‘ ಪಿರಮಿಡ್ ವ್ಯಾಲಿಯ ಬುಕ್ ಸ್ಟೋರ್’ ತಂಡದ ಸದಸ್ಯರ ’

" ಅಖಂಡ ಧ್ಯಾನದ ಅನುಭವಗಳು "

 

 

1. ಮಾರುತಿಯವರ ಅನುಭವ : ನಾನು ಇದೇ ಮೊದಲ ಸಲ ಅಖಂಡ ಧ್ಯಾನದ ಅನುಭವವನ್ನು ಪಡೆದೆ. ನಾನು ಅನಂತಪುರ ಜಿಲ್ಲೆ, ಮಡಕಶಿರ ತಾಲೂಕು, ಬಿ.ಜಿ.ಹಳ್ಳಿ ಗ್ರಾಮದವನು. ನಾನು 30-03-2015 ರಂದು ಅಖಂಡ ಧ್ಯಾನದಲ್ಲಿ ತೊಡಗಿದೆ. ನಾನು ಅಂದು ಬೆಳಗ್ಗೆ 6:00ರಿಂದ ಮರುದಿನ ಬೆಳಗ್ಗೆ 6:00ರವರೆಗೆ ಧ್ಯಾನದಲ್ಲಿ ತೊಡಗಿದ್ದೆ. ಅಂದು ನನ್ನ ದಿನಚರಿ ಹೇಗಿತ್ತೆಂದರೆ 5-6 ಗಂಟೆಗಳ ಧ್ಯಾನ ನಂತರ ಅರ್ಧಗಂಟೆ ಪುಸ್ತಕವನ್ನು ಓದುವುದು, ಹಾಗೆ ಮತ್ತೆ ಇದೇ ರೀತಿ 24 ಗಂಟೆಗಳವರೆಗೆ ನಾನು 5-6 ಗಂಟೆಗಳು ಧ್ಯಾನ ಮಾಡುತ್ತಾ ಅರ್ಧಗಂಟೆ ಪುಸ್ತಕವನ್ನು ಓದುತ್ತಾ ಅಂದಿನ ದಿನವನ್ನು ಕಳೆದಿದ್ದೆ.

 

ನಾನು ಧ್ಯಾನದಲ್ಲಿ ತೊಡಗಿದ್ದಾಗ ನನಗೆ ನೀಲಿ ಬಣ್ಣದ ಬೆಳಕು ಕಂಡಿತು. ಈ ಬೆಳಕು ಒಂದು ಶಕ್ತಿಯ ಪ್ರತೀಕವಾಗಿದ್ದು ನಾನು ಆ ನೀಲಿ ಬೆಳಕಿನಿಂದ ಬಂದಂತಹ ಶಕ್ತಿಯನ್ನು ಉಪಯೋಗಿಸಿಕೊಂಡೆ. ಇಂತಹ ಅನುಭವ ನನ್ನ ಜೀವನದಲ್ಲಿ ನನಗೆ ಮೊದಲ ಬಾರಿಯಾಗಿತ್ತು. ನಾನು ಈ ಅವಧಿಯಲ್ಲಿ 2 ಗಂಟೆಗಳ ಕಾಲ ನಿದ್ದೆ ಮಾಡಿದೆ. ಆದರೆ ಆ 2 ಗಂಟೆಗಳ ಅವಧಿಯ ನಿದ್ದೆ ನನಗೆ 8 ಗಂಟೆಗಳ ನಿದ್ದೆ ಮಾಡಿದಂತೆ ಭಾಸವಾಯಿತು.

 

2. ಪ್ರಸಾದ್ರವರ ಅನುಭವ : ನಾನು ಇದೇ ಮೊದಲ ಬಾರಿಗೆ ಅಖಂಡ ಧ್ಯಾನದ ಅನುಭವವನ್ನು ಪಡೆದೆ. ನಾನು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯವನು. ನಾನು ಧ್ಯಾನವನ್ನು ಪತ್ರೀಜಿಯವರಿಂದ 2004ರಲ್ಲಿ ಕಲಿತೆ. ಹಾಗು ಅಖಂಡ ಧ್ಯಾನವನ್ನು 31-03-2015ರಂದು ಮಾಡಿದೆ. ನಾನು ಅಂದು ಬೆಳಗ್ಗೆ 7 ಗಂಟೆಯಿಂದ ಮರುದಿನ 7ರವರೆಗೆ ಅಖಂಡ ಧ್ಯಾನದಲ್ಲಿ ತೊಡಗಿದ್ದೆ. ಈ ಅವಧಿಯಲ್ಲಿ ನನ್ನ ಮನಸ್ಸು ನಿಶ್ಶಬ್ಧದಿಂದ ಕೂಡಿತ್ತು, ಹಾಗೂ ನನಗೆ ಯಾವುದೇ ಯೋಚನೆಯೂ ಬರಲಿಲ್ಲ. ಆ ದಿನಪೂರ್ತಿ ನನಗೆ ಸ್ವಲ್ಪವೂ ಹಸಿವಾಗಲಿಲ್ಲ. ನನಗೆ ಬಹಳ ಸಂತೋಷದ ಅನುಭವವಾಯಿತು. ನಾನು ಇಡೀ ದಿನದ ಅವಧಿಯಲ್ಲಿ 3-4 ಗಂಟೆವರೆಗೆ ನಿದ್ದೆ ಮಾಡಿದೆ. ನನ್ನ ಈ ಅವಧಿಯಲ್ಲಿ ಕಾಸ್ಮಿಕ್ ಎನರ್ಜಿ ನನ್ನ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತು, ಇಡೀ ತಲೆ ಬಹಳ ಭಾರವೆನಿಸಿತು. ಈ ಅನುಭವವು ನನ್ನ ಜೀವನದಲ್ಲಿ ನನಗೆ ಮೊದಲನೆಯ ಬಾರಿಯಾಗಿತ್ತು.

 

3. ಕಿಶೋರ್ರವರ ಅನುಭವ : ನಾನು ಚಂದ್ರಮೋಹನ್ರವರ ಅನುಭವವನ್ನು ಕೇಳಿ, ನನಗೂ ಕೂಡ ಅಖಂಡ ಧ್ಯಾನದ ಅನುಭವವನ್ನು ಅನುಭವಿಸುವ ಮನಸ್ಸಾಯಿತು. ಆದ್ದರಿಂದ ನಮ್ಮ ತಂಡದ ಸದಸ್ಯರೆಲ್ಲ ಸೇರಿ 31-03-15 ರಂದು ಅಖಂಡ ಧ್ಯಾನವನ್ನು ಮಾಡಲು ನಿರ್ಧರಿಸಿದೆವು.

 

ಬೆಳಗ್ಗೆ 6 ಗಂಟೆಗೆ ನಮ್ಮ ತಂಡದಿಂದ 10 ಜನ ಅಖಂಡ ಧ್ಯಾನ ಮಾಡಲು ಶುರುಮಾಡಿದೆವು. ಮೊದಲಿಗೆ ಅಖಂಡ ಧ್ಯಾನದ ಪ್ರಾಂಗಣವನ್ನು ಶುದ್ಧಿ ಮಾಡಿದೆವು. ಹೊರಗಡೆ ಪರಿಸರದಲ್ಲಿ ಕೆಲವು ನಿಮಿಷ ಧ್ಯಾನವನ್ನು ಮಾಡಿ ನಂತರ ಅಖಂಡ ಧ್ಯಾನದ ಪ್ರಾಂಗಣವನ್ನು ಪ್ರವೇಶಿಸಿ ಧ್ಯಾನವನ್ನು ಮಾಡಲು ಶುರುಮಾಡಿದೆವು.

 

