" ಧ್ಯಾನದಲ್ಲಿ ನನಗಾದ ಅನುಭವಗಳು ಹಾಗೂ ಅನುಕೂಲಗಳು "

 

 

ನಾನು ಸುಮಾರು 30 ವರ್ಷಗಳು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಹಾಗೂ 9 ವರ್ಷಗಳು ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿ 2006 ರಂದು ನಿವೃತ್ತನಾದೆನು. ನಿವೃತ್ತನಾದ ನಂತರ ಯೋಗಾಸನ ಮಾಡುತ್ತಿದ್ದೆನು, ಸಾಯಂಕಾಲ ಸುಮಾರು ಒಂದು ಗಂಟೆ ವಾಕಿಂಗ್ ಮಾಡುತ್ತಿದ್ದೆನು. ನಾನು ಅಂದಿನವರೆಗೂ ಹಾಗೂ ಇಂದಿನವರೆಗೂ ತುಂಬಾ ಆರೋಗ್ಯ ಹಾಗೂ ನೆಮ್ಮದಿಯಿಂದ ಇದ್ದೇನೆ.

 

ಸುಮಾರು ಐದು ವರ್ಷಗಳ ಹಿಂದೆ ನನಗೆ ಇದ್ದಕ್ಕಿದ್ದಂತೆ ಮೊಣಕಾಲುಗಳಲ್ಲಿ ನೋವು ಪ್ರಾರಂಭವಾಯಿತು. ನನಗೆ ತಿಳಿದ ಎಲ್ಲಾ ಪ್ರಥಮ ಚಿಕಿತ್ಸೆಗಳನ್ನು ಕೈಗೊಂಡೆನು. ಆದರೂ ನೋವು ಕಡಿಮೆಯಾಗಲಿಲ್ಲ. ಅಂತಿಮವಾಗಿ ಕೀಲು ಮತ್ತು ಮೂಳೆಗಳ ವೈದ್ಯರಲ್ಲಿ ಚಿಕಿತ್ಸೆ ಪಡೆದೆನು. ಸುಮಾರು ಹಣವೂ ಖರ್ಚಾಯಿತು. ಆ ವೈದ್ಯರು ನನಗೆ ನೀಡಿದ ಸಲಹೆ ನೀವು ಯೋಗಾಸನ ಹಾಗೂ ವಾಕಿಂಗ್ ನಿಲ್ಲಿಸಿರಿ, ಇಲ್ಲವಾದರೆ ಈ ನೋವುಗಳು ಇನ್ನೂ ಉಲ್ಬಣಿಸುತ್ತವೆ. ಸುಮಾರು 2-3 ತಿಂಗಳು ಬೆಡ್‌ರೆಸ್ಟ್ ತೆಗೆದುಕೊಳ್ಳಿರಿ ಎಂದು ತಿಳಿಸಿದರು. ಇದು ನನಗೆ ಸಹಿಸಲಾರದ ಹಿಂಸೆಯಾಯಿತು. 2-3 ತಿಂಗಳು ಹಾಸಿಗೆ ಮೇಲೆ ಮಲಗಿ ಮಾಡುವುದೇನು? ನಾನು ಯಾವಾಗಲೂ ಆಕ್ಟಿವ್ ಆಗಿದ್ದ ವ್ಯಕ್ತಿ ಎಂದು ದಿಗ್ಬ್ರಮೆಯಾಯಿತು. ಇದೇ ಸಂದರ್ಭದಲ್ಲಿ ಸನ್ಮಾನ್ಯ ಮಾಸ್ಟರ್ ಭೀಮೇಶ್ ರೆಡ್ಡಿಯವರು ವೀರಶೈವ ಕಲ್ಯಾಣ ಮಂಟಪದಲ್ಲಿ ಉಚಿತ ಧ್ಯಾನ ಶಿಬಿರವನ್ನು ಏರ್ಪಡಿಸಿದ್ದರು. ಆ ತರಗತಿಗೆ ನಾನು ಹಾಜರಾದೆನು. ನಾನು ಏಕೆ ಧ್ಯಾನ ಮಾಡಬಾರದು ಎಂಬ ಕುತೂಹಲ ಹುಟ್ಟಿತು. ಕುತೂಹಲ ಹುಟ್ಟಿದ್ದು ಅಷ್ಟೆ, ಆದರೆ ಧ್ಯಾನ ತರಗತಿಗಳಿಗೆ ಹಾಜರಾಗಲಿಲ್ಲ. ನಂತರ ಚಳ್ಳಕೆರೆಯ ಸೀನಿಯರ್ ಮಾಸ್ಟರ್ ಎ.ಸಿ. ನಾಗೇಂದ್ರನ್ ಮತ್ತು ಅವರ ತಂಡದವರು ತ್ಯಾಗರಾಜನಗರದಲ್ಲಿರುವ ಲಯನ್ಸ್ ಕ್ಲಬ್ ಕಟ್ಟಡದಲ್ಲಿ 40 ದಿನಗಳ ಉಚಿತ ಧ್ಯಾನ ಶಿಬಿರ ಏರ್ಪಡಿಸಿದ್ದರು. ಈ ಶಿಬಿರದಲ್ಲಿ ದಿನನಿತ್ಯ ಹಾಜರಾದೆನು. ಇನ್ನು ಮುಂದೆ ಕಡ್ಡಾಯವಾಗಿ ನಾನು ಧ್ಯಾನ ತರಗತಿಗೆ ಹಾಜರಾಗಿ ಧ್ಯಾನ ಮಾಡಬೇಕೆಂದು ನಿರ್ಧಾರ ಮಾಡಿದೆನು. ಆಗ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಮಹಲ್‌ನ ಗೀತಾ ಮಂದಿರದಲ್ಲಿ ಪ್ರತಿದಿನ ಪ್ರಾತಃಕಾಲ 6 ರಿಂದ 7 ರವರೆಗೆ ಧ್ಯಾನ ತರಗತಿಗೆ ಹಾಜರಾಗುತ್ತಿದ್ದೆ. ಅಲ್ಲಿ ನನಗೆ ದೊರೆತ ಉತ್ತಮ ಆರೋಗ್ಯ, ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಅಂದಿಗೂ ಇಂದಿಗೂ ಎಂದೆಂದಿಗೂ ನನ್ನ ಮನಸ್ಸಿನಲ್ಲಿ ಒಡಮೂಡಿದೆ.

