕೊಂಡು ಹೊರಬರುತ್ತಿದ್ದೆನು.

 

ಧ್ಯಾನದಿಂದ ನನ್ನ ಆಲೋಚನೆ, ಭಾವನೆಗಳಲ್ಲಿ ತುಂಬಾ ಬದಲಾವಣೆಗಳು ಕಂಡು ಬಂದವು. ಧ್ಯಾನದಲ್ಲಿ ಪಡೆಯುತ್ತಿರುವ ಸ್ಥಿತಿಯನ್ನು, ಧ್ಯಾನದಿಂದ ಹೊರಬಂದ ಮೇಲೆ ಕೂಡಾ ಪಡೆಯಬೇಕೆಂದು ಪ್ರಯತ್ನಿಸುತ್ತಾ, ನನ್ನ ಆಲೋಚನೆ, ಭಾವನೆಗಳ ಬಗ್ಗೆ ಮತ್ತಷ್ಟು ಎಚ್ಚರದಿಂದಿರುತ್ತಿದ್ದೆನು. ಇದರಿಂದ "ನನ್ನ ಸಂಕಲ್ಪಶಕ್ತಿ ವೃದ್ಧಿಯಾಯಿತು. ರಾಮ್ತಾ ಅವರು ಹೇಳಿದ ಹಾಗೆ ನನ್ನ ಸಂಕಲ್ಪಕ್ಕೆ ಹೆಚ್ಚಿನ ಶಕ್ತಿ ಇರಬೇಕು ಎನ್ನುವ ಸಂಕಲ್ಪದಿಂದಿರುತ್ತಿದ್ದೆನು".

 

ಧ್ಯಾನದಲ್ಲಿ ನಾನು ಸೂಕ್ಷ್ಮಶರೀರದಿಂದ ಹೊರಬಂದು, ನಕ್ಷತ್ರಮಂಡಲದಲ್ಲಿ ಸಂಚರಿಸಿ ಮತ್ತೆ ನನ್ನ ದೇಹದಲ್ಲಿ ಮರಳಿಬರುವ ಅನುಭವವಾಯಿತು. ಪ್ರಕೃತಿ ಯಾವಾಗಲು ನನ್ನ ಜೊತೆಯಿದೆ. ಅದು ನನ್ನ ಪ್ರತಿಯೊಂದು ಭಾವನೆಗೂ, ಆಲೋಚನೆಗೂ ಸ್ಪಂದಿಸುತ್ತಿದೆ. ನಾನು ಪ್ರತಿಕ್ಷಣ ಪ್ರಕೃತಿಯ ಜೊತೆ ಇದ್ದೇನೆ ಎಂದು ತಿಳಿಯುತಿತ್ತು.

 

2012ರಲ್ಲಿ "ಪ್ರಕೃತಿ, ಭೂತಾಯಿಯ ಪರಿಸ್ಥಿತಿ ಹೇಗಿದೆ?" ಎನ್ನುವ ಪ್ರಶ್ನೆ ಬಂತು. ಅದಕ್ಕೆ ಉತ್ತರವಾಗಿ ಕನಸಿನಲ್ಲಿ ಒಂದು ಅನುಭವ ಬಂತು. ಪತ್ರೀಜಿಯವರು ಭೂತಾಯಿಯನ್ನು ಎಷ್ಟೋ ಪ್ರೀತಿಯಿಂದ, ಜವಾಬ್ದಾರಿಯಿಂದ ಕಾಪಾಡುತ್ತಿದ್ದಾರೆ. ಭೂಮಿಯ ಮೇಲೆ ನಡೆಯುತ್ತಿರುವ ಪ್ರತಿಯೊಂದು ವಿಷಯ ಅವರಿಗೆ ತಿಳಿಯುತ್ತದೆ ಎಂದು ತಿಳಿಯಿತು. ಇದಕ್ಕೆ ಸಾಕ್ಷಿಯಾಗಿ ಇನ್ನೊಂದು ಅನುಭವ ಬಂತು. ಎಲ್ಲಾ ಪಿರಮಿಡ್ ಮಾಸ್ಟರ್‌ಗಳು ಬಿಳಿಬಟ್ಟೆ ಹಾಕಿಕೊಂಡು ಪತ್ರೀಜಿಯವರೊಡನೆ ಧ್ಯಾನ ಮಾಡುತ್ತಿದ್ದರು. ಆಗ ಪತ್ರೀಜಿಯವರು ಕೊಳಲು ನುಡಿಸುತ್ತಿದ್ದರು. ಆಗ ಭೂಮಿಯ ಯಾವುದೋ ಒಂದು ಪ್ರದೇಶದಲ್ಲಿ ಅನಾಹುತ ಆಗಲು ಶುರುವಾಯಿತು. ತಕ್ಷಣವೇ ಕೊಳಲು ನುಡಿಸುತ್ತಿರುವ ಪತ್ರೀಜಿ ಮತ್ತೊಂದು ಸೂಕ್ಷ್ಮಶರೀರದಿಂದ ಆ ಪ್ರದೇಶಕ್ಕೆ ಹೋಗಿ ಆ ಅನಾಹುತವನ್ನು ತಡೆಗಟ್ಟಿದರು. ಈ ಅನುಭವದಿಂದ ಪತ್ರೀಜಿಯವರು ಭೂಮಿಯ ಮೇಲೆ ನಡೆಯುತ್ತಿರುವ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಸ್ಪಷ್ಟವಾಯಿತು. ಹಾಗು ಭೂತಾಯಿಯು ಪತ್ರೀಜಿಯವರ ಸಮಕ್ಷಮದಲ್ಲಿ ಎಷ್ಟೋ ಸಂತೋಷದಿಂದಿದ್ದಾಳೆ, ಸುರಕ್ಷತೆಯಿಂದಿದ್ದಾಳೆ ಮತ್ತು ಪತ್ರೀಜಿಯವರಿಗೆ ಭೂಮಿಯು ಕೃತಜ್ಞತೆಯಿಂದಿದೆ ಎಂದು ತಿಳಿಯಿತು.