ನಾನು 6 ಗಂಟೆಗೆ ಸರಿಯಾಗಿ ಅಖಂಡ ಧ್ಯಾನವನ್ನು ಶುರುಮಾಡಿದೆ. ಸುಮಾರು 9 ಘಂಟೆಗೆ ಸ್ವಲ್ಪ ಹಸಿವಾಯಿತು. ಒಂದು ಹಣ್ಣನ್ನು ಸೇವಿಸಿದೆ. ನಂತರ ಸ್ವಲ್ಪ ಹೊತ್ತು ಪುಸ್ತಕವನ್ನು ಓದಿದೆ. ನಂತರ ಮತ್ತೆ ಧ್ಯಾನದಲ್ಲಿ ತೊಡಗಿದೆ. ಸುಮಾರು 9:20 ರಿಂದ 12:30ರವರೆಗೆ ಧ್ಯಾನದಲ್ಲಿ ತೊಡಗಿದೆ. ಇದೇ ನನಗೆ ಮೊದಲ ಬಾರಿ ದೈಹಿಕವಾಗಿ ಸ್ವಲ್ಪವೂ ದಣಿವಾಗಲಿಲ್ಲ. ನನಗೆ 3-4 ಗಂಟೆ ಒಂದೇ ಸಮನೆ ಕೂರಲು ಸಾಧ್ಯವಾಯಿತು. ಧ್ಯಾನದಲ್ಲಿ ಮಗ್ನನಾದ ನನಗೆ ಇದು ಧ್ಯಾನದಿಂದ ಬಂದತಹ ಶಕ್ತಿ ಎಂದು ಅರಿವಾಯಿತು. ನನ್ನ ಈ ಅವಧಿಯಲ್ಲಿ 24 ಗಂಟೆ ಮೌನವಾಗಿದ್ದರಿಂದ ನಾನು ಆ ಪ್ರಶಾಂತತೆ ಮತ್ತು ಸಂತೋಷವನ್ನು ಅನುಭವಿಸಿದೆ.

 

4. ಜಿ.ಮಹಾವಿಷ್ಣುವಿನ ಅನುಭವ : ನಾನು ಚೆನ್ನೈ ತಮಿಳುನಾಡಿನವನು. ನನ್ನ ವಯಸ್ಸು 24. ನಾನು ಅಖಂಡ ಧ್ಯಾನವನ್ನು 31-03-15 ರಂದು ಮಾಡಿದೆನು. ನಾನು ಬೆಳಗ್ಗೆ 6:00 ಗಂಟೆಗೆ ಧ್ಯಾನವನ್ನು ಶುರು ಮಾಡಿದೆನು. ನಾನು ಧ್ಯಾನಕ್ಕೆ ಕುಳಿತ ಕೂಡಲೇ ಧ್ಯಾನದಲ್ಲಿ ತಲ್ಲೀನನಾದೆನು. ಒಂದೇ ಸಮಯದಲ್ಲಿ 2-3 ಗಂಟೆಗಳವರೆಗೆ ಧ್ಯಾನ ಕ್ರಿಯೆಯಲ್ಲಿ ಮುಳುಗಿ ಹೋದೆನು. ಈ ನನ್ನ ಅನುಭವದಲ್ಲಿ ನಾನು ಕೇವಲ ಅರ್ಧ ಗಂಟೆವರೆಗೆ ಧ್ಯಾನ ಕ್ರಿಯೆಯಲ್ಲಿ ತೊಡಗಿದೆನೆಂದು ಎನಿಸಿತು. ಈ ನನ್ನ 24 ಗಂಟೆಗಳ ಧ್ಯಾನದ ಅವಧಿಯಲ್ಲಿ ನನಗೆ ಹಸಿವೇ ಆಗಲಿಲ್ಲ. ನಾನು ಈ ಅವಧಿಯಲ್ಲಿ ಒಂದು ಬಾಳೆಹಣ್ಣು, ಮತ್ತು 15 ದ್ರಾಕ್ಷಿಗಳನ್ನಷ್ಟೇ ಸೇವಿಸಿದೆ. ಅರ್ಧ ಲೀಟರ್ನಷ್ಟು ನೀರಿಗಿಂತ ಕೂಡ ಕಮ್ಮಿ ನೀರನ್ನು ಕುಡಿದೆ. ನಾನು ಧ್ಯಾನವನ್ನು 10 ವರ್ಷಗಳಿಂದ ಮಾಡುತ್ತಿರುವೆ. ಆದರೆ ಎಂದೂ ಕೂಡ ಇಷ್ಟು ಹೊತ್ತು, ಅಂದರೆ 17-18 ಗಂಟೆಗಳ ಕಾಲ ಧ್ಯಾನದಲ್ಲಿ ಮಗ್ನನಾಗಿ ಕುಳಿತಿರಲಿಲ್ಲ.