 

ಆಹಾರದ ವಿಷಯಕ್ಕೆ ಬಂದರೆ ಧ್ಯಾನ ಮಾಡುವವರು ಎಲ್ಲರೂ ಕಡ್ಡಾಯವಾಗಿ ಸಸ್ಯಾಹಾರಿಗಳಾಗಬೇಕೆಂದರು. ಆರೋಗ್ಯ ಶಾಸ್ತ್ರಜ್ಞರು ಹೇಳುವ ಪ್ರಕಾರ ಮೀನು, ಮಾಂಸ, ಮೊಟ್ಟೆ ಇವುಗಳಲ್ಲಿ ಉತ್ತಮವಾದ ಪೋಷಕಾಂಶಗಳಿವೆ ಎಂದು ಹೇಳುತ್ತಾರೆ. ಮಾಂಸಾಹಾರವನ್ನು ಉಪಯೋಗಿಸಿದರೆ ತಪ್ಪೇನಿದೆ? ಎಂದು ನನಗನಿಸಿತು. ಆದರೆ ಯಾರ ಹತ್ತಿರವೂ ಇದರ ಬಗ್ಗೆ ಚರ್ಚೆಯನ್ನಾಗಲೀ, ಪ್ರಸ್ತಾವನೆಯನ್ನಾಗಲಿ ಮಾಡಲಿಲ್ಲ. ಒಮ್ಮೆ ಬೆಂಗಳೂರಿನ ಕೆಬ್ಬೆದೊಡ್ಡಿಯ ಪಿರಮಿಡ್ ವ್ಯಾಲಿಯಲ್ಲಿ ಮಾಸ್ಟರ್ ಪ್ರೇಮನಾಥ್‌ರವರು ಏರ್ಪಡಿಸಿದ್ದ ಆಸ್ಟ್ರಲ್ ಸರ್ಜರಿ ಕ್ಲಾಸ್‌ಗೆ ಹಾಜರಾದೆನು. ಅಲ್ಲಿ ಅವರು "ಮಾಂಸಾಹಾರಿಗಳೆಲ್ಲ ಕಡ್ಡಾಯವಾಗಿ ಹೊರಗಡೆ ಹೋಗಿರಿ. ಇಲ್ಲಿ ಸಸ್ಯಹಾರಿಗಳಷ್ಟೇ ಪ್ರವೇಶ" ಎಂದು ಕಟುವಾಗಿ ನುಡಿದರು. ಇದರಿಂದ ವಿಚಲಿತನಾದ ನಾನು ಮಾಂಸಾಹಾರದಲ್ಲಿ ಉತ್ತಮವಾದ ಪೌಷ್ಠಿಕಾಂಶಗಳಿವೆ ಇವರೇಕೆ ಇದನ್ನು ಅಲ್ಲೆಗಳೆಯುತ್ತಾರೆ ಎಂದು ನನ್ನ ಮನಸ್ಸಿನಲ್ಲಿ ಅಂದುಕೊಂಡೆನು. ನನ್ನ ಮನಸ್ಸಿನಲ್ಲಾದ ತುಡಿತದ ಕಂಪನಗಳು ಪ್ರೇಮನಾಥ್ ಸರ್‌ರವರಿಗೆ (ತಮ್ಮ ದಿವ್ಯಜ್ಞಾನದಿಂದ) ಮನವರಿಕೆಯಾಗಿದೆ. ಅದಕ್ಕೆ ಅವರು ಕೊಟ್ಟ ವಿಶ್ಲೇಷಣೆ: "ಮಾಂಸಾಹಾರಕ್ಕಾಗಿ ನಮ್ಮಿಂದ ಕೊಲ್ಲಲ್ಪಡುವ ಮೀನು, ಕುರಿ, ಕೋಳಿ, ಇತರೆ ಯಾವುದೇ ಪ್ರಾಣಿಗಳು ಸಹ ನಮ್ಮಂತೆ ಗಾಳಿ, ನೀರು, ಆಹಾರವನ್ನು ಸೇವಿಸುತ್ತವೆ". ಅವುಗಳಿಗೂ ಸಂತಾನಾಭಿವೃದ್ಧಿಯ ಆಶೆ-ಆಕಾಂಕ್ಷೆಗಳಿರುತ್ತವೆ. ಇಷ್ಟೆಲ್ಲ ಇದ್ದ ಮೇಲೆ ಅವು ನಮ್ಮಂತೆ ಜೀವಿಗಳು, ಅವುಗಳಿಗೂ ನಮ್ಮಂತೆ ಆತ್ಮವಿದೆ. ಅವುಗಳನ್ನು ಕೊಂದಾಗ, ಅಯ್ಯೋ! ಅಪ್ಪಾ! ಎಂದು ಪ್ರಾಣ ಬಿಡುತ್ತವೆ. ಅವುಗಳ ನೋವಿನ ಕಂಪನ ನಮ್ಮ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ನನ್ನ ಅನುಭವದ ಪ್ರಕಾರ ಸಸ್ಯಹಾರವು ನಮ್ಮ ಜಠರದಲ್ಲಿ 1-2 ಗಂಟೆಗಳಲ್ಲಿ ಜೀರ್ಣವಾಗುತ್ತದೆ. ಮಾಂಸಹಾರವು ಕನಿಷ್ಠ 72 ಗಂಟೆಗಳ ತನಕ ಇರುತ್ತದೆ. ನಾವು ತಯಾರಿಸಿದ ಅನ್ನ, ಸಾಂಬಾರ್ ಇತರೆ ಆಹಾರ ಪದಾರ್ಥಗಳು ಹೆಚ್ಚೆಂದರೆ ಒಂದು ದಿನ ಸುಲಲಿತವಾಗಿರಬಹದು. ಆದರೆ 2-3 ದಿನ ಇಟ್ಟಾಗ ಕೆಟ್ಟು ದುರ್ವಾಸನೆಯಿಂದ ಕೂಡಿರುತ್ತದೆ. ಹಾಗೆಯೇ ಮಾಂಸಾಹಾರವು ನಮ್ಮ ಶರೀರದಲ್ಲಿ 72 ಗಂಟೆಗಳು ಇದ್ದಾಗ ಏನಾಗಬಹುದೆಂದು ನೀವೇ ಯೋಚಿಸಿರಿ.!!! ಅಂದಿನಿಂದ ನಾನು ಮಾಂಸಾಹಾರವನ್ನು ಬಿಟ್ಟುಬಿಟ್ಟೆನು. ನಮ್ಮ ಕುಟುಂಬ ಸದಸ್ಯರಾದ ನನ್ನ ಶ್ರೀಮತಿಯವರೂ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸಸ್ಯಾಹಾರಿಗಳಾಗಿದ್ದಾರೆ.