 

ಒಂದು ದಿನ ಕನಸಿನಲ್ಲಿ ವೆಂಕಟೇಶ್ವರ ಸ್ವಾಮಿ ಕಾಣಿಸಿ ನನ್ನನ್ನು ಕೂಡಿಸಿಕೊಂಡು "ನೀನು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿ ಧ್ಯಾನಪ್ರಚಾರ ಮಾಡಲಿಕ್ಕೆ ಬಂದಿದ್ದೀಯ, ಇದೇ ನಿನ್ನ ಜನ್ಮದ ಕಾರಣ" ಎಂದು ಹೇಳಿದರು. ಅದನ್ನು ಕೇಳಿಸಿಕೊಂಡು ನನಗೆ ಬಹಳ ಆನಂದವಾಯಿತು. ಅವರನ್ನು ನನ್ನ ಮನಸ್ಸಿನಲ್ಲಿರುವ ಒಂದು ಪ್ರಶ್ನೆ ಕೇಳಿದೆ "ನನ್ನ ವಿವಾಹ ರಾಮು ಜೊತೆ ಆಗುತ್ತದೆಯೆ?” ಅದಕ್ಕೆ ಅವರು "ಖಂಡಿತ ಆಗುವುದು"ಎಂದು ಉತ್ತರಿಸಿದರು.

 

ಆಧ್ಯಾತ್ಮಿಕ ಪುಸ್ತಕಗಳು ಓದುವುದೆಂದರೆ ನನಗೆ ತುಂಬಾ ಇಷ್ಟ. ಇತ್ತೀಚೆಗೆ ನಾನು ಓದಿರುವ ಪುಸ್ತಕ "The Fakir". "ಗುರು ಎಂದರೇನು? ಒಬ್ಬ ಗುರುವಿನ ಜೊತೆ ಶಿಷ್ಯ ಹೇಗಿರಬೇಕು?" ಎಂದು ನಾನು ಅರಿತುಕೊಂಡೆ. ಪುಸ್ತಕ ಓದುತ್ತಿರುವ ಸಮಯದಲ್ಲಿ "ಸಾಯಿಬಾಬಾ" ಅವರು ನನ್ನ ಜೊತೆಗಿದ್ದು ನನ್ನ ಜೀವನದ ಘಟನೆಗಳನ್ನು ಈ ಪುಸ್ತಕಕ್ಕೆ ಹೋಲಿಸಿ, ಈ ಪುಸ್ತಕದಲ್ಲಿರುವ ವಿಷಯಗಳನ್ನು ಎಷ್ಟೋ ಅಚ್ಚುಕಟ್ಟಾಗಿ ವಿವರಿಸುತ್ತಿದ್ದ ಹಾಗೆ ಅನ್ನಿಸುತ್ತಿತ್ತು. ಕೆಲವೊಮ್ಮೆ ಪುಸ್ತಕಗಳನ್ನು ಓದುವಾಗ; ಹೂವುಗಳನ್ನು, ಮನುಷ್ಯರನ್ನು ನೋಡಿದಾಗ; ಅವರ "ಆರಾ", "ಶಕ್ತಿ" ಕಾಣಿಸುತ್ತದೆ.

 

ನನಗೆ ಆತ್ಮಪರಿಶೀಲನೆ ಮಾಡುಕೊಳ್ಳುವುದು ಎಂದರೆ ತುಂಬಾ ಇಷ್ಟ. ಒಂದು ದಿನ ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ, "ಮನುಕುಲ ಜೀವನದ ಉದ್ದೇಶವೇನು? ಜೀವನ ಎಂದರೇನು? ಮನುಷ್ಯರು ಹೇಗೆ ಆಲೋಚಿಸಬೇಕು?" ಮುಂತಾದ ಪ್ರಶ್ನಾತ್ಮಕ ಭಾವನೆಗಳು ಉದಯಿಸಿದವು. ಆಗ ನನಗೆ ಈ ಪ್ರಶ್ನೆಗಳಿಗೆ ಉತ್ತರ ನನ್ನೊಳಗಡೆಯಿಂದ ಬಂದ ಹಾಗೆ, ಅದರಿಂದ ಒಂದು ಹೊಸ ಆಯಾಮವು ತೆರೆದುಕೊಂಡ ಹಾಗೆ ಅನುಭವವಾಯಿತು. ಈ ಒಂದು ಅನುಭವದಿಂದ ನನ್ನ ಆನಂದ ವರ್ಣನಾತೀತ. ಅದೇ ದಿನ ಸಂಜೆ ಪತ್ರೀಜಿಯವರು ಪಿರಮಿಡ್ ಸೆಂಟರ್ ಪ್ರಾರಂಭೋತ್ಸವಕ್ಕೆ ಬೆಂಗಳೂರಿಗೆ ಬಂದಾಗ ಅವರಿಗೆ ನನ್ನ ಈ ಅನುಭವವನ್ನು ಹೇಳಿದಾಗ ಸರ್ ತುಂಬಾ ಖುಷಿಪಟ್ಟು ನನಗೆ ಹ್ಯಾಂಡ್ ಶೇಕ್ ಮಾಡಿದರು.