 

ನಾನು ಪಿರಮಿಡ್ನಲ್ಲಿ ಧ್ಯಾನ ಮಾಡುವಾಗ ನನಗೆ 10 ನಿಮಿಷ ಧ್ಯಾನಕ್ಕೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಿದ್ದೆ ಆದರೆ, ಅಖಂಡ ಧ್ಯಾನದಲ್ಲಿ ಕೂಡಲೇ ಮಗ್ನನಾದೆ. ನಾನು ನನ್ನ ಈ ಅನುಭವವನ್ನು ಪತ್ರೀಜಿಯವರೊಡನೆ ಹಂಚಿಕೊಂಡಾಗ ಅವರು ನನಗೆ "ನೀನು ಅಖಂಡ ಧ್ಯಾನವನ್ನು ಪ್ರತೀ ತಿಂಗಳು 1 ದಿನ ಮಾಡು" ಎಂದು ಸಲಹೆ ಕೊಟ್ಟರು. ಪತ್ರೀಜಿಯವರು ನನಗೆ ಕೊಟ್ಟ ಸಲಹೆಯಂತೆ, ಅವರು ನನ್ನ ದೇವರು ಸಮಾನರಾದ್ದರಿಂದ, ನಾನು ಮತ್ತೆ ಅಖಂಡ ಧ್ಯಾನವನ್ನು 24-04-15 ರಂದು ಮಾಡಿದೆನು. ಆ ಅನುಭವವು ಬಹಳ ಆನಂದಮಯವಾಗಿತ್ತು. ನಾನು ನನ್ನ ಇಡೀ ಜೀವನದಲ್ಲಿ ತಿಂಗಳಿಗೊಮ್ಮೆ ಅಖಂಡ ಧ್ಯಾನವನ್ನು ಮಾಡಲು ನಿರ್ಧರಿಸಿದ್ದೇನೆ.

 

5. ಕೆ.ಅನಿಲ್ ಕುಮಾರ್ : ನನಗೆ 25 ವರ್ಷ ವಯಸ್ಸು, ಆಂಧ್ರಪ್ರದೇಶದ ವಿಶಾಖ ಪಟ್ಟಣದವನು. ನಾನು ಮದುರವಾಡ ಪಿರಮಿಡ್ ವಿಶಾಖ ಪಟ್ಟಣದಲ್ಲಿ 6 ಗಂಟೆಗೆ ಧ್ಯಾನವನ್ನು ಶುರುಮಾಡಿದೆ. ನಾನು 2-3 ಗಂಟೆವರೆಗೆ ಧ್ಯಾನದಲ್ಲಿ ಮಗ್ನನಾಗಿ ಕುಳಿತ ನಂತರ ಅರ್ಧ ಗಂಟೆ ಪುಸ್ತಕವನ್ನು ಓದಿದ ನಾನು ಮತ್ತೆ 3 ಗಂಟೆವರೆಗೆ ಧ್ಯಾನಿಸುತ್ತಾ ಕುಳಿತೆ. ನಂತರ ಸ್ವಲ್ಪ ಕಾಲ ಹೊರಗೆ ಬಂದು ಪರಿಸರವನ್ನು ಆಸ್ವಾದಿಸುತ್ತಾ ಕಾಲ್ನಡಿಗೆಯಲ್ಲಿ ಓಡಾಡಿದೆ. ಸುಮಾರು ಅರ್ಧ ಗಂಟೆಯ ನಂತರ ಮತ್ತೆ 3 ಗಂಟೆಗಳ ಕಾಲ ಧ್ಯಾನಿಸುತ್ತಾ ಕುಳಿತೆ. ಹೀಗೆ ನನ್ನ ಇಡೀ ದಿನ ಧ್ಯಾನದಲ್ಲಿ ಕಳೆದೆ. ಅಂದು ನಾನು ಒಟ್ಟು 17 1/2 ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿದ್ದೆ. ಇದು ನನ್ನ ಮೊದಲನೆಯ ಅಖಂಡ ಧ್ಯಾನದ ಅನುಭವ. ನಾನು ಈ ಅವಧಿಯಲ್ಲಿ ಸ್ವಲ್ಪವೂ ಹಸಿವನ್ನು ಕಾಣಲಿಲ್ಲ. ಈ ಧ್ಯಾನದ ಅವಸ್ಥೆಯಲ್ಲಿ ನನಗೆ ಬಹಳಷ್ಟು ಕಾಸ್ಮಿಕ್ ಎನರ್ಜಿ ಪಡೆದ ಅನುಭವವಾಯಿತು. ಧ್ಯಾನಕ್ಕೆ ಕುಳಿತೊಡನೆ ನಾನು ಧ್ಯಾನದಲ್ಲಿ ಮಗ್ನನಾಗಿ ಹೋದೆ. ನನ್ನ ಇಡೀ ಧ್ಯಾನದ ಅನುಭವದಲ್ಲಿ ನನ್ನ ಮನಸ್ಸು ಸಂಪೂರ್ಣ ಸ್ಥಬ್ದವಾಗಿತ್ತು. ಆ ಅನುಭವವನ್ನು ನಾನು ಬಹಳ ಸಂತೋಷದಿಂದ ಸವಿದೆ. ನಾನು ಅಖಂಡ ಧ್ಯಾನವನ್ನು ಮಾಡಿದ ನಂತರ ಪ್ರತೀ ದಿನ ಧ್ಯಾನಕ್ಕೆ ಬೆಳಗ್ಗೆ 4 ಗಂಟೆಗೆ ಕುಳಿತರೆ 7 ಗಂಟೆಯವರಿಗೆ ಧ್ಯಾನದಲ್ಲಿ ತೊಡಗುತ್ತೇನೆ. ಇದಕ್ಕಿಂತ ಮೊದಲು 1 ಗಂಟೆಗಳ ಕಾಲವಷ್ಟೇ ನನಗೆ ಧ್ಯಾನಾವಸ್ಥೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು.