 

ಕೋಳಿ ಮೊಟ್ಟೆಯು ಲೈಂಗಿಕ ಸಂಪರ್ಕವಿಲ್ಲದೆ ಉತ್ಪತ್ತಿಯಾದುದರಿಂದ ಇದನ್ನು ಸಸ್ಯಾಹಾರಿ ಎಂದು ಕೆಲವು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಆದರೆ ಕೋಳಿಯು ಅವಧಿಗೆ ಮುನ್ನವೇ ಮೊಟ್ಟೆಯಿಡಲು ಸಾಕಷ್ಟು ಇಂಜಕ್ಷನ್‌ಗಳನ್ನು ಕೊಟ್ಟು ಒತ್ತಡದಿಂದ ಮೊಟ್ಟೆಯನ್ನಿಡಿಸುತ್ತಾರೆ. ಆ ಕೋಳಿಯ ನೋವಿನ ಕಂಪನಗಳು ಮೊಟ್ಟೆ ಉಪಯೋಗಿಸುವವರ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.

 

ನನ್ನ ಶ್ರೀಮತಿ ಸಿ.ಪಾರ್ವತಿ. ಇವರು ಈ ಹಿಂದೆ ತುಂಬಾ ಕೋಪಿಷ್ಟೆಯಾಗಿದ್ದರು. ಯಾವಾಗಲೂ ಮಾನಸಿಕ ಒತ್ತಡಗಳಿಂದ ಕೋಪಿಷ್ಟರಾಗಿ ಎಲ್ಲರ ಮೇಲೂ ರೇಗಾಡುತ್ತಿದ್ದರು. ನಂತರ ನನ್ನ ಸಲಹೆ ಹಾಗೂ ಒತ್ತಾಯದ ಮೇರೆಗೆ ಸುಮಾರು ವರ್ಷಗಳಿಂದ ನಮ್ಮ ಜೊತೆಗೆ ಪ್ರತಿದಿನ ಪಿರಮಿಡ್‌ಗೆ ಧ್ಯಾನಕ್ಕೆ ಬರುತ್ತಿದ್ದಾರೆ. ಈಗ ಶಾಂತಿ, ಸಮಾಧಾನ, ನೆಮ್ಮದಿ ಮತ್ತು ಆರೋಗ್ಯವಾಗಿದ್ದು, ಯಾವಾಗಲೂ ಲವಲವಿಕೆಯಿಂದಿರುತ್ತಾರೆ. ನನ್ನ ಮೂರುಜನ ಹೆಣ್ಣು ಮಕ್ಕಳಲ್ಲಿ ಇಬ್ಬರು ಚಳ್ಳಕೆರೆಯಲ್ಲಿಯೇ ಇದ್ದು ಸುಮಾರು 3 ವರ್ಷಗಳಿಂದ ಸಂಪೂರ್ಣ ಸಸ್ಯಾಹಾರಿಗಳಾಗಿ ಪ್ರತಿದಿನ ಧ್ಯಾನ ಮಾಡುತ್ತಿದ್ದಾರೆ. ಸಂಪೂರ್ಣ ಆರೋಗ್ಯ, ಶಾಂತಿ, ಸಮಾಧಾನ, ನೆಮ್ಮದಿಯಿಂದಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. ಮತ್ತೊಬ್ಬ ಕಿರಿಯ ಮಗಳು ಆಂಧ್ರ ಪ್ರದೇಶದಲ್ಲಿದ್ದಾರೆ.