 

ಈ ಧ್ಯಾನದಿಂದ ನಾನು ಪ್ರತಿಕ್ಷಣ ವರ್ತಮಾನದಲ್ಲಿ ತುಂಬಾ ಆನಂದದಿಂದ ಇರುತ್ತಿದ್ದೇನೆ. ನನ್ನ ಜೀವನದ ಉದ್ದೇಶವನ್ನು ತುಂಬಾ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾ ನನ್ನ ಜೀವನ ಸಾಗಿಸುತ್ತಿದ್ದೇನೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ ವೆಬ್‌ಸೈಟ್‌ಗೆ ಸಂಬಂಧಪಟ್ಟ ಕೆಲಸ ಮಾಡುತ್ತಾ ಕಳೆದ ೩ ತಿಂಗಳಿಂದ ಧ್ಯಾನ ಕಸ್ತೂರಿಯ ಉಪಸಂಪಾದಕಿಯಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಪತ್ರೀಜಿ ತೋರಿಸಿದ, ಸತ್ಯದ ಪರಮಮಾರ್ಗವಾದ ಆನಾಪಾನಸತಿ-ಧ್ಯಾನ, ಸ್ವಾಧ್ಯಾಯ, ಸಜ್ಜನ-ಸಾಂಗತ್ಯ, ಆಚಾರ್ಯ-ಸಾಂಗತ್ಯ ಮತ್ತು ಧ್ಯಾನ ಪ್ರಚಾರದಿಂದ ಪ್ರತಿಕ್ಷಣ ನನ್ನ ಜೀವನ ಆನಂದದಿಂದ ಸಾಗುತ್ತಿದೆ. ಇಂತಹ ಅದ್ಭುತವಾದ ಮಾರ್ಗತೋರಿಸಿ, ಮಾರ್ಗನಿರ್ದೇಶಿಸುತ್ತಿರುವ ಪತ್ರೀಜಿಯವರಿಗೆ, ಪ್ರಕೃತಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

 

ಇಂಥದೊಂದು ಆಧ್ಯಾತ್ಮಿಕ ಪ್ರಯಾಣದಲ್ಲಿ ನನ್ನ "ಆತ್ಮ" ಬಹಳ ತೃಪ್ತಿಯಿಂದಿದೆ. ಇಂದು ನನ್ನ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿಕೊಂಡಾಗ, ಪ್ರತಿಯೊಂದು ಘಟನೆಯೂ ನನಗೆ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಲಿಕ್ಕೆಂದೇ ಬಂದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಮತ್ತು, ನಾನು ತುಂಬಾ ಅದೃಷ್ಟವಂತೆ ಅನ್ನಿಸುತ್ತಿದೆ.

 

ನಾನು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ; ನಮಗೆ ಎಷ್ಟು ಧ್ಯಾನಾನುಭವಗಳಿವೆ ಎನ್ನುವುದಕ್ಕಿಂತ ಪ್ರತಿಕ್ಷಣ ನಮ್ಮನ್ನು ನಾವು ಆತ್ಮಪರಿಶೀಲನೆ ಮಾಡಿಕೊಳ್ಳುತ್ತಾ, ಎಷ್ಟು ಪ್ರಗತಿ ಹೊಂದುತ್ತಿದ್ದೇವೆ ಎನ್ನುವುದು ಬಹಳ ಮುಖ್ಯ ಹಾಗೂ ಪ್ರತಿಯೊಬ್ಬರಿಂದ, ಅವರ ಅನುಭವಗಳಿಂದ ನಾವು ಕಲಿಯುತ್ತಾ ನಮ್ಮ ಜ್ಞಾನವನ್ನು ವಿಸ್ತಾರ ಮಾಡಿಕೊಳ್ಳಬೇಕು. ಎಲ್ಲರೂ ಧ್ಯಾನ ಮಾಡುತ್ತಾ, ಮಾಡಿಸುತ್ತಾ ಆನಂದದಿಂದ ಇರಬೇಕೆಂದು ವಿನಂತಿ.

 

ಬಿ.ಸಿಂಧು

ಬೆಂಗಳೂರು

ಫೋ: +91 7829183698

Go to top