 

6. ಎಮ್. ಶ್ರೀರಂಗ : ನಾನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಬಿ.ಜಿ.ಹಳ್ಳಿಯವನು. ನಾನು 31-03-2015ನೆ ತಾರೀಖಿನ ದಿನ ಬೆಳಗಿನ ಜಾವ 6:45ಕ್ಕೆ ಅಖಂಡ ಧ್ಯಾನದಲ್ಲಿ ಕುಳಿತುಕೊಂಡೆನು. 4 ಗಂಟೆಗಳ ಕಾಲ ಕುಳಿತು ಮತ್ತೆ ಹೊರಗೆ ಬಂದು ಪರಿಸರವನ್ನು ಗಮನಿಸುತ್ತಿದ್ದೆ. ನಂತರ ಅರ್ಧ ಗಂಟೆ ನನಗೆ ನನ್ನ ದೇಹ ಹಗುರವಾದ ಅನುಭವವಾಯಿತು. ತಲೆಭಾರ ಕಡಿಮೆಯಾದ ಅನುಭವ ಇಷ್ಟವಾಯಿತು. ಮತ್ತೆ ಅಖಂಡ ಧ್ಯಾನಕ್ಕೆ ಹೋಗಬೇಕೆಂದು ಭಾಸವಾಯಿತು.

 

7. ಪವಿತ್ರ : ನಾನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವಳು. ನಾನು ಧ್ಯಾನವನ್ನು ಚಂದು ಅವರಿಂದ 2008ರಲ್ಲಿ ಕಲಿತುಕೊಂಡೆ ಹಾಗು ಅಖಂಡ ಧ್ಯಾನವನ್ನು 31-03-2015 ರಂದು ನಮ್ಮ book store team ತಂಡದ 10 ಜನರ ಜೊತೆ ಬೆಳಗ್ಗೆ 6 ಗಂಟೆಗೆ ಶುರು ಮಾಡಿದೆವು. ನಾನು ಧ್ಯಾನದಲ್ಲಿ ಕುಳಿತ ಕೆಲವೇ ನಿಮಿಷದಲ್ಲಿ ನನಗೆ ಆಲೋಚನಾರಹಿತ ಸ್ಥಿತಿಯ ಅನುಭವವಾಯಿತು. ಸಮಯದ ಅರಿವಿಲ್ಲದೇ ನಾನು ತುಂಬಾ ಹೊತ್ತು ಧ್ಯಾನದಲ್ಲಿದ್ದು ಆ ಪ್ರಶಾಂತತೆಯನ್ನು ಸಂಪೂರ್ಣವಾಗಿ ಅನುಭವಿಸಿದೆ. ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಹೊತ್ತು ಪುಸ್ತಕ ಪಠನ ಮಾಡಿ ಧ್ಯಾನದಲ್ಲಿ ಮಗ್ನಳಾಗಿದ್ದೆ. ಈ ಅಖಂಡ ಧ್ಯಾನದಲ್ಲಿ 24 ಗಂಟೆಗಳ ಕಾಲ ಸಮಯ ಕಳೆದಿದ್ದು ತಿಳಿಯಲಿಲ್ಲ. ಆ ಪ್ರಾಂಗಣದಿಂದ ಬರಲು ನನಗೆ ಇಷ್ಟ ಇರಲಿಲ್ಲ. ಆದರೆ ಧ್ಯಾನ ಮುಗಿಸಿಕೊಂಡು ಹೊರಗೆ ಬಂದಾಗ ಅಲ್ಲಿ ಪ್ರಾಂಗಣದಲ್ಲಿ ಪತ್ರಿ ಮೇಡಮ್ ಅವರ ಜೊತೆ ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ತುಂಬ ಸಂತೋಷವಾಯಿತು. ಅಖಂಡ ಧ್ಯಾನವನ್ನು ಮಾಡಲು ಸಹಕರಿಸಿದ ಪ್ರಕೃತಿಗೆ ಮತ್ತು ಅವಕಾಶವನ್ನು ಕೊಟ್ಟ ಮ್ಯಾನೇಜ್ಮೆಂಟ್ಗೆ ನನ್ನ ಕೃತಜ್ಞತೆಗಳು.