 

ಇನ್ನೊಂದು ಅತ್ಯಂತ ವಿಶೇಷವಾದ ಅನುಭವ ನನ್ನ ಅತ್ಯಂತ ಚಿಕ್ಕ ಮೊಮ್ಮಗಳು ೩ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಮ್ಮ ಜೊತೆಗೆ ಪ್ರತಿದಿನ ಒಂದು ಗಂಟೆ ಧ್ಯಾನ ಮಾಡುತ್ತಿದ್ದಳು. ಆಗ ನಡೆದ ವಿಶೇಷ ಅವಳ ಅಣ್ಣ ಗೌತಮ್ ಎಂಬ ವಿದ್ಯಾರ್ಥಿಯು ಎಂಜಿನಿಯರಿಂಗ್ ಸೀಟಿಗೆ ಸಿ.ಇ.ಟಿ. ಬರೆದಿದ್ದನು,


ತಾತ: ಶ್ರೀಜ ಅಣ್ಣನಿಗೆ ಸಿ.ಇ.ಟಿ.ನಲ್ಲಿ ಮೆರಿಟ್ ಸಿಗುತ್ತಾ?
ಶ್ರೀಜ: ಖಂಡಿತಾವಾಗಿಯೂ ಸಿಗುತ್ತೆ ತಾತ.
ತಾತ: ನಿಮ್ಮಣ್ಣ ಇ & ಸಿಇ ಸಬ್ಜೆಕ್ಟ್ ಆಫರ್ ಮಾಡಿದ್ದಾನೆ ಸಿಗುತ್ತಾ?
ಶ್ರೀಜ: ಸಿಗುತ್ತೆ ತಾತ.
ತಾತ: ಮೈಸೂರಿನಲ್ಲಿ ಜೆ.ಸಿ.ಕಾಲೇಜಿನಲ್ಲಿ ಸಿಗಬೇಕೆಂದು ಇಚ್ಛಿಸುತ್ತಾನೆ.
ಶ್ರೀಜ: ಸಿಗುತ್ತೆ ತಾತ.
ತಾತ: ಮೈಸೂರಿನಲ್ಲಿ ಪಿ.ಜಿ.ಯಲ್ಲಿರಬೇಕೆಂದುಕೊಂಡಿದ್ದಾನೆ. ಆಗುತ್ತಾ?
ಶ್ರೀಜ: 100% ಆಗುತ್ತೆ ತಾತ.

 

ಧ್ಯಾನಿ ಶ್ರೀಜ ಹೇಳಿದ ಎಲ್ಲವೂ 100% ಸಕ್ಸಸ್ ಆಗಿದೆ. ಇದಕ್ಕೆ ಕಾರಣ ಧ್ಯಾನವೇ ಹೊರತು ಯಾವುದೇ ಪೂಜೆ, ಜಪ, ತಪ, ಮಂತ್ರ, ಯಂತ್ರ, ತಂತ್ರ ಯಾವುದೂ ಅಲ್ಲವೆಂದು ಹೇಳಬಹುದು.

 

ನಾನು ಮಾಡಿದ ಧ್ಯಾನ ಪ್ರಚಾರ


ನನಗೆ 39 ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ಅನುಭವವಿದ್ದ ಕಾರಣ ಧ್ಯಾನ ಪ್ರಚಾರಕ್ಕೆ ಶಾಲಾ ಕಾಲೇಜುಗಳನ್ನೆ ಆರಿಸಿಕೊಂಡೆನು. ಮಕ್ಕಳ ಮನಸ್ಸಿನ ಮನಃಶಾಸ್ತ್ರ ನನಗೆ ಚನ್ನಾಗಿ ತಿಳಿದಿದೆ. ಚಳ್ಳಕೆರೆ ನಗರ ಪ್ರದೇಶದಲ್ಲಿ ಸುಮಾರು 80%ರಷ್ಟು ಶಾಲಾ ಕಾಲೇಜುಗಳಲ್ಲಿ ನನ್ನ ಸ್ನೇಹಿತರು ಮಾಸ್ಟರ್‌ಗಳ ಸಹಕಾರದೊಂದಿಗೆ ಧ್ಯಾನ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಹಿಂದೆ ಧ್ಯಾನ ಹೇಳಿಕೊಟ್ಟ ಕೆಲ ಶಾಲೆಗಳಿಗೆ 2ನೇ ಸಾರಿ ಭೇಟಿಕೊಟ್ಟಾಗ ಕೆಲವು ಶಾಲೆಗಳ ಶಿಕ್ಷಕರೂ ವಿದ್ಯಾರ್ಥಿಗಳು ದಿನನಿತ್ಯ ಧ್ಯಾನಮಾಡಿ ಅದರ ಸದುಪಯೋಗ, ಅಂದರೆ, ಹೈ ಮೆರಿಟ್ ಮಾರ್ಕ್ಸ್ ಪಡೆದಿದ್ದಾರೆ. ಅವರು ಧ್ಯಾನವನ್ನು ತುಂಬಾ ಸ್ಮರಿಸುತ್ತಿದ್ದಾರೆ. ಇನ್ನು ಕೆಲವು ಶಾಲೆಗಳಿಗೆ ಭೇಟಿನೀಡಿದಾಗ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಅಂದರೆ, ಧ್ಯಾನ ಮಾಡಿಲ್ಲ, ಅದರ ಫಲ ದೊರೆತಿಲ್ಲ. ಆಗ ಪತ್ರೀಜಿಯವರ ದಿವ್ಯವಾಣಿ ನನಗೆ ಜ್ಞಾಪಕ ಬಂತು. ಧ್ಯಾನ ಹೇಳಿಕೊಡುವುದು ನಮ್ಮ ಕರ್ತವ್ಯ ಅದನ್ನು ಮಾಡುವುದು ಬಿಡುವುದು ಅವನ ಹಣೇಬರಹ. ಇದರಿಂದ ನಾನು ತೃಪ್ತನಾದೆ ನನ್ನ ಕರ್ತವ್ಯ ನಾನು ಮಾಡಿದ್ದೇನೆ.