 

8. ಶಾಲಿನಿರವರ ಅನುಭವ : ನಾನು 10 ವರ್ಷದಿಂದ ಧ್ಯಾನವನ್ನು ಮಾಡುತ್ತಿದ್ದೇನೆ. 2005ರಲ್ಲಿ ಈ ಬುದ್ಧ ಪಿರಮಿಡ್ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮೊದಲ ಬಾರಿ 6 ಗಂಟೆ ಕಾಲ ಧ್ಯಾನ ಮಾಡಿದೆ. ನಂತರ ನಾವು ಯಾವಾಗಲು ಅಷ್ಟು ಸಮಯ ಧ್ಯಾನ ಮಾಡಿಲ್ಲ. ನವೆಂಬರ್ 2014ರಲ್ಲಿ ಮಿಲಾರೆಪ ಅಖಂಡ ಧ್ಯಾನ ಪ್ರಾಂಗಣ ಪತ್ರೀಜಿಯವರ ಕೈಯಿಂದ ಪ್ರಾರಂಭವಾಯಿತು. ಆ ದಿನ ಇಲ್ಲಿ ಕುಳಿತು ಅಂದರೆ ಅದೇ ಪ್ರಾಂಗಣದಲ್ಲಿ ಕುಳಿತು ಧ್ಯಾನವನ್ನು ಮಾಡಬೇಕು ಎಂಬ ಯೋಚನೆ ನನ್ನಲ್ಲಿ ಉಂಟಾಯಿತು. ಮಾರ್ಚ್ನಲ್ಲಿ ಒಂದು ದಿನ 5 ಗಂಟೆಕಾಲ ಧ್ಯಾನವನ್ನು ಮಾಡಿದೆ. ಅದರಿಂದ ನನ್ನಲ್ಲಿ ಆಹ್ಲಾದಕರವಾದ ಭಾವನೆ ಉಂಟಾಯಿತು. ಮತ್ತು ಅಖಂಡಧ್ಯಾನ ಮಾಡಬೇಕೆಂಬ ಆಸೆ ನನ್ನಲ್ಲಿ ಮೂಡಿತು.

 

ನಮ್ಮ book store team ಎಲ್ಲರ ಜೊತೆ ಧ್ಯಾನ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬ ಸಂತೋಷವಾಯಿತು. ನಾನು ಒಟ್ಟು 16 ಗಂಟೆಗಳ ಕಾಲ ಧ್ಯಾನವನ್ನು ಮಾಡಿದೆ. ಮಧ್ಯದಲ್ಲಿ ಕೆಲವು ಪುಸ್ತಕಗಳನ್ನು ಓದಿ ನಂತರ ಪ್ರಕೃತಿಯಲ್ಲಿ ಬಂದು ನನ್ನನ್ನು ನಾನು ಮರೆತಂತೆ ಅನುಭವವಾಯಿತು. ನಮ್ಮ ದೇಹಕ್ಕೆ immunity power ಇರುವಂತೆ ಆತ್ಮಕ್ಕೂ ಸಹ immunity power ಇರುವಂತೆ ಸಂದೇಶ ಬಂತು. ಈ ದಿನದ ಧ್ಯಾನದಲ್ಲಿ ನನ್ನ ಹೊಸ ಸ್ವ-ಪ್ರಪಂಚದಲ್ಲಿ ಲೀನವಾಗಿದ್ದೆ. ಇದರಲ್ಲಿ ನಾನು ನನ್ನ ಸುಖ, ಶಾಂತಿ, ಆತ್ಮವಿಶ್ವಾಸವನ್ನು ಕಂಡುಕೊಂಡೆ. ಇಂತಹ ಅವಕಾಶ ಮಾಡಿಕೊಟ್ಟ ಮ್ಯಾನೇಜ್‍ಮೆಂಟ್‍ಗೆ ನನ್ನ ಧನ್ಯವಾದಗಳು. ಪತ್ರೀಜಿಯವರು ಮಾಡಿಕೊಟ್ಟಿರುವ ಇಂಥ ಒಳ್ಳೆಯ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕಾಗಿ ವಿನಂತಿ.

 

9. ಸಾವಿತ್ರಿ : ಈ ಚಿಕ್ಕ ಪಿರಮಿಡ್ನಲ್ಲಿ ಕುಳಿತು ಮಾಡಿದ ಅಖಂಡ ಧ್ಯಾನವು ಅದ್ವಿತೀಯ, ಅನುಪಮ, ಆತ್ಮಾನಂದ ಅನುಭವವನ್ನೇ ನೀಡಿತು. ಒಂದೇ ಜಾಗದಲ್ಲಿ ಇಡೀ 24 ಗಂಟೆಗಳನ್ನು ಧ್ಯಾನದಲ್ಲಿ ಕಳೆದಿದ್ದು ವಿಶಿಷ್ಟ ವಿವೇಕ ಅನುಭವವನ್ನು ತಂದಿತು. ಬೆಳಗಿನ 3 ಗಂಟೆಗಳು ಕಳೆದಿದ್ದೆ ತಿಳಿಯಲಿಲ್ಲ. ನಂತರ ಮಧ್ಯಾಹ್ನದ ಧ್ಯಾನದಲ್ಲಿ ಶ್ರೀಚಕ್ರ ಶಿವಲಿಂಗದ ದರ್ಶನವಾಯಿತು. ಸಂಜೆ ಹೊರಗೆ ಕುಳಿತು ಧ್ಯಾನಮಾಡುವಾಗ ಅರಿವಿಲ್ಲದೆ ಶ್ರೀಲಲಿತಾ ಸಹಸ್ರ ನಾಮದ ಪಠಣವಾಯಿತು. ಕಡೆಯ 6 ಸಾಲು ಹೇಳುವಾಗ ಓ ನಾನು ಸಹಸ್ರನಾಮ ಪಠಿಸಿದನೇ ಎಂಬ ಆಶ್ಚರ್ಯ, ಭಕ್ತಿಭಾವ ಉಂಟಾಯಿತು. ಮತ್ತೆ ಹಣ್ಣುಗಳನ್ನು ತಿಂದು, ನೀರು ಕುಡಿದು ಧ್ಯಾನಕ್ಕೆ ಕುಳಿತಾಗ ಗೋವಿನ ಮುಖದ ದರ್ಶನವಾಯಿತು, ರೋಮಾಂಚಿತವಾಯಿತು. ನಂತರ ಧ್ಯಾನದಲ್ಲಿಯೇ ನಿದ್ದೆಯಾಯಿತು. ಬೆಳಗ್ಗೆ 5 ಗಂಟೆಗೆ ಎಚ್ಚರವಾಗಿ ಪ್ರಾತಃ ವಿಧಿಗಳನ್ನು ಮುಗಿಸಿ ಧ್ಯಾನಕ್ಕೆ ಕುಳಿತಾಗ ನಾನು ದರುಶಿಸಿದ್ದ ಮಹಾ ಪುಣ್ಯ ತೀರ್ಥಕ್ಷೇತ್ರಗಳಾದ ಕಾಶಿ, ಹರಿದ್ವಾರ, ಋಷಿಕೇಶ, ಪ್ರಯಾಗ, ಬದರಿ, ಕೇದಾರ, ಬುದ್ಧಗಯ ಇನ್ನು ಮುಂತಾದ ಕ್ಷೇತ್ರಗಳು ಮತ್ತೇ ಮನಃಪಟಲದಲ್ಲಿ ಮೂಡಿ ಧ್ಯಾನದಲ್ಲಿ ಪರ್ಯಾವಸಾನವಾಯಿತು. ಪ್ರತಿಬಾರಿ ಬುದ್ಧಗಯ, ಬೋಧಿವೃಕ್ಷದ ಹತ್ತಿರ ನಿಂತು ಸ್ಪರ್ಶಿಸಿದ ಅನುಭವವಾಯಿತು. ಬುದ್ಧಗಯಾದಿಂದ ತಂದ ಬುದ್ಧನ ಮೂರ್ತಿಗೆ ಹೂ, ತುಳಸಿ ಸಮರ್ಪಿಸಿ ಈ ಪಿರಮಿಡ್ ವ್ಯಾಲಿಯನ್ನು ಪ್ರವೇಶಿಸಿದೆ. ಈ ಅಖಂಡ ಧ್ಯಾನವು ಪ್ರಕೃತಿಯ ಮಡಿಲಲ್ಲಿ ಮಾಡಿದ್ದೇ ಒಂದು ನೂತನ ಅನುಭವ. ಮೈ ಹಗುರ, ಭಾರ, ಹಣೆಯಲ್ಲಿ ಬಿಗಿತ, ಸಡಿಲದ ಅನುಭವವಾಯಿತು. ವಿಶೇಷವಾಗಿ ಆದ ಅನುಭವಗಳನ್ನು ಬರೆಯಲು ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದಗಳು.