 

ಹಿಂದಿನ ವರ್ಷ ಪಾವಗಡ ರಸ್ತೆಯಲ್ಲಿರುವ ಸರ್ಕಾರಿ ಮುರಾರ್ಜಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಸುಮಾರು 300 ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ 40 ದಿನಗಳವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ 7 ರವರೆಗೆ ಧ್ಯಾನ ಹೇಳಿಕೊಟ್ಟಿದ್ದೇನೆ. ಬಹುತೇಕ ವಿದ್ಯಾರ್ಥಿಗಳು ಉತ್ತಮವಾಗಿ ಧ್ಯಾನ ಮಾಡಿದ್ದರಿಂದ ಅವರಿಗೆ ಉತ್ತಮವಾದ ಆರೋಗ್ಯ ಮತ್ತು ಉತ್ತಮ ಅಂಕಗಳು ದೊರೆತಿದೆ. Neglect ಮಾಡಿದವರಿಗೆ Result is "0".

 

ಧ್ಯಾನ ಕ್ಷೇತ್ರದಲ್ಲಿ ಧ್ಯಾನ ಮಾಡಿದವರಿಂದ ಅವರಿಗಾದ ಅನುಕೂಲಗಳ ಪ್ರತ್ಯಕ್ಷ ದರ್ಶನ


1. ಶ್ರೀಮತಿ ಅಪರ್ಣ, ಬೆಂಗಳೂರು, ಥೈರಾಯ್ಡ್‌ನಿಂದ ಬಳಲುತ್ತಿದ್ದವರು ಸಂಪೂರ್ಣ ಆ ಖಾಯಿಲೆಯಿಂದ ವಿಮುಕ್ತರಾಗಿದ್ದಾರೆ.


2. ಒಬ್ಬ ಮಹಿಳಾಧ್ಯಾನಿ (ಪಿರಮಿಡ್ ವ್ಯಾಲಿ) ಕ್ಯಾನ್ಸರ್ ರೋಗದಿಂದ ವಿಮುಕ್ತರಾಗಿ ವೈದ್ಯ ಜಗತ್ತನ್ನೇ ಬೆರಗುಗೊಳಿಸಿದ್ದಾಳೆ.


3. ಚಳ್ಳಕೆರೆ ತಾಲ್ಲೂಕಿನ ಪೇಲಾರಹಟ್ಟಿಯಲ್ಲಿ (ರಾಮಜೋಗಿಹಳ್ಳಿ ಪಕ್ಕದಲ್ಲಿ) ಒಬ್ಬ ವ್ಯಕ್ತಿ ಗ್ಯಾಂಗ್ರೀನ್ ಖಾಯಿಲೆಯಿಂದ ಎರಡೂ ಕಾಲುಗಳನ್ನು ಕತ್ತರಿಸಿಕೊಂಡು ಸಾವು ಬದುಕಿನಿಂದ ಬಳಲಿ ಕೊನೆಗೆ ಧ್ಯಾನ ಮಾಡಿ ಆರೋಗ್ಯವಾಗಿದ್ದಾರೆ ವ್ಯಕ್ತಿ.

 

ನಾನು ಪ್ರತಿ ದಿನ 2 ರಿಂದ 3-4 ಗಂಟೆಗಳವರೆಗೆ ಧ್ಯಾನ ಮಾಡುತ್ತೇನೆ. ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಸಹ ಪ್ರಯಾಣಿಕರೊಂದಿಗೆ ಧ್ಯಾನದ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಅವರಿಗೂ ಧ್ಯಾನ ಮಾಡುವ ವಿಧಾನಗಳನ್ನು ಹೇಳುತ್ತೇನೆ. ಅದರಿಂದಾಗುವ ಅನುಕೂಲಗಳನ್ನು ತಿಳಿಸುತ್ತೇನೆ. ಇದರಿಂದ ಎಷ್ಟೋ ಜನರು ಧ್ಯಾನಿಗಳಾಗಿದ್ದಾರೆ.ಅಮರಾವತಿ, ವೈಜಾಗ್ ಮತ್ತು ಕಡ್ತಾಲ್‌ನಲ್ಲಿ ನಡೆದ ಧ್ಯಾನ ಮಹಾಚಕ್ರಗಳಲ್ಲಿ ಭಾಗವಹಿಸಿ ಅಲ್ಲಿಗೆ ಆಗಮಿಸಿದಂತಹ ಮಹಾನ್ ಮಾಸ್ಟರ್‌ಗಳ ಸಂಪರ್ಕದಿಂದ ಅಮಿತಾನಂದ ಪಡೆದಿದ್ದೇನೆ. ಪಿರಮಿಡ್ ವ್ಯಾಲಿಯಲ್ಲಿ ನಡೆದ ಗ್ಲೋಬಲ್ ಕಾಂಗ್ರೆಸ್ ಸಮಾವೇಶದಲ್ಲಿ ವಾಲೆಂಟರಿಯರ್ ಆಗಿ ಸೇವೆ ಸಲ್ಲಿಸಲು ಹೋದಾಗ ಅಲ್ಲಿ ಮಹಾವತಾರ್ ಬಾಬಾರವರ ಭೇಟಿಯಾಯಿತು. ಆಜಾನುಭಾಹು, ನೀಳವಾದ ತಲೆಗೂದಲು ಅಗಲವಾದ-ಕಳಾಪೂರ್ಣ ಮುಖ, ಅವರನ್ನು ನೋಡಿದ ಎಂತಹವರಿಗೂ ಮಂತ್ರಮುಗ್ಧತೆ ಉಂಟಾಗುತ್ತಿತ್ತು. ಅವರ ವಯಸ್ಸು 400 ವರ್ಷ ಎಂದು ತಿಳಿದು ಬಂತು ಅಚ್ಚರಿಯಾಯ್ತು. ಅವರೊಂದಿಗೆ ಹಸ್ತಲಾಘವ ಮಾಡಿದಾಗ ಮೈ ಜುಮ್ಮೆನ್ನುವಂತಹ ವಿಶ್ವಪ್ರಾಣಶಕ್ತಿ ನನ್ನಲ್ಲಿ ಹರಿಯಿತು. ಇವೆಲ್ಲವೂ ಯಾಂತ್ರೀಕೃತವಾಗಿ ನಡೆದ ಘಟನೆಗಳು.

 

ಆಲೋಚನಾ ರಹಿತ, ಶೂನ್ಯಸ್ಥಿತಿಯ ಧ್ಯಾನದಲ್ಲಿದ್ದಾಗ ಪ್ರಕೃತಿಯಲ್ಲಿರುವ ಬೆಟ್ಟ, ಗುಡ್ಡ, ನದಿ ಸಮುದ್ರ, ಪಂಚಭೂತಗಳಿಂದ ಬಿಡುಗಡೆಯಾದ ವಿಶ್ವಮಯ ಪ್ರಾಣಶಕ್ತಿಯನ್ನು ಬಣ್ಣ ಬಣ್ಣದ ಅಲೆಗಳ ರೂಪದಲ್ಲಿ ಕಂಡಿದ್ದೇನೆ.

 

 

ಕೆ.ಎಸ್.ಶೇಷಾದ್ರಿ

ಚಳ್ಳಕೆರೆ

ಫೋ: +91 9448923905

Go to top