 

10. ಚಿಕ್ಕಣ್ಣ : ನಾನು ಆಂಧ್ರಪ್ರದೇಶದ ಬಿ.ಜಿ.ಹಳ್ಳಿ ಗ್ರಾಮದವನು. 2002ರಲ್ಲಿ ನನಗೆ ಧ್ಯಾನದ ಪರಿಚಯವಾಯಿತು. ಅಖಂಡ ಧ್ಯಾನದಲ್ಲಿ ಪಾಲ್ಗೊಳ್ಳಬೇಕೆಂದು ಆಸೆ ತುಂಬ ಇತ್ತು. ಆದರೆ ನನಗೆ ಆ ಅವಕಾಶ ಬರಲಿಲ್ಲ. ಮೊದಲ ಬಾರಿ ಮಿಲಾರೆಪ ಅಖಂಡ ಧ್ಯಾನ ಪ್ರಾಂಗಣದಲ್ಲಿ ಧ್ಯಾನ ಮಾಡಿದ್ದಕ್ಕೆ ತುಂಬ ಸಂತೋಷವಾಯಿತು. ಧ್ಯಾನ ಮಾಡಲು ಹೋಗಿ ನಾನೇ ಧ್ಯಾನವಾದೆ. ಆ ಧ್ಯಾನದಲ್ಲಿ ಮನಸ್ಸಿನಲ್ಲಿರುವ ಆಲೋಚನೆಗಳೆಲ್ಲ ಮಾಯವಾದಂತೆ ಅನುಭವ ಮತ್ತು ತುಂಬ ಮಳೆ ಬಂದು ನಾನು ಮೇಲೆ ಹಾರಾಡುತ್ತಿದ್ದೆ ಅನಿಸಿತು. ಒಂದು ದಿನ ಅಖಂಡ ಧ್ಯಾನ ಮಾಡಿದ್ದಕ್ಕೆ ನನ್ನ ದೇಹ ಶುದ್ಧಿಯಾಗಿ ಬಹಳ ಹಗುರವಾಯಿತು. ನಾನು ಗಾಳಿಯಲ್ಲಿ ಬೆರೆತು ತೇಲಿಹೋದಂತೆ ಅನಿಸಿತು. ಕನಿಷ್ಠ ತಿಂಗಳಿಗೆ ಒಂದು ಬಾರಿಯಾದರೂ ಅಖಂಡ ಧ್ಯಾನದಲ್ಲಿ ಕುಳಿತುಕೊಳ್ಳಬೇಕು ಅನಿಸಿತು. ಅಖಂಡ ಧ್ಯಾನದಲ್ಲಿದ್ದಾಗ ಗಿಡ, ಮರಗಳನ್ನು ತಾಕಿದರೆ ನನ್ನನ್ನೆ ತಾಕಿದಂತಾಗುತ್ತಿತ್ತು. ಇದು ನನಗೆ ಎಂದೂ ಮರೆಯದ ಅನುಭವ.

 

Go to top